ಎಲೆಕ್ಷನ್ ಹತ್ತಿರವಾಗುತ್ತಿದೆ. ಇನ್ನೊಂದು ನಾಲ್ಕು ತಿಂಗಳಷ್ಟೇ. ಎಲೆಕ್ಷನ್ ಪ್ರಚಾರದ ಅಬ್ಬರ ಜೋರಾಗಲಿದೆ. ಸಿದ್ದರಾಮಯ್ಯ ಅವರಂತೂ ಡಿಕೆ ಶಿವಕುಮಾರ್ ಏನೇ ಎಚ್ಚರಿಕೆ ಕೊಟ್ಟರು ಕೆಲವು ಕಡೆ ಅಭ್ಯರ್ಥಿಗಳ ಘೋಷಣೆ ಮಾಡುವುದನ್ನೇನೂ ನಿಲ್ಲಿಸಿಲ್ಲ. ಕೊಪ್ಪಳ, ಬಾಗಲಕೋಟೆಯಂತೆಯೇ ಘೋಷಣೆ ಕಂಟಿನ್ಯೂ ಮಾಡಿದ್ದಾರೆ. ಹುನಗುಂದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೆಸರು ಘೋಷಿಸಿದ್ದಾರೆ. ಇದರ ನಡುವೆ ಕೆಲವರು ಈಗಾಗಲೇ ಕಾಂಗ್ರೆಸ್ ಸೇರಿದ್ದಾರೆ. ವೈಎಸ್‍ವಿ ದತ್ತಾ ಕಾಂಗ್ರೆಸ್ ಸೇರುವುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ವಿ.ಎಸ್.ಪಾಟೀಲ್ ಸೇರುತ್ತಿದ್ದಾರೆ. ಕೆಲವರು ಬೆಳಗಾವಿ ಸೆಷನ್ ಮುಗಿಯುವುದನ್ನು ಕಾಯುತ್ತಿದ್ದಾರೆ. ಇದೆಲ್ಲದರ ಮಧ್ಯೆಯೇ ಕಾಂಗ್ರೆಸ್ ಚುನಾವಣಾ ಕಮಿಟಿ ಘೋಷಣೆಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭಾ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ್ ಕಮಿಟಿಯಲ್ಲಿದ್ದಾರೆ.
ಸಮಿತಿಯಲ್ಲಿ ಲಿಂಗಾಯತರು 8 ಜನ. ಎಂಬಿ ಪಾಟೀಲ್, ಎಚ್.ಕೆ.ಪಾಟೀಲ್. ಅಲ್ಲಂ ವೀರಭದ್ರಪ್ಪ, ಈಶ್ವರ್ ಖಂಡ್ರೆ, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ, ಶರಣಪ್ಪ ಸುಣಗಾರ್ ಹಾಗೂ ಶಾಮನೂರು ಶಿವಶಂಕರಪ್ಪ ಇದ್ದಾರೆ.
ಒಕ್ಕಲಿಗರಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್, ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ, ಜೆ.ಸಿ.ಚಂದ್ರಶೇಖರ್ ಹಾಗೂ ಕೆ.ಗೋವಿಂದ ರಾಜ್ ಇದ್ದಾರೆ. ಒಕ್ಕಲಿಗರ ಪ್ರಾತಿನಿಧ್ಯ 6.
ಬ್ರಾಹ್ಮಣ ಸಮುದಾಯದಿಂದ ಇಬ್ಬರು ದಿನೇಶ್ ಗುಂಡೂರಾವ್ ಆರ್.ವಿ.ದೇಶಪಾಂಡೆ ಇದ್ದರೆ, ಬಲಿಜಿಗ ಸಮುದಾಯದಿಂದಲೂ ಸೀತಾರಾಮ್ ಹಾಗೂ ಪದ್ಮಾವತಿ ಇದ್ದಾರೆ. ಮಾರ್ಗರೇಟ್ ಆಳ್ವ, ಕೆ.ಜೆ.ಜಾರ್ಜ್ ಕ್ರೈಸ್ತರ ಪ್ರತಿನಿಧಿಗಳಾಗಿದ್ದರೆ, ಬಿ.ಕೆ.ಹರಿಪ್ರಸಾದ್ ಹಾಗೂ ವಿನಯ್ ಕುಮಾರ್ ಸೊರಕೆ ಈಡಿಗರು. ಸವಿತಾ ಸಮಾಜದ ವೀರಪ್ಪ ಮೊಯ್ಲಿ ಮರಾಠ ಸಮುದಾಯದ ಬೋಸರಾಜು ಅವರಿಗೂ ಸ್ಥಾನಮಾನ ಸಿಕ್ಕಿದೆ.
ಸಲೀಂ ಅಹ್ಮದ್, ರೆಹಮಾನ್ ಖಾನ್, ಯುಟಿ ಖಾದರ್ ಹಾಗೂ ನಾಜಿರ್ ಹುಸೇನ್ ಮುಸ್ಲಿಂ ಸಮುದಾಯದ ಸದಸ್ಯರಾಗಿದ್ದಾರೆ. ಪರಿಶಿಷ್ಟ ಜಾತಿಯಿಂದ ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ್, ಆರ್.ಧ್ರುವ ನಾರಾಯಣ್, ಎಚ್‍ಸಿ ಮಹದೇವಪ್ಪ, ಎಲ್. ಹನುಮಂತಯ್ಯ, ಶಿವರಾಜ್ ತಂಗಡಗಿ ಸೇರಿ ಒಟ್ಟು 6 ಸದಸ್ಯರಿದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ವಿ.ಎಸ್. ಉಗ್ರಪ್ಪ ಎಸ್‍ಟಿಗೆ ಸೇರಿದವರು.
ಆದರೆ ಕುರುಬ ಸಮದಾಯದಿಂದ ಇರುವ ಏಕೈಕ ನಾಯಕ ಸಿದ್ದರಾಮಯ್ಯ. ರಾಜ್ಯದ 3ನೇ ಅತೀ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ಒಂದೇ ಒಂದು ಸ್ಥಾನವಾ ಎಂಬುದು ಕುರುಬ ಸಮುದಾಯದವರ ಪ್ರಶ್ನೆಯೂ ಹೌದು. ಆದರೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೊದಲ ಕೆಲವು ವರ್ಷ ಬೇರಾವುದೇ ಕುರುಬ ಲೀಡರ್ ಕೂಡಾ ಮಂತ್ರಿಯಾಗಿರಲಿಲ್ಲ. ಅದನ್ನು ನಿಭಾಯಿಸಿದಂತೆಯೇ ಎಲೆಕ್ಷನ್ ಕಮಿಟಿ ಸದಸ್ಯರ ಸಿಟ್ಟನ್ನೂ ಸಿದ್ದು ನಿಭಾಯಿಸುತ್ತಾರೆ ಎನ್ನುವ ವಿಶ್ವಾಸ ಡಿಕೆ ಶಿವಕುಮಾರ್ ಅವರದ್ದು. ಆದರೆ ಕುರುಬರಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಈಡಿಗ, ಬಲಿಜಿಗ ಸಮುದಾಯದವರಿಗೇ ಕಮಿಟಿಯಲ್ಲಿ ಎರಡು ಸ್ಥಾನ ಕೊಟ್ಟು, ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣರಿಗೂ ಎರಡು ಸ್ಥಾನ ಕೊಟ್ಟು ಕುರುಬರಿಗೆ ಮಾತ್ರ ಸಿದ್ದರಾಮಯ್ಯ ಒಬ್ಬರಿಗೇ ಏಕೆ ಎಂಬ ಪ್ರಶ್ನೆ ಆಪ್ತ ಬಳಗದವರದ್ದು. ಪರಿಹಾರ ಸಿದ್ದರಾಮಯ್ಯ ಅವರಲ್ಲಿಯೇ ಇದೆ.



