ಹಾಸನ ದಿನೇ ದಿನೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೊದಲು ಹಾಸನದಿಂದ ಶುರುವಾದ ಟಿಕೆಟ್ ಗುದ್ದಾಟ, ಅರಕಲಗೂಡು, ಅರಸೀಕೆರೆಗೂ ವಿಸ್ತರಿಸಿ ಗೋಜಲಾಗುತ್ತಿದೆ. ಕುಮಾರಸ್ವಾಮಿ ಏನೇ ಗೊಂದಲವಿಲ್ಲ ಎಂದು ಹೇಳಿದರೂ ವಿವಾದ ರಾಜ್ಯಾದ್ಯಂತ ಸುದ್ದಿಗಯಾಗುತ್ತಿದೆ. ದೇವೇಗೌಡರ ಕುಟುಂಬದಲ್ಲಿ ತಿಕ್ಕಾಟಕ್ಕೆ ಕಾರಣವಾಗಿರುವ, ತೀವ್ರ ಕುತೂಹಲ ಮೂಡಿಸಿರುವ ಹಾಸನ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರೇ ಕಣಕ್ಕಿಳಿಯುವ ಸಾಧ್ಯತೆ ಕುರಿತು ಇದೀಗ ಜೋರಾಗಿ ಚರ್ಚೆ ಶುರುವಾಗಿದೆ. ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸಿ, ಪತ್ನಿ ಭವಾನಿ ಅವರಿಗೆ ಹೊಳೇನರಸೀಪುರ ಕ್ಷೇತ್ರದ ಟಿಕೆಟ್ ನೀಡುವ ಮೂಲಕ ಒಂದೇ ಏಟಲ್ಲಿ ಮೂರು ಹಕ್ಕಿ ಹೊಡೆಯುವ ಲೆಕ್ಕಾಚಾರಗಳು ಜೆಡಿಎಸ್ನಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಮಾತುಕತೆಗಳು ಜೋರಾಗಿವೆ.
ಸ್ವರೂಪ್ ಅಥವಾ ಭವಾನಿ ರೇವಣ್ಣ ಇಬ್ಬರಲ್ಲಿ ಯಾರೇ ಒಬ್ಬರಿಗೆ ಟಿಕೆಟ್ ನೀಡಿದರೂ ಜೆಡಿಎಸ್ನಲ್ಲಿ ಗುಂಪುಗಾರಿಕೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸ್ವರೂಪ್ ಮನವೊಲಿಸಿ ಖುದ್ದು ರೇವಣ್ಣ ಅವರು ಹಾಸನದಿಂದ ಕಣಕ್ಕಿಳಿದರೆ ಬಣ ಜಗಳ ತಡೆದು ಕೈತಪ್ಪಿರುವ ಹಾಸನ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳಬಹುದು ಮತ್ತು ಗುಂಪುಗಾರಿಕೆ ತಡೆಯಬಹುದು, ಅತ್ತ ಮುನಿಸಿಕೊಂಡಿರುವ ಭವಾನಿ ಅವರನ್ನು ಪತಿಯ ಕ್ಷೇತ್ರದಿಂದ ಕಣಕ್ಕಿಳಿಸಿ ಅಸಮಾಧಾನ ಶಮನಗೊಳಿಸಬಹುದು ಮತ್ತು ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ಎದ್ದಿರುವ ಭಿನ್ನಮತಕ್ಕೆ ಬ್ರೇಕ್ ಹಾಕಬಹುದು ಎಂಬ ಲೆಕ್ಕಾಚಾರ ಒಳಗೊಳಗೆ ನಡೆಯುತ್ತಿದೆ ಎನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರನ್ನು ಯಾವುದೇ ಕಾರಣಕ್ಕೂ ಹಾಸನದಲ್ಲಿ ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಈಗಾಗಲೇ ಹಾಸನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಮಹಿಳಾ ಮತದಾರರ ಒಲವು ಭವಾನಿಯವರತ್ತಲೇ ಇದೆ. ಹಾಗೆಂದು ಭವಾನಿಗೆ ಟಿಕೆಟ್ ನೀಡಿದರೆ ಸ್ವರೂಪ್ ಬೆಂಬಲಿಗರು ಮುನಿಸಿಕೊಂಡು ಚುನಾವಣೆ ಸಂದರ್ಭದಲ್ಲಿ ಉಲ್ಟಾಹೊಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇನ್ನು ಸ್ವರೂಪ್ ಅವರ ತಂದೆ ದಿ.ಪ್ರಕಾಶ್ ಅವರು ಇದೇ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದವರು. ಸ್ವರೂಪ್ ಕೂಡ ಜಿ.ಪಂ. ಉಪಾಧ್ಯಕ್ಷರಾಗಿದ್ದವರು. ಅವರ ಬೆನ್ನ ಹಿಂದೆಯೂ ಕಾರ್ಯಕರ್ತರ ಪಡೆ, ಅವರದ್ದೇ ಆದ ವೋಟ್ ಬ್ಯಾಂಕ್ ಕೂಡ ಇದೆ. ಕುಮಾರಸ್ವಾಮಿ ಅವರ ಭರವಸೆ ನಂಬಿ ಮುಂದಿನ ಚುನಾವಣೆಗೆ ಈಗಾಗಲೇ ಸಾಕಷ್ಟು ಪ್ರಚಾರವನ್ನೂ ಅವರು ನಡೆಸಿದ್ದಾರೆ. ಹಾಗೆಂದು ಸ್ವರೂಪ್ಗೆ ಟಿಕೆಟ್ ನೀಡಿದರೆ ಭವಾನಿ ಬೆಂಬಲಿಗರೂ ಸುಮ್ಮನೆ ಕೂರುವುದು ಅನುಮಾನ. ಇದರಿಂದ ಪಕ್ಷದಲ್ಲೇ ಗುಂಪುಗಾರಿಕೆ ಸೃಷ್ಟಿಯಾಗಿ ದೇವೇಗೌಡರ ಕುಟುಂಬವನ್ನು ಹಿಂದಿನಿಂದಲೂ ಕೆಣಕುತ್ತಲೇ ಬಂದಿರುವ ಬಿಜೆಪಿ ಶಾಸಕ ಪ್ರೀತಂಗೌಡರ ಕೈಮೇಲಾಗುವ ತಳಮಳ ಮುಖಂಡರಲ್ಲಿ ನಡೆಯುತ್ತಿದೆ.
ರೇವಣ್ಣ ಪರಿಹಾರ : ಸ್ವತಃ ಹೆಚ್.ಡಿ.ರೇವಣ್ಣ ಸ್ಪರ್ಧಿಸಿದರೆ ಇಡೀ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಒಟ್ಟಾಗುತ್ತಾರೆ. ಆಗ ಭಿನ್ನಮತ ಇರುವುದಿಲ್ಲ ಎನ್ನವುದು ಸದ್ಯಕ್ಕೆ ಕಾಣುತ್ತಿರುವ ಪರಿಹಾರ. ರೇವಣ್ಣ ಕೂಡಾ ಹಾಸನದಿಂದ ಟಿಕೆಟ್ ಕೊಟ್ಟರೆ ಓಕೆ ಎಂದು ಸಂದೇಶ ನೀಡಿದ್ದಾರೆ. ಆದರೆ ರೇವಣ್ಣ ಹಾಸನಕ್ಕೆ ಬಂದರೆ ಹೊಳೆನರಸೀಪುರಕ್ಕೆ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕುಮಾರಸ್ವಾಮಿ ಹೇಳುತ್ತಿರುವುದೇ ಬೇರೆ.





