ಮಾಜಿ ಸಚಿವರೂ ಆಗಿರುವ, ಗಣಿ ಉದ್ಯಮಿ ಸಂತೋಷ್ ಲಾಡ್ ಇತ್ತೀಚೆಗೆ ಒಂದು ರಾಜಕೀಯ ಹೇಳಿಕೆ ಕೊಟ್ಟಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಚುನಾವಣೆಗೆ ನಿಲ್ಲುವುದೇ ಬೇಡ. ಅವರಿಬ್ಬರೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲಿ. ಶಾಸಕರು ಗೆದ್ದ ನಂತರ ಹೇಗಿದ್ದರೂ ಆಯ್ಕೆ ಮಾಡುವುದು ಹೈಕಮಾಂಡ್. ನೀವೇ ಇಬ್ಬರಿದ್ದೀರಿ. ಕ್ಷೇತ್ರದ ವ್ಯಾಪ್ತಿ ಬಿಟ್ಟು ರಾಜ್ಯ ವ್ಯಾಪ್ತಿ ನೋಡಿಕೊಳ್ಳಿ ಎಂದಿದ್ದರು ಸಂತೋಷ್ ಲಾಡ್. ಇದು ರಾಜ್ಯ ಕಾಂಗ್ರೆಸ್‍ನಲ್ಲಿ ಕೋಲಾಹಲ ಎಬ್ಬಿಸಿತ್ತು. ಸಂಚಲನ ಸೃಷ್ಟಿಸಿತ್ತು. ಖುದ್ದು ಸಿದ್ದರಾಮಯ್ಯ ಸಂತೋಷ್ ಲಾಡ್ ಹೇಳಿಕೆಯನ್ನು ಪರಿಶೀಲಿಸುತ್ತೇವೆ ಎಂದಿದ್ದರು. ಡಿಕೆಶಿ ಕೂಡಾ ಇದೇ ಮಾತು ಹೇಳಿದ ನಂತರ ಏನೋ ಆಗಲಿದೆ ಎಂಬ ಸುಳಿವು ಹೊರಬಿದ್ದಿತ್ತು. ಆದರೆ, ಇದೆಲ್ಲದರ ಹಿಂದೆ ಕಲಘಟಗಿ ರಾಜಕೀಯ ಮಸಲತ್ತು ಇರಬಹುದೇ ಎಂಬ ಕುತೂಹಲ ಈಗ ಗರಿಗೆದರಿದೆ.
ಕಲಘಟಗಿ, ಸಂತೋಷ್ ಲಾಡ್ ಅವರ ಕ್ಷೇತ್ರ. ಎರಡು ಬಾರಿ ಗೆದ್ದಿದ್ದ ಸಂಗೋಷ್ ಲಾಡ್ ಕಳೆದ ಚುನಾವಣೆಯಲ್ಲಿ 25,997 ಮತಗಳ ಅಂತರದಿಂದ ಸೋತಿದ್ದರು. ಬಿಜಿಪಿಯ ಸಿಎಂ ನಿಂಬಣ್ಣವರ್ ಗೆದ್ದಿದ್ದರು. ಈ ಬಾರಿಯೂ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಅದನ್ನು ಅವರು ಬಹಿರಂಗವಾಗಿಯೂ ಹೇಳಿದ್ದಾರೆ. ಆದರೆ ಅದೇ ಕಲಘಟಗಿ ಕ್ಷೇತ್ರದ ಅಭ್ಯರ್ಥಿಯಾಗಲು ಟೊಂಕ ಕಟ್ಟಿ ನಿಂತಿರುವುದು ನಾಗರಾಜ್ ಛಬ್ಬಿ. ಸುಮಾರು 2 ವರ್ಷಗಳಿಂದಲೂ ನಾಗರಾಜ್ ಛಬ್ಬಿ ಕಲಘಟಗಿ ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡುತ್ತಿದ್ದಾರೆ. ನಿಮಗೇ ಟಿಕೆಟ್ ಎಂದು ಸಿದ್ದರಾಮಯ್ಯ ಕೂಡಾ ಹೇಳಿದ್ದಾರಂತೆ. ಸಂತೋಷ್ ಲಾಡ್ ಕೂಡಾ ಟಿಕೆಟ್ ಆಕಾಂಕ್ಷಿ. ಇಬ್ಬರೂ ಸಿದ್ದರಾಮಯ್ಯ ಬೆಂಬಲಿಗರು.

ಸಂತೋಷ್ ಲಾಡ್‍ನ್ನ ಗೆಲ್ಸಿದ್ದು ನಾವಾ. ಅಂವ ಎಲೆಕ್ಷನ್ನಿಗೆ ಬರ್ತಾನಾ. ಕಪ್ಪು ಕೂಲಿಂಗ್ ಗ್ಲಾಸ ಹಾಕ್ಕೊಂಡ್ ಓಡಾಡ್ತಾನಾ. ಗೆದ್ದ ಮೇಲೆ ಇತ್ಲಾ ಕಡೆ ತಲೀ ಹಾಕೋವಲ್ಲ. ಅವಂಗ ಗೆಲ್ಸಿದ್ದು ನಾವಾ.. ನಮ್ಗಾ ಟಿಕೆಟ್ ಕೊಡ್ರೀ. ನಾವೇ ಗೆಲ್ತೀವಿ. ಚಲೋ ಕೆಲ್ಸ ಮಾಡ್ತೀವಿ ಅಂತಾರೆ ನಾಗರಾಜ್ ಛಬ್ಬಿ. ಅದು ವಾಸ್ತವವೂ ಹೌದು. ಸಂತೋಷ್ ಲಾಡ್ 2013ರಲ್ಲಿ ಗೆದ್ದು ಮಂತ್ರಿಯೂ ಆದರು. ಆದರೆ ಕ್ಷೇತ್ರಕ್ಕೆ ಐದು ವರ್ಷಗಳಲ್ಲಿ ಕಾಲಿಟ್ಟಿದ್ದು ಎರಡು ಮೂರು ಬಾರಿಯಷ್ಟೆ. ಅದೂ ಎಲೆಕ್ಷನ್ ಹತ್ತಿರ ಬಂದ ಹೊತ್ತಿನಲ್ಲಿ. ಇದರ ಪರಿಣಾಮ ಕಳೆದ ಚುನಾವಣೆಯಲ್ಲಿ ಆಗಿತ್ತು. ಸತತ 2 ಬಾರಿ ಗೆದ್ದಿದ್ದ ಸಂತೋಷ್ ಲಾಡ್, ಕಲಘಟಗಿಯಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋತಿದ್ದರು. 2013ರಲ್ಲಿ ಇದೇ ಸಂತೋಷ್ ಲಾಡ್ 45 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದವರು. 2018ಲ್ಲಿ ದಯನೀಯವಾಗಿಯೇ ಸೋತಿದ್ದರು. ಈಗ ಮತ್ತೊಮ್ಮೆ ಆಕಾಂಕ್ಷಿ. ಇತ್ತ ನಾಗರಾಜ್ ಛಬ್ಬಿ ಇಡೀ ಕ್ಷೇತ್ರದಾದ್ಯಂತ ಕುಕ್ಕರ್ ವಿತರಿಸಿ, ಮನೆ ಮನೆಗೂ ಭೇಟಿ ನೀಡುತ್ತಿದ್ದಾರೆ.
ಈ ಬಾರಿಯೂ ಸಂತೋಷ್ ಲಾಡ್ ಎಲೆಕ್ಷನ್ ಹೊತ್ತಿಗೆ ಟಿಕೆಟ್ ಎಂದು ಬಂದಿರುವುದು ಸ್ಥಳೀಯ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಾವು ಓಡಾಡಿ, ನಾವು ಖರ್ಚು ಮಾಡಿ, ನಾವು ಕೆಲಸ ಮಾಡಿ ಈತನನ್ನು ಗೆಲ್ಲಿಸಬೇಕಾ ಎನ್ನುವುದು ಅವರ ವಾದ. ಆದರೆ ಸಂತೋಷ್ ಲಾಡ್ ಬೇರೆಯದೇ ದಾಳ ಉರುಳಿಸಿದ್ದಾರೆ. ಸಂತೋಷ್ ಲಾಡ್ ಹೇಳಿ ಕೇಳಿ ಮಾಜಿ ಸಚಿವ. ಹೀಗಾಗಿ ಮಾತಿಗೆ ತೂಕ ಬರುತ್ತದೆ. ಇಂತಹ ವೇಳೆ ಸಿದ್ದು, ಡಿಕೆ ಎಲೆಕ್ಷನ್ನಿಗೇ ನಿಲ್ಲುವುದು ಬೇಡ ಎಂದು ಒತ್ತಡ ಹೇರಿದರೆ, ಕಲಘಟಗಿ ಕ್ಷೇತ್ರದ ಟಿಕೆಟ್‍ನ್ನು ತನಗೇ ಕೊಟ್ಟು ಸುಮ್ಮನಾಗಿಸುತ್ತಾರೆ ಎಂಬ ಲೆಕ್ಕಾಚಾರ ಇರುವಂತಿದೆ ಎನ್ನುವುದು ಇನ್ನೊಂದು ವಾದ.
ಸಿದ್ದುಗಾಗಲೀ, ಡಿಕೆಗಾಗಲೀ.. ಇಂತಹ ತಂತ್ರಗಳು ಹೊಸದಲ್ಲ. ಇಬ್ಬರ ಅನುಭವವೂ ದೊಡ್ಡದು. ಹೀಗಿದ್ದರೂ ಕಲಘಟಗಿಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ನಿಗೂಢವೇ.



