ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಜೋರಾಗಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರ ಹಿಡಿಯುತ್ತೇವೆ. ಬಿಜೆಪಿಯಲ್ಲಿ ಹಾಲಿ ನಾಲ್ಕೈದು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಯಡಿಯೂರಪ್ಪ ಹೀಗೆ ಹೇಳಿದ್ದೇ ತಡ, ಬಿಜೆಪಿ ಶಾಸಕರಲ್ಲಿ ಟೆನ್ಷನ್ ಜೋರಾಯ್ತು. ಅಯ್ಯೋ ನಮಗೆ ಟಿಕೆಟ್ ಸಿಕ್ಕಲ್ವಾ? ಟಿಕೆಟ್ ಲಿಸ್ಟ್‍ನಲ್ಲಿ ನನ್ನ ಹೆಸರು ಇರುತ್ತೋ..ಇರಲ್ವೋ.. ಈ ಪ್ರಶ್ನೆ, ಅನುಮಾನಗಳು ಜೋರಾಗಿವೆ. ಏಕೆಂದರೆ ಈ ಮಾತು ಹೇಳಿರುವುದು ಯಡಿಯೂರಪ್ಪ. ಯಡಿಯೂರಪ್ಪ ಅವರಿಗೆ ಇದೀಗ ಪಕ್ಷದಲ್ಲಿ ಸಿಗುತ್ತಿರುವ ಮಾನ್ಯತೆ, ಮನ್ನಣೆಯ ಅರಿವು ಎಲ್ಲರಿಗೂ ಇದೆ.
ಆರಂಭದಲ್ಲಿ ದೆಹಲಿ ಹೈಕಮಾಂಡ್ ಗುಜರಾತ್ ಮಾದರಿಯಲ್ಲಿ ಹೊಸಬರಿಗೆ ಟಿಕೆಟ್ ನೀಡಿದರೆ ಹೇಗೆ ಎಂಬ ಐಡಿಯಾದಲ್ಲಿತ್ತಂತೆ. ಆಗ ಖುದ್ದು ಯಡಿಯೂರಪ್ಪ ಗುಜರಾತ್ ಮತ್ತು ಕರ್ನಾಟಕ ಹೇಗೆ ಭಿನ್ನ ಎಂದು ತಿಳಿಸಿ ಹೇಳಿದ್ದಷ್ಟೇ ಅಲ್ಲ, ಹಿಮಾಚಲ ಪ್ರದೇಶ ಮಾದರಿಯಲ್ಲಿ ಬಂಡಾಯ ಅಭ್ಯರ್ಥಿಗಳು ನಿಂತರೆ ಆಗ ಎದುರಾಳಿಗಳಿಗೇ ಲಾಭ ಎಂದು ಅರಿವು ಮಾಡಿಕೊಟ್ಟರಂತೆ.
ಹೊಸಬರಿಗೆ ಟಿಕೆಟ್.. ಸೂತ್ರಗಳು ಅನ್ವಯ.. :
ಆಗ ಬಿಜೆಪಿ ಒಂದು ನಿರ್ಧಾರಕ್ಕೆ ಬಂದಿದೆ. ರಾಜ್ಯದಲ್ಲಿ ಕೆಲವು ಕ್ಷೇತ್ರಗಳಲ್ಲಿ ಆರ್.ಎಸ್.ಎಸ್. ಬಲವಾಗಿ ಬೇರೂರಿದೆ. ಅಲ್ಲಿ ಕ್ಯಾಂಡಿಡೇಟ್ ಮುಖ್ಯವಲ್ಲ. ಸಂಘಟನೆಯಷ್ಟೇ ಮುಖ್ಯ. ಅಂತಹ ಕ್ಷೇತ್ರಗಳಲ್ಲಿ ಮಾತ್ರವೇ ಜನವಿರೋಧಿ ಹಣೆಪಟ್ಟಿ ಕಟ್ಟಿಕೊಂಡಿರುವವರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಟಿಕೆಟ್ ಕೊಡುವುದು ಮೊದಲ ಯೋಜನೆ. ಎರಡನೆಯದ್ದು ಪ್ರಮುಖ ಲೀಡರ್‍ಗಳ ಹೆಸರಲ್ಲಿ ಗೆಲ್ಲುವ ಕ್ಷೇತ್ರಗಳು. ಯಡಿಯೂರಪ್ಪ ಹೆಸರಲ್ಲಿಯೇ ಗೆಲ್ಲುವ ಕ್ಷೇತ್ರಗಳಲ್ಲಿ ಅಗತ್ಯಬಿದ್ದರೆ ಹೊಸ ಅಭ್ಯರ್ಥಿ ಹಾಕುವುದು ಎಂದು ನಿರ್ಧರಿಸಲಾಗಿದೆಯಂತೆ. ಅಂತಹ ಕ್ಷೇತ್ರಗಳ ಹುಡುಕಾಟದಲ್ಲಿದೆ ಹೈಕಮಾಂಡ್.
ಯಾರಿಗೆಲ್ಲ ತಪ್ಪಬಹುದು ಟಿಕೆಟ್?
ಸದ್ಯಕ್ಕೆ ಶಿವಮೊಗ್ಗದ ಈಶ್ವರಪ್ಪ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್, ದಾವಣಗೆರೆಯ ರವೀಂದ್ರನಾಥ್, ಕಲಘಟಗಿಯಲ್ಲಿ ಲಿಂಬಣ್ಣವರ್, ಕಾಪುವಿನ ಲಾಲಾಜಿ ಟಂಡನ್, ಶಿರಹಟ್ಟಿಯ ರಾಮಪ್ಪ ಲಮಾಣಿ, ಪುತ್ತೂರಿನ ಸಂಜೀವ್ ಮಠಂದೂರು, ಸುಳ್ಯದಲ್ಲಿ ಅಂಗಾರ, ಮಹದೇವಪುರದ ಲಿಂಬಾವಳಿ, ರೋಣದ ಕಳಕಪ್ಪ ಬಂಡಿ, ಚಿತ್ರದುರ್ಗದ ತಿಪ್ಪಾರೆಡ್ಡಿ, ಮೋಹನ್ ಲಿಂಬಿಕಾಯಿ, ಇದೀಗ ಹೊಸ ಸೇರ್ಪಡೆ ಚನ್ನಗಿರಿ ಕ್ಷೇತ್ರದ ಮಾಡಾಳ್ ವಿರೂಪಾಕ್ಷಪ್ಪ.. ಹೆಸರು ಕೇಳಿಬರುತ್ತಿವೆ. ಹಾಗಂತ ಇದೇ ಅಂತಿಮವಲ್ಲ. ಇವರೇ ಗೆಲ್ಲುತ್ತಾರೆಂದರೆ ಇವರಿಗೇ ಟಿಕೆಟ್ ಕೊಡಬಹುದು. ಸೋಲತ್ತಾರೆ ಎಂದಾದರೆ ಹೊಸಬರಿಗೆ ಟ್ರೈ ಮಾಡಬಹುದು.
ಒಟ್ಟಿನಲ್ಲಿ ಯಡಿಯೂರಪ್ಪ ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿರಬಹುದು ಎಂಬ ಚರ್ಚೆ ಒಂದೆಡೆಯಾದರೆ, ಸಂಸದೀಯ ಮಂಡಳಿಯಲ್ಲಿರುವ ಅವರಿಗೆ ಹೈಕಮಾಂಡ್ನಿಂದ ಸುಳಿವು ದೊರೆತಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿಗೆ ಯಾರು ಬರುತ್ತಾರೋ ಅವರನ್ನು ನಾವು ಸ್ವಾಗತಿಸುತ್ತೇವೆ. ವರಿಷ್ಠರು ಎಲ್ಲಿಂದ ಸ್ಪರ್ಧಿಸಲು ಸೂಚನೆ ನೀಡುತ್ತಾರೆಯೋ ಅಲ್ಲಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಬಹುತೇಕ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬಹುದು ಎಂದು ಹೇಳಿದ್ದಾರೆ.
ಬಿಎಸ್ವೈ ಪಕ್ಷದ ಹಿರಿಯರು. ಸಂಸದೀಯ ಮಂಡಳಿಯಲ್ಲಿಯೂ ಇದ್ದಾರೆ. ಅವರಿಗೆ ಮಾಹಿತಿ ಇರಬಹುದು. ಹಾಗಾಗಿ ಆ ಬಗ್ಗೆ ಹೇಳಿಕೆ ನೀಡಿರಬಹುದು ಎಂದು ಹೇಳಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.
ಆರ್.ಅಶೋಕ್ ಅಷ್ಟೇ ಏಕೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡಾ ಯಡಿಯೂರಪ್ಪ ಅವರು ಸಂಸದೀಯ ಮಂಡಳಿಯಲ್ಲಿ ಚರ್ಚಿಸಿರಬಹುದೇನೋ.. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ. ಎಲ್ಲರಿಗೂ ಪುಕಪುಕ ಶುರುವಾಗಿದೆ.



