ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿಯವರನ್ನು ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳೋ ಕುರಿತಂತೆ ದೆಹಲಿಗೆ ತೆರಳಿದ್ದರು ಸಿಎಂ ಬಸವರಾಜ ಬೊಮ್ಮಾಯಿ. ಹೈಕಮಾಂಡ್‍ನ್ನು ಒಪ್ಪಿಸಿ ಖಾಲಿಯಿರುವ 6 ಸ್ಥಾನಗಳನ್ನು ಭರ್ತಿ ಮಾಡಿಕೊಂಡು ಎಲೆಕ್ಷನ್‍ಗೆ ರೆಡಿಯಾಗುವ ಆಸೆ ಬೊಮ್ಮಾಯಿಯವರಿಗೆ ಇತ್ತು. ವಾಲ್ಮೀಕಿ ಸಮುದಾಯಕ್ಕೆ ಎಸ್‍ಟಿ ಮಾನ್ಯತೆಯಿಂದ ಸಿಕ್ಕಿರುವ ಮೆಚ್ಚುಗೆಯನ್ನೂ ಹೇಳಿಕೊಂಡು ಶಹಬ್ಬಾಸ್ ಎನಿಸಿಕೊಳ್ಳೋ ಆಸೆಯನ್ನಿಟ್ಟುಕೊಂಡು ದೆಹಲಿಗೆ ಹೋಗಿದ್ದ ಬೊಮ್ಮಾಯಿಗೆ ಹೈಕಮಾಂಡ್ ಕೊಟ್ಟ ಸಿಗ್ನಲ್ಲುಗಳೇನು ಎನ್ನುವುದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಪಂಚಮಸಾಲಿ ವಿಚಾರದಲ್ಲಿ ಹೈಕಮಾಂಡ್ ಆರಂಭದಲ್ಲಿ ತೋರಿಸಿದ್ದ ಉತ್ಸಾಹವನ್ನು ತೋರಿಸುತ್ತಿಲ್ಲ. ಪಂಚಮಸಾಲಿಗಳ ಆಕ್ರೋಶಕ್ಕೆ ಉತ್ತರ ಕಂಡುಕೊಳ್ಳೋ ಭರದಲ್ಲಿ ಹಲವು ಜಾತಿಗಳನ್ನು ಏಕಕಾಲಕ್ಕೆ ಎದುರು ಹಾಕಿಕೊಳ್ಳುವ ಆತಂಕ ಸ್ವಲ್ಪ ತಡವಾಗಿ ಹೈಕಮಾಂಡ್‍ಗೆ ಅರ್ಥವಾಗಿದೆ. ಬೊಮ್ಮಾಯಿ, ಗೋವಿಂದ ಕಾರಜೋಳ, ಬಿ.ಎಲ್.ಸಂತೋಷ್ ಅವರ ಜೊತೆ ಸುಮಾರು ಎರಡೂವರೆ ಗಂಟೆ ಚರ್ಚೆ ಮಾಡಿದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಟ್ಟಿರುವ ಮೆಸೇಜ್ ಇಂಟ್ರೆಸ್ಟಿಂಗ್.

ಮೀಸಲಾತಿ ಕುರಿತಂತೆ ಸರ್ವಪಕ್ಷ ಸಭೆ ಮಾಡಿ ಎಂದಿದ್ದಾರೆ ಅಮಿತ್ ಶಾ. ಸರ್ವಪಕ್ಷ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನೂ ಕೇಳಿಸಿಕೊಂಡು, ಎಲ್ಲರ ಒಪೀನಿಯನ್ ಪಡೆದುಕೊಂಡು ಮುಂದೆ ಹೆಜ್ಜೆ ಇಡಬೇಕು ಎನ್ನುವುದು ಹೈಕಮಾಂಡ್ ಸೂತ್ರ. ಇದರಲ್ಲಿ ಎರಡು ಲೆಕ್ಕಾಚಾರಗಳಿವೆ. ಈಗ ಆಗಿರುವ ಎಡವಟ್ಟಿನಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್‍ನ್ನು ಸ್ವಲ್ಪವಾದರೂ ಕಂಟ್ರೋಲ್ ಮಾಡುವುದು ಹಾಗೂ ಸರ್ವಪಕ್ಷ ಸಭೆಯ ಮೂಲಕ ಆ ಡ್ಯಾಮೇಜ್‍ನ ಸ್ವಲ್ಪವಾದರೂ ಹೊರೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ವರ್ಗಾಯಿಸುವುದು. ಆ ಮೂಲಕ ಮೀಸಲಾತಿ ರಂಪರಗಳೆಯ ಲಾಭವನ್ನು ಎದುರಾಳಿಗಳೂ ಎತ್ತಿಕೊಳ್ಳದಂತೆ ನೋಡಿಕೊಳ್ಳುವುದು ಸದ್ಯದ ಪ್ಲಾನ್. ಅಫ್‍ಕೋರ್ಸ್, ಬಿಜೆಪಿಗೆ ಬೇರೆ ಮಾರ್ಗವೂ ಇರಲಿಲ್ಲ.

ಮೀಸಲಾತಿ ಬಾಣ ಬಿಟ್ಟಾಗ ಎಲ್ಲವನ್ನೂ ಗೆದ್ದೆವು ಎಂಬ ಭ್ರಮೆಯಲ್ಲಿದ್ದ ಬೊಮ್ಮಾಯಿಗೆ ವಾಸ್ತವ ಅರ್ಥವಾಗಲು ವಾರ ಬೇಕಾಯ್ತು. ತಮ್ಮ ಕ್ಷೇತ್ರ ಬಿಟ್ಟು ಹೊರಗಿನ ಕ್ಷೇತ್ರಗಳ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದ ನಾಯಕರ ಸಲಹೆ ಸ್ವೀಕರಿಸಿದ್ದು ಎಂತಹ ಪ್ರಮಾದಕ್ಕೆ ಕಾರಣವಾಯ್ತು ಎನ್ನುವುದು ಹೈಕಮಾಂಡ್‍ಗೆ ಅರ್ಥವಾದಂತಿದೆ. ಆದರೆ ಯಡಿಯೂರಪ್ಪರ ನೆರಳಿನಿಂದ ಪಕ್ಷವನ್ನು ಹೊರಗೆ ತರಬೇಕು ಎಂಬ ಹಠದಲ್ಲಿ ಬದಲಾವಣೆಯಾದಂತಿಲ್ಲ. ಇನ್ನು ಕ್ಯಾಬಿನೆಟ್ ವಿಚಾರವೂ ಅಷ್ಟೆ.
ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿಗೆ ಮಿಠಾಯಿ ತಂದೇ ತರುತ್ತೇನೆ ಎಂದು ಹೇಳಿ ಹೋಗಿದ್ದ ಬೊಮ್ಮಾಯಿಯವರಿಗೆ ಅಲ್ಲಿಯೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಶೂನ್ಯ ಮಾಸ ಕಳೆಯಲಿ ಎಂದಿದ್ದಾರಂತೆ ದೆಹಲಿ ನಾಯಕರು. ಹಾಗೆಂದು ಇಲ್ಲಿಗೇ ಎಲ್ಲವೂ ಮುಕ್ತಾಯವಾಯಿತಾ..? ಇಲ್ಲ.. ಡಿ.30ಕ್ಕೆ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು ಕೆಲವು ಸಂದೇಶ ಹೊತ್ತು ತರಲಿದ್ದಾರೆ. ಜನವರಿ 12ಕ್ಕೆ ಮೋದಿ ಬರಲಿದ್ದಾರೆ. ಅಖಾಡ ರಂಗೇರುವುದು ಆಮೇಲೆಯೇ..



