ಕಾಂಗ್ರೆಸ್‍ನಲ್ಲಿ ಟಿಕೆಟ್ ಘೋಷಣೆಯನ್ನೇ ಹಬ್ಬದಂತೆ ಆಚರಿಸುವ ತಯಾರಿಯಲ್ಲಿದ್ದಾರೆ ಡಿಕೆ ಶಿವಕುಮಾರ್. 224 ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಸಾವಿರದ ಮುನ್ನೂರಕ್ಕೂ ಹೆಚ್ಚು. ಶಾಮನೂರು ಮಲ್ಲಿಕಾರ್ಜುನ್ ಸೇರಿದಂತೆ ಕೆಲವು ಸೀನಿಯರ್ ಲೀಡರ್ಸ್ ಅರ್ಜಿ ಹಾಕಿಲ್ಲ. ಕೆಲವು ಕಡೆ ಅರ್ಜಿ ಹಾಕಿದವರು ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಪ್ರಚಾರವನ್ನೂ ಆರಂಭಿಸಿದ್ದಾರೆ. ಆಯ್ಕೆ ಘೋಷಣೆಗೂ ಮೊದಲೇ ಅಭ್ಯರ್ಥಿಗಳ ಈ ರೀತಿಯ ಗುಂಪುಗಾರಿಎ, ನಾನೇ ಕ್ಯಾಂಡಿಡೇಟ್ ಎಂದು ಘೋಷಣೆ ಮೊಳಗಿಸುತ್ತಿರುವುದು ಸ್ವತಃ ಡಿ.ಕೆ.ಶಿವಕುಮಾರ್ ಅವರಿಗೂ ತಲೆನೋವು ತಂದಿದೆ. ಅದಕ್ಕೆ ತಕ್ಕಂತೆ ಕೆಲವು ಕ್ಷೇತ್ರಗಳಲ್ಲಿ ಖುದ್ದು ಸಿದ್ದರಾಮಯ್ಯನವರೇ ಅಭ್ಯರ್ಥಿ ಇವರೇ ಎಂದು ಬಹಿರಂಗ ವೇದಿಕೆಗಳಲ್ಲಿ ಘೋಷಿಸಿರುವುದು ಡಿಕೆ ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿಯೇ ಡಿಕೆ ಹೊಸ ಸೂತ್ರವನ್ನು ಹಿಡಿದು ಅರ್ಜಿ ಹಾಕಿದವರಿಗೆ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.

ಡಿಕೆ ಸೂತ್ರ ನಂ.1
ಪ್ರತಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆ ಮಾಡಬೇಕು. ಸಂಘಟನೆ ಮಾಡಬೇಕು. ಗುಂಪುಗಾರಿಕೆಗೆ ಆಸ್ಪದ ಕೊಡಬಾರದು. ಪಕ್ಷದ ಅನುಮತಿಯಿಲ್ಲದೆ ಯಾವ ಹೇಳಿಕೆಗಳನ್ನೂ ನೀಡಬಾರದು. ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡಬಾರದು. ಗೊಂದಲದ ಸನ್ನಿವೇಶ ಸೃಷ್ಟಿಸಬಾರದು. ಬೇಜವಾಬ್ದಾರಿ ಹೇಳಿಕೆ ಕೊಡಬಾರದು.
ಡಿಕೆ ಸೂತ್ರ ನಂ.2
ಆಕಾಂಕ್ಷಿಗಳು ಪ್ರತಿ ಬೂತ್‍ಗೆ ತೆರಳಿ ಬಿಜೆಪಿ ಸರ್ಕಾರದ ಶೇ.40 ಕಮಿಷನ್ ಸೇರಿದಂತೆ ಎಲ್ಲ ಹಗರಣಗಳು, ವೈಫಲ್ಯಗಳು, ಬೆಲೆ ಏರಿಕೆ, ಕೋವಿಡ್ ನಿರ್ವಹಣೆ ವೈಫಲ್ಯ, ನಿರುದ್ಯೋಗ, ರೈತರ ಸಮಸ್ಯೆಗಳನ್ನು ಜನರಿಗೆ ತಲುಪಿಸಬೇಕು. ಅವುಗಳಿಗೆಲ್ಲ ಬಿಜೆಪಿಯೇ ಹೇಗೆ ಕಾರಣ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕು.
ಡಿಕೆ ಸೂತ್ರ ನಂ.3
ಬಿಜೆಪಿ ವೈಫಲ್ಯಗಳ ಜೊತೆಯಲ್ಲಿಯೇ ಕಾಂಗ್ರೆಸ್ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ ಕೃಷಿ ಭಾಗ್ಯ, ವಿದ್ಯಾಸಿರಿ ಮೊದಲಾದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸಬೆಕು. ಜಾಗೃತಿ ಮೂಡಿಸಬೇಕು. ಕಾಂಗ್ರೆಸ್ ಪರ ಜನಾಭಿಪ್ರಾಯ ಮೂಡಿಸಬೇಕು
ಡಿಕೆ ಸೂತ್ರ ನಂ.4
ಏನು ಮಾಡಬೇಕು ಎಂದು ಸೂಚಿಸಲಾಗಿದೆಯೋ.. ಅಷ್ಟನ್ನು ಮಾತ್ರ ಮಾಡಬೇಕು. ಹೇಳಿಕೆ ನೀಡುವ ಮುನ್ನ ಪಕ್ಷದ ಗಮನಕ್ಕೆ ತರಬೇಕು. ಯಾವುದೇ ರೀತಿಯ ಸಭೆ, ಸಮಾರಂಭ, ಸಮಾವೇಶಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅನುಮತಿಯನ್ನು ಕಡ್ಡಾಯವಾಗಿ ಪಡೆಬೇಯಕು. ಆ ಸಭೆ ಯಾವ ಕಾರಣಕ್ಕೆ, ಯಾವ ಉದ್ದೇಶದಿಂದ ಮಾಡುತ್ತಿದ್ದೀರಿ ಎಂಬುದನ್ನೂ ತಿಳಿಸಬೇಕು.

ಈ ನಾಲ್ಕೂ ಸೂತ್ರಗಳ ಜೊತೆಗೆ ಡಿಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಹೆಸರು ಘೋಷಿಸಬೇಡಿ ಎಂದಿರುವುದು ಸಿದ್ದು ಬಣದವರ ಪ್ರಕಾರ ಸಿದ್ದುಗೆ ಟಾಂಗ್ ಕೊಟ್ಟಿದ್ದು ಎನ್ನಲಾಗಿದೆ. ಏಕೆಂದರೆ ಇತ್ತೀಚೆಗೆ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದಾಗ ನಾಲ್ಕೈದು ಅಭ್ಯರ್ಥಿಗಳ ಹೆಸರನ್ನು ಸಿದ್ದರಾಮಯ್ಯನವರೇ ಸ್ವತಃ ಘೋಷಿಸಿದ್ದರು. ಆ ಕ್ಷೇತ್ರಗಳಲ್ಲಿ ಡಿಕೆ ಬಣದವರೂ ಕೂಡಾ ಆಕಾಂಕ್ಷಿಗಳಾಗಿದ್ದು, ಟಿಕೆಟ್ ಸಲ್ಲಿಸಿದ್ದಾರೆ. ಪೈಪೋಟಿಯೂ ಇದೆ. ಪಕ್ಷದ ಅಧ್ಯಕ್ಷರಾದ ತಮ್ಮ ಗಮನಕ್ಕೂ ತಾರದೆ, ಏಕಾಏಕಿ ಸಿದ್ದು ಅಭ್ಯರ್ಥಿಗಳನ್ನು ಘೋಷಿಸಿದ್ದು ಡಿಕೆಗೆ ಇರಿಸುಮುರಿಸು ಉಂಟು ಮಾಡಿತ್ತು. ಅಲ್ಲದೆ ತನ್ನವರನ್ನು ಕಟ್ಟಿ ಹಾಕಲು ಸಿದ್ದು ಆಡುತ್ತಿರುವ ಆಟವಿದು ಎಂಬ ಭಾವನೆ ಬರುವಂತೆ ಮಾಡಿತ್ತು. ಹೀಗಾಗಿಯೇ ಪಕ್ಷದ ರಾಜ್ಯಾಧ್ಯಕ್ಷರ ವೀಟೋ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಆದರೆ.. ಸಿದ್ದರಾಮಯ್ಯ ಇಂತಹವುಗಳಿಗೆಲ್ಲ ಕೇರ್ ಮಾಡುವುದಿಲ್ಲ. ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಯೇ ತೀರುತ್ತಾರೆ ಎನ್ನುತ್ತವೆ ಸಿದ್ದು ಬಣದ ಮೂಲಗಳು.



