ಕುಮಾರಸ್ವಾಮಿ ಮಾಜಿ ಸಿಎಂ. ಆದರೇನಂತೆ ಹೆಂಡತಿಯ ಕಣ್ಣಲ್ಲಿ ಗಂಡ, ಅಷ್ಟೆ. ಇತ್ತೀಚೆಗೆ ಕುಮಾರಸ್ವಾಮಿ ಅವರಿಗೆ ವೇದಿಕೆಯ ಮೇಲೆ ಕೋಪ ಮಾಡಿಕೊಂಡಿರುವ ಅನಿತಾ ಹಾಗೂ ಏನ್ ಮಾಡ್ಲಪ್ಪಾ ಸಿವನೇ ಎಂದು ಪರದಾಡುತ್ತಿರುವ ಕುಮಾರಸ್ವಾಮಿ ವಿಡಿಯೋ ವೈರಲ್ ಆಗಿತ್ತು. ಇದು ಎಲ್ಲರ ಮನೆ ಕಥೆ. ಎಲ್ಲ ಗಂಡಸರೂ ಹಿಂಗೇ.. ಎಲ್ಲ ಹೆಂಡತಿಯರೂ ಹಿಂಗೇ ಇರ್ತಾರೆ ಕಣ್ರಿ.. ಎಂದು ಲೈಟಾಗಿ ತಮಾಷೆ ಮಾಡಿದ್ದರು ಜನ. ಕೆಟ್ಟದಾಗಿ ಕಮೆಂಟ್ ಮಾಡುವವರ ಬಗ್ಗೆ ಚರ್ಚೆಯಾದರೂ ಏಕೆ..?
ಅಂದಹಾಗೆ ಇದು ಪೊಲಿಟಿಕಲ್ ಸ್ಟೋರಿ ಅಲ್ಲ. ಆದರೆ ರಾಜಕೀಯ ವೇದಿಕೆಯಲ್ಲೇ ಹೇಳಿರುವ ಕಥೆ. ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ಕುಮಾರಸ್ವಾಮಿ ಮಧುಗಿರಿಯಲ್ಲಿದ್ದರು. ಅಂದಹಾಗೆ ಮಧುಗಿರಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸಿದ್ದ ಕ್ಷೇತ್ರವೂ ಹೌದು. ಅನಿತಾ ಅವರು ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದು ಇದೇ ಕ್ಷೇತ್ರದಿಂದ. ಈಗ ಭವಾನಿ ರೇವಣ್ಣ ಹಾಸನ ಕ್ಷೇತ್ರಕ್ಕೆ ಟಿಕೆಟ್ ಬೇಕು ಎಂದು ಹಠಕ್ಕೆ ಬಿದ್ದಿರುವ ಸಮಯದಲ್ಲಿಯೇ ಅವರು ಹೇಳಿರುವ ಈ ಕಥೆ ಮತ್ತು ಅದರಲ್ಲಿರೋ ಸಂದೇಶ ಬೇರೆಯದೇ ಮೆಸೇಜ್ ಕೊಡುತ್ತಿದೆ.
ಅನಿತಾ ಕುಮಾರಸ್ವಾಮಿ ಅವರು ಕುಮಾರಸ್ವಾಮಿ ಅವರನ್ನು ಮದುವೆಯಾಗೋಕೆ ಯೆಸ್ ಎನ್ನುವುದಕ್ಕೆ ಮೊದಲು ರಾಜಕೀಯಕ್ಕೆ ಹೋಗಬೇಡಿ ಎಂದು ಕಂಡೀಷನ್ ಹಾಕಿದ್ದರಂತೆ. ರಾಜಕೀಯಕ್ಕೆ ಹೋಗಲ್ಲ ಎಂದರೆ ಮಾತ್ರ ಮದುವೆಯಾಗುತ್ತೇನೆ ಎಂದು ಷರತ್ತು ವಿಧಿಸಿದ್ದರಂತೆ. ಕುಮಾರಸ್ವಾಮಿ ಆಗ ರಾಜಕೀಯದಲ್ಲಿ ಇರಲಿಲ್ಲ. ಬಿಸಿನೆಸ್ ಮತ್ತು ಸಿನಿಮಾ ಎಂದು ಓಡಾಡಿಕೊಂಡಿದ್ದರು.
ಆದರೆ ಹಣೆಬರಹ ನೋಡಿ. ಅದೇ ಅನಿತಾ ಕುಮಾರಸ್ವಾಮಿ ಪಕ್ಷ ಉಳಿಸಿಕೊಳ್ಳುವುದಕ್ಕೆ ರಾಜಕೀಯಕ್ಕೆ ಬರಬೇಕಾಯ್ತು. ಒಂದು ಕಡೆ ನಮ್ಮ ಕುಟುಂಬದವರೇ ಆದ ಶಂಕ್ರಣ್ಣ ಇದ್ದರು. ಇನ್ನೊಂದು ಕಡೆ ರಾಕ್ಷಸ ರಾಜಣ್ಣ ಇದ್ದರು. ಪಕ್ಷದ ಕಾರ್ಯಕರ್ತರಲ್ಲಿ ಭರವಸೆ ಹುಟ್ಟಿಸಬೇಕಾದರೆ ಅನಿತಾ ಸ್ಪರ್ಧಿಸಲೇಬೇಕಿತ್ತು. ಅವರು ರಾಜಕೀಯಕ್ಕೆ ಬಂದರು. ಗೆದ್ದರು. ಎಲ್ಲ ದೇವರ ಆಟ ಎಂದಿದ್ದಾರೆ ಕುಮಾರಸ್ವಾಮಿ.
ಅಷ್ಟೇ ಅಲ್ಲ, ಮಧುಗಿರಿಗೆ ಎಲೆಕ್ಷನ್`ಗೆ ಸ್ಪರ್ಧೆ ಮಾಡಬೇಕು ಎಂದಾಗ ನೀನೇ ನಿಂತುಕೊಳ್ಳಬೇಕು ಎಂದು ಅನಿತಾ ಅವರಲ್ಲಿ ಪರ್ಮಿಷನ್ ಕೇಳಿದೆ. ನನ್ನ ಮಗನೇ ಅಮ್ಮ, ಅಪ್ಪನ ಮಾತು ಕೇಳಬೇಡ. ಅಪ್ಪನ ರಾಜಕೀಯ ತೀಟೆಗೆ ನಿನ್ನನ್ನು ನಿಲ್ಲಿಸ್ತಿದ್ದಾರೆ. ನೀನು ರಾಜಕೀಯಕ್ಕೆ ಹೋಗಬೇಡ ಎಂದು ಹೇಳಿದ್ದ. ಕೊನೆಗೆ ನನ್ನ ಮಾತು ಮತ್ತು ಪ್ರೀತಿಗೆ ಒಪ್ಪಿ ರಾಜಕೀಯಕ್ಕೆ ಬಂದರು ಎಂದು ಮತದಾರರ ಎದುರು ಹೇಳಿಕೊಂಡಿದ್ದಾರೆ ಕುಮಾರಸ್ವಾಮಿ.
ಅಷ್ಟೇ ಅಲ್ಲ, ದೇವೇಗೌಡರ ಸಾವನ್ನು ಬಯಸಿದವರಿಗೆ ಪಾಠ ಕಲಿಸುವ ಸಮಯ ಬಂದಿದೆ ಎಂದೂ ಹೇಳಿದ್ದಾರೆ. ದೇವೇಗೌಡರ ಸಾವಿನ ಬಗ್ಗೆ ಈ ಹಿಂದೆ ಕೆ.ಎನ್.ರಾಜಣ್ಣ ಮಾತನಾಡಿದ್ದು ವಿವಾದವಾಗಿತ್ತು. ಕಾಂಗ್ರೆಸ್ ಮುಖಂಡರೂ ಕೂಡಾ ರಾಜಣ್ಣ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊನೆಗೆ ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದರು. ಅದೇ ಹೇಳಿಕೆ ನೆನಪಿಸಿರುವ ಕುಮಾರಸ್ವಾಮಿ ದೇವೇಗೌಡರ ಸಾವನ್ನು ಬಯಸಿದವರಿಗೆ ಪಾಠ ಕಲಿಸಬೇಕು ಎಂದು ಎಮೋಷನಲ್ ಆಗಿ ಮಾತನಾಡಿದ್ದಾರೆ.
ರಾಜಕೀಯ ವಿಶ್ಲೇಷಕರು ಈ ಕಥೆಯ ಹಿಂದೆ ಬೇರೆಯದೇ ಸಂದೇಶ ಹುಡುಕಿದ್ದಾರೆ. ಅನಿತಾ ಕುಮಾರಸ್ವಾಮಿ ಮತ್ತು ತಮ್ಮ ಮ್ಯಾರೇಜ್ ಸ್ಟೋರಿ, ನಂತರ ಅವರು ಮಧುಗಿರಿಗೆ ನಿಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾದ ಕಥೆಯನ್ನು ಅವರು ಮಧುಗಿರಿಯ ಜನರಿಗಷ್ಟೇ ಅಲ್ಲ, ಹಾಸನದವರಿಗೂ ತಲುಪಿಸುವ ಉದ್ದೇಶವಿದೆ ಎನ್ನುತ್ತಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್‍ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದು, ಟಿಕೆಟ್ ಕೊಡದೇ ಇದ್ದರೆ ಕುಟುಂಬವೇ ಬೇರೆಯಾಗುವ ಆತಂಕವೂ ಇದೆ. ಕುಮಾರಸ್ವಾಮಿ ಬಹಿರಂಗವಾಗಿ ಕಾರ್ಯಕರ್ತರಿಗೇ ಟಿಕೆಟ್, ನಾನು ಮಾತು ತಪ್ಪೋದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಸ್ವರೂಪ್ ಪ್ರಕಾಶ್ ಅವರ ಪರ ಗಟ್ಟಿಯಾಗಿ ನಿಂತಿದ್ದಾರೆ. ಅತ್ತಿಗೆಗೆ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದು ಕುಮಾರಸ್ವಾಮಿ ಅವರ ಹಠ. ಭವಾನಿಗೆ ಟಿಕೆಟ್ ಕೊಡದಿದ್ದರೆ ಸ್ವರೂಪ್ ಅವರಿಗೂ ಟಿಕೆಟ್ ಕೊಡಬೇಡಿ ಎನ್ನುವುದು ರೇವಣ್ಣನವರ ಮೊದಲ ಹಠ. ಇನ್ನೊಂದು ಹಠವೂ ಇದೆ. ಅದನ್ನು ಮೀರಿ ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟರೆ ಹೊಳೆನರಸೀಪುರದಿಂದ ನಿಲ್ಲದೇ ಇರಲು ರೇವಣ್ಣ ತೀರ್ಮಾನಿಸಿದ್ದಾರಂತೆ. ಹಾಗೇನಾದರೂ ಆದರೆ ದೇವೇಗೌಡರ ಕುಟುಂಬ ಛಿದ್ರವಾದಂತೆಯೇ.. ರಾಜಕೀಯಕ್ಕೆ ಕುಟುಂಬ ಛಿದ್ರವಾಗದಿರಲಿ.



