ಗುಜರಾತ್ ಚುನಾವಣೆಗೆ ಬಿಜೆಪಿ ಕಹಳೆ ಮೊಳಗಿಸಿದೆ. ಚುನಾವಣೆ ನಡೆಯಲಿರುವುದು 180 ಕ್ಷೇತ್ರಗಳಿಗೆ. ಬಹುಮತಕ್ಕೆ ಬೇಕಿರುವುದು 92. ಮೊದಲ ಸುತ್ತಿನಲ್ಲಿ ನಡೆಯಲಿರೋದು 89 ಕ್ಷೇತ್ರಗಳಿಗೆ ಎಲೆಕ್ಷನ್. ಆದರೆ ಬಿಜೆಪಿ 182ರಲ್ಲಿ 160ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳ ಪಟ್ಟಿ ಗುಜರಾತ್ನಲ್ಲಿ ಗುಜರಾತಿನಲ್ಲಷ್ಟೇ ಅಲ್ಲ, ದೇಶದಲ್ಲೇ ಭಾರಿ ಸಂಚಲನ ಮೂಡಿಸಿದೆ. ಯಾಕೆಂದರೆ
ಟಿಕೆಟ್ ಘೋಷಣೆಗೆ ಹೊಸ ಅಸ್ತ್ರ ಹೂಡಿದೆ ಬಿಜೆಪಿ.
ಹಿಮಾಚಲ ಪ್ರದೇಶ, ಗುಜರಾತ್ನಲ್ಲಿ ಹೊಸ ಲೆಕ್ಕಾಚಾರ ಶುರುವಾಗಿದ್ದು, ಹೊಸ ಎಲೆಕ್ಷನ್ ಹೊಸಬರ ಅಸ್ತ್ರವನ್ನೇ ಪ್ರಯೋಗ ಮಾಡಿದೆ. ಹಿರಿಯರಿಗೆ ಕೊಕ್ ಕೊಟ್ಟು ಯುವಕರಿಗೆ ಸಿಕ್ತು ಚಾನ್ಸ್ ಕೊಟ್ಟಿದೆ. ಮಾಜಿ ಸಿಎಂ, ಮಾಜಿ ಡಿಸಿಎಂ ಸೇರಿದಂತೆ ಈಗ ಪ್ರಕಟವಾಗಿರೋ 160ರಲ್ಲೇ 38 ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಘೋಷಿಸಿಲ್ಲ. 2017ರಲ್ಲಿ ಬಿಜೆಪಿ 99 ಸ್ಥಾನ ಗೆದ್ದು ಅಧಿಕಾರ ಹಿಡಿದಿತ್ತು. ಅದಾದ ಮೇಲೆ 12 ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಸದ್ಯ ಗುಜರಾತ್ನಲ್ಲಿ ಃಎP ವಿಧಾನಸಭೆ ಬಲ 111. ಈಗ ಘೋಷಣೆಯಾಗಿರೋ ಟಿಕೆಟ್ಟುಗಳಲ್ಲಿ 69 ಶಾಸಕರಿಗಷ್ಟೇ ಬಿಜೆಪಿ ಟಿಕೆಟ್ ಸಿಕ್ಕಿದೆ. 38 ಶಾಸಕರನ್ನಷ್ಟೇ ಅಲ್ಲ, ಸೋತಿದ್ದ ಕ್ಷೇತ್ರಗಳಲ್ಲಿ ಕೂಡಾ ಇಬ್ಬರು ಹೊಸ ಮುಖಗಳಿಗೆ ಆದ್ಯತೆ ಕೊಟ್ಟಿದೆ. ಬರೋಬ್ಬರಿ 40 ಹೊಸಮುಖ.
ಗುಜರಾತ್ನಲ್ಲಿ 1995ರಿಂದ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದವರಲ್ಲೂ ಅಷ್ಟೇ 7 ಮಂದಿಗಷ್ಟೇ ಟಿಕೆಟ್. ಉಳಿದ ಐವರಿಗೆ ಟಿಕೆಟ್ ಇಲ್ಲ. ಹಿರಿಯ ನಾಯಕರು ಸ್ಪರ್ಧೆ ಬಿಟ್ಟು ಪಕ್ಷ ಸಂಘಟನೆಗೆ ಗಮನ ಕೊಡಬೇಕು. ಹಲವು ಹಾಲಿ ಮಂತ್ರಿಗಳಿಗೂ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಹಾಲಿ ಸಿಎಂ ಭೂಪೇಂದ್ರ ಪಟೇಲ್ ಕಳೆದ ಬಾರಿ ಗೆದ್ದದ್ದ ಘಟ್ಲೋಡಿಯಾ ಕ್ಷೇತ್ರದಿಂದ, ಹೋಮ್ ಮಿನಿಸ್ಟರ್ ಹರ್ಷ ಸಂಘವಿ ಮಜುರಾದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಡಿಸಿಎಂ ನಿತಿನ್ ಪಟೇಲ, ಮಾಜಿ ಮಂತ್ರಿಗಳಾದ ಪ್ರದೀಪ್ ಜಡೇಜಾ, ಭೂಪೇಂದ್ರ ಸಿಂಗ್ ಹಾಲಿ ಸಚಿವರಾದ ಬ್ರಿಜೇಶ್ ಮೆರ್ಜಾ, ಪ್ರದೀಪ್ ಪರ್ಮಾರ್, ರಾಜೇಂದ್ರ ತ್ರಿವೇದಿ , ವಿಧಾನಸಭೆ ಸ್ಪೀಕರ್ ನಿಮಾಬೆನ್ ಆಚಾರ್ಯಗೆ ಕೂಡಾ ಟಿಕೆಟ್ ಸಿಕ್ಕಿಲ್ಲ. ದೇಶದ ಗಮನ ಸೆಳೆದ ಮೊರ್ಬಿ ದುರಂತ ನಡೆದ ಕ್ಷೇತ್ರಕ್ಕೆ ಶಾಸಕರಾಗಿದ್ದವರು ಬ್ರಿಜೇಶ್ ಮಿರ್ಜಾ. ಅವರಿಗೂ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾಗೆ ಸಿಕ್ಕಿದೆ. ಮೊರ್ಬಿ ದುರಂತದಲ್ಲಿ 70ಕ್ಕೂ ಅಧಿಕ ಜನರ ಉಳಿಸಿದ ಕಾಂತಿಲಾಲ್ಗೆ ಟಿಕೆಟ್ ನೀಡಲಾಗಿದೆ. ಹಾರ್ದಿಕ್ ಪಟೇಲ್ಗೆ ವಿರಾಮಗಾಮ್ ಹಾಗೂ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಉತ್ತರ ಜಾಮ್ನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಮೋದಿ ಓಕೆ. ಕೆಲಸ ಮಾಡದ ಶಾಸಕರಿಗೆ ವೋಟ್ ಯಾಕೆ?
ಈ ಪ್ರಶ್ನೆಯನ್ನು ಅಲ್ಲಿನ ಜನ ಎತ್ತಿದ ಕಾರಣದಿಂದಲೇ ಇಷ್ಟು ದೊಡ್ಡ ಮಟ್ಟದ ಸಂಚಲನವಾಗಿದ್ದು. ಕ್ಷೇತ್ರದೊಳಗೆ ತಮ್ಮದೇ ಆದ ಟೀಂ ಜೊತೆ ಪ್ರತ್ಯೇಕ ಸರ್ವೆ ಮಾಡಿಸಿದ ಅಮಿತ್ ಶಾ ಇದನ್ನು ಮೊದಲೇ ಗುರುತಿಸಿದ್ದರು. ಖುದ್ದು ಮೋದಿಯೇ ಅಖಾಡಕ್ಕಿಳಿದು ಮುಂದೆ ಎದುರಾಗಬಹುದಾದ ಸವಾಲುಗಳನ್ನು, ಬಂಡಾಯಗಳನ್ನು ಕಂಟ್ರೋಲ್ ಮಾಡಿದ್ದರು. ಮೋದಿಯ ಮುಖ ನೋಡಿ ಎಷ್ಟು ದಿನ ಅಂತಾ ವೋಟ್ ಹಾಕೋದು ಎಂಬ ಪ್ರಶ್ನೆಗೆ ಉತ್ತರವಾಗಿ ಹಾಲಿ ಶಾಸಕರಿಗೇ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಹೀಗೆ ಟಿಕೆಟ್ ತಪ್ಪಿಸಿಕೊಂಡವರಿಂದಲೇ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿಸಿದ್ದು ಮೋದಿ ಮತ್ತು ಅಮಿತ್ ಶಾ ಸಾಧನೆಯೂ ಹೌದು. ಹಾಗಂತ ಒಳ ಹೊಡೆತಗಳು ನಡೆಯುವುದೇ ಇಲ್ಲ ಎಂದು ಹೇಳಲಾಗದು. ಅದಕ್ಕೂ ಬಿಜೆಪಿ ಹೈಕಮಾಂಡ್ ತಯಾರಾಗಿಯೇ ಇದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಇಲ್ಲದೇ ಹೋಗಿದ್ದರೆ ಒಮ್ಮೆಗೇ 160 ಅಭ್ಯರ್ಥಿಗಳನ್ನು ಘೋಷಿಸುವುದು ಸಾಧ್ಯವಾಗುತ್ತಿರಲಿಲ್ಲ.
ಈಗ ಢವಢವ ಕರ್ನಾಟಕದ ಹಾಲಿ ಶಾಸಕರಿಗೂ ಶುರುವಾಗಿದೆ. ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವೇನಲ್ಲ. ಬಹಳ ಶಾಸಕರಿಗೆ ಕ್ಷೇತ್ರದಲ್ಲಿ ವಿರೋಧವಿದೆ. ಕೆಲಸ ಮಾಡದ ಕಾರಣಕ್ಕೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರಿದ್ದಾರೆ. ಇದೇ ಮಾಡೆಲ್ನ್ನು ಕರ್ನಾಟಕದಲ್ಲೂ ಅನುಸರಿಸಿ ಎಂಬ ಆಗ್ರಹ ಆಗಲೇ ಬಿಜೆಪಿ ಸಂಸದ ಲೆಹರ್ ಸಿಂಗ್ ಅವರಿಂದ ಶುರುವಾಗಿದೆ. ಬಿಜೆಪಿಗೆ ವಲಸೆ ಬಂದವರ ಕಥೆಯೂ ಅಷ್ಟೆ. ಟಿಕೆಟ್ ಸಿಕ್ಕೇ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. 180 ಕ್ಷೇತ್ರಗಳಿರೋ ಗುಜರಾತಿನಲ್ಲೇ ಇಷ್ಟು ಹೊತ್ತಿಗೇ 38 ಶಾಸಕರಿಗೆ ಟಿಕೆಟ್ ತಪ್ಪಿದೆ ಎಂದಾದರೆ 224 ಕ್ಷೇತ್ರಗಳಿರೋ ಕರ್ನಾಟಕದಲ್ಲಿ ಎಷ್ಟು ಜನರಿಗೆ ಟಿಕೆಟ್ ಕೈ ತಪ್ಪಬಹುದು? ಹಾಲಿ ಶಾಸಕರ ಢವಢವ ಒಂದೆಡೆಯಾದರೆ, ನಮಗೂ ಟಿಕೆಟ್ ಸಿಕ್ಕಬಹುದು ಎಂದು ಹಲವು ವರ್ಷಗಳಿಂದ ಪಕ್ಷಕ್ಕೆ ಮಣ್ಣು ಹೊತ್ತಿರುವ ಕಾರ್ಯಕರ್ತರಲ್ಲಿ ಆಶಾಭಾವನೆ ಶುರುವಾಗಿದೆ.



