ಪ್ರಧಾನಿ ನರೇಂದ್ರ ಮೋದಿಗೆ ಟೀಕೆಗಳು ಹೊಸದಲ್ಲ. ಈಗ ಒಬ್ಬ ಕಾಂಗ್ರೆಸ್ ನಾಯಕ ಮೋದಿಯವರನ್ನು ಮುಗಿಸಿ ಬಿಡಿ ಎಂದು ಹೇಳಿಕೆ ನೀಡಿ, ವಿವಾದವಾಗುತ್ತಿದ್ದಂತೆಯೇ ಇಲ್ಲ.. ಇಲ್ಲ.. ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ. ಮೋದಿಯನ್ನು ಮುಗಿಸಿ ಎಂದರೆ ಅರ್ಥ ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಅಷ್ಟೆ ಎಂದು ಸಮುಜಾಯಿಷಿ ಕೊಟ್ಟಿದ್ದಾರೆ. ಹೇಳಿಕೆ ಕೊಟ್ಟವ ಕಿರಿಯ ನಾಯಕನೇನಲ್ಲ. ರಾಜ ಪಟೇರಿಯಾ ಎಂಬ ಈತ ಮಾಜಿ ಸಚಿವರೂ ಹೌದು. ವಯಸ್ಸೂ 60 ದಾಟಿರುವ ಈತ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ. ಯಾವಾಗ ನ್ಯಾಷನಲ್ ಚಾನೆಲ್ಲುಗಳಲ್ಲಿ ಸುದ್ದಿಯಾಯಿತೋ.. ಪೊಲೀಸರೂ ಎಚ್ಚೆತ್ತರು. ಕೇಸು ದಾಖಲಾಯಿತು. ಅಂದಹಾಗೆ ಮಧ್ಯಪ್ರದೇಶದಲ್ಲಿರೋದು ಬಿಜೆಪಿ ಸರ್ಕಾರವೇ. ಈಗ ಪನ್ನಾ ಜಿಲ್ಲೆಯ ಪವಾಯಿ ಠಾಣೆಯ ಪೊಲೀಸರು ರಾಜ ಪಟೇರಿಯಾರನ್ನು ಅರೆಸ್ಟ್ ಮಾಡಿದ್ದಾರೆ.

ದೇಶದಲ್ಲಿ ಸಂವಿಧಾನ ಉಳಿಯಬೇಕಿದ್ದರೆ ಮೋದಿಯನ್ನು ಕೊಲ್ಲಬೇಕು ಎಂದು ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದ ರಾಜ ಪಟೇರಿಯಾನನ್ನು ಪೊಲೀಸರೀಗ ಜೈಲಿಗೆ ತಳ್ಳಿದ್ದಾರೆ. ಆದರೆ ಮೋದಿಗೆ ಟೀಕೆಗಳು ಹೊಸದಲ್ಲ. ಶತ್ರುಗಳಂತೆ ವರ್ತಿಸುವವರಲ್ಲಿ ರಾಜ ಪಟೇರಿಯಾ ಮೊದಲಿನವರೂ ಅಲ್ಲ. ಕೊನೆಯವರೂ ಆಗಲಿಕ್ಕಿಲ್ಲ.

ಗುಜರಾತಿನಲ್ಲಿ ಬಿಜೆಪಿಯನ್ನು ಕಟ್ಟಿದವರಲ್ಲಿ ಮೋದಿ ಒಬ್ಬರು. ಆದರೆ ಅವರದ್ದೇ ಪಕ್ಷ ಗೆದ್ದು, ಅವರು ಗೆಲ್ಲಿಸಿದವರೇ ಮೋದಿಯನ್ನು ಟೀಕಿಸಿದರು. ಮೋದಿಯ ಜನಪ್ರಿಯತೆ ಕೇಶುಭಾಯಿ ಪಟೇಲ್ ಅವರಿಗೆ ಸಹಿಸಲು ಆಗಲಿಲ್ಲ. ಕಾರಣ ಹೆಚ್ಚುತ್ತಿರುವ ಮೋದಿಯ ಜನಪ್ರಿಯತೆ. ಹೀಗಾಗಿ ತಮ್ಮದೇ ಪಕ್ಷದ ಅಣತಿಯಂತೆ ಗುಜರಾತ್ ತೊರೆದು ದೆಹಲಿಯಲ್ಲಿ ವಾಸಿಸುತ್ತಿದ್ದ ಮೋದಿ, ವಾಪಸ್ ಬಂದಿದ್ದು ಗುಜರಾತಿನ ಮುಖ್ಯಮಂತ್ರಿಯಾದ ನಂತರವೇ.
ಗೋದ್ರಾದಲ್ಲಿ ರಾಮಭಕ್ತರನ್ನು ಸುಟ್ಟ ಪ್ರಕರಣದಲ್ಲಿ ಮೋದಿಯನ್ನು ನಿಷ್ಪ್ರಯೋಜಕ ಎಂಬಂತೆ ಟೀಕಿಸಿದರು. ಗೋದ್ರೋತ್ತರ ಹತ್ಯಾಕಾಂಡದಲ್ಲಿ ಮೋದಿಯನ್ನು ಸಾವಿನ ವ್ಯಾಪಾರಿ ಎಂದು ಟೀಕಿಸಿದರು. ಆದರೆ ಮೋದಿ ಎಲ್ಲಿಯೂ ಕೊಲ್ಲುವ, ಪ್ರಚೋದಾನಾತ್ಮಕ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ ಎಂಬುದೂ ಅಷ್ಟೇ ವಾಸ್ತವ. ಇವತ್ತಿಗೂ ಹುಡುಕಿದರೆ ಮೋದಿಯ ಪ್ರಚೋನಾತ್ಮಕ ಭಾಷಣಗಳ ಒಂದೇ ಒಂದು ವಿಡಿಯೋ ಕೂಡಾ ಸಿಗಲಿಕ್ಕಿಲ್ಲ. ಆದರೂ.. ಮೋದಿಯನ್ನು ಟೀಕಿಸುವವರು ನಾಲಗೆ ಹರಿಬಿಡುವವರ ಸಂಖ್ಯೆ ಕಡಿಮೆಯೇನಿಲ್ಲ.
ಮೋದಿಯನ್ನು ಹಿಟ್ಲರ್, ಹಂತಕ ಎಂದು ನಮ್ಮದೇ ರಾಜ್ಯದ ಸಿದ್ದರಾಮಯ್ಯ ಅದೆಷ್ಟು ಬಾರಿ ಹೇಳಿದ್ದಾರೋ.. ಲೆಕ್ಕವಿಲ್ಲ. ಇನ್ನು ಕೆಲವು ಚೋಟು ಮೋಟು ನಾಯಕರು, ಬುದ್ದಿಜೀವಿಗಳು ಕೂಡಾ ಮೋದಿಯ ಕೈಗೆ ನೆತ್ತರು ಅಂಟಿಸುವ ಕೆಲಸ ಮಾಡಿದ್ದಾರೆ. ಸೋನಿಯಾ ಗಾಂಧಿ ಮೋದಿಯನ್ನು ಸಾವಿನ ವ್ಯಾಪಾರಿ ಎಂದು ಕರೆದರೆ, ರಾಹುಲ್ ಗಾಂಧಿ ರಕ್ತದ ದಲ್ಲಾಳಿ ಎಂದರು. ಎರಡರ ಅರ್ಥವೂ ಒಂದೇ. ಮಣಿಶಂಕರ್ ಅಯ್ಯರ್ ಟೀ ಮಾರುವವರೆಲ್ಲ ದೇಶದ ಪ್ರಧಾನಿಯಾಗೋಕೆ ಆಗಲ್ಲ ಎಂದರು. ಚಾಯ್ ಪೇ ಚರ್ಚಾ ಶುರುವಾಯ್ತು. ಇಂತಹ ಟೀಕೆಗಳ ಎಫೆಕ್ಟ್ ಹೇಗಿತ್ತೆಂದರೆ ಅಮೆರಿಕದಂತಹ ಅಮೆರಿಕ ಮೋದಿಗೆ ವೀಸಾ ನಿಷೇಧಿಸುವಷ್ಟರ ಮಟ್ಟಿಗೆ. ಆದರೆ ಅದೇ ಮೋದಿ ಪ್ರಧಾನಿಯಾದ ಮೇಲೆ ಮೋದಿಯನ್ನು ಅಮೆರಿಕದ ಅಧ್ಯಕ್ಷರೇ ರತ್ನಗಂಬಳಿ ಹಾಸಿ ಸ್ವಾಗತಿಸುವಂತಾಗಿದ್ದು, ಇದೀಗ ಅದೇ ಅಮೆರಿಕ ಭಾರತಕ್ಕೆ ಬಹುಪರಾಕ್ ಎನ್ನುತ್ತಿರುವುದನ್ನು ಇಡೀ ಜಗತ್ತು ನೋಡುತ್ತಿದೆ.

ಹೀಗಾಗಿಯೇ.. ಮೋದಿಗೆ ಟೀಕೆಗಳು ಹೊಸದಲ್ಲ. ರಾಜಕೀಯದಲ್ಲಿ ಟೀಕೆಗಳು ಇರಲೇಬಾರದೆಂದೇನೂ ಅಲ್ಲ. ಆದರೆ ರಾಜಕೀಯ ನಾಯಕನಾದವರು ಬಹಿರಂಗವಾಗಿ ಮಾತನಾಡುವಾಗ ನಾಲಗೆಗ ಸ್ನಾನ ಮಾಡಿಸಬೇಕು. ಅಕಸ್ಮಾತ್ ಏನಾದರೂ ಎಡವಟ್ಟಾಯಿತೆಂದರೆ ಬೇರೆಯವರು ಗಮನಿಸುವ ಮೊದಲೇ ಕ್ಷಮೆ ಕೇಳುವ ಬುದ್ದಿವಂತಿಕೆಯೂ ಇರಬೇಕು. ವಿವಾದ ತಾರಕಕ್ಕೇರುವವರೆಗೂ ಮೌನವಾಗಿದ್ದು ಆನಂತರ ನಾನು ಹೇಳಿದ್ದು ಹಾಗಲ್ಲ.. ಹೀಗೆ.. ಆ ಅರ್ಥದಲ್ಲಿ ಅಲ್ಲ.. ಈ ಅರ್ಥದಲ್ಲಿ ಎನ್ನುವಂತೆ ಮಾತನಾಡುವುದು ಅವರ ರಾಜಕೀಯಕ್ಕೂ ಮುಳುಗುನೀರು ಬಿಡುವ ಸಾಧ್ಯತೆ ಇರುತ್ತದೆ. ಏಕೆಂದರೆ ಕೇವಲ ನಾಲಗೆಯಿಂದಲೇ ಶಿಖರಕ್ಕೇರಿದವರು ಇರುವಷ್ಟೇ, ಪಾತಾಳಕ್ಕೆ ಇಳಿದವರೂ ಇದ್ದಾರೆ. ಮಾತಿನಿಂದ ಪ್ರಭಾವ ಬೀರಿ ದೊಡ್ಡಸ್ಥಾನಕ್ಕೇರಿದವರ ಪಟ್ಟಿಯಲ್ಲಿ ಮೋದಿಯೂ ಒಬ್ಬರು. ಮಾತಿನಿಂದಲೇ ಎಲ್ಲರನ್ನೂ ಕೆಣಕಿ ಕೆಣಕಿ ಪಾತಾಳಕ್ಕೆ ಬಿದ್ದವರಲ್ಲಿ ಜನಾರ್ದನ ರೆಡ್ಡಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಮಾತು ಮಂಥಿಸಿ ಬರಬೇಕು.



