ಬಲವಂತದ ಮತಾಂತರ ಮಿತಿ ಮೀರಿ ನಡೆಯುತ್ತಿದೆ. ಇದನ್ನು ತಡೆಯಬೇಕು ಎಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೋಸ, ಆಮಿಷ ಹಾಗೂ ಬಲವಂತದಿಂದ ನಡೆಯುವ ಮತಾಂತರವನ್ನು ಕೇಂದ್ರ ಸರ್ಕಾರ ತಡೆಯಬೇಕು. ಇದು ರಾಷ್ಟ್ರದ ಭದ್ರತೆ ಹಾಗೂ ಜನರ ಧಾರ್ಮಿಕ ಹಕ್ಕಿಗೆ ಧಕ್ಕೆ ತರುತ್ತವೆ. ಇದನ್ನು ತಡೆಯದಿದ್ದರೆ ದೇಶ ಭವಿಷ್ಯದಲ್ಲಿ ಅಪಾಯಕ್ಕೆ ಸಿಲುಕಲಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ದೇಶದ ಕೆಲವು ರಾಜ್ಯಗಳಲ್ಲಿ ಕಾಯ್ದೆಗಳಿವೆ. ಆದರೆ ಗುಡ್ಡಗಾಡು ಪ್ರದೇಶಗಳಲ್ಲಿ ಬಲವಂತದ ಮತಾಂತರ ನಡೆಯುತ್ತಿದೆ. ಆ ಜನರಿಗೆ ಇದು ಕ್ರೈಂ, ಅಪರಾಧ ಎನ್ನುವುದು ಗೊತ್ತಿಲ್ಲ. ಧಾರ್ಮಿಕ ಹಕ್ಕಿನ ಹರಣವಾಗುತ್ತಿದೆ ಎಂಬ ಅರಿವೇ ಇರುವುದಿಲ್ಲ ಎಂದು ಅಸಹಾಯಕತೆ ತೋರಿಸಿದೆ ಕೇಂದ್ರ ಸರ್ಕಾರ. ಈ ಕುರಿತು ಸುಪ್ರೀಂಕೋರ್ಟ್ ನವೆಂಬರ್ 22ರವರೆಗೆ ಗಡುವು ನೀಡಿದ್ದು, ಬಲವಂತದ ಮತಾಂತರ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚನೆ ನೀಡಿದೆ.
ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆಯೇ ಹೊರತು ಬಲವಂತದ ಮತಾಂತರ ನಡೆಸುವ ಹಕ್ಕು ಯಾರಿಗೂ ಇಲ್ಲ. ಬಲವಂತದಿಂದ ಮತಾಂತರ ಮಾಡಿ ಅದನ್ನುಧಾರ್ಮಿಕ ಸ್ವಾತಂತ್ರ್ಯ ಎನ್ನಲು ಬರುವುದಿಲ್ಲ ಎಂದ ಸುಪ್ರೀಂಕೋರ್ಟ್ ಮುಂದಿನ ದಿನಗಳಲ್ಲಿ ಇದು ದೇಶದ ಭದ್ರತೆಗೂ ಅಪಾಯಕಾರಿಯಾಗಲಿದೆ ಎಂದು ಎಚ್ಚರಿಸಿದೆ.

2021ರಲ್ಲಿ ಮತಾಂತರ ತಡೆಗೆ ಕಾಯಿದೆ ತರುವ ಉದ್ದೇಶ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅದು ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬಿಟ್ಟ ವಿಷಯ. ಅವುಗಳ ತನಿಖೆ, ಕಾನೂನು ಕ್ರಮ ರಾಜ್ಯಗಳ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಲೋಕಸಭೆಯಲ್ಲಿಯೇ ಹೇಳಿತ್ತು. ಕರ್ನಾಟಕವೂ ಸೇರಿದಂತೆ ಒಡಿಶಾ, ಉ.ಪ್ರದೇಶ ರಾಜ್ಯಗಳಲ್ಲಿ ಬಲವಂತದ ಮತಾಂತರ ನಿಷಿದ್ಧ ಕಾನೂನು ಇವೆ. ಆದರೆ ಇಡೀ ದೇಶಕ್ಕೆ ಅನ್ವಯವಾಗುವ ಯಾವುದೇ ಕಾನೂನು ಇಲ್ಲ. ಈಗ ಸುಪ್ರೀಂಕೋರ್ಟ್ ಖುದ್ದು ಹೇಳಿರೋದ್ರಿಂದ ಕೇಂದ್ರ ಮುಂದೇನು ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕುತೂಹಲ ಇದೆ.
ಅಶ್ವಿನಿ ಉಪಧ್ಯಾಯ ಅರ್ಜಿಯಲ್ಲೇನಿತ್ತು?
ದೇಶದಲ್ಲಿ ಹಲವೆಡೆ ಮತಾಂತರಗಳು ನಡೆಯುತ್ತಿವೆ. ಹಣದ ಆಮಿಷವೊಡ್ಡಲಾಗುತ್ತಿದೆ. ವಂಚಿಸಿ ಮತಾಂತರ ಮಾಡಲಾಗುತ್ತಿದೆ. ಮಾಟ, ಮಂತ್ರ, ಮ್ಯಾಜಿಕ್, ಪವಾಡಗಳನ್ನು ಸೃಷ್ಟಿಸಿ, ನಾಟಕ ಮಾಡಿ ಮೋಡಿ ಮಾಡಿ ಮತಾಂತರ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ವಾದಿಸಿದ್ದ ಅಶ್ವಿನಿ ಉಪಧ್ಯಾಯ ಅದಕ್ಕೆ ಸಾಕ್ಷಿಗಳನ್ನೂ ಕೊಟ್ಟಿದ್ದರು. ಅಲ್ಲದೆ ಇಡೀ ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ನಡೆಯದ ಒಂದೇ ಒಂದು ಜಿಲ್ಲೆಯೂ ಇಲ್ಲ ಎಂದು ಪ್ರಬಲವಾಗಿ ವಾದಿಸಿದ್ದರು. ಈ ಕುರಿತು ರಾಷ್ಟ್ರೀಯ ಮಟ್ಟದ ಕಾನೂನು ರೂಪಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದ್ದರು.



