ಎಲ್ಲಿ ನೋಡಿದರೂ ದುಡ್ಡು. ಮನೆಯಲ್ಲಿ ಕಬೋರ್ಡ್ ಹುಡುಕಿದರೆ ದುಡ್ಡು. ಕೋಟಿ ಕೋಟಿ. ಮರದಲ್ಲಿ ರೆಂಬೆ ಕೊಂಬೆಗಳ ನಡುವೆ ಕಣ್ಣು ಹಾಯಿಸಿದರೆ ನೋಟಿನ ಗೋಣಿಚೀಲ. ಅದರಲ್ಲೂ ಕೋಟಿ ಕೋಟಿ. ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆಯೇ ಅಕ್ರಮಗಳೂ ಜೋರಾಗಿವೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರಿ ಸೇರಿ ರಾಜ್ಯದ ವಿವಿಧೆಡೆ ಏಳು ಮಂದಿ ಮೇಲೆ ದಾಳಿ ನಡೆಸಿದೆ. ಬ್ಯಾಡಗಿಯ ಕಾಂಗ್ರೆಸ್ ಅಭ್ಯರ್ಥಿಯ ಆಪ್ತನ ಮನೆಯಲ್ಲಿ 2.85 ಕೋಟಿ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರಿ ಎಸ್.ಎಂ.ಸುನೀತಾ, ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ, ಕಮ್ಮವಾರಿ ಸಂಘದ ಅಧ್ಯಕ್ಷ ರಾಜಗೋಪಾಲ ನಾಯ್ಡು, ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಚೆನ್ನಬಸಪ್ಪ ಹುಲ್ಲತ್ತಿ, ಕಲಬುರಗಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್, ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಗಳೂ ಆಗಿರುವ ವೆಂಕಟೇಶ್ ಸಾಕಾ ಹಾಗೂ ರಾಜು ಬೋರಾ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಲು ಹಣ ಸಂಗ್ರಹಿಸಿರುವ ಅನುಮಾನದ ಮೇಲೆ ಐಟಿ ಅಧಿಕಾರಿಗಳು ಶನಿವಾರ ರಾತ್ರಿಯೇ ಎಲ್ಲಾ ಏಳು ಮಂದಿ ಮನೆಗಳಿಗೆ ದಾಳಿ ನಡೆಸಿದ್ದು, ಭಾನುವಾರವೂ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿಯ ವಿದ್ಯಾನಗರದಲ್ಲಿನ ಕಾಂಗ್ರೆಸ್ ಮುಖಂಡ ಚೆನ್ನಬಸಪ್ಪ ಹುಲ್ಲತ್ತಿ ಮನೆ ಮೇಲಿನ ದಾಳಿ ವೇಳೆ ಸೂಕ್ತ ದಾಖಲೆ ಇಲ್ಲದ .2.85 ಕೋಟಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಲ್ಲತ್ತಿ ಅವರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ಆಪ್ತ ಎಂದು ಹೇಳಲಾಗಿದೆ. ಕಲಬುರಗಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್ ಅವರ ಮನೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಸ್ಟೋನ್ ಕ್ರಷರ್ ಫ್ಯಾಕ್ಟರಿ ಮೇಲೆ, ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಗಳೂ ಆಗಿರುವ ವೆಂಕಟೇಶ್ ಸಾಕಾ ಹಾಗೂ ರಾಜು ಬೋರಾ ಅವರ ಮನೆ ಮೇಲೆ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಅವರ ಐವರು ಬೆಂಬಲಿಗರ ಮನೆ ಮೇಲೆ ಭಾನುವಾರ ಮುಂಜಾನೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದು, ದಾಖಲೆ ಇಲ್ಲದ .2.35 ಕೋಟಿ ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಚನ್ನೇಗೌಡನದೊಡ್ಡಿಯ ದಿನೇಶ್, ಮಾರಸಿಂಗನಹಳ್ಳಿಯ ಹರೀಶ್, ಮನ್ಮುಲ್ ಆನಂದ್, ಸುರೇಶ್ ಬಾಬು ಮತ್ತು ಮಹೇಶ್ ಎಂಬವರ ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಸುರೇಶ್ ಬಾಬು ಅವರ ಮನೆಯಲ್ಲಿ .2 ಕೋಟಿ ಹಾಗೂ ಮಹೇಶ್ ಮನೆಯಲ್ಲಿದ್ದ .3.50 ಲಕ್ಷ ವಶಕ್ಕೆ ಪಡೆಯಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ದೂರಿನನ್ವಯ ಸುರೇಶ್ ಬಾಬು ಅವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಈ ರೀತಿ ನಡೆದ ದಾಳಿಗಳಲ್ಲಿ ಸಿಕ್ಕ ನಗದು, ಕ್ಯಾಷ್ ಮೊತ್ತವೇ ಈಗಾಗಲೇ 200 ಕೋಟಿಯ ಸಮೀಪ ಇದೆ. ಚಿನ್ನ ಬೆಳ್ಳಿಯ ಮೌಲ್ಯವೂ 50 ಕೋಟಿಯ ಗಡಿ ದಾಟಿದೆ. ಇನ್ನು ಎಲೆಕ್ಟ್ರಾನಿಕ್ ವಸ್ತುಗಳೂ ಸೇರಿದಂತೆ ಒಟ್ಟಾರೆ ಈ ಬಾರಿಯೂ ಐಟಿಯವರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ. ಆಡುತ್ತಿದ್ದಾರೆ. ಸಿಕ್ಕ ದುಡ್ಡಿನ ಲೆಕ್ಕವೇ ನೂರಾರು ಕೋಟಿ ಇರುವಾಗ ನಿಜಕ್ಕೂ ಖರ್ಚಾಗುವ ಹಣದ ಲೆಕ್ಕ ಖಂಡಿತ ಸಾವಿರಾರು ಕೋಟಿಯ ಗಡಿ ದಾಟಿರುತ್ತದೆ ಅನ್ನೊದ್ರಲ್ಲಿ ಅನುಮಾನ ಇಲ್ಲ.



