ಸಿಎಂ ಬೊಮ್ಮಾಯಿ ಮೋದಿಯೆದರು ನಾಯಿಮರಿಯಂತೆ ಗಡಗಡ ನಡುಗುತ್ತಾ ನಿಲ್ಲುತ್ತಾರೆ. ಪ್ರಧಾನಿ ಬಳಿ ಮಾತನಾಡೋಕೆ ಧೈರ್ಯವಿಲ್ಲ. ಹೀಗೆ ಹೇಳಿದ್ದು ಬೇರಾರೂ ಅಲ್ಲ, ಖುದ್ದು ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.



ರಾಜ್ಯದ ಸಿಎಂಗೆ ಮಾಡಿದ ಅವಮಾನ ಎನ್ನುವುದು ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಅರುಣ್ ಸಿಂಗ್, ಶೆಟ್ಟರ್, ಸಿಟಿ ರವಿ, ಆನೇಕಲ್ ನಾರಾಯಣ ಸ್ವಾಮಿ, ವಿ.ಸೋಮಣ್ಣ, ಬಿ.ಶ್ರೀರಾಮುಲು, ಸಿಸಿ ಪಾಟೀಲ್, ಮುರುಗೇಶ್ ನಿರಾಣಿ, ಸುಧಾಕರ್, ಪ್ರಭು ಚವ್ಹಾಣ್, ಬಿಸಿ ಪಾಟೀಲ್,ಎಸ್.ಟಿ. ಸೋಮಶೇಖರ್.. ಒಬ್ಬರಾ ಇಬ್ಬರಾ.. ಎಲ್ಲರೂ ಈ ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮುಗಿಬಿದಿದ್ದಾರೆ. ಇಂಟ್ರೆಸ್ಟಿಂಗ್ ಎನಿಸುತ್ತಿರುವುದು ಡಿಕೆಶಿ ಹೇಳಿಕೆಯೇ. ಸಿಎಂ ಬೊಮ್ಮಾಯಿ ಮಾತ್ರ ಹೌದು, ನಾನು ನಾಯಿಯೇ. ನಿಯತ್ತಿನ ನಾಯಿ ಎಂದಿದ್ದಾರೆ.

ಸಿದ್ದು ಮಾತ್ರ ಎಂದಿನಂತೆ ತಮ್ಮ ಮಾತು ಸೃಷ್ಟಿಸಿದ ಕೋಲಾಹಲ ರಕ್ಷಣೆಗೆ ಮೊರೆ ಹೋಗಿರುವುದು ಆಡು ಮಾತು, ದೇಸಿ ಮಾತುಗಳ ಅಸ್ತ್ರವನ್ನೇ. ಹಳ್ಳಿ ಸೊಗಡಿನ ಭಾಷೆಯಲ್ಲಿ ನಾನು ಹಾಗೆ ಹೇಳಿದ್ದೇನೆ. ಸಿಎಂ ಬೊಮ್ಮಾಯಿಯವರಿಗೆ ಅವಮಾನ ಮಾಡುವ ಉದ್ದೇಶವಿಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಕ್ಷಮೆಯನ್ನೇನೂ ಕೇಳಿಲ್ಲ.
ಸಿದ್ದರಾಮಯ್ಯಗೆ ಇದು ಹೊಸದಲ್ಲ. ಅವರು ಪ್ರತಿಪಕ್ಷಗಳಲ್ಲಿರುವ ಬಹುತೇಕ ನಾಯಕರನ್ನು ಮಾತನಾಡಿಸುವುದು ಏಕವಚನದಲ್ಲಿಯೇ. ಈಶ್ವರಪ್ಪ, ಸುಧಾಕರ್, ವಿಶ್ವನಾಥ್, ಕುಮಾರಸ್ವಾಮಿ..ಸೇರಿದಂತೆ ಹಲವರನ್ನು ಬಾಯಿಗೆ ಬಂದಂತೆ ಟೀಕಿಸುವುದು. ಅದು ವಿಪರೀತಕ್ಕೆ ಹೋದಾಗ ಹಳ್ಳಿ ಸೊಗಡಿನ ಭಾಷೆಯ ಮೊರೆ ಹೋಗುವುದು ಸಿದ್ದರಾಮಯ್ಯ ಪದ್ಧತಿಯೂ ಹೌದು. ಸಂಪ್ರದಾಯವೂ ಹೌದು. ಅದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಆದರೆ ಅವರದ್ದೇ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ಹಳ್ಳಿ ಸೊಗಡು ಬರುವುದಿಲ್ಲ ಎನ್ನುವ ಮಾತು ಬೇರೆ. ಆದರೆ ಇಂತಹ ಹೇಳಿಕೆಗಳಿಂದ ಲಾಸ್ ಆಗುವುದು ಅವರದ್ದೇ ಪಕ್ಷಕ್ಕೆ.




ಇವರೆಲ್ಲರು ಅಟ್ಯಾಕ್ ಮಾಡಿದ್ದು ಮೀಡಿಯಾಗಳಿಗೆ ಹೆಡ್ ಲೈನ್ ಆಯಿತೇ ಹೊರತು, ವೋಟ್ ಆಗಲಿಲ್ಲ. ಅಷ್ಟೇ ಏಕೆ, ಮೋದಿಯನ್ನು ಸಾವಿನ ದಲ್ಲಾಳಿ ಎಂದು ಸೋನಿಯಾ ಹೇಳಿದಾಗ, ರಕ್ತದ ವ್ಯಾಪಾರಿ ಎಂದಾಗ, ಟೀ ಮಾರೋವ್ರು ದೇಶ ಆಳೋಕ್ ಆಗುತ್ತಾ ಎಂದು ಮಣಿ ಶಂಕರ್ ಅಯ್ಯರ್ ಹೇಳಿದಾಗ, ಮೋದಿಯನ್ನು ಚೌಕೀದಾರ್ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದಾಗ ಕಾಂಗ್ರೆಸ್ ಹೊಡೆತ ತಿಂದಿದೆ. ಬಿಜೆಪಿಯೂ ಅಷ್ಟೆ, ಸೋನಿಯಾ ಗಾಂಧಿಯನ್ನು ವಿಧವೆ ಎಂದು ಹಂಗಿಸಿದಾಗ ಹೊಡೆತ ತಿಂದಿದೆ. ನಾಯಕರನ್ನು ಅವಮಾನಿಸಿದ ಕಾರಣಕ್ಕೆ ಅತೀ ಹೆಚ್ಚು ಪೆಟ್ಟು ತಿಂದಿರುವುದು ಕಾಂಗ್ರೆಸ್. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸೀಟು ಕಳೆದುಕೊಂಡು ಪರಿತಪಿಸುತ್ತಿರುವುದಕ್ಕೆ ಕಾರಣ ನಾಯಕರನ್ನು ಅವಮಾನಿಸುವ ಮಾತುಗಳು.
ಸಿದ್ದರಾಮಯ್ಯನವರೇ ಹೇಳುವಂತೆ ಅವರ ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ. ಹೀಗಿರುವಾಗ ವಿಷಯಗಳೇ ದಂಡಿಯಾಗಿರುವಾಗ ಪರ್ಸನಲ್ ಅಟ್ಯಾಕ್ ಏಕೆ? ಅರ್ಥವಾಗುವುದಿಲ್ಲ. ಮಾತುಗಳು ಮಜಾ ಕೊಡಬಹುದು, ವೋಟು ಕೊಡುವುದಿಲ್ಲ ಎಂಬ ಸತ್ಯ ಸಿದ್ದರಾಮಯ್ಯನವರಿಗೂ ಗೊತ್ತು. ಪದೇ ಪದೇ ಎಡವುತ್ತಿದ್ದಾರೆ.



