ಜೆಡಿಎಸ್ ಅಂದ್ರೆ ದೇವೇಗೌಡ. ದೇವೇಗೌಡ ಅಂದ್ರೆ ಜೆಡಿಎಸ್. ಕುಮಾರಸ್ವಾಮಿ ಪ್ರಮುಖ ನಾಯಕರೇ ಇರಬಹುದು, ಸಿ.ಎಂ.ಇಬ್ರಾಹಿಂ ಅಧ್ಯಕ್ಷರಾಗಿರಬಹುದು, ನಿಖಿಲ್, ಪ್ರಜ್ವಲ್, ರೇವಣ್ಣ ಜನರನ್ನು ಸೆಳೆಯಬಹುದು. ಆದರೆ ಸ್ಟಾರ್ ಅಟ್ರ್ಯಾಕ್ಷನ್ ಎಂದರೆ ದೇವೇಗೌಡರ ಶಕ್ತಿ ಬೇಕೇ ಬೇಕು. ಇತ್ತೀಚೆಗೆ ಅನಾರೋಗ್ಯಕ್ಕಿಡಾಗಿ ಕೃಶರಾಗಿದ್ದ ದೇವೇಗೌಡರು ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತ್ರ ಭಾಗವಹಿಸಿದ್ದರು. ಈಗ ಚುನಾವಣೆಯ ಮತದಾನ ದಿನಕ್ಕೆ ಒಂದು ತಿಂಗಳು ಬಾಕಿ ಇರುವಾಗ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ.
ಜೆಡಿಎಸ್ನ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗಗಳಲ್ಲಿ ಅನಾರೋಗ್ಯದ ನಡುವೆಯೂ ದೇವೆಗೌಡರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ, ಜೆಡಿಎಸ್ ಈ ಹಿಂದೆ ಜೆಡಿಎಸ್ ಅಭ್ಯರ್ಥಿಗಳು ಇದ್ದ ಪ್ರದೇಶಗಳಾದ ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿಯೂ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ 10 ರ ಬಳಿಕ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ನೀರಾವರಿ ಹರಿಕಾರ ಎಂದು ಕರೆಯುವ ದೇವೇಗೌಡರು ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲು ತೀರ್ಮಾನಿಸಿದ್ದಾರೆ. ಈ ಹಿಂದೆ ತಾವು ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ್ದ ನೀರಾವರಿ ಯೋಜನೆಗಳನ್ನು ಮನದಟ್ಟು ಮಾಡಲಿದ್ದಾರೆ. ಉತ್ತರ ಕರ್ನಾಟಕದ ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಹಿಂದೆ ದೇವೇಗೌಡರು ಒದಗಿಸಿದ್ದ ನೀರಾವರಿ ಯೋಜನೆಗಳನ್ನು ಅವರ ಮುಂದಿಟ್ಟು, ಜನರ ಮತಗಳನ್ನು ಗಳಿಸುವ ಲೆಕ್ಕಾಚಾರವನ್ನು ಮಾಡಲಾಗಿದೆ. ಜೊತೆಗೆ, ಇನ್ನು ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನಷ್ಟು ನೀರಾವರಿ ಯೋಜನೆಗಳ ಜೊತೆಗೆ ಜನಸಾಮಾನ್ಯರ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರುವ ಕುರಿತು ಭರವಸೆಯನ್ನೂ ನೀಡಲಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಘೋಷಣೆ ಮಾಡಿರುವ ಪ್ರಣಾಳಿಕೆ ವಿಷಯಗಳನ್ನು ಜನರ ಮುಂದಿಡಲಿದ್ದಾರೆ. ಈ ಮೂಲಕ ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಜೆಡಿಎಸ್ ಟಫ್ ಫೈಟ್ ನೀಡಲು ದೇವೇಗೌಡರ ಅಸ್ತ್ರವನ್ನು ಬಳಕೆ ಮಾಡಲಾಗುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮ್ಮೆಯಾದರೂ ಜೆಡಿಎಸ್ನಿಂದ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎನ್ನುವುದು ದೇವೇಗೌಡರ ಕನಸಾಗಿದೆ. ಇನ್ನು ತಮ್ಮ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸ್ವತಂತ್ರ ಸರ್ಕಾರದ ಹಾಗೂ ಒಂದು ಅವಧಿಗೆ ಪೂರ್ಣವಾಗಿ ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಂಚರತ್ನ ಯಾತ್ರೆ ಮಾಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಇಳಿಯಲಿದ್ದಾರೆ. ಇದರಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಆನೆಬಲ ಸಿಕ್ಕಂತಾಗಲಿದೆ. ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲಿದ್ಧಾರೆ ಎಂದು ಜೆಡಿಎಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.



