1. ಕಲಘಟಗಿ-ನಾಗರಾಜ್ ಛಬ್ಬಿ
2. ಚನ್ನಗಿರಿ-ಶಿವಕುಮಾರ್
3. ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ್
4. ಬಸವನನ ಬಾಗೇವಾಡಿ-ಎಸ್ಕೆ ಬೆಳ್ಳುಬ್ಬಿ
5. ಇಂಡಿ-ಕಾಸಾಗೌಡ ಬೀರಾದಾರ್
6. ಗುರುಮಿಟ್ಕಲ್-ಲಲಿತಾ ಆನಾಪುರ
7. ಬೀದರ್-ಈಶ್ವರ್ ಸಿಂಗ್ ಠಾಕೂರ್
8. ಭಾಲ್ಕಿ-ಪ್ರಕಾಶ್ ಖಂಡ್ರೆ
9. ಗಂಗಾವತಿ-ಪರಣ್ಣ ಮನವಳ್ಳಿ
10. ಹಾನಗಲ್-ಶಿವರಾಜ್ ಸಜ್ಜನರ್
11. ಹಾವೇರಿ-ಗವಿಸಿದ್ಧಪ್ಪ ದ್ಯಾಮನವರ್
12. ಹರಪನಹಳ್ಳಿ-ಕರುಣಾಕರ್ ರೆಡ್ಡಿ
13. ದಾವಣಗೆರೆ ಉತ್ತರ-ಲೋಕಿಕೆರೆ ನಾಗರಾಜ್
14. ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
15. ಮಾಯಕೊಂಡ-ಬಸವರಾಜ್ ನಾಯ್ಕ್
16. ಬೈಂದೂರು-ಗುರುರಾಜ್ ಗಟ್ಟಿಹೊಳೆ
17. ಮೂಡಿಗೆರೆ-ದೀಪಕ್ ದೊಡ್ಡಯ್ಯ
18. ಗುಬ್ಬಿ-ಎಸ್ಡಿ ದಿಲೀಪ್ ಕುಮಾರ್
19. ಶಿಡ್ಲಘಟ್ಟ-ರಾಮಚಂದ್ರ ಗೌಡ
20. ಕೋಲಾರ ಗೋಲ್ಡ್ ಫೀಲ್ಡ್-ಅಶ್ವಿನಿ ಸಂಪಂಗಿ
21. ಶ್ರವಣಬೆಳಗೊಳ-ಚಿದಾನಂದ
22. ಅರಸೀಕೆರೆ-ಬಿವಿ ಬಸವರಾಜು
23. ಹೆಗ್ಗಡದೇವನಕೋಟೆ-ಕೃಷ್ಣಾ ನಾಯ್ಕ್
ಇಷ್ಟೂ ಜನರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ವಿಶೇಷವೆಂದರೆ ಈ ಬಾರಿಯೂ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದೆ. ಮೊದಲ ಪಟ್ಟಿಯಲ್ಲೂ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ, 52 ಹೊಸಮುಖಗಳಿಗೆ ಆದ್ಯತೆ ನೀಡಿತ್ತು. ಆದರೆ ಅದು ಬಿಜೆಪಿ ಪ್ರಾಬಲ್ಯ ಇಲ್ಲದ ಮೈಸೂರು ಕರ್ನಾಟಕ ಹಾಗೂ ವ್ಯಕ್ತಿ ಯಾರು ಎಂದು ನೋಡದ ಕರಾವಳಿ ಕರ್ನಾಟಕದಲ್ಲಿ ಮಾತ್ರ ಆಗಿದೆ. ಕಳಂಕಿತರಿಗೆ ಟಿಕೆಟ್ ನೀಡದೇ ಇರುವ ತೀರ್ಮಾವನ್ನೇನು ಬಿಜೆಪಿ ತೆಗೆದುಕೊಂಡಿಲ್ಲ ಎಂಬ ವಾದವೂ ಕೇಳಿ ಬಂದಿತ್ತು.
2ನೇ ಪಟ್ಟಿಯಲ್ಲಿ ಕಳಂಕ ಹೊತ್ತುಕೊಂಡಿದ್ದ ಹಾವೇರಿಯಲ್ಲಿ ಹಾಲಿ ಶಾಸಕ ನೆಹರು ಓಲೇಕಾರ, ಮೂಡಿಗೆರೆ ಕ್ಷೇತ್ರದ ಶಾಸಕ ಎಂಪಿ ಕುಮಾರಸ್ವಾಮಿ, ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ ಅವರ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳೇ ಮುಳುವಾಗಿವೆ. ಉಳಿದಂತೆ ದಾವಣಗೆರೆ ಉತ್ತರ ಕ್ಷೇತ್ರದ ಎಸ್.ಎ.ರವೀಂದ್ರನಾಥ್ ಮೊದಲೇ ನಿವೃತ್ತಿ ಘೋಷಿಸಿದ್ದರು. ಕಲಘಟಗಿಯ ಸಿ.ಎಂ. ನಿಂಬಣ್ಣನವರ್, ಮಾಯಕೊಂಡ ಕ್ಷೇತ್ರದ ಪ್ರೊ.ಲಿಂಗಣ್ಣ, ಬೈಂದೂರು ಕ್ಷೇತ್ರದ ಸುಕುಮಾರ ಶೆಟ್ಟಿಯವರಿಗೆ ಟಿಕೆಟ್ ಕೈ ತಪ್ಪಿದೆ. ಇವರ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರೇ ಆಕ್ರೋಶಗೊಂಡಿದ್ದರು. ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಈ ತೀರ್ಮಾ ಮಾಡಲಾಗಿದೆ.


ಕಳೆದ ಎರಡು ದಿನಗಳಲ್ಲಿ 212 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಆಡಳಿತಾರೂಢ ಬಿಜೆಪಿಯು ಗೊಂದಲವಿದೆ ಎನ್ನಲಾದ ಇನ್ನೂ 12 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ. ಈ ಪೈಕಿ ಹಾಲಿ ಶಾಸಕರಾದ ಜಗದೀಶ್ ಶೆಟ್ಟರ್, ಅರವಿಂದ್ ಲಿಂಬಾವಳಿ, ಎಸ್.ಎ.ರಾಮದಾಸ್, ಕಳಕಪ್ಪ ಬಂಡಿ ಅವರು ಪ್ರತಿನಿಧಿಸುವ ಕ್ಷೇತ್ರಗಳು ಇರುವುದರಿಂದ ಇವರಿಗೆ ಟಿಕೆಟ್ ಲಭಿಸುವುದೋ ಅಥವಾ ಇಲ್ಲವೋ ಎಂಬ ಕುತೂಹಲ ಮುಂದುವರೆದಿದೆ. ಜತೆಗೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ಮತ್ತು ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ವಲಸೆ ಹೋಗುತ್ತಿರುವ ಸಚಿವ ವಿ.ಸೋಮಣ್ಣ ಪ್ರತಿನಿಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರದಿಂದ ಅವರ ಪುತ್ರರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಬೇರೆಯವರನ್ನು ಪರಿಗಣಿಸಲಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಬುಧವಾರ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಶೆಟ್ಟರ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ. ಹೀಗಾಗಿ, ಮೂರನೇ ಪಟ್ಟಿಯಲ್ಲಿ ಟಿಕೆಟ್ ಸಿಗಬಹುದೇ ಎಂಬ ಕುತೂಹಲವಿದೆ.
ಇನ್ನು ಮಹದೇವಪುರ ಕ್ಷೇತ್ರದ ಅರವಿಂದ್ ಲಿಂಬಾವಳಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ. ಆ ಕ್ಷೇತ್ರದಿಂದ ಹೊಸಬರಿಗೆ ಅವಕಾಶ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ. ಅದೇ ರೀತಿ ಕೃಷ್ಣರಾಜ ಕ್ಷೇತ್ರದ ರಾಮದಾಸ್ ಅವರಿಗೆ ಮೂರನೆಯ ಪಟ್ಟಿಯಲ್ಲಿ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ. ರೋಣ ಕ್ಷೇತ್ರದ ಕಳಕಪ್ಪ ಬಂಡಿ ವಿರುದ್ಧ ಹಲವು ಆರೋಪಗಳು ಇರುವುದರಿಂದ ಟಿಕೆಟ್ ಅನುಮಾನ ಎಂದು ಮೂಲಗಳು ತಿಳಿಸಿವೆ.
ಕೊಪ್ಪಳ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ಮುಖಂಡ ಸಿ.ವಿ.ಚಂದ್ರಶೇಖರ್ ಅವರೂ ಆಕಾಂಕ್ಷಿಯಾಗಿದ್ದಾರೆ. ಆದರೆ, ಸಂಸದರಿಗೆ ವಿಧಾನಸಭಾ ಟಿಕೆಟ್ ನೀಡುವ ಬಗ್ಗೆ ವರಿಷ್ಠರು ಒಲವು ತೋರಿಲ್ಲ. ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಮಾಜಿ ಶಾಸಕ ನೇಮಿರಾಜ್ ನಾಯಕ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೇನಾರಾಯಣ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಸೇಡಂ ಕ್ಷೇತ್ರದ ಶಾಸಕ ರಾಜ್ಕುಮಾರ್ ತೇಲ್ಕೂರ್ ಬಗ್ಗೆ ಆರೋಪಗಳಿರುವುದರಿಂದ ಸ್ಪಷ್ಟತೆ ಮೂಡಿಲ್ಲ.
ನಾಗಠಾಣ ಕ್ಷೇತ್ರದಿಂದ ಕಳೆದ ಬಾರಿ ಸಚಿವ ಗೋವಿಂದ ಕಾರಜೋಳ ಪುತ್ರ ಡಾ.ಗೋಪಾಲ್ ಕಣಕ್ಕಿಳಿದು ಸೋಲುಂಡಿದ್ದರು. ಈ ಬಾರಿ ಡಾ.ಗೋಪಾಲ್ ಜತೆಗೆ ಸಹೋದರ ಉಮೇಶ್ ಕೂಡ ಆಕಾಂಕ್ಷಿಯಾಗಿದ್ದಾರೆ. ಆದರೆ, ಕುಟುಂಬ ರಾಜಕಾರಣದ ಆತಂಕ ಎದುರಾದಲ್ಲಿ ಬೇರೆಯವರಿಗೆ ಟಿಕೆಟ್ ನೀಡಬಹುದು. ಹೆಬ್ಬಾಳ ಕ್ಷೇತ್ರದಿಂದ ಮಾಜಿ ಸಚಿವ ಕಟ್ಟಾಸುಬ್ರಮಣ್ಯನಾಯ್ಡು ಅವರಿಗೆ ಮೂರನೆಯ ಪಟ್ಟಿಯಲ್ಲಿ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ. ಮಾನ್ವಿ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಹುಡುಕಾಟ ನಡೆದಿದೆ.



