ಭಾರತದಲ್ಲಿ ಇರುವ ಜನಸಂಖ್ಯೆ ಸರಿಸುಮಾರು 140 ಕೋಟಿ. ವಾಹನಗಳೂ ಅಷ್ಟೆ. ಅಮೆರಿಕದ ಜನಸಂಖ್ಯೆಗಿಂತ 4 ಪಟ್ಟು ಹೆಚ್ಚು ಜನಸಂಖ್ಯೆ. ಇಷ್ಟು ದೊಡ್ಡ ದೇಶಕ್ಕೆ ಪೆಟ್ರೋಲ್ ಅತ್ಯಂತ ಅವಶ್ಯಕ. ಆದರೆ ಭಾರತ ಅದಕ್ಕೆ ಬೇರೆ ರಾಷ್ಟ್ರಗಳ ಮೇಲೆಯೇ ಡಿಪೆಂಡ್ ಆಗಬೇಕು. ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ದೊಡ್ಡ ಮಟ್ಟದಲ್ಲಿಲ್ಲ. ಇಂತಹ ಹೊತ್ತಿನಲ್ಲೇ ಎದುರಾಗಿದ್ದು ಉಕ್ರೇನ್ ಯುದ್ಧ. ಈ ಯುದ್ಧದ ಪರಿಣಾಮ ಜಗತ್ತಿನಲ್ಲೆಲ್ಲ ಹಣದುಬ್ಬರ ವಿಪರೀತವಾಯಿತು. ಸಹಜವಾಗಿಯೇ ಪೆಟ್ರೋಲ್, ಡೀಸೆಲ್ ವಿಪರೀತ ದುಬಾರಿಯಾಯಿತು. ಇಂತಹ ಹೊತ್ತಿನಲ್ಲಿ ಜಗತ್ತಿನ ಎಲ್ಲ ದೇಶಗಳಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ಮನಸೋಇಚ್ಚೆ ಏರಿಕೆಯಾಗಿದೆ.
ಫ್ರಾನ್ಸ್ನಲ್ಲಿ ಪರಿಸ್ಥಿತಿ ಕ್ಯೂ ನಿಲ್ಲುವ ಮಟ್ಟಕ್ಕೆ ಬಂದಿದೆ. ಪೆಟ್ರೋಲ್ ಪಂಪ್ಗಳಲ್ಲಿ ಗಲಾಟೆಯಾಗುತ್ತಿದೆ ಎನ್ನುತ್ತಿವೆ ಕೆಲವು ವರದಿಗಳು. ಜರ್ಮನಿಯಲ್ಲಿ ಇಂಧನ ಉಳಿಸಲು ರಾತ್ರಿ ವೇಳೆ ಟ್ರಾಫಿಕ್ ಸಿಗ್ನಲ್ ಲೈಟ್ ಆಫ್ ಮಾಡಲಾಗುತ್ತಿದೆ.ಬ್ರಿಟನ್ನಲ್ಲಿ ರೆಸ್ಟೋರೆಂಟುಗಳು ಬೇಗನೆ ಬಾಗಿಲು ಮುಚ್ಚುತ್ತಿವೆ. ಸ್ಪೇನ್ನಲ್ಲಿ ಏರ್ ಕಂಡಿಷನರ್ ಸೇರಿದಂತೆ ದುಬಾರಿ ಐಷಾರಾಮಿ ಯಂತ್ರಗಳಿಗೆ ಎಲೆಕ್ಟ್ರಿಕ್ ಸಪ್ಲೈ ಕಟ್ ಆಗಿದೆ. ಅಮೆರಿಕದಲ್ಲಿ ಪೆಟ್ರೋಲಿಯಂ ನಿಕ್ಷೇಪ ಅಧಿಕವಾಗಿದ್ದರೂ, ಅದು ತನ್ನ ದೇಶದ ಪೆಟ್ರೋಲಿಯಂ ಬಳಸದೆ ಆಮದು ಮಾಡಿಕೊಳ್ಳುವುದೇ ಹೆಚ್ಚು. ಅಂತಹ ಅಮೆರಿಕದಲ್ಲಿ ಕೂಡಾ ರಿಸರ್ವ್ ಪೆಟ್ರೋಲ್ ಶೇ.40ಕ್ಕೆ ಇಳಿದಿದೆ. ಯುದ್ಧಕ್ಕೆ ಮುನ್ನ 638 ಮಿಲಿಯನ್ ಬ್ಯಾರೆಲ್ ಮೀಸಲು ಸ್ಟಾಕ್ ಇಡುತ್ತಿದ್ದ ಅಮೆರಿಕದ ರಿಸರ್ವ್ ಈಗ 400 ಮಿಲಿಯನ್ ಬ್ಯಾರೆಲ್ಗೆ ಇಳಿದಿದೆ. ಕಡಿಮೆ ದರಕ್ಕೆ ಪೂರೈಸಿ ಎನ್ನುವ ಅಮೆರಿಕದ ಬೇಡಿಕೆಯನ್ನು ಸೌದಿ ರಾಷ್ಟ್ರಗಳು ಒಪ್ಪುತ್ತಿಲ್ಲ.

ಇದಕ್ಕೆಲ್ಲ ಕಾರಣವಾಗಿದ್ದು ಅಮೆರಿಕ ಮತ್ತು ಬ್ರಿಟನ್ ಹಠ. ಒಂದೆಡೆ ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುತ್ತಿದ್ದ ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳು ರಷ್ಯಾಕ್ಕೆ ಹಣದ ಹರಿವು ನಿಲ್ಲಿಸುವ ಆಟವಾಡಿದವು. ರಷ್ಯಾದ ಶಕ್ತಿಯೇ ಪೆಟ್ರೋಲ್ ಮತ್ತು ಗ್ಯಾಸ್. ಅವುಗಳನ್ನು ನಾವು ಖರೀದಿಸದೆ ಹೋದರೆ ರಷ್ಯಾ ಕಥೆ ಮುಗಿಯಿತು ಎಂದು ಭಾವಿಸಿದವು. ಪುಟಿನ್ ಜಗ್ಗಲಿಲ್ಲ. ಪರ್ಯಾಯ ಮಾರ್ಗ ಹುಡುಕಿದಾಗ ಕಂಡಿದ್ದು ಭಾರತ. ನಮ್ಮ ಮಾತನ್ನು ಭಾರತ ಮೀರುವುದಿಲ್ಲ ಎಂದು ನಂಬಿದ್ದವು ಅಮೆರಿಕ ಮತ್ತು ಬ್ರಿಟನ್. ಆದರೆ ಭಾರತ ಹಾಗೆ ಮಾಡಲಿಲ್ಲ. ಏಕೆಂದರೆ ಅಮೆರಿಕ ಆಗಲೀ, ಬ್ರಿಟನ್ ಆಗಲೀ.. ಕಂಪ್ಲೀಟ್ ನಿರ್ಬಂಧವನ್ನೇನೂ ಹೇರಿರಲಿಲ್ಲ. ಅದನ್ನು ಅರ್ಥ ಮಾಡಿಕೊಂಡಿದ್ದ ಭಾರತ ತನ್ನ ಗೇಮ್ ಪ್ಲಾನ್ ಜಾರಿಗೆ ತಂದಿತ್ತು.
ಈ ದಾರಿಯಲ್ಲ ಭಾರತಕ್ಕೆ ಅನುಕೂಲಗಳೂ ಇದ್ದವು. ಅನನುಕೂಲಗಳೂ ಇದ್ದವು. ರಷ್ಯಾದಿಂದ ಭಾರತಕ್ಕೆ ಪೆಟ್ರೋಲ್ ತರುವುದಕ್ಕೆ ಸಮುದ್ರ ಮಾರ್ಗವನ್ನೇ ಅವಲಂಬಿಸಬೇಕಿತ್ತು. ತರುವ ಖರ್ಚು ಹೆಚ್ಚಾಗುತ್ತಿತ್ತು. ಇದನ್ನು ರಷ್ಯಾ ಜೊತೆ ಮಾತನಾಡಿ ಚೌಕಾಸಿ ಮಾಡಿತು ಭಾರತ. ನಂತರ ಇನ್ಷೂರೆನ್ಸ್ ವೆಚ್ಚ. ಇನ್ಷೂರೆನ್ಸ್ ಹಣ ಹಾಗೂ ಖರ್ಚಿನ ಬಾಬ್ತನ್ನು ಸೇರಿಸಿ ಭಾರತಕ್ಕೆ ಬೇರೆ ರಾಷ್ಟ್ರಗಳು ಕೊಡುವುದಕ್ಕಿಂತ ಕಡಿಮೆ ವೆಚ್ಚಕ್ಕೆ ಒಪ್ಪಿಕೊಂಡ ಮೇಲೆ ಯೆಸ್ ಎಂದಿತು ಭಾರತ.
ಅಮೆರಿಕ, ಬ್ರಿಟನ್ ಉರಿದುಬಿದ್ದವು. ಹೇಗೆ ನೀವು ಖರೀದಿಸುತ್ತೀರಿ? ನೀವು ಯುದ್ಧದಾಹಿ ರಷ್ಯಾ ಪರವೋ ಹೇಗೆ? ನೀವು ಉಕ್ರೇನ್ ಮೇಲೆ ನಡೆಸುತ್ತಿರೋ ಯುದ್ಧಕ್ಕೆ ಹಣ ಕೊಡುತ್ತಿದ್ದೀರಿ ಎಂದಿತು ಅಮೆರಿಕ ಮತ್ತು ಬ್ರಿಟನ್. ನಿಮ್ಮ ದೇಶ ರಷ್ಯಾದಿಂದ ಪೆಟ್ರೋಲ್ ತೆಗೆದುಕೊಳ್ಳಲು ಖರ್ಚು ಮಾಡುವ, ಅರ್ಧ ದಿನಕ್ಕೆ ಖರ್ಚು ಮಾಡುವ ಹಣದಲ್ಲಿ ನಾವು ಒಂದು ತಿಂಗಳು ಪೆಟ್ರೋಲ್ ತೆಗೆದುಕೊಳ್ಳುತ್ತೇವೆ. ಮೊದಲು ನಿಮ್ಮ ದೇಶಗಳನ್ನು ಕೇಳಿಕೊಳ್ಳಿ ಎಂದು ತಿರುಗೇಟು ನೀಡಿತು ಭಾರತ. ನಿಮ್ಮ ಗಮನ ಭಾರತದ ಮೇಲಲ್ಲ, ಯೂರೋಪ್ ಮೇಲೆ ಇರಬೇಕು. ನಮ್ಮ ದೇಶಕ್ಕೆ ಅಗತ್ಯವಾಗಿದ್ದನ್ನು ನಾವು ಖರೀದಿ ಮಾಡಿದ್ದೇವೆ ಎಂದಿದ್ದರು ಭಾರತದ ವಿದೇಶಾಂಗ ಸಚಿವ ಜೈಶಂಕರ್.
ಬ್ರಿಟನ್ನ ಮಾಜಿ ಪ್ರಧಾನಿ ಲಿಜ್ ಟ್ರುಸ್ ಅವರು ಕೇಳಿದಾಗಲೂ ಇಂಥದ್ದೇ ಮಾತು ಹೇಳಿದ್ದರು ಜೈಶಂಕರ್. ಯೂರೋಪ್ ಸಮಸ್ಯೆಯನ್ನ ನೀವೇ ಸೃಷ್ಟಿಸಿಕೊಂಡಿರುವ ಸಮಸ್ಯೆಯನ್ನ ಇಡೀ ಜಗತ್ತಿನ ಸಮಸ್ಯೆ ಎಂದು ಬಿಂಬಿಸಬೇಡಿ. ನಮ್ಮ ಜನ ರಷ್ಯಾದಿಂದಲೇ ಪೆಟ್ರೋಲ್ ತನ್ನಿ ಎಂದು ಹೇಳುವುದಿಲ್ಲ. ಪೆಟ್ರೋಲ್ ತರಿಸಿಕೊಡಿ ಅಂತಾರೆ, ಅಷ್ಟೆ. ನಾವೇನೊ ಪೆಟ್ರೋಲ್ ಖರೀದಿಸಿ ಯುದ್ಧಕ್ಕೆ ದುಡ್ಡು ಕೊಡ್ತೀವಿ ಅಂತೀರಲ್ಲ, ಬ್ರಿಟನ್ ಗ್ಯಾಸ್ ಖರೀದಿಸುತ್ತಿರುವುದು ರಷ್ಯಾದಿಂದ. ನೀವು ಯುದ್ಧಕ್ಕೆ ದುಡ್ಡು ಕೊಡ್ತಿಲ್ಲವೇನು ಎಂದಿದ್ದರು ಜೈಶಂಕರ್. ಅಮೆರಿಕಕ್ಕೆ ಹೇಗೆ ಅಮೆರಿಕ ಫಸ್ಟ್ ಆಗುತ್ತೋ.. ಬ್ರಿಟನ್ಗೆ ಹೇಗೆ ಬ್ರಿಟನ್ ಫಸ್ಟ್ ಆಗುತ್ತೋ.. ಹಾಗೆಯೇ ಇಂಡಿಯಾಗೆ ಇಂಡಿಯಾ ಫಸ್ಟ್ ಅನ್ನೋ ಮಾತನ್ನ ಸ್ಪಷ್ಟವಾಗಿ ಸಾರಿದ್ದು ಹಾಗೆ.

ಜೂನ್ನಲ್ಲಿ ರಷ್ಯಾದಿಂದ ಭಾರತಕ್ಕೆ ಬರುತ್ತಿದ್ದ ತೈಲದ ಪ್ರಮಾಣ ಕೇವಲ ಶೇ.2ರಷ್ಟಿತ್ತು. ಈಗ ಶೇ.22ಕ್ಕೇರಿದೆ. ಇದರ ಪರಿಣಾಮ ಭಾರತಕ್ಕೆ ಪೆಟ್ರೋಲ್ ಪೂರೈಕೆಯಲ್ಲಿ ನಂ.1 ಸ್ಥಾನದಲ್ಲಿದ್ದ ಸೌದಿ ಅರೇಬಿಯಾ 2ನೇ ಸ್ಥಾನಕ್ಕೆ ಜಾರಿದ್ದರೆ, ಇರಾಕ್ 3ನೇ ಸ್ಥಾನಕ್ಕೆ ಬಂದಿದೆ. ಪ್ರತಿ ತಿಂಗಳೂ ಪ್ರಮಾಣ ಹೆಚ್ಚುತ್ತಲೇ ಇದೆ. ಇದರ ಲಾಭವಾಗುತ್ತಿರುವುದು ಭಾರತಕ್ಕೆ. ಇಲ್ಲದೇ ಹೋಗಿದ್ದಲ್ಲಿ ಭಾರತದಲ್ಲಿ ಈಗಿನ ಆರ್ಥಿಕ ಹಿಂಜರಿತದಲ್ಲಿ ಪೆಟ್ರೋಲ್ ಬೆಲೆ 150ರೂ. ದಾಟಿದ್ದರೂ ಆಶ್ಚರ್ಯ ಪಡಬೇಕಿರಲಿಲ್ಲ.
ಒಂದೆಡೆ ಭಾರತಕ್ಕಾಗಿ ಚೌಕಾಸಿ ಮಾಡಿ ಗೆದ್ದ ಭಾರತ, ಇನ್ನೊಂದೆಡೆ ಭಾರತದ ಆಂತರಿಕ ವಿಷಯಗಳಲ್ಲಿ ವಿನಾಕಾರಣ ಮೂಗು ತೂರಿಸುತ್ತಿರುವ ಒಪೆಕ್ ರಾಷ್ಟ್ರಗಳಿಗೂ ಎಚ್ಚರಿಕೆ ಕೊಟ್ಟಿದೆ. ಅಮೆರಿಕ ಏನೇ ಅಬ್ಬರಿಸಿ ಬೊಬ್ಬಿರಿದರೂ ಅಲ್ಲಿಯೂ ಭಾರತದ್ದು ಚೌಕಾಸಿ ಮಂತ್ರವೇ. ಭಾರತಕ್ಕೆ ಲಾಭವಾಗುವ ಯೋಜನೆಗಳನ್ನು ಅತ್ತ ಅಮೆರಿಕದಿಂದಲೂ, ಇತ್ತ ರಷ್ಯಾದಿಂದಲೂ ಪಡೆಯುತ್ತಿರುವ ಭಾರತ, ಒಪೆಕ್ ರಾಷ್ಟ್ರಗಳ ಜೊತೆಯೂ ಮುನಿಸಿಕೊಂಡಿಲ್ಲ. ಅದರ ಹಿಂದೆಯೂ ಲೆಕ್ಕಾಚಾರವಿದೆ. ಯುದ್ಧ ಅಂತ್ಯಗೊಂಡು ರಷ್ಯಾಕ್ಕೆ ಎಂದಿನಂತೆ ಫ್ರೀ-ಟ್ರೇಡ್ ಅವಕಾಶ ಸಿಕ್ಕಾಗ ಭಾರತವನ್ನು ಕಡೆಗಣಿಸಿದರೆ.. ಎರಡು ಅಲುಗಿನ ಮೇಲೆ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಸಿಂಪಲ್ಲಾಗಿ ಹೇಳಬೇಕೆಂದರೆ ಭಾರತ ಪಕ್ಕಾ ವ್ಯಾಪಾರಿಯಂತೆ ಆಟವಾಡುತ್ತಿದೆ. ವ್ಯಾಪಾರಿಯಾದವನು ಯಾವತ್ತಿಗೂ ತನ್ನ ಹಿತಾಸಕ್ತಿ, ಲಾಭವನ್ನು ಮಾತ್ರ ನೋಡುತ್ತಾನೆ.



