ಹಾಸನದಲ್ಲಿ ದೇವೇಗೌಡರ ಕುಟುಂಬದ ಒಳ ರಾಜಕೀಯ ದಿನೇ ದಿನೇ ತಿರುವು ಪಡೆಯುತ್ತಿದೆ. ಇದೀಗ ಸಂಸದ ಪ್ರಜ್ವಲ್ ರೇವಣ್ಣ ಅರಕಲಗೂಡು ಕ್ಷೇತ್ರಕ್ಕೆ ಎ.ಮಂಜು ಅವರಿಗೆ ಟಿಕೆಟ್ ಘೋಷಣೆ ಮಾಡಿರುವ ವಿಷಯವನೇ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಚಿಕ್ಕಪ್ಪ ಕುಮಾರಸ್ವಾಮಿಯವರನ್ನು ಲೈಟಾಗಿ ಕೆಣಕಿದ್ದಾರೆ. ಅಷ್ಟೇ ಅಲ್ಲ, ಅರಕಲಗೂಡು ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಅನ್ನೋ ವಿಷಯವನ್ನ ರೇವಣ್ಣ ಸಾಹೇಬ್ರು ತೀರ್ಮಾನ ಮಾಡ್ತಾರೆ ಎಂದಿದ್ದಾರೆ ಹಾಸನದ ಸಂಸದರೂ ಆಗಿರುವ ಪ್ರಜ್ವಲ್ ರೇವಣ್ಣ.
ಎ.ಮಂಜು ಅವರು ಜೆಡಿಎಸ್ ಸೇರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಹಿತಿ ಇಲ್ಲ. ಅವರು ಹಿರಿಯರಿದ್ದಾರೆ. ಅವರು ಅವರ ತಿಳುವಳಿಕೆಯಲ್ಲಿ ಏನು ಹೇಳಬೇಕೋ ಹೇಳಿದ್ದಾರೆ. ಕಾರ್ಯಕರ್ತರ ಸಭೆ ಕರೆದು ಮಾತನಾಡುತ್ತೇವೆ. ಅದರ ನಂತರ ರೇವಣ್ಣ ಸಾಹೇಬ್ರು ತೀರ್ಮಾನ ಮಾಡ್ತಾರೆ ಎನ್ನುವ ಮೂಲಕ ಹೆಚ್.ಡಿ.ರೇವಣ್ಣನವರೇ ಹಾಸನಕ್ಕೆ ಫೈನಲ್ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.


ಅರಸೀಕೆರೆ ಟಿಕೆಟ್ ಗೊಂದಲಕ್ಕೂ ಪ್ರಜ್ವಲ್ ರೇವಣ್ಣ ಉತ್ತರ ಕೊಟ್ಟಿರುವುದು ಹೀಗೆ. ಶಿವಲಿಂಗೇ ಗೌಡರಿಗೆ ಈ ಹಿಂದೆಯೂ ಹೇಳಿದ್ದೆ. ಹಲವು ಬಾರಿ ತಿಳಿಸಿ ಹೇಳಿದ್ದೆ. ಕಾಲ ಮಿಂಚಿ ಹೋಗುವ ಮುನ್ನ ತೀರ್ಮಾನ ಮಾಡಿ ಎಂದಿದ್ದೆ. ಫೆಬ್ರವರಿ 12ಕೆಕ ಸಭೆ ಕರೆದಿದ್ದೇವೆ. ಫೆಬ್ರವರಿ 12ರ ನಂತರ ತೀರ್ಮಾನ ಮಾಡುತ್ತೇವೆ. ಅವರು ಹೋದರು ಎಂದು ಕ್ಷೇತ್ರವನ್ನು ಹಾಗೇ ಬಿಡುವುದಕ್ಕೆ ಆಗುತ್ತಾ? ನಮ್ಮ ದಾರಿ ನಾವು ನೋಡಿಕೊಳ್ಳಲೇಬೇಕಲ್ವಾ ಎಂದಿದ್ದಾರೆ ಪ್ರಜ್ವಲ್ ರೇವಣ್ಣ.


ಇತ್ತೀಚೆಗೆ ಈಗ ಬಿಜೆಪಿಯಲ್ಲಿರುವ ಎ.ಮಂಜು ಅವರಿಗೆ ಅರಕಲಗೂಡು ಕ್ಷೇತ್ರದ ಟಿಕೆಟ್ ನೀಡುತ್ತೇವೆ. ಈ ಬಗ್ಗೆ ಈಗಾಗಲೇ ಎ.ಮಂಜು ಅವರ ಜೊತೆ ಮಾತನಾಡಿದ್ದೇನೆ. ಬಹುಶಃ ರೇವಣ್ಣನವರೂ ಮಾತನಾಡಿರಬಹುದು ಎಂದಿದ್ದರು. ಕುಮಾರಸ್ವಾಮಿ ಅವರು ಬಹುಶಃ ಎಂಬ ಪದ ಬಳಸಿದಾಗಲೇ ಸಂಥಿಂಗ್ ಈಸ್ ರಾಂಗ್ ಅನ್ನೋ ಮೆಸೇಜ್ ಸಿಕ್ಕಿತ್ತು. ಈಗಾಗಲೇ ಮಂಜು ಅವರು ಬಿಜೆಪಿ ಬಿಡದೇ ಇದ್ದರೂ, ತಾವು ಜೆಡಿಎಸ್`ನಿಂದಲೇ ನಿಲ್ಲುವುದಾಗಿ ಹೇಳಿಕೊಂಡಿದ್ದಾರೆ. ಅತ್ತ ಸದ್ಯದ ಮಟ್ಟಿಗೆ ಜೆಡಿಎಸ್`ನಲ್ಲಿಯೇ ಇರುವ ಶಾಸಕ ಎ.ಟಿ.ರಾಮಸ್ವಾಮಿ ಕುಮಾರಸ್ವಾಮಿ ಹೇಳಿಕೆಗೆ ಗರಂ ಆಗಿದ್ದಾರೆ.


ಹಾಸನ ಟಿಕೆಟ್ ಕುರಿತಂತೆ ಮಾತನಾಡಿರುವ ಪ್ರಜ್ವಲ್ ರೇವಣ್ಣ ಟಿಕೆಟ್ ಘೋಷಣೆ ಕುರಿತಂತೆ ನಮಗೆ ಯಾವ ಅನುಮಾನವೂ ಇಲ್ಲ. ಗೊಂದಲವೂ ಇಲ್ಲ. ಎಲ್ಲ ಸಮಸ್ಯೆ ಬಗೆಹರಿದ ಮೇಲೆ ಕಾರ್ಯಕರ್ತರ ಸಭೆ ಕರೆದು ಚರ್ಚೆ ಮಾಡುತ್ತೇವೆ. ಆಮೇಲೆ ಒಳ್ಳೆಯ ದಿನ ನೋಡಿಕೊಂಡು ಘೋಷಣೆ ಮಾಡುತ್ತೇವೆ ಎಂದಿದ್ದಾರೆ ಪ್ರಜ್ವಲ್. ಅಂದಹಾಗೆ ಹಾಸನ ಟಿಕೆಟ್ ಘೋಷಣೆ ಕುರಿತಂತೆ ಕುಮಾರಸ್ವಾಮಿ ಹಾಗೂ ಸಿಎಂ ಇಬ್ರಾಹಿಂ ಫೆಬ್ರವರಿ 3ನೇ ಹಾಗೂ 4ನೇ ತಾರೀಕು ಡೆಡ್ ಲೈನ್ ಹೇಳಿದ್ದರು. ಡೆಡ್‍ಲೈನ್ ಮುಗಿದಿದೆ. ಆದರೆ ಹಾಸನ ಟಿಕೆಟ್ ಇತ್ಯರ್ಥ ಆಗಿಲ್ಲ. ರೇವಣ್ಣನವರೇನೋ ನಾವು ಅಣ್ಣ ತಮ್ಮ ಒಂದೇ ಎನ್ನುತ್ತಿದ್ದಾರೆ. ಅವರ ಮಕ್ಕಳು ಸೈಲೆಂಟ್ ಆಗಿಯೇ ತಿರುಗಿ ಬೀಳುತ್ತಿರುವುದೂ ಹೌದು. ಭವಾನಿ ರೇವಣ್ಣ ಮೌನಕ್ಕೆ ಶರಣು ಹೋಗಿದ್ದಾರೆ. ಆದರೆ.. ಹಾಸನ ಟಿಕೆಟ್ ಕನ್`ಫ್ಯೂಷನ್ ಕೊನೆಯಾಗಿಲ್ಲ.



