ಸಿದ್ದರಾಮಯ್ಯ ಅವರೇ ಕಂಪ್ಲೀಟ್ 5 ವರ್ಷ ಸಿಎಂ. ಈ ಮಾತು ಈಗಷ್ಟೇ ಅಧಿಕಾರದ ಗದ್ದುಗೆಯೇರಿದ್ದ ಕಾಂಗ್ರೆಸ್ಸಿನ ಒಗ್ಗಟ್ಟಿಗೆ ಮುಳ್ಳಾಗಿ ಚುಚ್ಚುತ್ತಿದೆ. ಆ ಮಾತು ಅಗತ್ಯವಿತ್ತೋ ಇಲ್ಲವೋ.. ಎಂ ಬಿ ಪಾಟೀಲ್ ವಿಷಯವನ್ನಂತೂ ಕೆಣಕಿದ್ದಾರೆ. ಬಾಣದ ಗುರಿ ಡಿಕೆ ಶಿವಕುಮಾರ್. ಎಲ್ಲ ಕಡೆಯಲ್ಲಿಯೂ ಲೋಕಸಭೆ ಚುನಾವಣೆ ನಂತರ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಲಾಗುವುದು ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಎಂಬಿ ಪಾಟೀಲರು ಕೆಣಕಿದ್ದಾರೆ. ಒಮ್ಮೆಯಲ್ಲ.. ಎರಡು ಬಾರಿಯಲ್ಲ.. ಮಾಧ್ಯಮಗಳು ಕೇಳಿದಾಗಲೆಲ್ಲ ಎಂಬಿ ಪಾಟೀಲ್ ಇದೇ ಮಾತು ಹೇಳುತ್ತಿದ್ದಾರೆ.
ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಕೇವಲ ಉಪಮುಖ್ಯಮಂತ್ರಿ ಅಲ್ಲ, ಕೆಪಿಸಿಸಿ ಅಧ್ಯಕ್ಷರೂ ಹೌದು. ಈ ಬಗ್ಗೆ ತಿರುಗೇಟು ಕೊಟ್ಟು ಸುಮ್ಮನಾಗಿದ್ದಾರೆ. ಕೆಂಡಾಮಂಡಲವಾಗಿರುವುದು ಡಿಕೆ ಸುರೇಶ್. ಎಂಬಿ ಪಾಟೀಲರಿಗೇನು ಮಾಹಿತಿ ಇದೆ ಎಂದಿರೋ ಡಿಕೆ ಸುರೇಶ್ ವಿಧಾನಸೌಧದ ಲಾಂಜಿನಲ್ಲಿ ಗುರಾಯಿಸಿದ್ದಾರೆ. ಕೈ ತೋರಿಸಿ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನುತ್ತಿವೆ ಮೂಲಗಳು. ಯಾರ ಬಳಿಯೂ ವಿಡಿಯೋ ಇಲ್ಲದ ಕಾರಣ ಇದು ಸತ್ಯ ಎಂದು ಸತ್ಯ ನುಡಿಯಲು ಆಗುತ್ತಿಲ್ಲ.
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ. ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡವರು. ಆ ಗುರಿಯಲ್ಲಿಯೇ ಮುನ್ನುಗ್ಗುತ್ತಿರುವ ವ್ಯಕ್ತಿ. ಅವರು ಸ್ವಲ್ಪ ತಗ್ಗಲೂ ಬೇಕು. ಎಲ್ಲಿ ತಗ್ಗಬೇಕು ಅನ್ನೋದು ಅವರಿಗೆ ಗೊತ್ತಿದೆ. ಆದರೆ ಡಿಕೆ ಸುರೇಶ್ ಹಾಗಲ್ಲ. ಸಂಸದರು. ಅವರ ಕ್ಷೇತ್ರದಲ್ಲಿ ಅವರಿಗೆ ಗೆಲುವು ಕಷ್ಟವಲ್ಲ. ಗೆಲ್ಲುವ ಕಲೆ ಅವರಿಗೆ ಕರಗತ. ಅಲ್ಲದೆ ಸುರೇಶ್ ಅವರಿಗೆ ವೈಯಕ್ತಿಕ ಆಸೆಗಳಿಲ್ಲ. ಅವರ ಗುರಿ ಒಂದೇ. ಅಣ್ಣನನ್ನು ಸಿಎಂ ಪಟ್ಟದ ಮೇಲೆ ನೋಡುವುದು. ಈಗಲ್ಲ, ಈ ಹಿಂದೆಯೂ ಡಿಕೆ ಮೇಲೆ ವಾಗ್ದಾಳಿಗಳಾದಾಗ ಸಿಡಿದೆದ್ದು ನಿಂತಿದ್ದ ಉದಾಹರಣೆಗಳಿವೆ. ಒಂದು ರೀತಿಯಲ್ಲಿ ಡಿಕೆ ಶಿವಕುಮಾರ್ ಬಲವೆಂದರೆ ಡಿಕೆ ಸುರೇಶ್.
ಆದರೆ ಈ ಎಂಬಿ ಪಾಟೀಲ್ ಹೇಳಿಕೆಯ ಮೂಲ ಈಗಿನದ್ದಲ್ಲ. ಎಂಬಿ ಪಾಟೀಲ್ ನನಗೂ ಸಿಎಂ ಆಗುವ ಅರ್ಹತೆ ಇದೆ ಎನ್ನುತ್ತಾರಾದರೂ, ಸಿದ್ದರಾಮಯ್ಯ ಬಣದ ಶಾಸಕ. ಅದರಲ್ಲಿ ಅನುಮಾನವೇ ಇಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗದಿದ್ದಾಗ ಸಿಡಿದೆದ್ದಿದ್ದ ಎಂಬಿ ಪಾಟೀಲ್ ಅವರ ಮಾತುಗಳ ಹಿಂದೆ, ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಗುಟ್ಟಾಗಿಯೇನೂ ಇರಲಿಲ್ಲ. ಆದರೆ ಪಾಟೀಲ್ ಮತ್ತು ಡಿಕೆ ಸಮರ ಶುರುವಾಗಿದ್ದು ಲಿಂಗಾಯತ ಧರ್ಮ ಒಡೆಯುವ ವಿಷಯದಲ್ಲಿ. ಎಂಬಿ ಪಾಟೀಲರು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ, ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂಬ ರಾಜಕೀಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು.
ಅದು 2018ರಲ್ಲಿ ಪಕ್ಷಕ್ಕೆ ಹೊಡೆತ ದೊಡ್ಡದು. ಹೀಗಾಗಿಯೇ ಡಿಕೆ ಶಿವಕುಮಾರ್ ಬಹಿರಂಗವಾಗಿ ಹಲವು ಬಾರಿ ಕ್ಷಮೆ ಕೇಳಿದ್ದರು. ಪಕ್ಷದ ಪರವಾಗಿ ಡಿಕೆ ಕ್ಷಮೆ ಕೇಳಿದಾಗಲೆಲ್ಲ, ಪಾಟೀಲರು ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಸಿಡಿಯುತ್ತಿದ್ದರು. ಅಷ್ಟೇ ಅಲ್ಲ, ಅವರು ಒಕ್ಕಲಿಗ ನಾಯಕ. ಅವರ ಭಾಗದಲ್ಲೇ ಪಕ್ಷ ಸೋತಿರುವುದು ಎನ್ನುತ್ತಿದ್ದರು. ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಪಾಟೀಲರು ಕ್ಯಾರೇ ಎನ್ನುತ್ತಿಲ್ಲ. ಓಪನ್ ಆಗಿಯೇ ವಾರ್ ಶುರುವಾಗಿದೆ. ಅಷ್ಟೇ ಅಲ್ಲ, ಮೊದಲ ಬಾರಿಯ ಸಂಪುಟದಲ್ಲಿ ಪಾಟೀಲರಿಗೆ ಮಂತ್ರಿ ಸ್ಥಾನ ಕೊಡುವ ಬಗ್ಗೆ ಡಿಕೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದೂ ಕೂಡಾ ಪಾಟೀಲರಿಗೆ ಸಿಟು ತರಿಸಿದೆ. ಇವೆಲ್ಲದರ ಪರಿಣಾಮವೇ ಈ ಆಕ್ರೋಶಗಳು. ಮಾತುಗಳು.
ಒಟ್ಟಿನಲ್ಲಿ ಹಳೆಯ ಗಾಯವನ್ನು ಪಾಟೀಲರು ಮತ್ತು ಡಿಕೆ ಇಬ್ಬರೂ ಕೆರೆದುಕೊಳ್ಳುತ್ತಿದ್ದಾರೆ. ಕೆರೆದುಕೊಂಡಷ್ಟೂ ಗಾಯ ದೊಡ್ಡದಾಗುವುದೇ ಹೊರತು, ವಾಸಿಯಾಗುವುದಿಲ್ಲ. ಸಿದ್ದರಾಮಯ್ಯನವರೂ ಅಷ್ಟೆ, ಗಾಯಕ್ಕೆ ಔಷಧಿ ಹಚ್ಚುವುದಿಲ್ಲ. ಗಾಯ, ಗಾಯವಾಗಿದ್ದರೇ ಅವರಿಗೆ ಲಾಭ ಎನ್ನುವುದು ಅವರಿಗೂ ಗೊತ್ತು.



