ಡಿಸೆಂಬರ್ 1 ಮತ್ತು ಡಿಸೆಂಬರ್ 5ನೇ ತಾರೀಕು ಗುಜರಾತ್‍ನಲ್ಲಿ ವಿಧಾನಸಭೆಗೆ ಎಲೆಕ್ಷನ್ ಫಿಕ್ಸ್. ಡಿಸೆಂಬರ್ 8ಕ್ಕೆ ರಿಸಲ್ಟ್ ಘೋಷಣೆಯಾಗಲಿದೆ. ಗೆದ್ದರೆ ಬಿಜೆಪಿ ಸತತ 7ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಂತಾಗುತ್ತದೆ. ಗುಜರಾತ್‍ನಲ್ಲಿ ನಡೆಯುತ್ತಿರುವ ಹಗೂ ನಡೆದ ಸಮೀಕ್ಷೆಗಳೆಲ್ಲ ಗುಜರಾತಿನಲ್ಲಿ ಮತ್ತೊಮ್ಮೆ ಬಿಜೆಪಿಯೇ ಗೆಲ್ಲಲಿದೆ ಎಂದು ಹೇಳುತ್ತಿವೆ. ಸಮೀಕ್ಷೆಗಳಲ್ಲಿ ಬಿಜೆಪಿಗೆ ಸಿಕ್ಕಿರುವ ಅತ್ಯಂತ ಕಡಿಮೆ ಸ್ಥಾನವೆಂದರೆ 110. ಗರಿಷ್ಠ 142 ಸ್ಥಾನ ಸಿಕ್ಕಿವೆ. ಈಗಾಗಲೇ ಸಿ-ವೋಟರ್, ಎಬಿಪಿ ನ್ಯೂಸ್, ಟೈಮ್ಸ್ ನೌ, ಏಷಿಯಾನೆಟ್, ಇಂಡಿಯಾ ಟುಡೇ, ರಿಪಬ್ಲಿಕ್ ಟಿವಿ ಸೇರಿದಂತೆ ಹಲವು ಟಿವಿ ಚಾನೆಲ್‍ಗಳು ಹಾಗೂ ಏಜೆನ್ಸಿಗಳು ಸಮೀಕ್ಷೆ ಮಾಡಿವೆ. ಆ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಗೆ ಅಧಿಕಾರ ಫಿಕ್ಸ್. ಆಮ್ ಆದ್ಮಿ ಪೈಪೋಟಿ ಕೊಡುತ್ತದೆ ಹಾಗೂ ಕೆಲವು ಸೀಟುಗಳನ್ನೂ ಗೆಲ್ಲುತ್ತದೆಯೇ ಹೊರತು ಅಧಿಕಾರ ಹಿಡಿಯುವುದಿಲ್ಲ. ದೆಹಲಿ, ಪಂಜಾಬ್‍ನಲ್ಲಿ ನಡೆದ ಮ್ಯಾಜಿಕ್ ಇಲ್ಲಿ ನಡೆಯಲ್ಲ ಎಂದು ಹೇಳಿವೆ. ಅಂದಹಾಗೆ ಇಡೀ ಎಲೆಕ್ಷನ್‍ನ್ನು ಬಿಜೆಪಿ ಎದುರಿಸುವುದು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ. ಗುಜರಾತ್ ರಾಜ್ಯ ಚುನಾವಣೆಯಾದರೂ, ಪ್ರಧಾನಿಯಾಗಿ 8 ವರ್ಷ ಪೂರೈಸಿದ್ದರೂ ಈಗಲೂ ಮೋದಿಯೇ ಅಲ್ಲಿ ಮತದಾರರನ್ನು ಸೆಳೆಯೋ ಮುಖ.
ಇದೆಲ್ಲದರ ನಡುವೆ ಕುತೂಹಲ ಹುಟ್ಟಿಸಿರುವುದು ಎಲೆಕ್ಷನ್ ಬೆಟ್ಟಿಂಗ್. ಒಂದು ಅಂದಾಜಿನ ಪ್ರಕಾರ ಈಗಾಗಲೇ ಸಾವಿರಾರು ಕೋಟಿ ಬಂಡವಾಳ ಹೂಡಿಕೆಯಾಗಿದೆ. ಕೇವಲ ಬೆಟ್ಟಿಂಗ್ ಮೇಲೆ. ಯಾವ ಪಕ್ಷ ಗೆಲ್ಲಲಿದೆ/ ಎಷ್ಟು ಸೀಟು ಗೆಲ್ಲಲಿದೆ/ ಯಾರು ಗೆಲ್ಲಲಿದ್ದಾರೆ/ ಎಂಬ ಬೆಟ್ಟಿಂಗ್ ಶುರುವಾಗಿದ್ದು ಈ ಎಲೆಕ್ಷನ್‍ನಲ್ಲಿ ಬೆಟ್ಟಿಂಗ್‍ನಲ್ಲಿ ಹೂಡಿಕೆಯಾಗುವ ಹಣ 40ರಿಂದ 50 ಸಾವಿರ ಕೋಟಿ ಎಂಬುದು ಒಂದು ಅಂದಾಜು. ಬೆಟ್ಟಿಂಗ್ ಲೆಕ್ಕಾಚಾರ ಹೀಗಿದೆ.
ಬಿಜೆಪಿ 120 ಕ್ಷೇತ್ರ ಗೆಲ್ಲಲಿದೆ ಎಂದು ನೀವು 1 ರೂ. ಬೆಟ್ಟಿಂಗ್ ಕಟ್ಟಿ ಗೆದ್ದರೆ 28 ಪೈಸೆ ಬರಲಿದೆ. ಬಿಜೆಪಿಗೆ 125 ಸೀಟು ಎಂದರೆ 1ರೂ.ಗೆ 62 ಪೈಸೆ. 130 ಸೀಟಿಗೆ ಬೆಟ್ ಕಟ್ಟಿದರೆ 1 ರೂ.ಗೆ 1 ರೂಪಾಯ್. 135 ಸೀಟು ಬಿಜೆಪಿಗೆ ಎಂದು ಬೆಟ್ ಕಟ್ಟಿ ಗೆದ್ದರೆ 1.75 ರೂ. ಇದು ಬಿಜೆಪಿ ಮ್ಯಾಟ್ರು.
ಕಾಂಗ್ರೆಸ್ ಪರ ಬೆಟ್ಟಿಂಗ್ ಕಟ್ಟುವವರಿಗೆ 15 ಸೀಟು ಕಾಂಗ್ರೆಸ್‍ಗೆ ಎಂದು ಬೆಟ್ ಕಟ್ಟಿ ಗೆದ್ದರೆ 1 ರೂ.ಗೆ 42 ಪೈಸೆ. 20 ಸೀಟು ಕಾಂಗ್ರೆಸ್ಸಿಗೆ ಎಂದು ಬೆಟ್ ಕಟ್ಟಿ ಗೆದ್ದರೆ 1 ರೂ.ಗೆ 1.20 ಪೈಸೆ. 25 ಸೀಟು ಗೆದ್ದರೆ 1.75 ರೂ. ಹಾಗೂ 30 ಸೀಟು ಕಾಂಗ್ರೆಸ್ಸಿಗೆ ಎಂದು ಬೆಟ್ ಕಟ್ಟಿ ಗೆದ್ದರೆ 2.35 ರೂ. ಕೊಡ್ತಾರೆ ಬೆಟ್ಟಿಂಗ್ ದಾರರು.
ಆಮ್ ಆದ್ಮಿಗೆ 10 ಸೀಟು ಗೆದ್ದರೆ 42 ಪೈಸೆ, 15 ಸೀಟು ಗೆದ್ದರೆ 1 ರೂ. ಹಾಗೂ 20 ಸೀಟುಗಳಿಗೆ 2 ರೂ. ಬೆಟ್ಟಿಂಗ್ ಫಿಕ್ಸ್ ಆಗಿದೆ.
ಸಾಮಾನ್ಯವಾಗಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುವವರು ತಮ್ಮ ನಿರೀಕ್ಷೆಗೆ ಮೀರದಂತೆಯೇ ಬೆಟ್ಟಿಂಗ್ ಕಟ್ಟಿರುತ್ತಾರೆ. ತಾವು ಕೊಡುವ ಹಣವನ್ನು ಆದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳುತ್ತಾರೆ. ಈ ಬೆಟ್ಟಿಂಗ್ ಲೆಕ್ಕಾಚಾರ ನೋಡಿದರೆ ಬೆಟ್ಟಿಂಗ್‍ದಾರರೂ ಕೂಡಾ ಬಿಜೆಪಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳುತ್ತಿರುವಂತಿದೆ. ಬುಕ್ಕಿಗಳ ಪ್ರಕಾರ ಮಿನಿಮಮ್ ಬಿಜೆಪಿ 120 ಸೀಟು ಗೆಲ್ಲಲಿದೆ.
2017ರಲ್ಲಿ ಬಿಜೆಪಿ ಅತ್ಯಂತ ಕನಿಷ್ಠ ಸ್ಥಾನ ಗೆದ್ದು ಅಧಿಕಾರ ಹಿಡಿದಿತ್ತು. ಕೇವಲ 99 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ 120 ಸ್ಥಾನ ಗೆಲ್ಲಲಿದೆ ಎಂಬುದು ಬುಕ್ಕಿಗಳ ಲೆಕ್ಕ. ಬುಕ್ಕಿಗಳ ಲೆಕ್ಕಾಚಾರ ಸಿಂಪಲ್. ಕಳೆದ ಬಾರಿ ಹಾರ್ದಿಕ್ ಪಟೇಲ್ ಕಾಂಗ್ರೆಸ್‍ನಲ್ಲಿದ್ದರು. ಅವರ ಹೋರಾಟವೂ ಬಿಜೆಪಿಗೆ ಹೊಡೆತ ಕೊಟ್ಟಿತ್ತು. ಆದರೆ ಈಗ ಹಾರ್ದಿಕ್ ಪಟೇಲ್ ಬಿಜೆಪಿಯಲ್ಲಿದ್ದಾರೆ. ಮತ್ತೊಂದು ವಿಷಯವೆಂದರೆ ಕಾಂಗ್ರೆಸ್‍ನ ರಣತಂತ್ರಗಾರ ಅಹ್ಮದ್ ಪಟೇಲ್ ಇಲ್ಲ. ಹೀಗೆ ಯುದ್ಧಕ್ಕೆ ಹೊರಟಿರುವ ಕಾಂಗ್ರೆಸ್ಸಿನಲ್ಲಿ ಸೈನ್ಯ ಮುನ್ನಡೆಸಬೇಕಾದ ನಾಯಕರೇ ಇಲ್ಲ. ಕಳೆದ ಬಾರಿ ಪಕ್ಷ ತೋರಿಸಿದ್ದ ಪೈಪೋಟಿ ನೋಡಿದರೆ ಅದು ಅರ್ಥವಾಗಿದ್ದರೆ ರಾಹುಲ್-ಸೋನಿಯಾ-ಪ್ರಿಯಾಂಕ ಸ್ಥಳೀಯ ಕಾಂಗ್ರೆಸ್ಸಿಗೆ ಶಕ್ತಿ ಕೊಡಬಹುದಿತ್ತು. ಅಂತಹ ಯಾವ ಪ್ರಯತ್ನಗಳೂ ನಡೆಯಲಿಲ್ಲ. ಬೇಸತ್ತ ಕಾಂಗ್ರೆಸ್ ಶಾಸಕರು ಹೋಗಿ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ಶಸ್ತ್ರಾಸ್ತ್ರಗಳನ್ನೆಲ್ಲ ಕೆಳಗಿಟ್ಟಿರುವ ಹೊತ್ತಿನಲ್ಲೇ ಅಖಾಡಕ್ಕೆ ಇಳಿದಿರುವ ಆಮ್ ಆದ್ಮಿ ಭರವಸೆ ಹುಟ್ಟಿಸುತ್ತಿದೆ. ಬುಕ್ಕಿಗಳ ಪ್ರಕಾರ ಕೇಜ್ರಿವಾಲ್ ದೊಡ್ಡ ಮಟ್ಟದಲ್ಲಿ ಮತ ಗಳಿಸಲಿದ್ದಾರೆ. ಆದರೆ ಅಧಿಕಾರ ಈಗ ಸಿಗಲ್ಲ. ಗಟ್ಟಿ ಹೆಜ್ಜೆಯನ್ನಂತೂ ಊರಲಿದ್ದಾರೆ ಎನ್ನುತ್ತಾರೆ. ಮೊನ್ನೆ ಮೊನ್ನೆ ಆಮ್ ಆದ್ಮಿಯನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಅಮಿತ್ ಶಾ ಹೇಳಿರೋದು ಕೂಡಾ ಇದಕ್ಕೇ. ಆದರೆ ಒಂದು ಎಲೆಕ್ಷನ್ನಿನಲ್ಲಿ 50 ಸಾವಿರ ಕೋಟಿಗಳವರೆಗೆ ಬೆಟ್ಟಿಂಗ್ ನಡೆಯುತ್ತಿರುವುದು ಕುತೂಹಲ ಹುಟ್ಟಿಸಿರುವುದಂತೂ ಹೌದು. ಕ್ರಿಕೆಟ್ ಬೆಟ್ಟಿಂಗ್ ಕೇಳಿದ್ದೀರಲ್ಲ.. ಬಾಲ್ ಟು ಬಾಲ್ ಬೆಟ್ಟಿಂಗ್.. ಆ ರೀತಿ ಎಲೆಕ್ಷನ್ ರಿಸಲ್ಟ್ ಹತ್ತಿರ ಬರುತ್ತಿದ್ದಂತೆಯೇ ಯಾರು ಎಷ್ಟು ವೋಟಿನಿಂದ ಗೆಲ್ಲುತ್ತಾರೆ ಎಂಬ ಬೆಟ್ಟಿಂಗ್ ಕೂಡಾ ಶುರುವಾಗುತ್ತದೆ.



