ಮತ್ತೆ ಬುಲ್ಡೋಜರ್ ಸದ್ದು ಮಾಡುತ್ತಿದೆ. ಶ್ರೀಮಂತರನ್ನೂ ಬಿಡುವುದಿಲ್ಲ. ಒತ್ತುವರಿ ತೆರವು ಮಾಡಿಸಿಯೇ ಸಿದ್ಧ ಎಂದು ಸಚಿವರು ಹೂಂಕರಿಸುತ್ತಿದ್ದಾರೆ. ಪ್ರವಾಹವಾಗಿ ನೀರು ಶ್ರೀಮಂತರ ಲೇಔಟ್ಗಳಿಗೆ ನುಗ್ಗಿದಾಗ ಸರ್ಕಾರಕ್ಕೆ ಕಾನೂನು ನೆನಪಾಗಿದೆ. ಬುಲ್ಡೋಜರ್ ಬಂದಾಗ ಉಳ್ಳವರು ಹೈಕೋರ್ಟ್ ಮೊರೆ ಹೋಗುತ್ತಿದ್ದರೆ, ಬಡವರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಯ ಮಾತನ್ನಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇನೆ ಎಂದು ಹೆದರಿಸಿದ ಆ ವ್ಯಕ್ತಿಗೆ ಸರ್ಕಾರ ತನ್ನ ಮನೆ ಕೆಡವುತ್ತದೆ ಎಂಬ ಭಯ. ಏಕೆಂದರೆ ಅವನು ತಪ್ಪು ಮಾಡಿದ್ದೇ ಸರ್ಕಾರವನ್ನು ನಂಬಿಕೊಂಡು.

ಆತನ ನಿವೇಶನಕ್ಕೆ ವಾಸಯೋಗ್ಯ ಎಂದು ಸರ್ಟಿಫಿಕೇಟ್ ಕೊಟ್ಟಿದ್ದು ಇದೇ ಸರ್ಕಾರ. ಇದೇ ಬಿಬಿಎಂಪಿ ಅಧಿಕಾರಿಗಳು. ಇದೇ ದಾಖಲೆ ನಂಬಿ ಸಾಲಸೋಲ ಮಾಡಿ ಮನೆ ಕಟ್ಟಿಕೊಂಡ. ಅದೇ ದಾಖಲೆಗಳನ್ನು ನಂಬಿ ಬ್ಯಾಂಕುಗಳು ಸಾಲ ಕೊಟ್ಟವು. ಈಗ ಅದೇ ಸರ್ಕಾರ ನೀನು ಕಟ್ಟಿರುವ ಮನೆ ಅಕ್ರಮ. ಕೆಡವುತ್ತೇವೆ ಎಂದು ಹೊರಟಿದೆ. ಸರ್ಕಾರವನ್ನು ಹೇಗೆ ನಂಬೋದು?
ಇಡೀ ಹಡಾವಿಡಿಯಲ್ಲಿ ಆತನ ದಾಖಲೆಗಳಿಗೆ ಸಹಿ ಹಾಕಿದ ಯಾವುದೇ ಇಲಾಖೆ ತಪ್ಪಿತಸ್ಥ ಅಲ್ಲ. ಯಾವೊಬ್ಬ ಅಧಿಕಾರಿಯೂ ತಪ್ಪಿತಸ್ಥ ಅಲ್ಲ. ಆತ ಕೊಟ್ಟ ದಾಖಲೆಗಳನ್ನು ನಂಬಿ ಮನೆ ಕಟ್ಟಿದ ಆತನೊಬ್ಬನೇ ಅಪರಾಧಿ. ಅಧಿಕಾರಿಗಳಿಗೆ ದಾಖಲೆ ಸಿಕ್ಕೋದಿಲ್ವಾ? ಆ ದಾಖಲೆಗಳ ಮೇಲೆ ಸೈನ್ ಹಾಕಿದ ಅಧಿಕಾರಿಯೂ ಸೇರಿದಂತೆ ಯಾರೊಬ್ಬರೂ ತಪ್ಪು ಮಾಡಿಲ್ಲ. ಅರೆ.. ಇವರ ದಾಖಲೆಗಳನ್ನೇ ನಂಬಿದ್ದಕ್ಕೆ ನನಗೆ ಶಿಕ್ಷೆ ಎನ್ನಿಸುವಾಗ ಸರ್ಕಾರವನ್ನು ಹೇಗೆ ನಂಬೋದು?
ಶ್ರೀಮಂತರನ್ನೂ ಬಿಡೋದಿಲ್ಲ ಎಂದು ಹೂಂಕರಿಸುವ ಸರ್ಕಾರದ ಸಚಿವರು, ಆಯುಕ್ತರು, ಅಧಿಕಾರಿಗಳು ಶ್ರೀಮಂತರ ತೆರವು ಕಾರ್ಯಾಚರಣೆ ಬಂದಾಗ ಕಾಯಿಲೆ ಬಂದವರಂತೆ ನಿಶ್ಯಕ್ತರಂತೆ ಆಡುತ್ತಾರೆ. ಬಡವರ ಮನೆಯನ್ನ ಕೆಲವೇ ಕ್ಷಣಗಳಲ್ಲಿ ನೆಲಸಮ ಮಾಡುವ ಅದೇ ಆಫೀಸರ್ಸ್, ಕೆಲವು ನೂರು ಮೀಟರ್ ಉದ್ದದ ಕಾಂಪೌಂಡ್ ಕೆಡವೋಕೆ ಮೂರು ದಿನ ತೆಗೆದುಕೊಳ್ತಾರೆ. 

ಕೋರ್ಟಿನಲ್ಲಿ ಇದರ ಬಗ್ಗೆ ಪರಿಶೀಲನೆ ಮಾಡಿ ಅಂದಾಗ ಸರ್ಕಾರ ತನಿಖೆ ಮಾಡುತ್ತೆ. ಬಹುಶಃ ಅಪರಾಧಿಗಳೇ ತನಿಖೆಯನ್ನೂ ಮಾಡಿ ಶಿಕ್ಷೆಯನ್ನೂ ನೀಡುವ ವ್ಯವಸ್ಥೆ ಸರ್ಕಾರದ್ದಾಗಿರುವಾಗ ಸರ್ಕಾರವನ್ನು ಹೇಗೆ ನಂಬೋದು? ತಮ್ಮದೇ ಅಧಿಕಾರಿಗಳ ತಪ್ಪುಗಳನ್ನು ಪರಿಶೀಲಿಸುವ ಅಧಿಕಾರಿಗಳು, ತನಿಖೆಗೆ ತಪ್ಪುಗಳು ಸಿಗದಂತೆ ಎಚ್ಚರಿಕೆ ವಹಿಸುತ್ತಾರೆ, ಅಷ್ಟೆ. ಕೊನೆಗೆ ಶಿಕ್ಷೆಅನುಭವಿಸುವುದು ಅದೇ ದಾಖಲೆಗಳನ್ನು ನಂಬಿ ಹಣ ಹೂಡಿದ ಬಡವ. ಸರ್ಕಾರವನ್ನು ಹೇಗೆ ನಂಬೋದು?
ಈಗ ಇರುವವರು, ಹಿಂದೆ ಇದ್ದವರು, ಹಿಂದೆಂದೋ ಇದ್ದವರೆಲ್ಲ ತಪ್ಪು ಮಾಡಿದವರನ್ನ ಬಿಡಬೇಡಿ ಎಂದು ಕೂಗುತ್ತಾರೆ. ನಾವು ಭ್ರಷ್ಟಾಚಾರ ಮಾಡಿಲ್ಲ ಎನ್ನುತ್ತಾರೆ. ಆದರೂ.. ಬಡವರ ಮನೆಗಳು ಮಾತ್ರ ನೆಲಸಮವಾಗುತ್ತವೆ. ಅವರ ಕಾಲದಲ್ಲೂ.. ಇವರ ಕಾಲದಲ್ಲೂ.. ಸರ್ಕಾರವನ್ನು ಹೇಗೆ ನಂಬೋದು?
ಅಯ್ಯೋ.. ಸರ್ಕಾರದ ಎಡವಟ್ಟಿಂದ ಮಿಸ್ಟೇಕ್ ಆಯ್ತು. ಹೋಗ್ಲಿ ಬಿಡಿ. ಸಾಲ ಕಟ್ಟಬೇಡಿ ಎಂದು ಬ್ಯಾಂಕ್ ಹೇಳುತ್ತಾ? ನೋ ಚಾನ್ಸ್. ಅವರು ಕುತ್ತಿಗೆ ಪಟ್ಟಿ ಹಿಡಿದಾದರೂ ಸಾಲ ವಸೂಲು ಮಾಡ್ತಾರೆ.ತಪ್ಪು ನಮ್ಮದೇ. ಸರ್ಕಾರವನ್ನ ಸರ್ಕಾರಿ ದಾಖಲೆಗಳನ್ನ ನಂಬಿದ್ದು. ಹೀಗಾದಾಗ ಸರ್ಕಾರವನ್ನ ನಂಬೋದು ಹೇಗೆ?
ಈಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಇದೇ ಸರ್ಕಾರ ಕೊಟ್ಟಿರುವ ದಾಖಲೆಗೆ ಗ್ಯಾರಂಟಿ ಏನು? ಪೆನ್ನು, ಟಿವಿ, ಮಿಕ್ಸಿ, ಫ್ರಿಜ್ಜುಗಳಿಗೆಲ್ಲ ವಾರೆಂಟಿ ಕಾರ್ಡ್ ಇರುತ್ತೆ. ನಮ್ಮ ಪ್ರಾಡಕ್ಟ್ ಇಷ್ಟು ಅವಧಿಯೊಳಗೆ ಪ್ರಾಬ್ಲಂ ಬಂದರೆ ಎಕ್ಸ್ಚೇಂಜ್ ಎಂದೋ.. ಅಥವಾ ರಿಪೇರಿ ಫ್ರೀ ಎಂದೋ ಇರುತ್ತೆ. ಇಲ್ಲಿ ಅದೂ ಇರೋದಿಲ್ಲ. ನಾವೇ ತಪ್ಪು ಮಾಡಿದ್ದರೂ.. ಅವರೇ ತಪ್ಪು ಮಾಡಿದ್ದರೂ.. ಶಿಕ್ಷೆ ನಮಗೆ ಮಾತ್ರ. ಸರ್ಕಾರವನ್ನು ಹೇಗೆ ನಂಬೋದು?
ಇದು ಕೇವಲ ಒತ್ತುವರಿ ತೆರವು ವಿಷಯಕ್ಕೆ ಮಾತ್ರ.. ಬೇರೆಯವೂ ಕೂಡಾ ಇದಕ್ಕೆ ಭಿನ್ನವೇನಲ್ಲ. ಯಾಕೆ ನಂಬಬೇಕು ಎನ್ನುವುದಕ್ಕೆ ಉತ್ತರ ಸಿಗುತ್ತಾ?



