ಹಿಮಾಚಲ ಪ್ರದೇಶದಲ್ಲಿ ಸೋಲ ನೋಡಿದರೆ ಇತಿಹಾಸ ಮರುಕಳಿಸಿದೆ. ಮೊದಲಿನಿಂದಲೂ ಹಿಮಾಚಲ ಪ್ರದೇಶದ ಇತಿಹಾಸ ಇರುವುದೇ ಹೀಗೆ. ಒಮ್ಮೆ ಗೆದ್ದವರು ಮುಂದಿನ ಎಲೆಕ್ಷನ್‍ನಲ್ಲಿ ಪ್ರತಿಪಕ್ಷದಲ್ಲಿ ಕೂರಬೇಕು. ಯಾವ ಪಕ್ಷವೂ ಸತತವಾಗಿ ಗೆದ್ದ ಇತಿಹಾಸವಿಲ್ಲ. ಈ ಬಾರಿಯೂ ಅಷ್ಟೆ.. ಆರಂಭದಿಂದಲೂ ಒಮ್ಮೆ ಮೇಲೆ.. ಮತ್ತೊಮ್ಮೆ ಕೆಳಗೆ ಹೋಗುತ್ತಿದ್ದ ಕಾಂಗ್ರೆಸ್-ಬಿಜೆಪಿ ರೇಸಿನಲ್ಲಿ ಕೊನೆಗೂ ಗೆಲುವಿನ ನಗು ಬೀರಿದ್ದು ಕಾಂಗ್ರೆಸ್. ಸತತ 4 ವರ್ಷಗಳ ನಂತರ ಕೊನೆಗೂ ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರ ಹಿಡಿಯಿತು. ಆದರೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಕಾಂಗ್ರೆಸ್ ನಿರಾತಂಕವಾಗಿ ಬಹುಮತಕ್ಕಿಂತ ಹೆಚ್ಚು ಸೀಟುಗಳನ್ನೇನೋ ಗೆದ್ದಿದೆ.

ಇಲ್ಲಿ ಸಾವಿರಕ್ಕಿಂತ ಕಡಿಮೆ ವೋಟುಗಳ ಅಂತರದಲ್ಲಿ ಗೆದ್ದವರು ಕಾಂಗ್ರೆಸ್‍ನಲ್ಲಿ ಐವರು. ಬಿಜೆಪಿಯಲ್ಲಿ ಮೂವರು.
ಒಂದು ಸಾವಿರಕ್ಕಿಂತ ಹೆಚ್ಚು 5 ಸಾವಿರಕ್ಕಿಂತ ಕಡಿಮೆ ಮಾರ್ಜಿನ್‍ನಲ್ಲಿ ಗೆದ್ದವರು ಬಿಜೆಪಿಯಲ್ಲಿ 8 ಜನ. ಕಾಂಗ್ರೆಸ್‍ನಲ್ಲಿ 16 ಜನ.
ಕಾಂಗ್ರೆಸ್‍ನ 13 ಹಾಗೂ ಬಿಜೆಪಿಯ 9 ಶಾಸಕರ ಗೆಲುವಿನ ಅಂತರ 10 ಸಾವಿರಕ್ಕಿಂತ ಕಡಿಮೆ ಇದೆ. 10 ಸಾವಿರಕ್ಕಿಂತ ಹೆಚ್ಚು ಅಂತರದಲ್ಲಿ ಗೆದ್ದವರು ಬಿಜೆಪಿಯಿಂದ 5 ಹಾಗೂ ಕಾಂಗ್ರೆಸ್‍ನಿಂದ 6.
ಒಟ್ಟಾರೆ ಚುನಾವಣೆಯಲ್ಲಿ ಬಿಜೆಪಿಯ ವೋಟ್ ಶೇರ್ ಶೇ.42.99. ಕಾಂಗ್ರೆಸ್ ಕೇವಲ ಶೇ.1ರಷ್ಟು ಹೆಚ್ಚು. ಶೇ.43.90. ಕೇವಲ ಶೇ.1ರಷ್ಟು ವೋಟಿನ ವ್ಯತ್ಯಾಸ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದ್ದು ಸುಳ್ಳಲ್ಲ.
44 ಶಾಸಕರಲ್ಲಿ 11 ಮಂದಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಕೆಲವರು ಬಂಡಾಯವೆದ್ದರೆ, ಮಿಕ್ಕವರು ಪಕ್ಷದ ವಿರುದ್ಧವೇ ಕೆಲಸ ಮಾಡಿದರು.

ಬೋರಾಂಜ್ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಸುರೇಶ್ ಕುಮಾರ್ ಗೆಲುವಿನ ಅಂತರ ಕೇವಲ 60 ವೋಟು. ರಾಂಪುರ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದು 567 ವೋಟುಗಳ ಮಾರ್ಜಿನ್‍ನಲ್ಲಿ. ಶಿಲ್ಲಾಯ್‍ನಲ್ಲಿ ಕಾಂಗ್ರೆಸ್ ಗೆಲುವಿನ ಅಂತರ 382 ಮತಗಳು. ಶ್ರೀ ರೇಣುಕಾಜಿಯಲ್ಲಿ 860 ಮತ, ಸುಜಾನ್‍ಪುರ್‍ನಲ್ಲಿ 399 ಮತಗಳಲ್ಲಿ ಗೆದ್ದಿದೆ ಕಾಂಗ್ರೆಸ್.

ಬಿಲಾಸ್‍ಪುರ್‍ನಲಿ ಬಿಜೆಪಿ ಕ್ಯಾಂಡಿಡೇಟ್ ಗೆದ್ದಿದ್ದು ಕೇವಲ 276 ಮತಗಳ ಅಂತರದಲ್ಲಿ. ಶ್ರೀ ನೈನಾ ದೇವಿಜಿ ಕ್ಷೇತ್ರದಲ್ಲಿ ಬಿಜೆಪಿ 171 ವೋಟುಗಳಲ್ಲಿ ಗೆದ್ದಿದೆ. ಗೆಲುವು ಸೋಲಿನ ನಡುವಿನ ಅಂತರ ಕೇವಲ ಶೇ.1.. ಅದಕ್ಕಿಂತಲೂ ಕಡಿಮೆ.
ಆದರೆ ವೋಟ್ ಶೇರ್ ಹೆಚ್ಚು ಪಡೆದರೆ ಗೆಲುವು ಸಾಧ್ಯ ಎಂಬ ಮಾತು ಕೂಡಾ ಸುಳ್ಳು. ಒಂದೊಂದು ಕ್ಷೇತ್ರದ ಲೆಕ್ಕವೇ ಬೇರೆಯಾಗಿರುತ್ತದೆ. 2018ರ ಕರ್ನಾಟಕ ಚುನಾವಣೆಯನ್ನೇ ತೆಗೆದುಕೊಂಡರೆ ಕಾಂಗ್ರೆಸ್ ವೋಟ್ ಶೇರ್ ಹೆಚ್ಚಿತ್ತು. ಕೆಲವು ಅಭ್ಯರ್ಥಿಗಳು ಲಕ್ಷಾಂತರ/ಸಾವಿರಾರು ಮತಗಳ ಅಂತರದಲ್ಲಿ ಗೆದ್ದಾಗ ಇಡೀ ರಾಜ್ಯದ ವೋಟ್ ಶೇರ್ ಬದಲಾಗುತ್ತೆ. ಸೋಲಿಸುವ ಪಕ್ಷ ಅಥವಾ ಅಭ್ಯರ್ಥಿಗಳು ಹೆಚ್ಚು ವೋಟ್ ಪಡೆದಾಗ ಕೂಡಾ ಇದೇ ಆಗುತ್ತೆ. ಅಂದರೆ ಕ್ಷೇತ್ರಗಳ ಲೆಕ್ಕದಲ್ಲಿ ಸೋತಿರುತ್ತೆ. ಇಡೀ ರಾಜ್ಯದ ಒಟ್ಟಾರೆ ವೋಟ್ ಶೇರ್ ಮಾತ್ರ ಹೆಚ್ಚಿರುತ್ತೆ.
ಇಲ್ಲಿ ಕೆಲವು ಕಡೆ ಆಮ್ ಆದ್ಮಿ ಪಡೆದ ವೋಟುಗಳು, ಬಿಜೆಪಿ ಬಂಡಾಯ ಅಭ್ಯರ್ಥಿಗಳು ಪಡೆದ ವೋಟುಗಳು ತಾವು ಗೆಲ್ಲದೇ ಹೋದರೂ, ಇನ್ನೊಬ್ಬರ ಗೆಲುವು ಅಥವಾ ಸೋಲನ್ನು ನಿರ್ಧರಿಸಿದವು.



