

ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಎಂಟ್ರಿ ಕೊಡುತ್ತಿದೆ. ಆದರೆ ಅದೇ ವೇಳೆ ರಾಷ್ಟ್ರೀಯ ಕಾಂಗ್ರೆಸ್ ಕಥೆ ಬೇರೆಯೇ ಆಗಿದೆ. ಮನೆಯೊಂದು ಮೂರು ಬಾಗಿಲು. ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಎಐಸಿಸಿ ಅಧ್ಯಕ್ಷರಾಗೋಕೆ ಸೋನಿಯಾ ಗಾಂದಿಯೇ ಹೇಳಿದ್ದರು. ಆದರೆ ಸಿಎಂ ಪಟ್ಟ ಬಿಡಲೇಬೇಕು ಎಂದು ಗೊತ್ತಾದ ಕೂಡಲೇ ವರಸೆಯೇ ಬದಲಾಗಿ ಹೋಯಿತು. ಅಲ್ಲದೆ ನಾಮಪತ್ರ ಸಲ್ಲಿಕೆಗೂ ಮುನ್ನ ರಾಜೀನಾಮೆ ಕೊಡಿ ಎಂದು ಯಾವಾಗ ಹೇಳಿದರೋ.. ಇದು ಸಚಿನ್ ಪೈಲಟ್‍ಗೆ ಪಟ್ಟ ಕಟ್ಟುವ ಹುನ್ನಾರ ಎಂದು ಅರ್ಥ ಮಾಡಿಕೊಂಡರು ಗೆಹ್ಲೋಟ್.
ಗೆಹ್ಲೋಟ್ ಹಳಬರಲ್ಲ. ಹಿಂದುಳಿದ ವರ್ಗ ಮಾಲಿ ಜಾತಿಗೆ ಸೇರಿದ ನಾಯಕ. ಹಿಂದೊಮ್ಮೆ ಇಂತಹುದೇ ಸವಾಲನ್ನು ಎದುರಿಸಿ ಗೆದ್ದ ಚರಿತ್ರೆಯಿದೆ. ಯಾವಾಗ ರಾಜೀನಾಮೆ ಎಂದು ಕೇಳಿದರೋ.. ದೆಹಲಿಯಿಂದ ಜೈಪುರಕ್ಕೆ ಬಂದ ಗೆಹ್ಲೋಟ್ ಹೊಸ ಆಟ ಶುರುವಿಟ್ಟುಕೊಂಡರು. ಖರ್ಗೆಯವರಂತಹ ಸೀನಿಯರ್ ಇದ್ದರೂ ಅವರ ಭೇಟಿಗೆ ಪಕ್ಷದ 90ಕ್ಕೂ ಹೆಚ್ಚು ಶಾಸಕರು ಬರಲೇ ಇಲ್ಲ. ಬಂದ ಅಳಿದುಳಿದವರು ಇಟ್ಟಿದ್ದು ಒಂದೇ ಡಿಮ್ಯಾಂಡ್. ಅಧ್ಯಕ್ಷರಾಗುವ ಮುಂಚೆ ರಾಜಸ್ತಾನ ಸಿಎಂ ಆಯ್ಕೆ ಬೇಡ ಹಾಗೂ ಸಚಿನ್ ಪೈಲಟ್‍ಗೆ ಸಿಎಂ ಪಟ್ಟ ಬೇಡ ಎನ್ನುವುದು.


ಅಂದಹಾಗೆ ರಾಜಸ್ತಾನದಲ್ಲಿ ಚುನಾವಣೆ ಮುಗಿದು ಸಿಎಂ ಯಾರಾಗಬೇಕು ಎಂಬ ಪ್ರಶ್ನೆ ಬಂದಾಗ ಅಶೋಕ್ ಗೆಹ್ಲೋಟ್ ಆಯ್ಕೆಗೆ ರಾಹುಲ್ ಗಾಂಧಿಗೆ ಒಲವಿರಲಿಲ್ಲ. ಪಕ್ಷವನ್ನು ಹೊಸಬರ ಕೈಗೆ ಯುವಕರ ಕೈಗೆ ಕೊಡಬೇಕು ಎಂದು ಕೊಂಡಿದ್ದ ರಾಹುಲ್, ಸಚಿನ್ ಪೈಲಟ್‍ಗೆ ಮಾತು ಕೊಟ್ಟಿದ್ದರು. ಪಕ್ಷದ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಬಿಂಬಿವಾಗಿದ್ದೇ ಹಾಗೆ. ಹೇಗೆ ಕರ್ನಾಟಕದಲ್ಲಿ 2013ರಲ್ಲಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಮಧ್ಯೆ ಪೈಪೋಟಿಯಿದ್ದರೂ, ಪರಮೇಶ್ವರ್ ಅಧ್ಯಕ್ಷರಾಗಿದ್ದರೂ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಎಂದು ಬಿಂಬಿತವಾಗಿದ್ದರಲ್ಲ.. ಹಾಗೆ. ಆಗ ಗೆಹ್ಲೋಟ್ ಸೋನಿಯಾ ಅಮ್ಮನ ಅಸ್ತ್ರ ಬಳಸಿ ಗೆದ್ದಿದ್ದರು. ಈಗ ಸೋನಿಯಾ ಗಾಂಧಿಯೇ ಬೇಸತ್ತಿದ್ದಾರೆ. ಗೆಹ್ಲೋಟ್ ಕ್ಷಮೆ ಕೇಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ ಎಂದಿದ್ದಾರಂತೆ.
ಆದರೆ ಸಚಿನ್ ಪೈಲಟ್ ಬಗ್ಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಮಾತು ಕೊಟ್ಟಿದ್ದರೂ ಅದು ಸಾಧ್ಯವಾಗಿರಲಿಲ್ಲ. ಸಚಿನ್ ಪೈಲಟ್ ಅವರಿಗೆ ಇರುವ ಬೆಂಬಲ, ಜನಪ್ರಿಯತೆಯನ್ನು ಕನ್ವರ್ಟ್ ಮಾಡಿಕೊಳ್ಳೋಕೆ ಆಗಿಲ್ಲ. ಸಚಿನ್ ಒಂದು ಕಾಲು ಹೊರಗಿಟ್ಟಿದ್ದಾರಂತೆ.. ಹಾಗೇನಾದರೂ ಆದರೆ.. ರಾಜಸ್ತಾನದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಇನ್ನೂ ಇನ್ನೂ ಕಷ್ಟವಾಗಲಿದೆ.



