ಡಿಕೆ ಶಿವಕುಮಾರ್ ಸದ್ಯಕ್ಕೆ ಬಚಾವ್. ಏಕೆಂದರೆ ಅವರ ಕೈಲೀಗ ರಾಜ್ಯ ಸರ್ಕಾರದ ಅಸ್ತ್ರ ಇದೆ. ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಇದು ಅನಿರೀಕ್ಷಿತವೇನಲ್ಲ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮೋದನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಅದನ್ನ ಹೈಕೋರ್ಟ್ ಪರಿಗಣಿಸಿದೆ. ಹಾಗಾಗಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಸಿಬಿಐ ವಿಚಾರಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅವರು ವಾಪಸ್ ಪಡೆದುಕೊಂಡಿದ್ಧಾರೆ. ಅದಕ್ಕೂ ನ್ಯಾಯಾಲಯ ಸಮ್ಮತಿ ಕೊಟ್ಟಿದೆ.
ಆದರೆ ಇಡೀ ಪ್ರಕರಣ ಈಗಲೂ ಜೀವಂತವಾಗಿಯೇ ಇದೆ. ಏಕೆಂದರೆ ಸಿಬಿಐ ತನಿಖೆ ಮತ್ತು ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ಸಿಬಿಐ ತನಿಖೆ ಮತ್ತು ವಿಚಾರಣೆ ಇನ್ನೂ ಚಾಲ್ತಿಯಲ್ಲಿದೆ. ಸಿಬಿಐನವರ ತನಿಖೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ, ಸಿಬಿಐನವರು ಯಾವಾಗ ಬೇಕಾದರೂ ಚಾರ್ಜ್ʻಶೀಟ್ ಸಲ್ಲಿಸಬಹುದು. ಸದ್ಯಕ್ಕೆ ಡಿಕೆ ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ಧಾರೆ. ಸಿಬಿಐನವರಿಗೆ ಡಿಕೆ ಶಿವಕುಮಾರ್ ಅವರ ಮೇಲೆ ಸಾಕ್ಷಿಗಳನ್ನು ನಾಶ ಪಡಿಸುವ, ಸಾಕ್ಷಿಗಳನ್ನು ತಿರುಚುವ ಯತ್ನದ ಬಗ್ಗೆ ಸಂಶಯ ಬಂದರಷ್ಟೇ ಅವರನ್ನು ಅರೆಸ್ಟ್ ಮಾಡಬಹುದು. ಅದೂ ಕೂಡಾ ನ್ಯಾಯಾಲಯದ ಒಪ್ಪಿಗೆ ಮೇಲೆ̤
ಯಾರು ಮೊದಲ ಹೆಜ್ಜೆ ಇಡ್ತಾರೆ..?
ಸರ್ಕಾರದ ನಿರ್ಧಾರವನ್ನು ಸಿಬಿಐ ಪ್ರಶ್ನಿಸಿದರೆ..
ಅಥವಾ
ಯಾರಾದರೂ ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಹತ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ..
ಅಥವಾ..
ಸಿಬಿಐ ಅಧಿಕಾರಿಗಳಿಗೆ ಯಾವುದೇ ತಡೆ ಇಲ್ಲದ ಕಾರಣ ನೇರವಾಗಿ ಚಾರ್ಜ್ʻಶೀಟ್ ಸಲ್ಲಿಸಿದರೆ..
ಆಗ ರಾಜ್ಯ ಸರ್ಕಾರ ಕ್ಯಾಬಿನೆಟ್ ಒಪ್ಪಿಗೆ ಮೂಲಕ ಡಿಕೆಶಿ ವಿರುದ್ಧ ಸಿಬಿಐ ವಿಚಾರಣೆಗೆ ನೀಡಿದ್ದ ಅನುಮತಿ ರದ್ದು ಮಾಡಿರುವ ವಿಷಯ ಕಟಕಟೆಗೆ ಬರುತ್ತದೆ. ಏಕೆಂದರೆ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರಂತೂ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಸರ್ಕಾರದಿಂದಲೂ ಸಾಧ್ಯವಿಲ್ಲ. ಸಿಬಿಐನವರಿಗೆ ಯಾವುದೇ ತಡೆ ಇಲ್ಲದ ಕಾರಣ ಅವರು ಚಾರ್ಜ್ʻಶೀಟ್ ಸಲ್ಲಿಸಬಹುದು. ಅವರಿಗೂ ಇದನ್ನು ಪ್ರಶ್ನಿಸಿ ತಾಂತ್ರಿಕವಾಗಿ ತಮಗೆ ತಾವೇ ಅಡ್ಡಗಾಲು ಹಾಕಿಕೊಳ್ಳೋ ಅಗತ್ಯ ಕಾಣುತ್ತಿಲ್ಲ.
ಅಕಸ್ಮಾತ್ ಸಿಬಿಐನವರು ಚಾರ್ಜ್ʻಶೀಟ್ ಸಲ್ಲಿಸಿದರೆ.. ಆಗ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಸಿಬಿಐಗೆ ನೀಡಿದ್ದ ಅನುಮತಿಯನ್ನೇ ವಾಪಸ್ ತೆಗೆದುಕೊಂಡಿರುವ ಕಾರಣ, ಸಿಬಿಐಗೆ ತನಿಖೆ ಹಾಗೂ ವಿಚಾರಣೆ ಮಾಡುವ ಅಧಿಕಾರವೇ ಇಲ್ಲ ಡಿಕೆ ಶಿವಕುಮಾರ್ ವಾದ ಮಂಡಿಸಬಹುದು. ಅದನ್ನು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಹಂತದಲ್ಲಿಯೇ ನಿರ್ಧಾರ ಮಾಡಬೇಕಾಗಬಹುದು.
ಸಿಬಿಐನವರು ಈಗಾಗಲೇ ತ್ರಿಪುರ ಸರ್ಕಾರದ ಸಿಎಂ ಆಗಿದ್ದ ಕಾಜಿ ಲೆಂಡುಪ್ ದೋರ್ಜಿ ಅವರ ವಿರುದ್ಧದ ತನಿಖೆ ಬಗ್ಗೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖ ಮಾಡಿದ್ಧಾರೆ. (ತ್ರಿಪುರ ಸಿಎಂ ಆಗಿದ್ದ ದೋರ್ಜಿ ಅವರನ್ನು ಅಧಿಕಾರದಿಂದ ವಜಾ ಮಾಡಲಾಗಿತ್ತು. ರಾಷ್ಟ್ರಪತಿ ಆಡಳಿತ ಜಾರಿಯಾಗಿದ್ದ ವೇಳೆ ಸಿಬಿಐ ತನಿಖೆಗೆ ಆದೇಶ ನೀಡಲಾಗಿತ್ತು. ಅದಾದ ಮೇಲೆ ನಡೆದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದ ದೋರ್ಜಿ, ಮತ್ತೆ ಸಿಎಂ ಆಗಿದ್ದರು. ಆಗ ದೋರ್ಜಿ ತಮ್ಮದೂ ಸೇರಿದಂತೆ ಎಲ್ಲರ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದಿದ್ದರು.) ಆ ಪ್ರಕಾರ ಒಮ್ಮೆ ತನಿಖೆಗೆ ಅನುಮತಿ ನೀಡಿ ಆದ ಮೇಲೆ ಮತ್ತೆ ವಾಪಸ್ ತೆಗೆದುಕೊಳ್ಳುವುದು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅದಾದ ಮೇಲೆ ವಿಚಾರಣೆ ನಡೆದು ದೋರ್ಜಿಯವರ ಅಕ್ರಮ ಆಸ್ತಿ ಗಳಿಕೆ ಸಾಬೀತಾಗಿ 6 ತಿಂಗಳು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಲಾಗಿತ್ತು.
ಆದರೆ.. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೈಗೊಂಡಿರುವ ಕ್ರಿಮಿನಲ್ ಪ್ರಕ್ರಿಯೆ ಇನ್ನೂ ದೆಹಲಿ ‘ಇ.ಡಿ.’ ವಿಶೇಷ ನ್ಯಾಯಾಲಯದಲ್ಲಿ ಬಾಕಿಯಿದೆ. ಅದಕ್ಕೆ ಬ್ರೇಕ್ ಇಲ್ಲ.
ಒಟ್ಟಿನಲ್ಲಿ ಈಗ ಯಾರು ಮೊದಲ ಹೆಜ್ಜೆ ಇಡುತ್ತಾರೆ ಎನ್ನುವುದರ ಮೇಲೆಯೇ ಎಲ್ಲವೂ ನಿರ್ಧಾರವಾಗಲಿದೆ.



