ರಾಜ್ಯದಲ್ಲೀಗ ಗುಂಬಜ್ ಗುದ್ದಾಟ, ಗುಂಬಜ್ ಜಗಳ, ಗುಂಬಜ್ ಯುದ್ಧ ಜೋರಾಗಿ ನಡೆಯುತ್ತಿದೆ. ಮೈಸೂರು-ಊಟಿ ರಸ್ತೆಯಲ್ಲಿರೋ ಜೆಎಸ್‍ಎಸ್ ಕಾಲೇಜು ಬಳಿ ಬಸ್ ಶೆಲ್ಟರ್ ನಿರ್ಮಿಸಿದ್ದರು. ಅದಕ್ಕೆ ಗುಂಬಜ್ ಮಾದರಿಯ ಗುಮ್ಮಟ ನಿರ್ಮಿಸಲಾಗಿದ್ದು ವಿವಾದವಾಗಿತ್ತು. ಬಸ್ ಶೆಲ್ಟರ್ ನಿರ್ಮಾಣ ಮಾಡಿದ್ದುದು ಮೈಸೂರು ಪಾಲಿಕೆ. ಇದಕ್ಕೆ ಕಿಡಿ ಹೊತ್ತಿಕೊಂಡಿದ್ದು ಸಂಸದರೂ ಆಗಿರುವ ಪ್ರತಾಪ್ ಸಿಂಹ ಕೆರಳಿ ನಿಂತಾಗ. ಮುಸ್ಲಿಂ ಮಾದರಿ ಗುಂಬಜ್ ಕಟ್ಟೋಕೆ ಬಿಡಲ್ಲ. ನಿಮಗೆ 4 ದಿನ ಟೈಂ ಕೊಡುತ್ತೇವೆ. ಕೆಡವದಿದ್ದರೆ ನಾವೇ ಕೆಡವಿ ಹಾಕುತ್ತೇವೆ ಎಂದರು ಪ್ರತಾಪ್ ಸಿಂಹ. ಬಸ್ ಶೆಲ್ಟರ್ ಅವನ್ಯಾವನು ಪ್ರತಾಪ್ ಸಿಂಹ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದರು. ಕೆಡವುತ್ತೇವೆ ಕೆಡವುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದರು. ಇನ್ನೊಂದು ಕಡೆ ಗುತ್ತಿಗೆದಾರರ ಮೂಲ ಹುಡುಕಾಟವೂ ನಡೆದಿತ್ತು. ಅಷ್ಟು ಹೊತ್ತಿಗೆ ವಿವಾದಾತ್ಮಕ ಶೆಲ್ಟರ್ ಜಾಗದಲ್ಲಿದ್ದ ಗುಂಬಜ್‍ಗಳ ಮೇಲೆ ಕಳಶಗಳು ಪ್ರತ್ಯಕ್ಷವಾಗಿದ್ದವು. ಜೊತೆಯಲ್ಲೇ ರಾತ್ರೋರಾತ್ರಿ ಬಸ್ ಶೆಲ್ಟರ್ ಬೋರ್ಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಸ್ವಾಮೀಜಿಗಳ ಫೋಟೋ ಪ್ರತ್ಯಕ್ಷವಾಗಿದ್ದವು. ಈಗ ಬಸ್ ನಿಲ್ದಾಣ ಒಡೆದರೆ ಜಾತಿಯ ಏಟು ಬೀಳುತ್ತದೆ.
ಆದರೆ ಇಡೀ ವಿವಾದ ನೋಡಿದರೆ ಸಂಸದ ಪ್ರತಾಪ್ ಸಿಂಹ ಇರಲಾರದೆ ಇರುವೆ ಬಿಟ್ಟುಕೊಂಡರಾ ಎನಿಸುವುದು ಸುಳ್ಳಲ್ಲ. ಗುಂಬಜ್ ಮಾದರಿ ಮೈಸೂರು ಅರಮನೆಯೂ ಸೇರಿ ಎಲ್ಲೆಡೆ ಇರುವ ವಾಸ್ತುಶಿಲ್ಪ ಶೈಲಿ. ಅದನ್ನು ಪಕ್ಕಕ್ಕಿಟ್ಟು ನೋಡಿದರೂ ರಾಜ್ಯದಲ್ಲಿರುವುದು ತಮ್ಮದೇ ಸರ್ಕಾರ. ತಮ್ಮದೇ ಶಾಸಕರು. ವಿರೋಧವಿದ್ದರೆ ಬಹಿರಂಗವಾಗಿ ಮಾತನಾಡುವ ಮೊದಲು ಪರ್ಸನಲ್ ಆಗಿ ಮಾತನಾಡುವ ಅವಕಾಶವಿತ್ತು. ಆದರೆ ಪ್ರತಾಪ್ ಸಿಂಹ ಮಾತುಕತೆಯನ್ನು ಸೈಡಿಗಿಟ್ಟು ಬೀದಿ ಜಗಳಕ್ಕಿಳಿದುಬಿಟ್ಟರು. ಈಗ ಪ್ರತಾಪ್ ಸಿಂಹ ಅವರಿಗೆ ಚಾಲೆಂಜ್ ಹಾಕಲು ಮುಂದೆ ಬಂದಿರುವುದು ಅವರದ್ದೇ ಪಕ್ಷದ ಶಾಸಕ ರಾಮದಾಸ್.
ಬಸ್ ನಿಲ್ದಾಣದ ಗುತ್ತಿಗೆದಾರ ಮಹದೇವ್ ಅವರು ಗುತ್ತಿಗೆ ಪಡೆದಂತೆಯೇ ಬಸ್ ಶೆಲ್ಟರ್ ನಿರ್ಮಿಸಿದ್ದಾರೆ. ರಾತ್ರೋರಾತ್ರಿ ಗುಂಬಜ್ ಬಂದಿದ್ದಲ್ಲ. ಒಂದು ಬಸ್ ಶೆಲ್ಟರ್ ನಿರ್ಮಾಣಕ್ಕೆ 10 ಲಕ್ಷ ವೆಚ್ಚವಾಗಿದೆ. ಸುಮ್ಮನೆ ತಪ್ಪು ತಪ್ಪಾಗಿ ಅರ್ಥೈಸಬೇಡಿ ಎಂದಿದ್ದರು ರಾಮದಾಸ್. ಖುದ್ದು ಸಿಎಂ ಬೊಮ್ಮಾಯಿಯವರೊಂದಿಗೆ ಮಾತನಾಡಿ ಪ್ರತಾಪ್ ಸಿಂಹ ಅವರಿಗೆ ಬ್ರೇಕ್ ಹಾಕಿ. ಬಾಯಿಗೆ ಬೀಗ ಹಾಕಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ಕೆಲವು ಹಿಂದೂ ಸಂಘಟನೆಗಳು ಬಸ್ ಶೆಲ್ಟರಿನಲ್ಲಿ ಚಾಮುಂಡೇಶ್ವರಿ ಫೋಟೋ ಇಟ್ಟು ಪೂಜಿಸುವ ಪ್ಲಾನ್ ಮಾಡಿವೆ.
ಒಂದೆಡೆ ತಮ್ಮದೇ ಸರ್ಕಾರ, ತಮ್ಮದೇ ಶಾಸಕರ ವಿರುದ್ಧ, ತಮ್ಮದೇ ಸರ್ಕಾರದ ಹಣದಲ್ಲಿ ನಡೆದ ಕಾಮಗಾರಿಯ ವಿರುದ್ಧ ಕಿಡಿ ಕಾರಿರುವ ಪ್ರತಾಪ್ ಸಿಂಹ ಇರಲಾರದೆ ಇರುವೆ ಬಿಟ್ಟುಕೊಂಡರಾ ಎಂದು ಅನಿಸದೇ ಇರದು. ಅದರಲ್ಲಿಯೂ ಟೀಕೆಯನ್ನು ಎಲ್ಲೆ ಮೀರಿ ನಾವೇ ಜೆಸಿಬಿ ತಂದು ಕೆಡವುತ್ತೇವೆ ಎಂದು ಗುಡುಗಿರುವ ಪ್ರತಾಪ್ ಸಿಂಹ ವಿನಾಕಾರಣ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರತಾಪ್ ಸಿಂಹ ಕಡ್ಡಿಯನ್ನು ಗುಡ್ಡ ಮಾಡುತ್ತಾರೆ. ಮಾತಿನ ಮೇಲೆ ಹಿಡಿತವಿಲ್ಲ ಎಂದು ಜನ ಹಾಗೂ ಬಿಜೆಪಿಯವರೂ ಮಾತನಾಡಿಕೊಳ್ಳುವಂತಾಗಿದೆ. ತಮ್ಮ ಕೆಲಸಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ಪ್ರತಾಪ್ ಸಿಂಹ ಇಂತಹ ಮಾತುಗಳ ಮೂಲಕ ಹೊಡೆತ ತಿನ್ನಲಿದ್ದಾರೆ ಎನ್ನುವುದು ಜನರೇ ಆಡುತ್ತಿರುವ ಮಾತು. ಇದರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅನುಮತಿಯಿಲ್ಲದೆ ಕಟ್ಟಿರುವ ಶೆಲ್ಟರ್ ಕುರಿತು ನೋಟೀಸ್ ನೀಡಿದ್ದಾರೆ.



