ಇದು ಉದ್ದೇಶಪೂರ್ವಕವಾಗಿ ಆದ ಪ್ರಕರಣವೋ.. ಅಥವಾ ಆಕಸ್ಮಿಕವಾಗಿ ನಡೆದದ್ದೋ ಗೊತ್ತಿಲ್ಲ. ಆಗಿರುವುದಂತೂ ಸತ್ಯ. ಲಿಂಗಾಯತ ಮಠಗಳೇ ಟಾರ್ಗೆಟ್ ಆಗುತ್ತಿರೋದೇಕೆ ಅನ್ನೋದು ಭಕ್ತರ ಪ್ರಶ್ನೆ. ಹಳೆಯ ಸರ್ಕಾರ ಮುಂಜೂರು ಮಾಡಿದ್ದ ಕಾಮಗಾರಿಗಳಿಗೆ ತಡೆ ನೀಡಿದ್ದ ಸರ್ಕಾರದ ಆದೇಶದ ಎಫೆಕ್ಟ್ ಇದು. ರಾಜ್ಯದ ಆದೇಶದಿಂದ ಹಲವು ಮಠಗಳಲ್ಲಿ ಸರ್ಕಾರ ಹಮ್ಮಿಕೊಂಡಿದ್ದ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿದೆ.
ಅನುದಾನ ಸ್ಥಗಿತವಾದ ಮಠಗಳ ವಿವರ
01. ತಿಪಟೂರು ರುದ್ರಮೂರ್ತಿ ಮಠ : ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ 4.5 ಕೋಟಿ ಅನುದಾನಕ್ಕೆ ತಡೆ
02 . ಗವಿ ಸಿದ್ದೇಶ್ವರ ಸ್ವಾಮಿ ಮಠಕ್ಕೆ 5 ಕೋಟಿ ತಡೆ
03. ಶ್ರೀಶೈಲ ಮಠಕ್ಕೆ ನೀಡಲಾಗಿದ್ದ ೫ ಕೋಟಿ ಅನುದಾನ ಬಿಡುಗಡೆಗೂ ಬ್ರೇಕ್
04. ತುಮಕೂರಿನ ಸಿದ್ದರಬೆಟ್ಟ ಮಠಕ್ಕೆ ನೀಡಿದ್ದ 2.5 ಕೋಟಿ ಬಿಡುಗಡೆಗೆ ತಡೆ
05. ಚಿಕ್ಕಮಗಳೂರಿನಲ್ಲಿ ರಂಭಾಪುರಿ ಮಠಕ್ಕೆ ನೀಡಿದ್ದ ಹತ್ತು ಕೋಟಿ ಬಿಡುಗಡೆಗೂ ಬ್ರೇಕ್
06. ದೊಡ್ಡ ಹುಣ್ಸೆಕಲ್ ಮಠ 1 ಕೋಟಿ ತಡೆ
07. ಅಂಕನಹಳ್ಳಿ ಮಠ ಕುಣಿಗಲ್ 5 ಕೋಟಿ ತಡೆ
08. ಬೆಂಗಳೂರಲ್ಲಿ ವಿದ್ಯಾರ್ಥಿ ನಿಲಯಕ್ಕೆ ಕಾಶಿ ಪೀಠಕ್ಕೆ ನೀಡಿದ್ದ 1.5 ಕೋಟಿಗೂ ತಡೆ ನೀಡಲಾಗಿದೆ
ಈ ಲಿಸ್ಟಿನಲ್ಲಿ ಸಿದ್ಧಗಂಗಾ ಮಠದ ಹಾಸ್ಟೆಲ್ ಕಟ್ಟಡವೂ ಸೇರಿತ್ತು. ಇದಕ್ಕೆ ತಡೆ ನೀಡಲಾಗಿತ್ತಾದರೂ, ಸುದ್ದಿಯಾಗುತ್ತಿದ್ದಂತೆಯೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯವನ್ನು ಸೀರಿಯಸ್ ಆಗಿ ತೆಗೆದುಕೊಂಡು ತಡೆ ತೆರವು ಮಾಡಿದರು. ಸಿದ್ಧಗಂಗಾ ಮಠದ ಶಕ್ತಿ ಸಿದ್ದರಾಮಯ್ಯ ಅವರಿಗೂ ಗೊತ್ತು.
ಸಿದ್ದಗಂಗಾ ಶ್ರೀಗಳ ಫೋಟೋ ತೆರವು
ಇದು ನಡೆದಿರುವುದು ವಿಧಾನಸೌಧದಲ್ಲಿಯೇ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರ ಫೋಟೋಗಳನ್ನು ತೆಗೆದಿದ್ದಾರೆ. ಅದನ್ನು ರಾಜಕೀಯ ದ್ವೇಷ ಎನ್ನಬಹುದಾದರೂ, ಸಿದ್ಧಗಂಗಾ ಶ್ರೀಗಳಾದ ಶಿವೈಕ್ಯ ಶಿವಕುಮಾರಸ್ವಾಮೀಜಿಗಳ ಫೋಟೋ ತೆಗೆದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಬಿಜೆಪಿ ಟ್ವೀಟ್ ಮಾಡಿದ್ದು, ಶಿವಕುಮಾರಸ್ವಾಮೀಜಿ ಫೋಟೋ ತೆಗೆದು ಹಾಕಿರುವುದನ್ನು ಖಂಡಿಸಿದೆ. ಆದರೆ ಇದು ಕಟ್ಟಡ ಕ್ಲೀನಿಂಗ್ ವೇಳೆ ತೆಗೆದ ಫೋಟೋ. ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವನ್ನು ತೆಗೆದಿಲ್ಲ ಎನ್ನುವುದು ಸರ್ಕಾರಿ ಅಧಿಕಾರಿಗಳ ವಾದ.



