ಎ.ಮಂಜು. ಅರಕಲಗೂಡು ಮಂಜು ಎಂದರ್ಥ. ಆದರೆ ಹಾಸನದಲ್ಲಷ್ಟೇ ಏಕೆ, ರಾಜಕೀಯ ಪಡಸಾಲೆಗಳಲ್ಲಿ ವಾಲೆ ಮಂಜು ಎಂದೇ ಚಿರಪರಿಚಿತ. ಎ.ಮಂಜು ಸದ್ಯಕ್ಕೆ ಅಧಿಕೃತವಾಗಿ ಬಿಜೆಪಿಯಲ್ಲಿದ್ದಾರೆ. ಮಂಜು ಅವರ ಪೊಲಿಟಿಕಲ್ ಕೆರಿಯರ್ ಶುರುವಾಗಿದ್ದು ಬಿಜೆಪಿಯಿಂದ. ಈಗ ಹಾಸನದಲ್ಲಿ ಪ್ರೀತಂಗೌಡ ಅವರು ಹೇಗೆ ಜಯಭೇರಿ ಬಾರಿಸಿದ್ದರೋ, ಅದೇ ರೀತಿ ಹಾಸನ ಜಿಲ್ಲೆಯ ಅರಕಲಕೂಡು ಕ್ಷೇತ್ರದಲ್ಲಿ ಎ.ಮಂಜು ವಿಜೃಂಭಿಸಿದ್ದರು. ಶಾಸಕರಾಗಿದ್ದರು. ಅದಾದ ಮೇಲೆ ಮಂಜು ಕಾಂಗ್ರೆಸ್ಸಿಗೆ ಹೋದರು. 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯೂ ಆದರು. 2014ರ ಲೋಕಸಭಾ ಎಲೆಕ್ಷನ್`ನಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತರು. ಅದಾದ ಮೇಲೆ ಬಿಜೆಪಿ ಸೇರಿದರು. ಮತ್ತೊಮ್ಮೆ ಹಾಸನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿ, ಪ್ರಜ್ವಲ್ ರೇವಣ್ಣ ವಿರುದ್ಧ ಸೋತರು. ದೇವೇಗೌಡರು ಮತ್ತು ಹೆಚ್.ಡಿ.ರೇವಣ್ಣ ವಿರುದ್ಧವೇ ತೊಡೆತಟ್ಟಿ ನಿಂತಿದ್ದ ಎ.ಮಂಜು ಇದೀಗ ಜೆಡಿಎಸ್ ಸೇರುತ್ತಿದ್ದಾರೆ. ರಾಜಕೀಯ ಒಂದು ರೌಂಡ್ ಪೂರೈಸಿದಂತಾಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿದ್ದಾಗ ಇದೇ ಮಂಜು ಹೆಚ್.ಡಿ.ರೇವಣ್ಣ ವಿರುದ್ಧ ಯಾವ್ಯಾವ ರೀತಿಯಲ್ಲಿ ದಾಳಿ ಮಾಡಿದ್ದಾರೆಂಬುದನ್ನು ರಾಜ್ಯ ರಾಜಕಾರಣ ನೋಡಿದೆ. ಹಾಸನ ಹಾಳು ಮಾಡಿದ್ದು ದೇವೇಗೌಡರು, ಕೆಎಂಎಫ್ ಹಾಳು ಮಾಡಿದ್ದು ರೇವಣ್ಣ ಎಂದು ಟೀಕಿಸಿದ್ದರು ಇದೇ ಮಂಜು. ಬಳಸಿ ಬಳಸಿ ಕ್ಲೀಷೆಯಾಗಿದೆಯಾದರೂ.. ವಿಧಿಯಿಲ್ಲ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ. ಶಾಶ್ವತ ಮಿತ್ರರೂ ಅಲ್ಲ. ಅರಕಲಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಎ.ಟಿ.ರಾಮಸ್ವಾಮಿ. ಮೊದಲು ಕಾಂಗ್ರೆಸ್ಸಿನಲ್ಲಿದ್ದವರೇ, ದೇವೇಗೌಡರ ಜೊತೆ ಸೇರಿ ಜೆಡಿಎಸ್ ಸೇರ್ಪಡೆಯಾಗಿದ್ದ ಎ.ಟಿ.ರಾಮಸ್ವಾಮಿ ಇದೀಗ ವಾಪಸ್ ಕಾಂಗ್ರೆಸ್`ನತ್ತ ಹೊರಟಿದ್ದಾರೆ. ಬಿಜೆಪಿ-ಕಾಂಗ್ರೆಸ್-ಬಿಜೆಪಿ ಜರ್ನಿ ಮುಗಿಸಿರುವ ಎ.ಮಂಜು ಜೆಡಿಎಸ್ ಸೇರುತ್ತಿದ್ದಾರೆ.

2018ರಲ್ಲಿ ಹೇಗಿತ್ತು ಫಲಿತಾಂಶ ?
ಗೆದ್ದಿದ್ದವರು : ಎ.ಟಿ.ರಾಮಸ್ವಾಮಿ. ಪಕ್ಷ : ಜೆಡಿಎಸ್. ಪಡೆದಿದ್ದ ಮತ : 85,064
ರನ್ನರ್ ಅಪ್ : ಎ.ಮಂಜು. ಪಕ್ಷ : ಕಾಂಗ್ರೆಸ್. ಪಡೆದಿದ್ದ ಮತ : 74,411
ಈಗ ಪರಿಸ್ಥಿತಿ ಬದಲಾಗಿದೆ. 2018ರಲ್ಲಿ ಗೆದ್ದಿದ್ದ ಅಭ್ಯರ್ಥಿ ಪಕ್ಷವನ್ನು ಬದಲಿಸಿ, ತಾವು ಸೋಲಿಸಿದ್ದ ಪಕ್ಷವನ್ನೇ ಸೇರಿದ್ದಾರೆ. ಸೋತಿದ್ದ ಅಭ್ಯರ್ಥಿಯೂ ಅಷ್ಟೆ, ತಮ್ಮನ್ನು ಸೋಲಿಸಿದ್ದ ಪಕ್ಷವನ್ನೇ ಸೇರಿದ್ದಾರೆ. ದಟ್ ಈಸ್ ಪಾಲಿಟಿಕ್ಸ್.
ಕುಮಾರಸ್ವಾಮಿ ತಂತ್ರವೇನು? ಲೆಕ್ಕಾಚಾರವೇನು?
ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಕೂಡಾ ಜೆಡಿಎಸ್ ಜೊತೆಯಲ್ಲಿ ಇಲ್ಲ. ಸ್ವಲ್ಪ ಅತ್ತಇತ್ತ ಎಂದು ವಾಲುತ್ತಿದ್ದ ಶಿವಲಿಂಗೇಗೌಡ, ಈಗ ಬಹಿರಂಗವಾಗಿಯೇ ಒಂದು ಕಾಲು ಹೊರಗಿಟ್ಟಿದ್ದಾರೆ. ಈ ಬಜೆಟ್ ಅಧಿವೇಶನದ ಬಳಿಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರಬಹುದು. ಕಾರ್ಯಕರ್ತರು, ಅಭಿಮಾನಿಗಳ ಜೊತೆ ಸಭೆ ಎನ್ನುವುದು ನೆಪ ಮಾತ್ರಕ್ಕೆ ಅಷ್ಟೆ ಎನ್ನುವುದು ಗೊತ್ತಿಲ್ಲದ್ದೇನಲ್ಲ. ಹೀಗಾಗಿ ಅಲ್ಲಿಯೂ ಒಬ್ಬ ಅಭ್ಯರ್ಥಿಯನ್ನು ತರಬೇಕಾದ ಅನಿವಾರ್ಯತೆ ಕುಮಾರಸ್ವಾಮಿ & ರೇವಣ್ಣ ಬ್ರದರ್ಸ್`ಗೆ ಇದೆ. ಇದನ್ನೇ ಕುಮಾರಸ್ವಾಮಿ ಓಪನ್ ಆಗಿಯೇ ಹೇಳಿದ್ದಾರೆ. ಅಲ್ಲದೆ ನಾನೇ ಮಂಜು ಅವರ ಜೊತೆ ಮಾತನಾಡಿದ್ದೇನೆ ಎನ್ನುವ ಮೂಲಕ ಹಾಸನ ಎಂದರೆ ರೇವಣ್ಣ ಅಖಾಡ ಎಂಬ ವಾದವನ್ನೂ ಸುಳ್ಳಾಗಿಸುವ ತಂತ್ರವೂ ಇದೆ.
ಎ.ಮಂಜು ಜೆಡಿಎಸ್`ನಲ್ಲಿ.. ಮಗ ಕಾಂಗ್ರೆಸ್`ನಲ್ಲಿ : ಎ.ಮಂಜು ಬಿಜೆಪಿ ಬಿಡುತ್ತಿರುವುದಕ್ಕೆ ಕಾರಣ ಸೂಕ್ತ ಸ್ಥಾನಮಾನ ಸಿಗದೇ ಇರುವುದೇ. ಕಾಂಗ್ರೆಸ್`ನಲ್ಲಿ ಆಗಿದ್ದೂ ಇದೇ. ಎ.ಮಂಜು ಬಿಜೆಪಿಯಲ್ಲಿದ್ದರೂ ಅವರ ಮಗ ಇರುವುದು ಕಾಂಗ್ರೆಸ್ಸಿನಲ್ಲಿಯೇ. ಮಂಜು ಆರಂಭದಿಂದಲೂ ದೇವೇಗೌಡರ ವಿರೋಧಿ ರಾಜಕಾರಣವನ್ನೇ ಮಾಡಿಕೊಂಡು ಬಂದವರು. ಈಗ ದೇವೇಗೌಡರ ಮಡಿಲು ಸೇರಿದ್ದಾರೆ. ನನಗೆ ಅರಕಲಗೂಡು ಟಿಕೆಟ್ ಬೇಕಿತ್ತು. ಕಾಂಗ್ರೆಸ್ಸಿನಲ್ಲಿ ನಿಲ್ಲುವುದಾದರೆ ಹೊಳೆನರಸೀಪುರದಲ್ಲಿ ನಿಲ್ಲು ಎಂದರು. ನನಗೆ ಇಷ್ಟ ಇರಲಿಲ್ಲ. ಈಗ ಜೆಡಿಎಸ್‍ನವರು ಗುರುತಿಸಿದ್ದಾರೆ. ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಅವರಿಗೆ ನಾನು ಅಭಾರಿ ಎಂದಿದ್ದಾರೆ ಎ.ಮಂಜು. ಎ.ಮಂಜು ಅವರಿಗೆ ಅರಕಲಗೂಡು ಟಿಕೆಟ್ ಕೊಡುವುದಕ್ಕೆ ಸಾಧ್ಯ ಇಲ್ಲ ಎನ್ನುವುದಕ್ಕೂ ಪಕ್ಷಾಂತರವೇ ಕಾರಣ. 

ಕಾಂಗ್ರೆಸ್ ನಿಲುವು : ಪಕ್ಷದಿಂದ ನಿಲ್ಲುತ್ತಿದ್ದ ಎ.ಮಂಜು ಪಕ್ಷದಲ್ಲಿ ಇರಲಿಲ್ಲ. ಬಿಜೆಪಿಯಲ್ಲಿದ್ದರು. ಹಾಸನದಲ್ಲಿ ಭದ್ರವಾಗಿ ನೆಲೆಯೂರಿದ್ದ ಬಿಜೆಪಿ, ಪಕ್ಕದ ಅರಕಲಗೂಡಿಗೂ ಬಂದರೆ ಕಷ್ಟ ಎಂದುಕೊಂಡ ಕಾಂಗ್ರೆಸ್, ಹೊಸ ಅಭ್ಯರ್ಥಿ ಹುಡುಕುವ ಬದಲಿಗೆ ಈಗಾಗಲೇ ಗೆದ್ದಿದ್ದ ಎ.ಟಿ.ರಾಮಸ್ವಾಮಿಯವರಿಗೇ ಗಾಳ ಹಾಕಿತು. ಪಕ್ಷಕ್ಕೆ ಕರೆತಂದಿತು. ಅದಾದ ಮೇಲೆ ಎ.ಮಂಜು ಮತ್ತೊಮ್ಮೆ ಕಾಂಗ್ರೆಸ್ ಬಾಗಿಲು ತಟ್ಟಿದರೇನೋ ಹೌದು, ಕಾಂಗ್ರೆಸ್ ಎ.ಟಿ.ರಾಮಸ್ವಾಮಿಯವರಿಗೆ ಮಾತು ಕೊಟ್ಟು ಅಗಿತ್ತು. ಎ.ಟಿ.ರಾಮಸ್ವಾಮಿಯವರಿಗೂ ಅಷ್ಟೆ, ತಾವು ಈ ಹಿಂದಿನ ಚುನಾವಣೆಯಲ್ಲಿ ದೂರಿದ್ದ, ಟೀಕಿಸಿದ್ದ ನಾಯಕರನ್ನೇ ಹೊಗಳಬೇಕು. ಇದಲ್ಲವೇ ರಾಜಕೀಯ..



