ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೆಡೆ.. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇನ್ನೊಂದು ಕಡೆ.. ಕರ್ನಾಟಕ ಕಾಂಗ್ರೆಸ್ ಘಟಕವೇ ಮತ್ತೊಂದು ಕಡೆ.. ರಾಷ್ಟ್ರೀಯ ಹೈಕಮಾಂಡ್ ಮತ್ತೊಂದು ಕಡೆ.. ಹೀಗೆ ಒಟ್ಟಾರೆ ಕಾಂಗ್ರೆಸ್ 4 ಸಮೀಕ್ಷೆ ನಡೆಸುತ್ತಿದೆಯಂತೆ. ಪಕ್ಷದ ಅಧಿಕೃತ ಘಟಕಗಳು ನಡೆಸುವ ಸಮೀಕ್ಷೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ವೈಯಕ್ತಿಕವಾಗಿ ಸಿದ್ದು ಮತ್ತು ಡಿಕೆ ಶಿವಕುಮಾರ್ ಟೀಂ ನಡೆಸುತ್ತಿರುವ ಸಮೀಕ್ಷೆಗಳು ಕುತೂಹಲಕಾರಿ. ಏಕೆಂದರೆ ಇಡೀ ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಎರಡು ಬಣಗಳಿವೆ ಅನ್ನೋದು ಈಗ ಗುಟ್ಟೇನಲ್ಲ. ಇದ್ದುದರಲ್ಲಿ ಏನೇ ಟಾಂಗ್ ಟಾಂಟ್ ಕೊಟ್ಟರೂ ಅದನ್ನು ಬ್ಯಾಲೆನ್ಸ್ ಮಾಡುತ್ತಿರುವುದು ಸಿದ್ದರಾಮಯ್ಯ ಅವರಿಗಿಂತ ಡಿಕೆ ಶಿವಕುಮಾರ್.

ಇವರಿಬ್ಬರೂ ತಮ್ಮ ತಮ್ಮ ಬಣದವರಿಗೇ ಟಿಕೆಟ್ ಕೊಡಿಸಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಗುದ್ದಾಟಕ್ಕಿಳಿದಾಗ ಯಾವುದಕ್ಕೂ ಇರಲಿ ಎಂದೇ ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ಧಾರೆ ಎಂಬ ಮಾಹಿತಿಯೂ ಇದೆ. ಗುದ್ದಾಟದ ಉದಾಹರಣೆಗೆ ಹೇಳಬೇಕೆಂದರೆ ಕಲಘಟಗಿ ಕ್ಷೇತ್ರ. ಸಂತೋಷ್ ಲಾಡ್ ಸಿದ್ದರಾಮಯ್ಯ ಬಣದಲ್ಲಿದ್ದರೆ, ನಾಗರಾಜ್ ಚಬ್ಬಿ ಡಿಕೆ ಬಣದವರು. ಇಬ್ಬರ ಮಧ್ಯೆ ಈಗ ಜಿದ್ದಾಜಿದ್ದಿಯೇ ಏರ್ಪಟ್ಟಿದೆ. ಬಹಿರಂಗವಾಗಿ ನಡೆಯುತ್ತಿರುವ ಈ ಕದನವನ್ನು ಡಿಕೆ ಕೂಡಾ ಸೈಲೆಂಟ್ ಆಗಿ ನೋಡುತ್ತಿರುವುದು ವಿಶೇಷ. ಇನ್ನು ಜಮೀರ್ ಅಹ್ಮದ್ ವಿಚಾರಕ್ಕೆ ಬಂದರೆ ಓಪನ್ ಆಗಿ ಸಿದ್ದರಾಮಯ್ಯ ಸಿಎಮ್ ಆಗಬೇಕು ಎಂದು ಹೇಳಿದವರು. ಹೆಚ್.ಎಂ.ರೇವಣ್ಣ, ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಬಹಿರಂಗವಾಗಿ ಸಿಎಂ ಆಗಬೇಕು ಎಂದು ಹೇಳುತ್ತಿದ್ದಾರೆ. ಇವರೆಲ್ಲರೂ ಸಿದ್ದು ಟೀಮಿನವರು. ವ್ಯಕ್ತಿಪೂಜೆ ಬೇಡ, ಪಕ್ಷಪೂಜೆಯಾಗಬೇಕು ಎಂದರೂ, ಸಿಎಂ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರೂ, ಖುದ್ದು ರಾಹುಲ್ ಗಾಂಧಿ ಅವರಿಂದಲೇ ಹೇಳಿಸಿದ್ದರೂ ಸಿದ್ದು ಟೀಂ ಸೈಲೆಂಟ್ ಆಗದೇ ಹೋದಾಗ ಡಿಕೆ ಬಣದವರೂ ಹಾಗೂ ಸ್ವತಃ ಡಿಕೆ ಶಿವಕುಮಾರ್ ತಾನೂ ಸಿಎಂ ಆಗಬೇಕು ಎಂದು ಬಹಿರಂಗವಾಗಿಯೇ ಹೇಳಿದರು. ಸಿದ್ದು ಕುರುಬರ ಒಕ್ಕೂಟದಲ್ಲಿ, ಡಿಕೆ ಒಕ್ಕಲಿಗರ ಸಮಾವೇಶದಲ್ಲಿ ಹೇಳಿದರು. ಹೀಗೆ ನಡೆಯುತ್ತಿರುವಾಗಲೇ ಸಂಕ್ರಾಂತಿಯ ಹೊತ್ತಿಗೆ ಕನಿಷ್ಠ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟ ಮಾಡಬೇಕು ಎಂಬ ಹಠಕ್ಕೆ ಬಿದ್ದಿದೆ ಕಾಂಗ್ರೆಸ್.
ಜನವರಿ 15 ಕಳೆಯುವ ಮನ್ನ ಅಂದರೆ ಸಂಕ್ರಾಂತಿಯ ವೇಳೆಗೆ ಟಿಕೆಟ್ ಫೈನಲ್ ಮಾಡುವ ನಿಟ್ಟಿನಲ್ಲಿ ಇದುವರೆಗೆ ಅರ್ಜಿ ಸಲ್ಲಿಸುವವರ ಪೂರ್ವಾಪರ ವಿಚಾರಿಸಲಿದೆ. ಸ್ಕ್ರೀನಿಂಗ್ ಕಮಿಟಿ ಎದುರು ಬರುವುದಕ್ಕೆ ಮುನ್ನವೇ ಈ ಸಮೀಕ್ಷೆ ರೆಡಿಯಾಗಲಿದೆ. ಆಕಾಂಕ್ಷಿಗಳ ಜಾತಿ, ಕ್ಷೇತ್ರದಲ್ಲಿ ಇರುವ ಜನಪ್ರಿಯತೆ, ವೋಟುಗಳಿಸುವ ಸಾಮಥ್ರ್ಯ ಹಾಗೂ ಖರ್ಚು ಮಾಡುವ ಸಾಮಥ್ರ್ಯ ಎಲ್ಲವನ್ನೂ ಲೆಕ್ಕ ಹಾಕಲಿದೆ. ಕೆಲವರು ಅರ್ಜಿ ಹಾಕಿಕೊಂಡಿರೋಣ, ಟಿಕೆಟ್ ಸಿಕ್ಕದೇ ಇದ್ದರೂ ಮುಂದೆ ನಮ್ಮ ಸರ್ಕಾರ ಬಂದಾಗ ಬೇರೆ ಅಧಿಕಾರ ಪಡೆಂiÀಬಹುದು ಎಂಬ ಲೆಕ್ಕಾಚಾರವನ್ನೂ ಹಾಕಿದ್ದಾರೆ. ಅಂತಹವರನ್ನೂ ಗುರುತಿಸಿ ಫಿಲ್ಟರ್ ಮಾಡುವ ಕೆಲಸ ಮೊದಲು ನಡೆಯಲಿದೆ.
ಒಂದು ಮೂಲದ ಪ್ರಕಾರ ಸ್ಕ್ರೀನಿಂಗ್ ಕಮಿಟಿ ಸಭೆಗೆ ಹೋಗುವ ಮೊದಲು ಸಿದ್ದು ಮತ್ತು ಡಿಕೆ ಇಬ್ಬರೂ ಪರಸ್ಪರ ಚರ್ಚಿಸಿಯೇ ತೀರ್ಮಾನ ಮಾಡಲಿದ್ದಾರಂತೆ. ಮೊದಲ ಹೆಜ್ಜೆ ಇಟ್ಟಿರುವುದು ಡಿಕೆ ಎಂಬ ಮಾತು ಕಾಂಗ್ರೆಸ್‍ನಲ್ಲಿದೆ.

ಏನಾದರೂ ಮಾಡಿ 150 ಕ್ಷೇತ್ರಗಳಿಗಾದರೂ ಅಭ್ಯರ್ಥಿಗಳನ್ನು ಘೋಷಿಸಬೇಕು ಎಂದಿರೋ ಸಿದ್ದು ಮತ್ತು ಡಿಕೆ ಇಬ್ಬರೂ ಜನವರಿ ಅಂತ್ಯದ ಹೊತ್ತಿಗೆ ಅಥವಾ ಫೆಬ್ರವರಿಯೊಳಗೆ ಎಲ್ಲ ಯಾತ್ರೆ, ರ್ಯಾಲಿಗಳನ್ನೂ ಮುಗಿಸಲಿದ್ದಾರೆ. ಅದಾದ ನಂತರ ಸಮಾವೇಶಗಳನ್ನೆಲ್ಲ ಬಿಟ್ಟು ಮತದಾರರನ್ನು ನೇರವಾಗಿ ತಲುಪುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಸದ್ಯದ ಮಟ್ಟಿಗೆ ಎಲ್ಲವೂ ಕಾಂಗ್ರೆಸ್ಸಿಗರ ಪ್ಲಾನಿನ ಪ್ರಕಾರವೇ ಹೋಗುತ್ತಿದೆ. ಮುಂದೆ.. ಮೋದಿ ಮತ್ತು ಅಮಿತ್ ಶಾ ಬಂದಮೇಲೆ ತಂತ್ರಗಾರಿಕೆ ಬದಲಿಸುತ್ತಾರಾ..? ಬದಲಿಸುವ ಪರಿಸ್ಥಿತಿ ಉದ್ಭವವಾಗುತ್ತಾ..? ಕಾದು ನೋಡಬೇಕು.



