ಡಾಕ್ಟರ್ ಚಿಕ್ಕೇಗೌಡ ನಾರಾಯಣ ಗೌಡ. ಸದ್ಯಕ್ಕೆ ಬಿಜೆಪಿ ಸರ್ಕಾರದಲ್ಲಿ ಕ್ರೀಡಾ ಖಾತೆ ಸಚಿವ. ಕುಮಾರಸ್ವಾಮಿ ಸರ್ಕಾರ ಪತನವಾದಾಗ ರಾಜೀನಾಮೆ ನೀಡಿದ್ದವರಲ್ಲಿ ನಾರಾಯಣ ಗೌಡ ಕೂಡಾ ಒಬ್ಬರು. ಬಿಜೆಪಿ ಸೇರಿದ್ದ 17 ಜನರಲ್ಲಿ ಈಗ ಮೊದಲ ವಿಕೆಟ್ ಹೆಚ್ಚೂಕಡಿಮೆ ಬಿದ್ದಂತಾಗಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಈತ ಜೆಡಿಎಸ್ ಟಿಕೆಟ್ ಪಡೆದಿದ್ದೇ ರೋಚಕ ಕಥೆ. ಬಿ.ಎಲ್. ದೇವರಾಜು ಅವರಿಗೆ ಕೊಟ್ಟಿದ್ದ ಬಿ ಫಾರ್ಮ್‍ನ್ನು ಬಿಟ್ಟು, ಈತನಿಗಾಗಿ ದೇವೇಗೌಡರು ಸಿ ಫಾರ್ಮ್ ಕೊಟ್ಟಿದ್ದರು. ಹೀಗಾಗಿ ಟಿಕೆಟ್ ಪಡೆದ ನಾರಾಯಣ ಗೌಡ ಗೆದ್ದರಾದರೂ, 2019ರಲ್ಲಿ ರಿಸೈನ್ ಮಾಡಿ ಬಿಜೆಪಿಗೆ ಜಂಪ್ ಆದರು. ಬಿಜೆಪಿಗೆ ಬೇಸ್ ಇಲ್ಲದ ಕೆಆರ್ ಪೇಟೆಯಲ್ಲಿ ನಿಂತು ಗೆದ್ದೂಬಿಟ್ಟರು. ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾದರು. ತೀರಾ ಇತ್ತೀಚಿನವರೆಗೆ ಬಿಜೆಪಿಯಲ್ಲೇ ಖಾಯಂ ಎನ್ನುತ್ತಿದ್ದ ನಾರಾಯಣ ಗೌಡ, ಸೈಲೆಂಟಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಕದ ತಟ್ಟಿದ್ದಾರೆ.
ನನಗೆ ಕಾಂಗ್ರೆಸ್ಸಿಂದ ಆಹ್ವಾನ ಇದೆ ಎಂದು ಹೇಳಿಕೆ ನೀಡಿದ್ದ ನಾರಾಯಣ ಗೌಡ, ಮಂಡ್ಯದಲ್ಲಿಯೇ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಇದುವರೆಗೂ ಸೇರ್ಪಡೆ ಕುರಿತು ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ. ನನ್ನ ಆಪ್ತರು ಹಾಗೂ ಹಿತೈಷಿಗಳ ಜೊತೆಗೆ ಚರ್ಚಿಸಬೇಕು. ಬಳಿಕ ತಿರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದ ನಾರಾಯಣಗೌಡ, ಕೆ ಆರ್ ಪೇಟೆಯಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆ ಇದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ ಎಂದು ಹೇಳುವ ಮೂಲಕ ಪಕ್ಷಾಂತರ ಬಗ್ಗೆ ಪರೋಕ್ಷವಾಗಿ ಸುಳಿವು ಕೊಟ್ಟಿದ್ದರು.
ಅತ್ತ ಈ 17 ಜನರ ಗುಂಪಿನಲ್ಲಿಯೇ ಇದ್ದ ಸಚಿವ ಬಿ.ಸಿ.ಪಾಟೀಲ್, ನಾರಾಯಣ ಗೌಡ ಒಬ್ಬರು ಕಾಂಗ್ರೆಸ್ಸಿಗೆ ಹೋಗ್ತಾರೆ. ಉಳಿದವರ್ಯಾರೂ ಹೋಗಲ್ಲ ಎಂದುಬಿಟ್ಟಿದ್ದಾರೆ. ತೀರಾ ಮೊನ್ನೆ ಮೊನ್ನೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ವೇದಿಕೆಯ ಮೇಲೆ ಹಾಡಿಹೊಗಳಿದ್ದವರು ಇವರೇನಾ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ಕಾಡುತ್ತಿರುವ ಪ್ರಶ್ನೆ. ನಮ್ಮ ಪಕ್ಷಕ್ಕೆ ಕೈಕೊಡೋಕೂ ಮೊದಲು ದೇವೇಗೌಡ ಮತ್ತು ಕುಮಾರಸ್ವಾಮಿಗೂ ಹೀಗೆಯೇ ಹೇಳಿದ್ರು ಅನ್ನೋದು ಜೆಡಿಎಸ್‍ನವರ ಮಾತು. ಆದರೆ ನಾರಾಯಣ ಗೌಡ ಕಾಂಗ್ರೆಸ್ ಸೇರೋದಂತೂ ಪಕ್ಕಾ. ಆದರೆ.. ನಾರಾಯಣ ಗೌಡ ಸೇರ್ಪಡೆ ವಿಷಯ ಎತ್ತುತ್ತಿದ್ದಂತೆಯೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ರಣರಂಗವಾಗಿದೆ.
ಕೆ.ಸಿ ನಾರಾಯಣಗೌಡ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕೆಂಡಕಾರುತ್ತಿದ್ದಾರೆ. ಮಂಡ್ಯದಲ್ಲಿ ರೊಚ್ಚಿಗೆದ್ದ ಕೈ ಕಾರ್ಯಕರ್ತರು ಕಾಂಗ್ರೆಸ್ ಫ್ಲೆಕ್ಸ್ ಬ್ಯಾನರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಯಕರಿಗೆ ಬಳೆಗಳನ್ನೂ ಕೊಟ್ಟಿದ್ದಾರೆ. ಕೆ.ಆರ್.ಪೇಟೆಯ ಪ್ರಜಾಧ್ವನಿ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಹೈಡ್ರಾಮ ನಡೆದಿದ್ದು, ನಾರಾಯಣ ಗೌಡ ಪಕ್ಷ ಸೇರುವುದನ್ನು ವಿರೋಧಿಸಿ ನಾಯಕರಿಗೆ ಬಳೆಗಳನ್ನು ಕೊಟ್ಟರು. ಮಾರ್ಚ್ 13ರಂದು ಕೆ.ಆರ್.ಪೇಟೆಯಲ್ಲಿ ಪ್ರಜಾಧ್ವನಿ ಸಮಾವೇಶ ಹಿನ್ನಲೆ ಸಭೆ ಕರೆಯಲಾಗಿತ್ತು.
ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್ ಕಾರಿಗೆ ಕೆ.ಆರ್. ಪೇಟೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಕಾರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಪೇಟೆ ಕಾಂಗ್ರೆಸ್ ಟಿಕೆಟ್ಗೆ 6 ಮಂದಿ ಆಕಾಂಕ್ಷಿಗಳಿದ್ದಾರೆ. ನಾರಾಯಣಗೌಡ ಕಾಂಗ್ರೆಸ್ ಗೆ ಬಂದ್ರೆ ಅವರೆಲ್ಲಾ ಏನಾಗಬೇಕು? ಎಲ್ಲರೂ ಕೈಗೆ ಬಳೆ ತೊಟ್ಟುಕೊಂಡು ಓಡಾಡಬೇಕಾ? ಎಂದು ಜಿಲ್ಲಾಧ್ಯಕ್ಷ ಗಂಗಾಧರ್ ಕೈಗೆ ಬಳೆ ನೀಡಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಕೆ.ಸಿ. ನಾರಾಯಣ ಗೌಡರು ನಮ್ಮ ಜೊತೆ ಮಾತನಾಡಿಲ್ಲ. ಬೇರೆಯವರೂ ಮಾತನಾಡಿಲ್ಲ. ಅವರಿಂದ ಯಾರಿಗೆ ಏನು ತೊಂದರೆ ಆಗಿದೆ ಎಂದು ಗೊತ್ತಿಲ್ಲ. ಅವೆಲ್ಲವನ್ನೂ ನಾವು ನೋಡಿಕೊಳ್ಳುತ್ತೇವೆ ಬಿಡಿ ಎಂದು ಹೇಳಿಕೆ ನೀಡಿದ್ದಾರೆ ಡಿಕೆ ಶಿವಕುಮಾರ್. ಆದರೆ ಡಿಕೆ ಜೊತೆಗೂ ಅಲ್ಲ, ಬೇರೆಯವರ ಜೊತೆಗೂ ಅಲ್ಲ, ಇನ್ಯಾರ ಜೊತೆ ನಾರಾಯಣ ಗೌಡ ಮಾತನಾಡಿದರು ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಅಭ್ಯರ್ಥಿ ವಿಚಾರದಲ್ಲಿ ಮೂರು ಪಕ್ಷಗಳಲ್ಲೂ ಗೊಂದಲ ಮುಂದುವರೆದಿದ್ದು, ಚುನಾವಣೆ ವೇಳೆಗೆ ರಾಜಕೀಯವಾಗಿ ಹತ್ತು ಹಲವು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೆ ಅಧಿಕೃತ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಅಕಸ್ಮಾತ್ ನಾರಾಯಣ ಗೌಡರನ್ನು ಸೇರ್ಪಡೆ ಮಾಡಿಕೊಂಡರೆ ಸ್ಥಳೀಯ ಕಾರ್ಯಕರ್ತರು ಸಿಟ್ಟಾಗುತ್ತಾರೆ ಎಂದು ಕಾಂಗ್ರೆಸ್ ಬಾಗಿಲು ಮುಚ್ಚಿದರೆ.. ಈ ವ್ಯಕ್ತಿಗೆ ತಾಳ್ಮೆ ಮತ್ತು ಪ್ರಾಮಾಣಿಕತೆ ಇಲ್ಲ ಎಂದು ಬಿಜೆಪಿ ಕೂಡಾ ಬಾಗಿಲು ಮುಚ್ಚಿದರೆ.. ಈಗಾಗಲೇ ಜೆಡಿಎಸ್ ಡೋರ್ ಕ್ಲೋಸ್ ಆಗಿದೆ. ಒಟ್ಟಿನಲ್ಲಿ ನಾರಾಯಣ ಗೌಡ ಈ ಟೈಮಲ್ಲಿ ಇದೇನ್ ಮಾಡ್ಕೊಂಡ್ರು ಅನ್ನೋ ಪ್ರಶ್ನೆ ಕಾಡೋದು ಸಹಜ. ಆದರೆ.. ಅವೆಲ್ಲವನ್ನೂ ನಿಭಾಯಿಸುವ ಶಕ್ತಿ ನಾರಾಯಣ ಗೌಡರಿಗೆ ಇದೆ. ಆ ವಿಚಾರದಲ್ಲಿ ನಾರಾಯಣ ಗೌಡ ಅನುಭವಿ..



