ಒಂದಲ್ಲ..ಎರಡು ಸಮೀಕ್ಷೆಗಳು ಹೊರಬಿದ್ದಿವೆ. ಎರಡೂ ನ್ಯಾಷನಲ್ ಟಿವಿ ಚಾನೆಲ್ಲುಗಳು. ಒಂದು ಜೀನ್ಯೂಸ್. ಮತ್ತೊಂದು ಎಬಿಪಿ ನ್ಯೂಸ್. ಒಂದೊಂದರಲ್ಲಿ ಒಂದೊಂದು ಫಲಿತಾಂಶ ಹೊರಬಿದ್ದಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಎಬಿಪಿ ಸಿಓಟರ್ ಸಮೀಕ್ಷೆ ಮುನ್ಸೂಚನೆ ನೀಡಿದೆ. ಆಡಳಿತಾರೂಢ ಬಿಜೆಪಿ 68 ಸ್ಥಾನಗಳನ್ನಷ್ಟೇ ಪಡೆಯಬಹುದು ಎಂದು ಸಮೀಕ್ಷೆ ತಿಳಿಸಿದ್ದು, ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಸಮೀಕ್ಷಾ ವರದಿ ಪ್ರಕಟವಾಗಿದೆ. ಕಾಂಗ್ರೆಸ್ 11ರಿಂದ 127 ಸ್ಥಾನ, ಬಿಜೆಪಿ 68ರಿಂದ 80 ಸ್ಥಾನಗಳು ಮತ್ತು ಜೆಡಿಎಸ್ಗೆ 23ರಿಂದ 35 ಸ್ಥಾನಗಳು ದೊರೆಯಬಹುದು ಎಂದು ಸಮೀಕ್ಷಾ ವರದಿ ಹೇಳಿದೆ. ಪಕ್ಷೇತರರು 0-2 ಸ್ಥಾನ ಪಡೆಯಬಹುದು ಎಂದು ತಿಳಿಸಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ 19 – 23 ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ 8 – 12 ಸ್ಥಾನ ಪಡೆಯಲಿದೆ. ಜೆಡಿಎಸ್ ಹಾಗೂ ಪಕ್ಷೇತರರು ತಲಾ 1 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
50 ಸ್ಥಾನಗಳ ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಶೇ 43 ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ಆದರೆ, ಕಾಂಗ್ರೆಸ್ 25-29 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ, ಆದರೆ ಬಿಜೆಪಿ 21-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಶೇ 46 ಮತಗಳನ್ನು ಗಳಿಸುವ ಸಾಧ್ಯತೆಯಿದೆ ಮತ್ತು ಕಾಂಗ್ರೆಸ್ ಶೇ 41 ಮತದಾರರ ಬೆಂಬಲವನ್ನು ಪಡೆಯಲಿದೆ. . ಬಿಜೆಪಿ 9-13 ಸ್ಥಾನಗಳು, ಕಾಂಗ್ರೆಸ್ 8 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ 38ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಶೇ 41 ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಸೀಟುಗಳ ಪ್ರಕಾರ, 35 ಸ್ಥಾನಗಳ ಪ್ರದೇಶದಲ್ಲಿ ಬಿಜೆಪಿ 12-16 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ 18-22 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಭಾಗದಲ್ಲಿ ಜೆಡಿಎಸ್ಗೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎಂದು ಸಮೀಕ್ಷಾ ವರದಿ ಹೇಳಿದೆ.
ಝೀ ನ್ಯೂಸ್ ಪ್ರಕಾರ ಅತಂತ್ರ. ಬಿಜೆಪಿ ಮೇಲುಗೈ
ಈ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ. ಯಾವುದೇ ಪಕ್ಷಕ್ಕೂ 113ರ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು ಬಿಜೆಪಿ 96-106 ಸೀಟು ಗೆಲ್ಲಲಿದೆ. ಕಾಂಗ್ರೆಸ್ 88-98 ಸೀಟು ಗೆಲ್ಲಬಹುದು. ಜೆಡಿಎಸ್ 23-33ರಲ್ಲಿ ನಿಲ್ಲಲಿದೆ.
ಯಾವ ಸರ್ಕಾರ ಬೆಸ್ಟ್?
ಎಬಿಪಿ ಸಿ ವೋಟರ್ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ.50 ರಷ್ಟು ಜನರು ಬಿಜೆಪಿ ಸರ್ಕಾರ ಕಳಪೆ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಶೇ.47ರಷ್ಟು ಮಂದಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳಪೆ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಶೇ. 47 ರಷ್ಟು ಜನರು ಉತ್ತಮ ಆಡಳಿತ ಎಂದು ರೇಟಿಂಗ್ ನೀಡಿದ್ದಾರೆ. ಜೀ ಸಮೀಕ್ಷೆಯಲ್ಲಿ ಕೂಡಾ ಮೋದಿ ಸರ್ಕಾರದ ಪರ ಒಲವು ತೋರಿರುವ ಮತದಾರರು, ರಾಜ್ಯ ಸರ್ಕಾರದ ಬಗ್ಗೆ ಅದೇ ರೀತಿಯ ಒಲವು ತಾಳಿಲ್ಲ.
ಸಿಎಂ ಯಾರು ಬೆಸ್ಟ್..?
ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿ ಸಮೀಕ್ಷೇ ವೇಳೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದವರ ಪೈಕಿ ಹೆಚ್ಚಿನವರು ಸಿದ್ದರಾಮಯ್ಯ ಪರ ಒಲವು ವ್ಯಕ್ತಪಡಿಸಿದ್ದಾರೆ. ಅವರು ಅಗ್ರಸ್ಥಾನದಲ್ಲಿದ್ದು, ಅವರ ಪರವಾಗಿ ಶೇ 39.1ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಪರ ಶೇ 31.1ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದರೆ, ಹೆಚ್ಡಿ ಕುಮಾರಸ್ವಾಮಿ ಪರ ಶೇ 21.4 ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಪರ ಕೇವಲ ಶೇ 3.2ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ. ಸಿಎಂ ಕ್ಯಾಂಡಿಡೇಟ್ ಆಯ್ಕೆಯಲ್ಲಿಯೂ ಸಿದ್ದರಾಮಯ್ಯ ಮುಂದಿದ್ದಾರೆ.



