ಇದು ಅನಿರೀಕ್ಷಿತವೇನೂ ಅಲ್ಲ. ಚುನಾವಣೆಗೂ ಮೊದಲು ಸಿದ್ದರಾಮಯ್ಯ ಯಾರಿಗೆ ಶಾಸಕರ ಬೆಂಬಲವಿರುತ್ತದೆಯೋ.. ಅವರು ಸಿಎಂ ಆಗುತ್ತಾರೆ ಎನ್ನುತ್ತಿದ್ದರು. ಡಿಕೆ ಶಿವಕುಮಾರ್ ಮಾತ್ರ ಹೈಕಮಾಂಡ್ ಹೇಳಿದವರೇ ಸಿಎಂ ಎನ್ನುತ್ತಿದ್ದರು. ಅವರವರ ಶಕ್ತಿ ಅವರಿಗೇ ಗೊತ್ತಿತ್ತು. ಡಿಕೆ ಕೆಪಿಸಿಸಿ ಅಧ್ಯಕ್ಷರಾದರೆ, ಸಿದ್ದು ಶಾಸಕಾಂಗ ಪಕ್ಷದ ನಾಯಕ. ಇಬ್ಬರನ್ನು ಮುಂದಿಟ್ಟುಕೊಂಡು ಎದುರಿಸಿದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ 135 ಸೀಟು. 34 ವರ್ಷಗಳ ನಂತರ ಕಾಂಗ್ರೆಸ್ ಇಷ್ಟು ದೊಡ್ಡ ಬಹುಮತ ಪಡೆಯಿತು. ಈಗ ಸಿಎಂ ಯಾರಾಗಬೇಕು ಅನ್ನೋ ಪ್ರಶ್ನೆ ಎದುರಾಗಿದೆ.
ವಿಶೇಷವೆಂದರೆ ಈ ಬಾರಿ ಸಿಎಂ ಆಯ್ಕೆ ಬೇರೆಯದೇ ಮಾದರಿಯಲ್ಲಿ ನಡೆಯುತ್ತಿದೆ. ಮೊದಲಿಗೆ ದೆಹಲಿಯಿಂದ ವೀಕ್ಷಕರು ಬಂದು, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಅಭಿಪ್ರಾಯ ಸಂಗ್ರಹದಲ್ಲಿ ರಹಸ್ಯ ಮತದಾನವೂ ನಡೆದಿದೆ. ಶಾಂಗ್ರಿಲಾ ಹೋಟೆಲ್ಲಿನಲ್ಲಿ ನಡೆದ ಮತದಾನದಲ್ಲಿ ಎಲ್ಲ 135 ಶಾಸಕರೂ ಭಾಗವಹಿಸಿದ್ದರು. ಈ ರಹಸ್ಯ ಮತದಾನದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕೇವಲ 21 ಶಾಸಕರು ಮತ ಚಲಾಯಿಸಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. ಮೂಲಗಳ ಪ್ರಕಾರ ಸಿದ್ದರಾಮಯ್ಯ 70+ ಶಾಸಕರು ಮತ ನೀಡಿದ್ದರೆ, 40ಕ್ಕೂ ಹೆಚ್ಚು ಶಾಸಕರು ಯಾರಾದರೂ ಓಕೆ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ಕಾರಣಕ್ಕಾಗಿಯೇ ಡಿಕೆ ಶಿವಕುಮಾರ್ ದೆಹಲಿಗೆ ಹೋಗಲು ಹಿಂದೇಟು ಹಾಕಿದ್ದು. ಶಾಸಕರ ಬೆಂಬಲ ಸಿಕ್ಕಿಲ್ಲವೆಂದ ಮಾತ್ರ ಡಿಕೆ ಶಿವಕುಮಾರ್ ಅವರ ವ್ಯಾಲ್ಯೂ ಕಡಿಮೆಯೇನಲ್ಲ. ಡೌಟೇ ಇಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ಸ್‍ನ್ನು ಗೆಲ್ಲಿಸಿದ್ದು ಡಿಕೆ ಶಿವಕುಮಾರ್. ಆದರೆ ಡಿಕೆ ಶಿವಕುಮಾರ್ ಈ ಬಾರಿಯೂ ತ್ಯಾಗರಾಜನಾಗುತ್ತಾರಾ..?
ಡಿಕೆ ಪಟ್ಟುಗಳಿಗೆ, ವಾದಗಳಿಗೆ ಅರ್ಥವಿದೆ. ಆದರೆ ಕಾಂಗ್ರೆಸ್ಸಿನ ಬಹುತೇಕ ಎಂಎಲ್‍ಎಗಳು ಡಿಕೆಶಿ ಅವರನ್ನು ಒಪ್ಪುತ್ತಿಲ್ಲ. ಉತ್ತರ ಕರ್ನಾಟಕದ ಲಿಂಗಾಯತ ಶಾಸಕರಿಗೆ ಸಿದ್ದರಾಮಯ್ಯ ಅವರೇ ದಿ ಬೆಸ್ಟ್. ಅದರಲ್ಲೂ ಪ್ರಮುಖವಾಗಿ ಎಂಬಿ ಪಾಟೀಲ್, ಈಶ್ವರ ಖಂಡ್ರೆ ಮೊದಲಾದವರಿಗೆ ಸಿದ್ದು ಇದ್ದರೆ ಒಳ್ಳೆಯದು ಎನ್ನಿಸಿದೆ. ಅಲ್ಲದೆ ಡಿಕೆ ಅವರಷ್ಟೇ ವಯಸ್ಸಿನ ಅಥವಾ ಡಿಕೆ ಅವರಿಗಿಂತ ಹೆಚ್ಚಿನ ವಯಸ್ಸಿನ ನಾಯಕರಿಗೆ ಡಿಕೆ ಇಷ್ಟವಾಗುತ್ತಿಲ್ಲ. ಹಿರಿತನ ಮತ್ತು ಸ್ವಾಭಿಮಾನದ ಸಮಸ್ಯೆ. ಅವರ ಪ್ರಕಾರ ಡಿಕೆ, ಸಮರ್ಥ ಕೆಪಿಸಿಸಿ ಅಧ್ಯಕ್ಷರೇ ಹೊರತು, ಸಮರ್ಥ ಆಡಳಿತಗಾರನಲ್ಲ. ಅಲ್ಲದೆ ಸಿದ್ದರಾಮಯ್ಯ ಅವರ ಮುಖ ನೋಡಿಯೇ ಅಹಿಂದ ಮತಗಳು ಕಾಂಗ್ರೆಸ್ಸಿಗೆ ಬಂದಿವೆ ಎನ್ನುವುದು ಅವರ ವಾದ. ಸಿದ್ದರಾಮಯ್ಯ ಬಣದಲ್ಲಿ ತಮ್ಮ ಸಮುದಾಯದ ಮತಗಳನ್ನು ಕ್ರೋಢೀಕರಿಸಿದ ತಾಕತ್ತುಳ್ಳ ಜಮೀರ್ ಅಹ್ಮದ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ ಇದ್ದಾರೆ. ಸಿದ್ದುಗೆ ನಿಷ್ಠೆ ತೋರಿಸಿದ ನಿಷ್ಠಾವಂತರಿದ್ದಾರೆ. ಎಂಬಿ ಪಾಟೀಲ್, ಜಮೀರ್, ಮಹದೇವಪ್ಪ ಮೊದಲಾದವರು ಓಪನ್ ಆಗಿಯೇ ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.
ಇತ್ತ ಡಿಕೆಶಿ ಬೆಂಬಲಿಗರ ವಾದವೇ ಬೇರೆ. ಸಂಖ್ಯೆ ಕಡಿಮೆ ಇರಬಹುದು. ಆದರೆ ಯುವ ಶಾಸಕರು ಡಿಕೆ ಪರ ಇದ್ದಾರೆ. ಒಕ್ಕಲಿಗ ಮತಗಳು ಮೈಸೂರು ಭಾಗದಲ್ಲಿ ಕಾಂಗ್ರೆಸ್ಸಿಗೆ ಬಂದಿದ್ದೇ ಡಿಕೆಯವರಿಂದ. ತಂತ್ರಗಾರಿಕೆ, ಸಂಘಟನೆಯೇ ಈ ಗೆಲುವಿನ ದೊಡ್ಡ ತಾಕತ್ತು. ಕೇವಲ ಭಾಷಣ ಮಾಡುವುದರಿಂದ ವೋಟುಗಳು ಬರಲ್ಲ ಎನ್ನವುದು ಡಿಕೆ ಬೆಂಬಲಿಗರ ವಾದ. ಡಿಕೆ ಶಿವಕುಮಾರ್, ಹೈಕಮಾಂಡ್ ಕಷ್ಟಗಳಿಗೆ ಹೆಗಲು ಕೊಟ್ಟವರು. ಗುಜರಾತಿನಲ್ಲಿ ಸಮಸ್ಯೆ ಎದುರಾದಾಗ ಪಕ್ಷದ ಶಾಸಕರಿಗೆ ರಕ್ಷಣಾ ಕೋಟೆ ಕಟ್ಟಿದ್ದವರು. ವಿವಿಧ ಸಮಸ್ಯೆಗಳು ಎದುರಾದಾಗ ಸೋನಿಯಾ, ರಾಹುಲ್, ಪ್ರಿಯಾಂಕಾ ಅವರಿಗೂ ನೆರವಾಗಿದ್ದವರು. ಪಕ್ಷದ ಹಿರಿಯ ನಾಯಕರಲ್ಲಿ ಅನೇಕರು ಡಿಕೆ ಶಿವಕುಮಾರ್ ಋಣದಲ್ಲಿದ್ದಾರೆ. ಅಷ್ಟೇ ಏಕೆ, ಸಿದ್ದರಾಮಯ್ಯ ಪರ ಇರುವ ಹಲವು ಶಾಸಕರ ಗೆಲುವಿನ ತಂತ್ರ ಹೆಣೆದವರೂ ಇದೇ ಡಿಕೆ ಶಿವಕುಮಾರ್. ಹೀಗಿದ್ದರೂ ಸಿದ್ದರಾಮಯ್ಯ ಪರ ನಿಷ್ಠೆ ಅವರದ್ದು ಅಚಲ. ಡಿಕೆ ಪರ ಮಾಗಡಿ ಬಾಲಕೃಷ್ಣ, ರಂಗನಾಥ್, ಪೊನ್ನಣ್ಣ, ಗಾಣಿಗ ರವಿ.. ಇತ್ತಿತರರು ಬಹಿರಂಗವಾಗಿ ಮಾತನಾಡಿದ್ದಾರೆ.
ಇನ್ನು 40ಕ್ಕೂ ಹೆಚ್ಚು ಶಾಸಕರು ಅತ್ತಲೂ ಇಲ್ಲ. ಇತ್ತಲೂ ಇಲ್ಲ. ಹೈಕಮಾಂಡ್ ಹೇಳಿದಂತೆ ಕೇಳುವವರು. ಪರಮೇಶ್ವರ್, ಈಶ್ವರ ಖಂಡ್ರೆ.. ಸೇರಿದಂತೆ ಹಲವರಿಗೆ ಯಾರನ್ನು ಸಿಎಂ ಮಾಡಿದರೂ ಓಕೆ. ರಿಯಲ್ಲಾಗಿ ಹೇಳಬೇಕೆಂದರೆ ಪರಮೇಶ್ವರ್ ನನಗೂ 50 ಶಾಸಕರ ಬಲ ಇದೆ, ನನ್ನನ್ನೂ ಸಿಎಂ ಮಾಡಿ ಅನ್ನೋದು, ಶಾಮನೂರು ನನ್ನನ್ನೇ ಸಿಎಂ ಮಾಡಿ ಅನ್ನೋದು ಕೇವಲ ಸ್ಟೇಟ್‍ಮೆಂಟುಗಳೇ ಹೊರತು, ಫೈನಲಿ ತಮಾಷೆಯ ವಿಷಯಗಳೇ.



