ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ. ಈಗ 90 ನಿಮಿಷದಲ್ಲಿ ಕ್ರಮಿಸಬಹುದಾದ ದಾರಿ. ಕಾರು, ದೊಡ್ಡ ದೊಡ್ಡ ವಾಹನಗಳು ಮಿನಿಮಮ್ 100 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ರಸ್ತೆ. ಫೆ.15ರೊಳಗೆ ಟೋಲ್ ಸಂಗ್ರಹಿಸಲು ಸಹಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಮಾರ್ಚ್ನಲ್ಲಿ ಕಾಮಗಾರಿ ಅಧಿಕೃತವಾಗಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಶ್ರೀರಂಗಪಟ್ಟಣ ಬೈಪಾಸ್ ಕಳೆದ ವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆ ನೆರವೇರಿಸುವ ಸಾಧ್ಯತೆಯಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಎಚ್.ಎ.ಐ) ಎಕ್ಸ್ಪ್ರೆಸ್ವೇ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 275 ಅನ್ನು 10-ಲೇನ್ ರಸ್ತೆಗೆ ವಿಸ್ತರಿಸಿದೆ. 117-ಕಿಮೀ ಹೆದ್ದಾರಿ ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗೆ ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿತಗೊಳಿಸಲಿದೆ.
ಯೋಜನೆಯ ಬಗ್ಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರು-ಮೈಸೂರು ಮಧ್ಯೆ ಸಂಚರಿಸುವವರು ಡ್ರೈವಿಂಗ್ ಅನುಭವದ ವಿಡಿಯೋಗಳನ್ನು ಸ್ವತಃ ಅಪ್ಲೋಡ್ ಮಾಡುತ್ತಿದ್ದಾರೆ. ಮೊದ ಮೊದಲು ಸೈಲೆಂಟ್ ಆಗಿಯೇ ಇದ್ದ ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಯೋಜನೆಯ ಕ್ರೆಡಿಟ್ನ್ನು ತಮಗೆ ತೆಗೆದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯ ಬಗ್ಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಯಾವಾಗ ಕ್ರೆಡಿಟ್ ಸಿಕ್ಕಿತೋ.. ಅದಾದ ಮೇಲೆ ಶುರುವಾಗಿದ್ದು ಕ್ರೆಡಿಟ್ ವಾರ್.


ನಾವೇ ಮಾಡಿಸಿದ್ದು : ಹೆಚ್.ಸಿ.ಮಹದೇವಪ್ಪ
ಯೋಜನೆಗೆ ಅನುಮೋದನೆ ಕೊಟ್ಟಿದ್ದು ನಾವು, ಕಾಮಗಾರಿಗೆ ಅನುದಾನ ನೀಡಿದ್ದು ನಾವು, ನಮ್ಮ ಸರ್ಕಾರ. ಬೆಂಗಳೂರು-ಮೈಸೂರು- ಬಂಟ್ವಾಳ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರು
1) ಆಸ್ಕರ್ ಫರ್ನಾಂಡೀಸ್
2) ಸಿದ್ದರಾಮಯ್ಯ
3) ಡಾ ಹೆಚ್ ಸಿ ಮಹದೇವಪ್ಪ
4) ನಿತಿನ್ ಗಡ್ಕರಿ
ಈ ಕೋಮು ಭಕ್ತರು ಬಾಯಿಗೆ ಬಂದಂತೆ ಮಾತಾಡಿದಾಕ್ಷಣ ಸತ್ಯವು ಎಂದಿಗೂ ಬದಲಾಗುವುದಿಲ್ಲ ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಆ ಎಂಪಿಯೇ ಆಗಿರಲಿಲ್ಲ ಎಂದು ಟೀಕಿಸಿದ್ದಾರೆ ಹೆಚ್.ಸಿ.ಮಹದೇವಪ್ಪ.
ಅದಕ್ಕೂ ಮುನ್ನ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿದಂತಹ ಬೆಂಗಳೂರು – ಮೈಸೂರು ರಸ್ತೆಯಲ್ಲಿ ನಾವೇ ಓಡಾಡುವಾಗ ಆಗುವ ನೆಮ್ಮದಿ ಮತ್ತು ತೃಪ್ತಿಗೆ ಬೆಲೆ ಕಟ್ಟಲಾಗದು ಎಂದಿದ್ದರು. ಎರಡು ಟ್ವೀಟ್ ಮೂಲಕ ಇದು ನಮ್ಮ ಸರ್ಕಾರದ ಯೋಜನೆ ಎಂದು ಸಾರುವ ಪ್ರಯತ್ನ ಮಾಡಿದ್ದರು. ಇದಕ್ಕೆ ದಾಖಲೆಗಳ ಸಮೇತ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.


ಪ್ರತಾಪ್ ಸಿಂಹ ಸಿಡಿದೆದ್ದಾಗ.. :
ಏನಂದ್ರೀ ಮಹದೇವಪ್ಪನವರೇ ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ನಾನು ಎಂ.ಪಿ ಯೇ ಆಗಿರಲಿಲ್ಲವಾ? ಹೌದಾ? ಈ ಯೋಜನೆಯನ್ನು ಮೋದೀಜಿ ಮಹಾರಾಜ ಗ್ರೌಂಡ್ ನಲ್ಲಿ ಘೋಷಣೆ ಮಾಡಿದ್ದು 2018, ಫೆಬ್ರವರಿ 19ರಂದು, ಪ್ರಧಾನಿ ಅಧ್ಯಕ್ಷತೆಯ ಸಿಸಿಇಎ ಮಂಜೂರು ಕೊಟ್ಟಿದ್ದು ಫೆಬ್ರವರಿ 13 ಮತ್ತು 20ರಂದು, ನಾನು ಎಂಪಿ ಆಗಿದ್ದು 2014 ಮೇನಲ್ಲಿ ಎಂದು ಮಂಜೂರಾತಿಯ ದಾಖಲೆ ಪತ್ರಗಳನ್ನು ರಿಲೀಸ್ ಮಾಡಿದ್ದಾರೆ. ಅಷ್ಟೇ ಅಲ್ಲ, 2018ರಲ್ಲಿ ಮೋದಿ ಮೈಸೂರಿನಲ್ಲಿ ಯೋಜನೆಯ ಬಗ್ಗೆ ಮಾತನಾಡಿದ ಭಾಷಣದ ವಿಡಿಯೋ ಸಹ ಹಾಕಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ರಿಯಲ್ ಸ್ಟೋರಿ :
ಪ್ರತಾಪ್ ಸಿಂಹ ದಾಖಲೆಗಳು ಸತ್ಯ. ಅದರಲ್ಲಿ ಅನುಮಾನವಿಲ್ಲ. ಆದರೆ ಯೋಜನೆಯ ಪ್ರಕ್ರಿಯೆ ಶುರುವಾಗಿದ್ದದ್ದೂ ಸತ್ಯ. 2016ರಲ್ಲಿಯೇ ಯೋಜನೆಯ ಕುರಿತಂತೆ ಆಗ ಸಚಿವರಾಗಿದ್ದ ಮಹದೇವಪ್ಪನವರು ಮಾತನಾಡಿದ್ದಕ್ಕೆ ದಾಖಲೆಗಳಿವೆ. ರಸ್ತೆಗೆ ಬೇಕಾಗಿದ್ದ ಭೂಮಿಯಲ್ಲಿ ಶೇ.90ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸ ಮಹದೇವಪ್ಪ ಸಚಿವರಾಗಿದ್ದ ಕಾಲದಲ್ಲೇ ಶುರುವಾಗಿತ್ತು. ಇನ್ನು ಯೋಜನೆಯ ಕುರಿತಂತೆ ಆಸ್ಕರ್ ಫರ್ನಾಂಡಿಸ್ ಅವರಿಗೆ ಕ್ರೆಡಿಟ್ ಕೊಡಬೇಕು ಎನ್ನುವುದಾದರೆ ಯೋಜನೆಯ ಬಗ್ಗೆ ಮೊದಲ ಬಾರಿ ಮಾತನಾಡಿದ್ದಕ್ಕೆ ಕ್ರೆಡಿಟ್ ಕೊಡಬೇಕು. ಆಸ್ಕರ್ ಫರ್ನಾಂಡಿಸ್ ಮಾತನಾಡಿದ್ದರಾದರೂ ಫೈಲು ಮುಂದೆ ಹೋಗಿರಲಿಲ್ಲ. ಇನ್ನು ಯೋಜನೆಯ ಬಗ್ಗೆ ನಿಜವಾಗಿಯೂ ಕಾಳಜಿ ತೋರಿಸಿ, ಯೋಜನೆಗೆ ಸ್ಪೀಡ್ ಕೊಟ್ಟವರು ಪ್ರತಾಪ್ ಸಿಂಹ ಹಾಗೂ ನಿತಿನ್ ಗಡ್ಕರಿ.


ಹೆಚ್.ಡಿ.ರೇವಣ್ಣ ಅವರಿಗೆ ಕ್ರೆಡಿಟ್ ಕೊಡೋದು ಯಾರು?
ಯೋಜನೆಯಲ್ಲಿನ ಭೂಸ್ವಾಧೀನದ ಬಗ್ಗೆ ತಕರಾರುಗಳೆದ್ದಾಗ ಹುದ್ದೆಯಲ್ಲಿ ಇಲ್ಲದಿದ್ದರೂ ಸ್ವತಃ ಗಮನಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು ರೇವಣ್ಣ. ರೇವಣ್ಣ ಶ್ರಮವಹಿಸಿದೇ ಇದ್ದರೆ ಭೂಸ್ವಾಧೀನ ಪ್ರಕ್ರಿಯೆ ಬೇಗ ಮುಗಿಯುತ್ತಿರಲಿಲ್ಲ. ರೇವಣ್ಣ ಇದರ ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ ಎನ್ನುವುದೂ ಸತ್ಯ.
ಆದರೆ ಸಿಂಹಪಾಲು ಮಾತ್ರ ಪ್ರತಾಪ್ ಸಿಂಹ ಅವರಿಗೇ.. : ಒಂದು ಯೋಜನೆಯಲ್ಲಿ ಗೆಲುವಿನಲ್ಲಿ ಹಲವರ ಶ್ರಮ ಇರುತ್ತದೆ. ಯೋಜನೆಗೆ ಸಹಕರಿಸಿದ ಹಲವರನ್ನು ಪ್ರತಾಪ್ ಸಿಂಹ ನೆನಪಿಸಿಕೊಂಡಿದ್ದಾರೆ. ಇಷ್ಟೆಲ್ಲ ಆಗಿಯೂ ವಾಸ್ತವವಾಗಿ ಹೇಳಬೇಕೆಂದರೆ ಯೋಜನೆಯ ಯಶಸ್ಸಿನ ಸಿಂಹಪಾಲು ಪ್ರತಾಪ್ ಸಿಂಹ ಅವರಿಗೇ ಸಲ್ಲಬೇಕು. ಅದರಲ್ಲಿ ಅನುಮಾನವಿಲ್ಲ. ಕಾಮಗಾರಿ ಮುಗಿಯುವ ಮೊದಲೇ ಭಾರಿ ಮಳೆ ಬಂದು, ಪ್ರವಾಹ ಪರಿಸ್ಥಿತಿ ಉಂಟಾದಾಗ ಇದೇ ಮಹದೇವಪ್ಪ, ಸಿದ್ದರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರು. ತಪ್ಪನ್ನೆಲ್ಲ ಪ್ರತಾಪ್ ಸಿಂಹ ಅವರ ಮೇಲೆ ಹಾಕಿದ್ದರು. ಕುಮಾರಸ್ವಾಮಿಯವರೂ ಇದೇ ತಪ್ಪು ಮಾಡಿದ್ದರು. ಹಾಗೆ ನೋಡಿದರೆ ಆ ಸಮಯದಲ್ಲಿ ಹೊಣೆ ಹೊತ್ತುಕೊಂಡು ಕೆಲಸ ಮಾಡಿದ ಪ್ರತಾಪ್ ಸಿಂಹ ಅವರಿಗೆ ತಾವೇ ತಾವಾಗಿ ಸಂಪೂರ್ಣ ಕ್ರೆಡಿಟ್ ಕೊಟ್ಟುಬಿಟ್ಟರು. ಎಡವಟ್ಟಾದಾಗ ಕ್ರೆಡಿಟ್ ಕೊಟ್ಟು, ಎಲ್ಲ ಸರಿ ಹೋದಾಗ ಕ್ರೆಡಿಟ್ ನಂಗೂ ಬೇಕು ಎಂದರೆ ಕ್ರೆಡಿಟ್ ಯಾರಿಗೆ ಸಿಗುತ್ತೆ.



