ಗುಜರಾತಿನಲ್ಲಿ ಡಿಸೆಂಬರ್ 1ಕ್ಕೆ ಮೊದಲ ಹಂತ ಮತ್ತು ಡಿ.5ಕ್ಕೆ ಎರಡನೇ ಹಂತದ ಚುನಾವಣೆ ನಡೆಯಲಿದೆ. ಡಿ.8ಕ್ಕೆ ರಿಸಲ್ಟ್. ಇದುವರೆಗೆ ಹಲವು ಸಮೀಕ್ಷೆಗಳು ಹೊರಬಿದ್ದಿವೆ. ಇಂಡಿಯಾ ಟಿವಿ, ಎಬಿಬಿ ನ್ಯೂಸ್, ಟೈಮ್ಸ್ ನೌ, ಸೀವೋಟರ್, ಇಂಡಿಯಾ ಟುಡೆ ಸೇರಿದಂತೆ ಹಲವು ಸಮೀಕ್ಷೆಗಳ ವರದಿ ಬಂದಿವೆ. ಯಾವುದೇ ಸಮೀಕ್ಷೆಯಲ್ಲೂ ಗುಜರಾತ್‍ನಲ್ಲಿ ಬಿಜೆಪಿ ಸೋಲುವ ಸಾಧ್ಯತೆ ಇದೆ ಎಂಬ ಫಲಿತಾಂಶ ಬಂದಿಲ್ಲ. ಪ್ರತಿ ಸಮೀಕ್ಷೆಗಳಲ್ಲೂ ಬಿಜೆಪಿ 120ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದೇ ಹೇಳಲಾಗಿದೆ. ಈಗ ಇನ್ನೂ ಎರಡು ಸಮೀಕ್ಷೆಗಳು ಹೊರಬಿದ್ದಿವೆ.
ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಗುಜರಾತ್‍ನಲ್ಲಿ ಬಿಜೆಪಿ 109ರಿಂದ 124 ಸೀಟು ಗೆಲ್ಲಲಿದೆ. ಎಬಿಪಿ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 134ರಿಂದ 142 ಸೀಟುಗಳು ಲಭ್ಯವಾಗಲಿವೆ. ಕಾಂಗ್ರೆಸ್ ಸೀಟು ಗಳಿಕೆಯ ಸಂಖ್ಯೆ ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ 51-66. ಎಬಿಪಿ ಸಮೀಕ್ಷೆ ಪ್ರಕಾರ 28ರಿಂದ 36. ಕೇಜ್ರಿವಾಲ್ ಅವರ ಆಪ್ ಇಂಡಿಯಾ ಟಿವಿ ಪ್ರಕಾರ ಗರಿಷ್ಠ 7 ಸೀಟು ಗೆಲ್ಲಬಹುದು. ಆದರೆ ಎಬಿಬಿ ನ್ಯೂಸ್ ಪ್ರಕಾರ 7ರಿಂದ 15 ಸ್ಥಾನ ಗೆಲ್ಲಬಹುದು.
ಸಮೀಕ್ಷೆ ಪ್ರಕಾರವೇ ಫಲಿತಾಂಶ ಬಂದರೆ ಸತತವಾಗಿ 7ನೇ ಬಾರಿಗೆ ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. 1995ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‍ಗೆ ಇಂದಿನವರೆಗೆ ಅಧಿಕಾರದ ಗದ್ದುಗೆಯೇರುವ ಅಥವಾ ಹತ್ತಿರಕ್ಕೆ ಬರುವ ಅವಕಾಶವೂ ಸಿಕ್ಕಿಲ್ಲ. ಕಳೆದ ಬಾರಿ ಪೈಪೋಟಿಯನ್ನಾದರೂ ಕೊಟ್ಟಿದ್ದ ಕಾಂಗ್ರೆಸ್, ಸಮೀಕ್ಷೆಗಳ ಪ್ರಕಾರ ಇನ್ನಷ್ಟು ಶಕ್ತಿಹೀನವಾಗಲಿದೆ. ಕೇಜ್ರಿವಾಲ್ ಘರ್ಜನೆ, ಘೋಷಣೆಗಳಿಗಷ್ಟೇ ಸೀಮಿತವಾಗಲಿದೆ. ಆದರೆ ಮೊದಲ ಎಲೆಕ್ಷನ್‍ನಲ್ಲಿ ಉತ್ತಮ ದಾಖಲೆ ಮಾಡಿದ ಸಾಧನೆಯಂತೂ ಆಮ್ ಆದ್ಮಿಗೆ ಇರಲಿದೆ.
ಈಗ ಭೂಪೇಂದ್ರಭಾಯಿ ಪಟೇಲ್ ಗುಜರಾತ್‍ನ ಸಿಎಂ. 2002ರಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದಾಗ 182ರಲ್ಲಿ 127 ಸೀಟು ಗೆದ್ದಿತ್ತು. ಆ ದಾಖಲೆಯನ್ನು ಇದುವರೆಗೆ ಯಾವ ಎಲೆಕ್ಷನ್‍ನಲ್ಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ. ಸತತವಾಗಿ ಬಿಜೆಪಿಯೇ ಗೆಲ್ಲುತ್ತಿದ್ದರೂ 127ಕ್ಕಿಂತ ಕಡಿಮೆ ಸೀಟುಗಳನ್ನೇ ಗೆದ್ದಿದೆ. ಈ ಬಾರಿ ಎಲೆಕ್ಷನ್‍ನಲ್ಲಿ ಮೋದಿ ಮತ್ತು ಅಮಿತ್ ಶಾ ನೇರವಾಗಿ ಟಿಕೆಟ್ ಹಂಚಿಕೆಯಿಂದ ಪ್ರಚಾರ ತಂತ್ರದವರೆಗೆ ಭಾಗಿಯಾಗಿದ್ದಾರೆ. ಖುದ್ದು ಗುಜರಾತ್ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ತಮ್ಮ ದಾಖಲೆಯನ್ನು ಹಾಲಿ ಸಿಎಂ ಭೂಪೇಂದ್ರ ಮುರಿಯಬೇಕು ಎಂದು ಹೇಳಿದ್ದಾರಂತೆ. ಸಮೀಕ್ಷೆಗಳ ಪ್ರಕಾರವೇ ಫಲಿತಾಂಶವೂ ಬಂದಲ್ಲಿ ನರೇಂದ್ರನ ದಾಖಲೆಯನ್ನು ಭೂಪೇಂದ್ರ ಮುರಿಯಲೂ ಬಹುದು. ಆ ಫಲಿತಾಂಶಕ್ಕೆ ಡಿ.8ರವೆಗೆ ಕಾಯಬೇಕಷ್ಟೆ.



