ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿದ್ದು 2016ರ ಡಿಸೆಂಬರ್ 5ನೇ ತಾರೀಕು. ಜಯಲಲಿತಾರ ಸಾವಿಗೆ ಇಡೀ ತಮಿಳುನಾಡು ಕಣ್ಣೀರು ಹಾಕಿತ್ತು. ಅದರ ಜೊತೆ ಜೊತೆಯಲ್ಲೇ ಜಯಾ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದವು. ಈ ಬಗ್ಗೆ ತಮಿಳುನಾಡು ಸರ್ಕಾರ ನ್ಯಾ.ಆರ್ಮುಗ ಸ್ವಾಮಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿತ್ತು. ಆರ್ಮುಗಂ ಕಮಿಷನ್ 608 ಪುಟಗಳ ವರದಿ ಸಲ್ಲಿಸಿದ್ದು ಅದನ್ನು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಮಂಡನೆ ಮಾಡಿದೆ. ಆ ತನಿಖಾ ಆಯೋಗ ಎತ್ತಿರುವ ಹಲವು ಪ್ರಶ್ನೆಗಳು ಇದು ಸಹಜ ಸಾವೋ.. ಕೊಲೆಯೋ.. ವ್ಯವಸ್ಥಿತವಾಗಿ ಜಯಲಲಿತಾ ಅವರು ಸಾಯುವಂತೆ ಮಾಡಲಾಯಿತೋ.. ಎಂಬ ಪ್ರಶ್ನೆಗಳೇಳುವಂತೆ ಮಾಡಿದೆ.
ಜಯಲಲಿತಾ ಸಾವು : ಈ ಪ್ರಶ್ನೆಗಳಿಗೆ ಉತ್ತರ ಇಲ್ಲ
1.ಜಯಾ ಮೃತಪಟ್ಟಿದ್ದು ಡಿ.5ಕ್ಕೆ ಅಲ್ಲ. ಡಿ.5ರಂದು 11.30ಕ್ಕೆ ಅನೌನ್ಸ್ ಮಾಡಲಾಯಿತಾದರೂ ಅದಕ್ಕೂ ಹಿಂದಿನ ದಿನ ಡಿ.4ರಂದೇ ಮಧ್ಯಾಹ್ನ 3ರಿಂದ 3.50ರ ಮಧ್ಯೆ ಮೃತಪಟ್ಟಿದ್ದಾರೆ. ಸಾವನ್ನು ಪ್ರಕಟಿಸಲು ಒಂದು ದಿನ ತಡ ಮಾಡಿದ್ದೇಕೆ ಎಂಬುದಕ್ಕೆ ಸೂಕ್ತ ಕಾರಣಗಳಿಲ್ಲ. ಕಾನೂನು ಸುವ್ಯವಸ್ಥೆಯಿಂದ ಸಮಯ ತೆಗೆದುಕೊಂಡಿದ್ದರೂ ನಿಧನದ ಸಮಯವನ್ನು ತಿರುಚಿದ್ದೇಕೆ ಎಂಬುದಕ್ಕೂ ಉತ್ತರ ಇಲ್ಲ.
2. ಜಯಲಲಿತಾ ಅವರ ದತ್ತುಪುತ್ರ ತಿಥಿಯ ಬಗ್ಗೆ ಕೇಳಿದಾಗ ನೀಡಿದ ಸಮಯದ ವ್ಯತ್ಯಾಸದಿಂದಾಗಿ ಇದು ಬೆಳಕಿಗೆ ಬಂದಿದೆ. ಇಡೀ ದೇಶಕ್ಕೆ ಹೇಳಿಕ ಕಥೆ ಒಂದಾದರೆ ಮಗನಿಗೆ ಹೇಳಿದ್ದ ಕತೆಯೇ ಬೇರೆ.
3. ಜಯಲಲಿತಾ ಅವರು 70 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದರು. ಈ ಅವಧಿಯಲ್ಲಿ ಹೊರಗಿನ ಯಾರೊಬ್ಬರೂ ಜಯಲಲಿತಾ ಅವರನ್ನು ನೋಡಿಲ್ಲ. ಅವರನ್ನು ನೋಡುವುದಕ್ಕೆ ಶಶಿಕಲಾ ಅವರು ಅವಕಾಶ ನೀಡಿಲ್ಲ. ದೂರದಿಂದಲೂ ನೋಡಿದವರಿಲ್ಲ. ಇಷ್ಟೊಂದು ನಿಗೂಢತೆ ಏಕೆ?
4. ನೋಡಲು ಹೋಗಿದ್ದ ನಮಗೆಲ್ಲ ಹೀಗೆ ಹೇಳಿ ಎಂದು ಚಿನ್ನಮ್ಮ (ಶಶಿಕಲಾ) ಹೇಳುತ್ತಿದ್ದರು. ಆದರೆ ನಾವು ಕಟ್ಟಡದ 2ನೇ ಮಹಡಿಯಿಂದ ಮೇಲಕ್ಕೇ ಹೋಗಿಲ್ಲ ಎಂದು ಹಿರಿಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಹೇಳಿದ್ದಾರೆ. ಸುಳ್ಳು ಹೇಳುವಂತೆ ಅವರ ಮೆಲೆ ಒತ್ತಡ ಹೇರಿದ್ದೇಕೆ?
5. ಆಸ್ಪತ್ರೆಯಲ್ಲಿನ ಜಯಲಲಿತಾ ಅವರ ದೃಶ್ಯಗಳು, ಸಿಸಿಟಿವಿ ಫುಟೇಜ್ ಕೂಡಾ ಇಲ್ಲ. 2 ವರ್ಷ ಹಳೆಯದಾದ ಕಾರಣ ಡಿಲೀಟ್ ಮಾಡಿದ್ದೇವೆ ಅನ್ನೋದು ಅಪೋಲೋ ಆಸ್ಪತ್ರೆಯವರ ವಾದ. ಆದರೆ 2017ರಿಂದಲೇ ಕಮಿಟಿ ತನಿಖೆ ನಡೆಯುತ್ತಿದ್ದರೂ ಪ್ರಾಮುಖ್ಯತೆ ಗೊತ್ತಿದ್ದರೂ ಸಿಸಿಟಿವಿ ಫುಟೇಜ್ ಡಿಲೀಟ್ ಮಾಡಿದ್ದೇಕೆ?
6.ಜಯಾ ಅವರಿಗೆ ಆಂಜಿಯೋಗ್ರಾಂ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆದರೆ ಶಶಿಕಲಾ ಅದಕ್ಕೆ ಅವಕಾಶ ಕೊಡಲಿಲ್ಲ.
7. ಅಮೆರಿಕದಿಂದ ಒಬ್ಬ ವೈದ್ಯರೂ ಸೇರಿದಂತೆ ಹಲವು ವೈದ್ಯರು ಬಂದು ನೋಡಿದರು. ಹಾರ್ಟ್ ಸರ್ಜರಿಗೆ ಸಲಹೆ ನೀಡಿದ್ದರಾದರೂ ಸರ್ಜರಿ ಆಗಲಿಲ್ಲ. ಏಕೆ?
8. ಆಸ್ಪತ್ರೆಗೆ ಸೇರಿಸುವ ಮೊದಲೇ 3 ದಿನಗಳಿಂದ ಜಯಲಲಿತಾ ಅಸ್ವಸ್ಥರಾಗಿದ್ದರು. ಜ್ವರವಿತ್ತು. ಆಗಲೂ ಚಿಕಿತ್ಸೆ ಕೊಡಿಸದೆ ಜಾರಿ ಬಿದ್ದರು ಎಂದು ಕರೆತಂದು ಅಡ್ಮಿಟ್ ಮಾಡಿದರು. ಆದರೆ ಕಾಯಿಲೆಯ ಬಗ್ಗೆ, ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಸೀಕ್ರೆಟ್ ಆಗಿಟ್ಟರು. ಮೃತಪಟ್ಟ ನಂತರವೂ ಕೂಡಾ ಅದನ್ನು ಸೀಕ್ರೆಟ್ ಆಗಿಟ್ಟಿದ್ದೇಕೆ?
9. ಜಯಾ ಆರೋಗ್ಯದ ಬಗ್ಗೆ ಶಶಿಕಲಾ, ನಂತರ ಸಿಎಂ ಆದ ಪನ್ನೀರ್ ಸೆಲ್ವಂ, ಆಗಿನ ಆರೋಗ್ಯ ಸಚಿವ ವಿಜಯಭಾಸ್ಕರ್, ಮುಖ್ಯ ಕಾರ್ಯದರ್ಶಿಯಾಗಿದ್ದ ರಾಮಮೋಹನ ರಾವ್, ಅಪೋಲೋ ಅಧ್ಯಕ್ಷ ಡಾ.ಪ್ರತಾಪ್ ರೆಡ್ಡಿ ತಪ್ಪಿತಸ್ಥರು. ಇವರ ವಿರುದ್ಧ ಉನ್ನತ ತನಿಖೆಯಾಗಬೇಕು ಎಂದು ಸಲಹೆ ನೀಡಿದೆ ಆಯೋಗ.
10. ಶಶಿಕಲಾ ಮತ್ತು ಜಯಾ ಮಧ್ಯೆ ಸಂಬಂಧ ಮಧುರವಾಗಿರಲಿಲ್ಲ ಎನ್ನುವುದು ಆಯೋಗ ಪತ್ತೆ ಮಾಡಿರುವ ಮಾಹಿತಿ.
ಇಷ್ಟೆಲ್ಲ ಕೇಳಿದ ಮೇಲೆ, ಅಧಿಕೃತ ವರದಿ ಸಿಕ್ಕ ಮೇಲೆ ಜಯಲಲಿತಾ ಸಾವು ಸಹಜ ಸಾವೋ.. ವ್ಯವಸ್ಥಿತ ಕೊಲೆಯೋ.. ವ್ಯವಸ್ಥಿತವಾಗಿ ಜಯಲಲಿತಾ ನರಳಿ ನರಳಿ ಚಿಕಿತ್ಸೆ ನೀಡದೆ ಸಾಯುವಂತೆ ಮಾಡಲಾಯಿತೋ.. ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ.



