ಹಾಸನ. ಜೆಡಿಎಸ್‍ನಲ್ಲಿ ಬಿಕ್ಕಟ್ಟು ಮೂಡಿಸಿರುವ, ದೇವೇಗೌಡರ ಕುಟುಂಬ ಬಹಿರಂಗವಾಗಿ ಫೈಟ್ ಮಾಡುತ್ತಿರುವ ಕ್ಷೇತ್ರ. ಭವಾನಿ ರೇವಣ್ಣ ತಾವೂ ಟಿಕೆಟ್ ಅಕಾಂಕ್ಷಿ ಎಂದು ಹೇಳಿದ ದಿನದಿಂದ ದೊಡ್ಡ ಗೌಡರ ಮನೆ, ದೊಡ್ಡ ಗೌಡರ ಮನೆಯಾಗಿ ಉಳಿದಿಲ್ಲ. ಕುಮಾರಸ್ವಾಮಿ ಮತ್ತು ರೇವಣ್ಣ ವಿಚಾರ ಬೇರೆಯೇ. ಉಳಿದ ವಿಷಯಗಳೇನೇ ಇರಲಿ.. ಅಣ್ಣನನ್ನು ತಮ್ಮ ಬಿಡಲ್ಲ.. ತಮ್ಮನನ್ನು ಅಣ್ಣ ಬಿಟ್ಟುಕೊಡಲ್ಲ. ಆದರೆ ಅವರ ಮಕ್ಕಳು.. ಈ ಬಾರಿ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಯಾವಾಗ ಬಹಿರಂಗವಾಗಿ ಹಾಸನಕ್ಕೆ ರೇವಣ್ಣ ಸಾಹೇಬ್ರೇ ಫೈನಲ್ಲು ಎಂದರೋ.. ಕುಟುಂಬದಲ್ಲಿ ಬಿರುಕು ಕಾಣಿಸಿದ್ದು ಸುಳ್ಳಲ್ಲ. ಹೊರಗೆ ಏನೇ ಹೇಳಿಕೊಳ್ಳಲಿ.. ಒಳಗೆ ಸಂಥಿಂಗ್ ಈಸ್ ರಾಂಗ್ ಎಂದೇ ಮೇಲ್ನೋಟಕ್ಕೆ ಕಾಣಿಸುತ್ತಿದೆ. ದೇವೇಗೌಡರು ಎಂಟ್ರಿ ಕೊಡದಿದ್ದರೆ ಏನಾಗುತ್ತಿತ್ತೋ ಏನೊ..


ಎಚ್ಪಿ ಸ್ವರೂಪ್ ಅವರ ಉಮೇದುವಾರಿಕೆಯನ್ನು ಸರಿದೂಗಿಸಲು ಒಕ್ಕಲಿಗ ಸಮುದಾಯದ ನಾಯಕ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಎಂ ರಾಜೂಗೌಡ ಸದ್ಯ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ.

ಒಕ್ಕಲಿಗ ಉಪಜಾತಿಯ ಬಲ : ಹಾಸನದಲ್ಲಿ ಒಕ್ಕಲಿಗ ಉಪಜಾತಿಗಳಲ್ಲಿ ದಾಸ ಒಕ್ಕಲಿಗರ ಕೈಮೇಲು. ಹಾಸನ ಜಿಲ್ಲೆಯಲ್ಲಿ ಮುಳ್ಳು ಒಕ್ಕಲಿಗರು ಹಾಗೂ ದಾಸ ಒಕ್ಕಲಿಗರು ಸಮಬಲದಲ್ಲಿದ್ದಾರೆ. ಶಾಸಕ ಪ್ರೀತಮ್ ಗೌಡ ದಾಸ ಒಕ್ಕಲಿಗರು. ಹೀಗಾಗಿ ರಾಜುಗೌಡ ಅವರಿಗೆ ಟಿಕೆಟ್ ಕೊಟ್ಟರೆ ಹಾಸನ ಕ್ಷೇತ್ರ ಗೆಲ್ಲಬಹುದು ಎನ್ನುವುದು ದೇವೇಗೌಡರ ಯೋಜನೆ. ಆದರೆ ಹಾಸನ ಕ್ಷೇತ್ರ ಜಾತಿಪ್ರೀತಿಯನ್ನೂ ಮೀರಿ ಹೋಗಿದೆ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಮಾತು.



