ಸಿದ್ದರಾಮಯ್ಯ ಕೋಲಾರದಲ್ಲಿಯೇ ಎಲೆಕ್ಷನ್ನಿಗೆ ನಿಲ್ಲುತ್ತಾರಾ? ಇಲ್ಲವಾ? ಈ ಬಗ್ಗೆ ಗೊಂದಲ, ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ನಾನು ಕೋಲಾರದಲ್ಲಿಯೇ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ ಹೈಕಮಾಂಡ್ ಹೇಳಬೇಕು ಎಂಬ ಕೊನೆಯ ಕೊಸರೊಂದನ್ನೂ ಇಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜನ ಬೆಂಬಲವೇನೋ ಸಿಗುತ್ತಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರ ಈಸಿ ಟಾರ್ಗೆಟ್ ಅಲ್ಲ ಎನ್ನುವ ಸಂದೇಶವೂ ರವಾನೆಯಾಗುತ್ತಿದೆ. ಒಂದೊಂದೇ ಒಂದೊಂದೇ ಸಮಸ್ಯೆಗಳು ದೊಡ್ಡಮಟ್ಟದಲ್ಲಿಯೇ ಎದುರಾಗುತ್ತಿವೆ. ಭಂಡಧೈರ್ಯ ಮಾಡಿ ಮುನ್ನುಗ್ಗೋಕೆ ಆಗಲ್ಲ. ಆದರೂ ಸಿದ್ದರಾಮಯ್ಯ ಅವರದ್ದು ಮೊದಲಿನಿಂದಲೂ ಅದೊಂದು ಹುಂಬತನವಿದೆ. ಸವಾಲ್ ಏನ್ ಬರುತ್ತೋ.. ಬರಲಿ.. ನೋಡೋಣ ಎಂದು ಹೊರಟಿದ್ದಾರೆ ಸಿದ್ದರಾಮಯ್ಯ. ಇಷ್ಟಕ್ಕೂ ಸಿದ್ದರಾಮಯ್ಯ ಎದುರಿಸುತ್ತಿರುವ ಸವಾಲುಗಳೇನು?


ಕೋಲಾರ ಸವಾಲು ನಂ.1 : ದಲಿತರಾಮಯ್ಯ ಮತ್ತು ದಲಿತವಿರೋಧಿ ರಾಮಯ್ಯ
ಕೋಲಾರದಲ್ಲಿ ದಲಿತರ ಸಂಖ್ಯೆಯೂ ನಿರ್ಣಾಯಕ. ಹೀಗಿರುವಾಗಲೇ ಸಿದ್ದರಾಮಯ್ಯ ಅವರ ವಿರುದ್ಧವಾಗಿ ದಲಿತವಿರೋಧಿ ರಾಮಯ್ಯ ಎಂಬ ಕರಪತ್ರ ಹಂಚುತ್ತಿದ್ದಾರೆ ಕೆಲವು ದಲಿತರು. ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಿಗೆ, ಶ್ರೀನಿವಾಸ್ ಪ್ರಸಾದ್ ಅವರನ್ನು ನಡೆಸಿಕೊಂಡ ರೀತಿ, ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೋಗಿದ್ದು, ಅಂಜನೇಯ, ಸೋಮಶೇಖರ್ ಅವರನ್ನು ನೋಡಿಕೊಂಡ ರೀತಿ.. ಅಷ್ಟೆಲ್ಲಕ್ಕೂ ಮಿಗಿಲಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅದೇ ಕೋಲಾರದ ನಾಯಕ ಎಚ್.ಮುನಿಯಪ್ಪ ಅವರ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣ ಎಂದು ಬಹಿರಂಗವಾಗಿಯೇ ಕರಪತ್ರ ಹಂಚುತ್ತಿದ್ದಾರೆ. ಬಹಿರಂಗವಾಗಿಯೇ ಎನ್ನುವುದು ವಿಶೇಷ.
ಸಾಮಾನ್ಯವಾಗಿ ಕರಪತ್ರ ಹಂಚುವವರು ನಿಗೂಢವಾಗಿದ್ದು ಬಿಡುತ್ತಾರೆ. ಆದರೆ ಯಾವಾಗ ಹೀಗೆ ಬಹಿರಂಗಕ್ಕೆ ಬಂದು ಏನಿವಾಗ ಅನ್ನೋ ಧೋರಣೆ ವ್ಯಕ್ತವಾಯಿತೋ ಸಿದ್ದರಾಮಯ್ಯ ಪರ ನಿಂತವರು ಸಿದ್ದರಾಮಯ್ಯ ದಲಿತರಿಗಾಗಿ ಏನೇನು ಮಾಡಿದರು ಎಂಬ ಮಾಹಿತಿಯುಳ್ಳ ಕರಪತ್ರ, ಪೋಸ್ಟರ್ ಹಂಚುತ್ತಿದ್ದಾರೆ. ಒಂದು ದೊಡ್ಡ ಸಮುದಾಯದ ಈ ರೀತಿಯ ಹೋರಾಟ ಸಿದ್ದರಾಮಯ್ಯಗೆ ಶುಭ ಸೂಚಕವಲ್ಲ.


ಕೋಲಾರ ಸವಾಲು ನಂ.2 : ಎಚ್.ಮುನಿಯಪ್ಪ, ರಮೇಶ್ ಕುಮಾರ್ ಮುನಿಸು
ಕೋಲಾರದಲ್ಲಿ ಎರಡು ಬಣಗಳಿರುವುದು ಗೊತ್ತಿಲ್ಲದ್ದೇನಲ್ಲ. ರಮೇಶ್ ಕುಮಾರ್ ಮತ್ತು ಮುನಿಯಪ್ಪ ಮಧ್ಯೆ ದೊಡ್ಡ ಕಂದಕವೇ ಇದೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಎಲ್ಲವೂ ಸರಿಯಾಗಲಿದೆ ಎಂಬ ನಿರೀಕ್ಷೆಯೇನೋ ಇತ್ತು. ಆದರೆ ಅದು ಫೋಟೋಗೆ ಪೋಸು ಕೊಡುವುದಕ್ಕೆ ಸೀಮಿತವಾಗಿದೆ. ರಣರಂಗದಲ್ಲಿ ಕಾಣುತ್ತಿಲ್ಲ. ಕೋಲಾರದಲ್ಲಿಯೇ ನಡೆದ ಪ್ರಜಾಧ್ವನಿಯಲ್ಲಿ ರಮೇಶ್ ಕುಮಾರ್ ಉತ್ತರ ದಿಕ್ಕಿನಲ್ಲಿದ್ದರೆ, ಮುನಿಯಪ್ಪ ದಕ್ಷಿಣ ದಿಕ್ಕಿನಲ್ಲಿದ್ದರು. ಒಂದೇ ವೇದಿಕೆಯಲ್ಲಿದ್ದರೂ ಮುಖಕ್ಕೆ ಮುಖ ಕೊಟ್ಟು ಮಾತನಾಡಲಿಲ್ಲ. ಬಸ್ಸಿನಲ್ಲಿ ಮುನಿಯಪ್ಪ ಬಣದವರು ಎಲ್ಲ ಸರಿಯಾಗಿದ್ದಾರಾ ಎಂದು ಡಿಕೆಶಿವಕುಮಾರ್ ಕೇಳಿದ್ದು ವೈರಲ್ ಆಯ್ತು. ಆ ಮಾತಿನಲ್ಲಿಯೇ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವೂ ರವಾನೆಯಾಗುತ್ತಿದೆ.


ಕೋಲಾರ ಸವಾಲು ನಂ.3 : ಜೆಡಿಎಸ್ ಕೋಟೆ
ಹಾಲಿ ಇದ್ದದ್ದು ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ. ಯಾರೇನೇ ಹೇಳಿದರೂ ಶ್ರೀನಿವಾಸ ಗೌಡರಿಗೆ ಬಿದ್ದ ಎಲ್ಲ ವೋಟಗುಳೂ ಅವರ ವೈಯಕ್ತಿಕ ಗಳಿಕೆಯಷ್ಟೇ ಅಲ್ಲ. ದೇವೇಗೌಡರ, ಜೆಡಿಎಸ್ ಮತಗಳೂ ಇರುತ್ತವೆ. ಆ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವುದು ಸಿದ್ದರಾಮಯ್ಯ ಅವರಿಗೆ ಸುಲಭವಲ್ಲ.
ಇವೆಲ್ಲದರ ಮಧ್ಯೆಯೇ ಸಿದ್ದರಾಮಯ್ಯ ಕೋಲಾರದಲ್ಲಿ ಮನೆ ಮಾಡಿದ್ದಾರೆ. ಕೋಲಾರ ಬೆಂಗಳೂರು ಹೈವೇಯಲ್ಲಿಯೇ ಇರುವ ಮನೆ ಕೋಲಾರದಿಂದ 1 ಕಿ.ಮೀ.ದೂರದಲ್ಲಿದೆ. ಯತೀಂದ್ರ ಸಿದ್ದರಾಮಯ್ಯ ಮನೆಯನ್ನು ನೋಡಿ, ವಾಸ್ತುಪ್ರಕಾರವೂ ಪರಿಶೀಲನೆ ಮಾಡಿ ಮನೆ ಫಿಕ್ಸ್ ಮಾಡಿದ್ದಾರೆ. ಕೋಲಾರದ ಕೋಗಲಹಳ್ಳಿಯಲ್ಲಿರೋ ಈ ಮನೆ ಸುಮಾರು 1 ಎಕರೆ ವಿಸ್ತೀರ್ಣದಲ್ಲಿದೆ. ಪಾರ್ಕಿಂಗ್ ಸೇರಿದಂತೆ ಎಲ್ಲ ಅನುಕೂಲಗಳೂ ಇವೆ. 56*46 ವಿಸ್ತೀರ್ಣದ ಮನೆಯಲ್ಲಿ ವಿಶಾಲವಾದ ಹಾಲ್, ಡೈನಿಂಗ್ ಹಾಲ್, ದೇವರ ಕೋಣೆ, ನೆಲಮಹಡಿಯಲ್ಲಿ ಎರಡು ಕೋಣೆ, ವಿಶಾಲವಾದ ಗಾಳಿ ಬೆಳಕಿನ ವ್ಯವಸ್ಥೆ, ಸುತ್ತಲೂ ಹಸಿರು ಎಲ್ಲವೂ ಇದೆ. ಇಷ್ಟೆಲ್ಲ ಸಿದ್ಧವಾಗಿರುವ ಸಿದ್ದರಾಮಯ್ಯಗೆ ಶಾಕ್ ಕೊಟ್ಟಿರುವುದು ಯಡಿಯೂರಪ್ಪ.


ಯಡಿಯೂರಪ್ಪ ಸಾಮಾನ್ಯವಾಗಿ ಎದುರಾಳಿ ಪಕ್ಷಗಳ, ನಾಯಕರ ಮತ್ತು ಅವರ ತಂತ್ರಗಾರಿಕೆ ಬಗ್ಗೆ ಮಾತನಾಡಲ್ಲ. ಟೀಕೆ ಮಾಡುತ್ತಾರೆ. ತಮ್ಮ ಪಕ್ಷದ ಮಾತನ್ನು ಏನು ಹೇಳಬೇಕೋ ಅದನ್ನಷ್ಟೇ ಹೇಳುತ್ತಾರೆ. ಅವರು ಟೀಕಿಸಿದ್ದರೆ ಕೌಂಟರ್ ಕೊಡುತ್ತಾರೆ. ಹೀಗೆಲ್ಲ ಮಾತನಾಡುವುದು ಅಪರೂಪದಲ್ಲಿ ಅಪರೂಪ. ಅಂತಹ ಯಡಿಯೂರಪ್ಪ ಸಿದ್ದರಾಮಯ್ಯ ಈ ಬಾರಿ ಕೋಲಾರದಲ್ಲಿ ಚುನಾವಣೆಗೆ ನಿಲ್ಲಲ್ಲ. ಅವರು ಮೈಸೂರಿನಲ್ಲಿಯೇ ನಿಲ್ಲುತ್ತಾರೆ ಎಂದಿದ್ದಾರೆ. ಅವರು ಕೋಲಾರದಲ್ಲಿ ಮಾಡುತ್ತಿರುವುದು ನಾಟಕ. ಕೊನೆಗೆ ಅವರು ಮೈಸೂರಿಗೇ ಹೋಗಿ ನಿಲ್ಲುತ್ತಾರೆ. ಅವರು ಎಲ್ಲಿ ನಿಲ್ಲುತ್ತಾರೋ.. ಅಲ್ಲಿ ಖಂಡಿತಾ ನಾವು ತಂತ್ರಗಾರಿಕೆ ಮಾಡುತ್ತೇವೆ ಎಂದಿದ್ದಾರೆ ಯಡಿಯೂರಪ್ಪ.



