ಹಾಸನ ವಿಧಾನಸಭಾ ಟಿಕೆಟ್ ಯಾರಿಗೆ ಎಂಬ ಬಗ್ಗೆ ಜೆಡಿಎಸ್`ನಲ್ಲಿಯೂ ಗೊಂದಲ ಮುಗಿದಿಲ್ಲ. ಕುಮಾರಸ್ವಾಮಿ, ಜೆಡಿಎಸ್‍ನ ಅಭ್ಯರ್ಥಿಗಳ ಪಟ್ಟಿ ಘೋಷಿಸಿದಾಗ ಹಾಸನ ಜಿಲ್ಲೆಯನ್ನು ಹೊರಗಿಟ್ಟಿದ್ದರು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈಗ ದೇವೇಗೌಡರ ದೊಡ್ಡ ಸೊಸೆ ಭವಾನಿ ರೇವಣ್ಣ ತಾನೇ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಬಹಿರಂಗವಾಗಿ ಘೋಷಿಸುವುದರೊಂದಿಗೆ ಹಾಸನ ಟಿಕೆಟ್ ಫೈಟ್‍ನ್ನು ರಂಗೇರಿಸಿದ್ದಾರೆ.


ಹಾಸನ ಕ್ಷೇತ್ರಕ್ಕೆ ನನ್ನನ್ನೇ ಅಭ್ಯರ್ಥಿ ಮಾಡಬೇಕು ಎಂದು ವರಿಷ್ಠರು ನಿರ್ಧರಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಿರ್ಧಾರ ಹೊರಬೀಳಲಿದೆ. ವರಿಷ್ಠರ ಸೂಚನೆಯಂತೆ ಕ್ಷೇತ್ರದ ಊರು ಊರುಗಳಲ್ಲಿ ನನ್ನ ಪರಿಚಯ ಮಾಡಿಕೊಳ್ಳುತ್ತಿದ್ದೇನೆ. ವರಿಷ್ಠರು ಹೆಸರು ಘೋಷಿಸಿದ ಮೇಲೆ ಮತ್ತೆ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬರುತ್ತೇನೆ. ಇದು ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಹೇಳಿದ ಮಾತು. ಹಾಸನ ಕ್ಷೇತ್ರದ ಸಾಲಗಾಮೆ ಹೋಬಳಿಯ ಕಕ್ಕೀಹಳ್ಳಿಯಲ್ಲಿ ಕಟ್ಟಿರುವ ಅಣ್ಣಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆಗೆ ಬಂದಿದ್ದಾಗ ಭವಾನಿ ರೇವಣ್ಣ ಅವರು ಹೇಳಿರೋ ಮಾತಿದು.


ಸ್ವರೂಪ್ ಪ್ರಕಾಶ್ ಮತ್ತು ಭವಾನಿ ರೇವಣ್ಣ ಬೆಂಬಲಿಗರ ನಡುವೆ ಫೈಟ್
ಭವಾನಿ ರೇವಣ್ಣ ಅವರು ಈ ಟಿಕೆಟ್ ಹೇಳಿಕೆ ನೀಡಿದ್ದು ಕಕ್ಕೀಹಳ್ಳಿಯ ಅಣ್ಣಪ್ಪ ಸ್ವಾಮಿ ದೇವಸ್ಥಾನ ಉದ್ಘಾಟನೆಯಲ್ಲಿ. ಅಂದಹಾಗೆ ಈ ದೇವಸ್ಥಾನ ಕಟ್ಟಿಸಿದವರು ಮಾಜಿ ಶಾಸಕ ಹೆಚ್.ಪ್ರಕಾಶ್. ಹಾಲಿ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸ್ವರೂಪ್ ಅವರ ತಂದೆ. ಸಹಜವಾಗಿಯೇ ದೇವಸ್ಥಾನದ ಉದ್ಘಾಟನೆಗೆ ಸ್ವರೂಪ್ ಅವರನ್ನು ಕರೆಯಲಾಗಿತ್ತು. ಆದರೆ ಸ್ವರೂಪ್ ಆಗಮನಕ್ಕೆ ಮೊದಲೇ ಭವಾನಿ ರೇವಣ್ಣ ಹೋಗಿ ತಾವೇ ಆಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಇದು ಎರಡೂ ಕಡೆಯವರ ಬೆಂಬಲಿಗರ ನಡುವೆ ಫೈಟ್`ಗೆ ಕಾರಣವಾಗಿದೆ.
ಟಿಕೆಟ್ ಕೊಟ್ಟರೆ ಗೆದ್ದು ಬರುತ್ತೇನೆ. ಭವಾನಿ ಮೇಡಂಗೆ ಕೊಟ್ಟರೆ..
ಅವರು ಹಾಗೇಕೆ ಹೇಳಿದರೋ ಗೊತ್ತಿಲ್ಲ. ನಾವು ಹೋಗುವುದಕ್ಕೆ ಮೊದಲು ಹೋಗಿ ಹೀಗೆ ಹೇಳಿದ್ದಾರೆ. ನಾನೂ ಟಿಕೆಟ್ ಆಕಾಂಕ್ಷಿ. ಆದರೆ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಸಾಹೇಬರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ಬದ್ಧ. ನಾನೂ ಕೂಡ ಈಗಾಗಲೇ ಪ್ರಚಾರ ಮಾಡುತ್ತಿದ್ದೇನೆ. ದೇವೇಗೌಡರು ಲೋಕೋಪಯೋಗಿ ಮಂತ್ರಿಯಾಗಿದ್ದಾಗ ನನ್ನ ತಂದೆ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು. ಅವರನ್ನು ಕರೆಂತದು ದೇವೇಗೌಡರು 6 ಬಾರಿ ಟಿಕೆಟ್ ಕೊಟ್ಟರು. ಟಿಕೆಟ್ ನನಗೆ ಕೊಟ್ಟರೆ ಗೆದ್ದುಕೊಂಡು ಬರುತ್ತೇನೆ. ನನಗೇ ಕೊಟ್ಟರೂ ಭವಾನಿ ಮೇಡಂ ಅವರಿಗೆ ಟಿಕೆಟ್ ಕೊಟ್ಟರೂ ಹಾಸನದಲ್ಲಿ ಜೆಡಿಎಸ್ ಗೆಲ್ಲಬೇಕು ಎಂದಿದ್ದಾರೆ ಸ್ವರೂಪ್ ಪ್ರಕಾಶ್.


ಭವಾನಿ ರೇವಣ್ಣ ಹೇಳಿಕೆಯಲ್ಲಿ ತಪ್ಪೇನಿಲ್ಲ : ಕುಮಾರಸ್ವಾಮಿ
ನನಗೇ ಟಿಕೆಟ್ ಕೊಡಿ ಎಂದು ಭವಾನಿ ರೇವಣ್ಣ ಎಂದು ಕೇಳಿರುವುದರಲ್ಲಿ ಯಾವ ತಪ್ಪೂ ಇಲ್ಲ. ದೇಶದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಆಸೆ ಹೇಳಿಕೊಳ್ಳೋದು ಕೂಡಾ ತಪ್ಪಾ? ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಟಿಕೆಟ್ ಹಂಚಿಕೆ ಫೈನಲ್ ಮಾಡುತ್ತೇವೆ ಎಂದಿರುವುದು ಕುಮಾರಸ್ವಾಮಿ.


ವರಿಷ್ಠರಿಗೆ ಬಿಟ್ಟಿದ್ದು : ಪ್ರಜ್ವಲ್ ರೇವಣ್ಣ
ಅದು ವರಿಷ್ಠರಿಗೆ ಬಿಟ್ಟ ವಿಚಾರ. ದೊಡ್ಡವರು ನಿರ್ಧಾರ ತೆಗೆದುಕೊಳ್ತಾರೆ. ನಾನು ಕೂಡಾ ವಿಧಾನಸಭೆಗೆ ಸ್ಪರ್ಧಿಸೋಕೆ ಇಷ್ಟಪಟ್ಟಿದ್ದೆ. ಅವರೇ ಲೋಕಸಭೆಗೆ ಸ್ಪರ್ಧಿಸುವಂತೆ ಹೇಳಿ ಹಾಸನ ಕ್ಷೇತ್ರವನ್ನೇ ಬಿಟ್ಟುಕೊಟ್ಟರು. ಈಗಲೂ ಅಷ್ಟೆ, ದೊಡ್ಡವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ.


ಇನ್ನು ದೇವೇಗೌಡ, ರೇವಣ್ಣ ಇರುವ ಜಿಲ್ಲೆಯಾಗಿರುವ ಹಾಸನದಲ್ಲಿ ಬಿಜೆಪಿಯನ್ನು ನೆಲೆ ನಿಲ್ಲಿಸಿದ ಪ್ರೀತಮ್ ಗೌಡ ಅವರು ಮಾತ್ರ ಇದನ್ನು ಲೇವಡಿ ಮಾಡಿದ್ದಾರೆ. ಹಾಲಿ ಶಾಸಕನಾಗಿದ್ದರೂ ನಾನೇ ಅಭ್ಯರ್ಥಿ ಎಂದು ಘೋಷಿಸುವ ಪದ್ಧತಿ ನಮ್ಮಲ್ಲಿ ಇಲ್ಲ ಎಂದಿದ್ದಾರೆ ಪ್ರೀತಮ್ ಗೌಡ.



