ಸತತ 7ನೇ ಬಾರಿಗೆ ಗೆದ್ದಿರುವ ಬಿಜೆಪಿ 156 ಸೀಟು ಗೆದ್ದಿದೆ. ಕಳೆದ ಬಾರಿಗೆ 57 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದಿದೆ. ಕಾಂಗ್ರೆಸ್ 17, ಆಪ್ 5 ಹಾಗೂ ಇತರರು 4 ಸ್ಥಾನ ಗೆದ್ದಿದ್ದಾರೆ. ಈ ರಿಸಲ್ಟ್‍ನ್ನು ಎಲ್ಲೆಡೆ ನೋಡುತ್ತಿರುವಾಗಲೇ ಇಂಟ್ರೆಸ್ಟಿಂಗ್ ಎನಿಸಿದ್ದು ನಂಬರ್ ಗೇಮ್. ಎಲೆಕ್ಷನ್ ಎಂದರೇನೇ ನಂಬರುಗಳ ಆಟ. ಈ ನಂಬರುಗಳಲ್ಲಿಯೂ ಇರುವ ವಿಶೇಷತೆಗಳಲ್ಲೇ ವಿಶೇಷವಾದ ಚೋಟಿ ಚೋಟಿ ಸ್ಟೋರಿಗಳಿವು. ಸಖತ್ ಇಂಟ್ರೆಸ್ಟಿಂಗ್.

ನಂ.1 : ಟೋಟಲ್ ಎಲೆಕ್ಷನ್‍ನಲ್ಲಿ ಬಿಜೆಪಿಗೆ ಒಂದು ಮೈನಸ್. ಒಂದು ಪ್ಲಸ್. ಹಿಮಾಚಲ ಕೈತಪ್ಪಿದರೆ ಗುಜರಾತ್‍ನಲ್ಲಿ ಪಕ್ಷವೇ ಒಂದರ್ಥದಲ್ಲಿ ಹೇಳಬೇಕೆಂದರೆ ಡಿಸ್ ಮಿಸ್ ಆಯ್ತು.
ನಂ.12 : ಗುಜರಾತ್‍ನಲ್ಲಿ ಆಪ್ ತೆಗೆದುಕೊಂಡ ಮತಗಳ ಪ್ರಮಾಣ ಶೇ.12. ಗೆದ್ದಿದ್ದು ಕೇವಲ 5 ಸ್ಥಾನ. ಹಿಮಾಚಲದಲ್ಲಿ ಶೇ.1.1.ರಷ್ಟು ಮತ. ಗೆಲುವಿಲ್ಲ. ಆದರೆ ಸೋಲಿನಲ್ಲೂ ದಾಖಲೆ ಬರೆದ ಇತಿಹಾಸ ಬರೆದ ಆಮ್ ಆದ್ಮಿ ಹೊಸ ರಾಷ್ಟ್ರೀಯ ಪಕ್ಷದ ಮಾನ್ಯತೆ ಗಳಿಸಿಕೊಂಡಿದೆ.
31 ರ್ಯಾಲಿ : ಪ್ರಧಾನಿ ನರೇಂದ್ರ ಮೋದಿ ಗುಜರಾತಿನಲ್ಲಿ ದಾಖಲೆಯ 31 ರ್ಯಾಲಿ ನಡೆಸಿದ್ದರು. 3 ರೋಡ್ ಶೋ ನಡೆಸಿದ್ದರು. ಬ್ರಾಂಡ್ ಮೋದಿ ಹೆಸರಲ್ಲಿ ನಡೆದ 51 ಕಿ.ಮೀ. ರ್ಯಾಲಿ, 8 ಕಿ.ಮೀ.ರ್ಯಾಲಿಗಳು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದವು.
ನರೇಂದ್ರನ ದಾಖಲೆ ಬ್ರೇಕ್ ಮಾಡಿದ ಭೂಪೇಂದ್ರ : 2002ರಲ್ಲಿ ನಡೆದ ಎಲೆಕ್ಷನ್‍ನಲ್ಲಿ ಬಿಜೆಪಿ 127 ಸ್ಥಾನ ಗೆದ್ದಿತ್ತು. ತಮ್ಮ ಈ ದಾಖಲೆಯನ್ನು ನೀವು ಬ್ರೇಕ್ ಮಾಡಬೇಕು ಎಂದು ಟಾಸ್ಕ್ ಕೊಟ್ಟಿದ್ದರು ನರೇಂದ್ರ ಮೋದಿ. ಮೋದಿಯ ದಾಖಲೆಯನ್ನಷ್ಟೇ ಅಲ್ಲ, ಹೊಸ ಇತಿಹಾಸವನ್ನೇ ಬರೆದರು ಭೂಪೇಂದ್ರ ಪಟೇಲ್. 156 ಸ್ಥಾನ ಗೆದ್ದರು.
ಹೊಸ ಇತಿಹಾಸ : 1985ರಲ್ಲಿ ಮಾಧವಸಿನ್ಹಾ ಸೋಳಂಕಿ ನೇತೃತ್ವದಲ್ಲಿ ಕಾಂಗ್ರೆಸ್ 149 ಸೀಟು ಗೆದ್ದಿತ್ತು.. ಅದೇ ದಾಖಲೆ. ಅದನ್ನು ಮೀರಿಸಿ ಗೆದ್ದ ಬಿಜೆಪಿ 156 ಸೀಟು ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಆದರೆ ಅತೀ ಹೆಚ್ಚು ವೋಟ್ ಶೇರ್ ದಾಖಲೆಯನ್ನು ಬ್ರೇಕ್ ಮಾಡಲು ಆಗಿಲ್ಲ. ಸೋಳಂಕಿ ಗೆದ್ದಾಗ ಕಾಂಗ್ರೆಸ್ ಶೇ.55ಕ್ಕೂ ಹೆಚ್ಚು ವೊಟ್ ಶೇರ್ ಪಡೆದಿತ್ತು. ಆದರೆ ಬಿಜೆಪಿ ಹೆಚ್ಚು ಸ್ಥಾನ ಗೆದ್ದರೂ ಶೇ.53 ವೋಟ್ ಶೇರ್ ಮಾತ್ರ. ಆದರೆ ಈ ಪ್ರಮಾಣದ ವೋಟ್ ಶೇರ್ ಇತ್ತೀಚಿನ ವರ್ಷಗಳಲ್ಲಿ ದಾಖಲೆಯೇ ಸರಿ.
ವೋಟ್ ಶೇರ್ : 1985ರಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಗೆದ್ದ ಚುನಾವಣೆ. ಆ ವರ್ಷ ಬಿಜೆಪಿ/ಜನಸಂಘ ಗಳಿಸಿದ್ದುದು 9 ಸೀಟು. ಶೇಕಡಾವಾಡು ಮತ ಪ್ರಮಾಣ ಶೇ.15. ಅದೇ ಕೊನೆ. ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಗ್ರಾಫ್ ಇಳಿಯುತ್ತಲೇ ಹೋಯ್ತು. ವೋಟ್ ಶೇರ್ ಪ್ರಮಾಣವೂ ಹಂತ ಹಂತವಾಗಿ ಕುಸಿಯಿತು. 1995ರಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ಇಂದಿನವರೆಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರಲು ಸಾಧ್ಯವಾಗಿಲ್ಲ.
ಸೋತಿದ್ದು ಒಬ್ಬರೇ ಮಿನಿಸ್ಟರ್ : ಅಧಿಕವೃಷ್ಟಿಯ ಕಾಲದಲ್ಲೂ ಬರಗಾಲವೆಂದರೆ ಈತನದ್ದೇ ಇರಬೇಕು. 20 ಮಂತ್ರಿಗಳು ಎಲೆಕ್ಷನ್ ಕಣದಲ್ಲಿದ್ದರು. 19 ಮಂದಿ ಗೆದ್ದರು. ಕಂಕ್ರೇಜ್ ಅನ್ನೋ ಕ್ಷೇತ್ರದಲ್ಲಿ ನಿಂತಿದ್ದ ಕ್ರಿತ್ಸಿನ್ಹ ವಘೇಲಾ (ಶಿಕ್ಷಣ ಮಂತ್ರಿ) ಕಾಂಗ್ರೆಸ್‍ನ ಅಮೃತ್ ರಾಜ್ ಠಾಕೂರ್ ಎಂಬುವವರ ವಿರುದ್ಧ 5000+ ಮತಗಳ ಅಂತರದಲ್ಲಿ ಸೋತರು.

ನಗರಗಳಲ್ಲಿ ಬಿಜೆಪಿಯೇ ಬಾಸು : ಈ ಚುನಾವಣೆಯಲ್ಲಿ ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಕಮಾಲ್ ಮಾಡಲಿದೆ. ಬಿಜೆಪಿಯ ವೊಟು ಕಿತ್ತುಕೊಳ್ಳಲಲಿದೆ ಎಂದು ಊಹಿಸಲಾಗಿತ್ತು. ಆದರೆ, ಹಾಗೇನೂ ಆಗಿಲ್ಲ. ಸೂರತ್‍ನ 10ರಲ್ಲಿ 10, ಅಹಮದಾಬಾದ್ ಮತ್ತು ಗಾಂಧಿನಗರದ 18ರಲ್ಲಿ 16 (ಉಳಿದ ಎರಡು ಕಾಂಗ್ರೆಸ್), ರಾಜ್‍ಕೋಟ್‍ನ ಎಲ್ಲ ನಾಲ್ಕು, ಜಾಮ್‍ನಗರ್‍ನ ಎಲ್ಲ ಮೂರು, ವಡೋದರಾದಲ್ಲಿ 6ರಲ್ಲಿ 5 (ಉಳಿದ ಒಂದು ಪಕ್ಷೇತರ) ಭಾವ್‍ನಗರ್‍ನ ಎಲ್ಲ 3.. ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿದೆ. ಗ್ರಾಮೀಣ ಪ್ರದೇಶದಲ್ಲಿ 92ರಲ್ಲಿ 75, ಗ್ರಾಮೀಣ ಪಟ್ಟಣ ಪ್ರದೇಶಗಳಲ್ಲಿ 45 ಕ್ಷೇತ್ರಗಳಲ್ಲಿ 39, ನಗರ ಪ್ರದೇಶಗಳಲ್ಲಿ 42 ಸೀಟುಗಳಲ್ಲಿ 42 ಸ್ಥಾನಗಳನ್ನು ಗೆದ್ದಿದೆ. ವೋಟ್ ಶೇರ್ ಇಡೀ ರಾಜ್ಯದಲ್ಲಿ ಶೇ.53ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ವೋಟ್ ಶೇರ್ ಶೇ.62.
ಪಾಟೀದಾರ್ 52 : 2017ರ ಚುನಾವಣೆಗಳಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟಿದ್ದದ್ದು ಪಾಟೀದಾರ್ ಪ್ರಾಬಲ್ಯದ 52 ಕ್ಷೇತ್ರಗಳು. ಪಾಟೀದಾರ್ ಪ್ರಾಬಲ್ಯದ 52ರಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿತ್ತು. ಈ ಬಾರಿ 52ರಲ್ಲಿ 44 ಗೆದ್ದಿದೆ. ಆಮ್ ಆದ್ಮಿ ಗೆದ್ದ 4 ಕ್ಷೇತ್ರಗಳು ಪಾಟೀದಾರ್ ಕ್ಷೇತ್ರಗಳೇ. ಪಾಟೀದಾರ್‍ಗಳು ಗುಜರಾತ್ ಜನಸಂಖ್ಯೆಯ ಶೇ.14ರಷ್ಟಿದ್ದರೂ 182 ಕ್ಷೇತ್ರಗಳಲ್ಲಿ ಶೇ.30ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ರಿಸಲ್ಟ್ ನಿರ್ಧರಿಸುವುದು ಪಾಟೀದಾರ್ ಸಮುದಾಯದವರೇ.
ಆಮ್ ಆದ್ಮಿಯ ಸಿಎಂ ಅಭ್ಯರ್ಥಿ ಸೋಲು : ಆಪ್ ಗುಜರಾತಿನಲ್ಲಿ ಸೋತಿದ್ದಷ್ಟೇ ಅಲ್ಲ, ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದ ಅಭ್ಯರ್ಥಿಯೇ ಸೋತು ಹೋದರು. ಕತಾರ್‍ಗಂ ಕ್ಷೇತ್ರದಲ್ಲಿ ಇಸುದಾನ್ ಗದ್ವಿ 18,745 ಮತಗಳ ಅಂತರದಿಂದ ಸೋತರು.
15 ಶಾಸಕಿಯರು : ಈ ಬಾರಿ ಗೆದ್ದ ಮಹಿಳಾ ಎಂಎಲ್‍ಎಗಳ ಸಂಖ್ಯೆ 15. ಕಳೆದ ಬಾರಿಗಿಂತ 2 ಹೆಚ್ಚು. ಒಟ್ಟು 36 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಮಹಿಳೆಯರಿಗೆ ಟಿಕೆಟ್ ಕೊಟ್ಟಿತ್ತು. ಗೆದ್ದವರು 14 ಜನ.
ಸಮಾಜವಾದಿ ಪಕ್ಷಕ್ಕೂ ಒಂದು ಸೀಟು : ಗುಜರಾತಿನಲ್ಲಿ ಬಿಜೆಪಿ ಅಲೆಯ ನಡುವೆ ಸ್ಥಳೀಯವಲ್ಲದ ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ಗೆದ್ದಿದ್ದಾರೆ. ಕಂಧಾಲ್ ಜಡೇಜ, ಕುತಿಯಾನ ಕ್ಷೇತ್ರದಿಂದ ಗೆದ್ದಿದ್ದಾರೆ.
ಏಕೈಕ ಮುಸ್ಲಿಂ ಶಾಸಕ : ಗುಜರಾತಿನಲ್ಲಿ ಈ ಚುನಾವಣೆಯಲ್ಲಿ ಕಣಕ್ಕಿಳಿದಿದ್ದವರು 230 ಮುಸ್ಲಿಂ ಕ್ಯಾಂಡಿಡೇಟ್ಸ್. ಒಟ್ಟು 73 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿದ್ದರು. ಗೆದ್ದಿದ್ದು ಒಬ್ಬರೇ.
ಕಾಂಗ್ರೆಸ್ ಒಟ್ಟಾರೆ 6 ಮುಸ್ಲಿಮರಿಗೆ ಟಿಕೆಟ್ ಕೊಟ್ಟಿತ್ತು. ಖಡೇವಾಲ ವದೇದ್ ಮಾತ್ರ ಗೆದ್ದರು. ಕಳೆದ ಬಾರಿ ಗೆದ್ದಿದ್ದ ಇಬ್ಬರು ಕಾಂಗ್ರೆಸ್‍ನ ಮುಸ್ಲಿಂ ಶಾಸಕರು ಶೇ.46ರಷ್ಟು ಮುಸ್ಲಿಮ್ ಬಾಹುಳ್ಯವಿದ್ದ ಕ್ಷೇತ್ರಗಳಲ್ಲಿ ಸೋತರು. ಆಮ್ ಆದ್ಮಿ ಮೂವರಿಗೆ ಹಾಗೂ ಬಿಎಸ್‍ಪಿ ಒಬ್ಬರಿಗೆ ಟಿಕೆಟ್ ಕೊಟ್ಟಿತ್ತು. ಫೈನಲಿ ಗೆದ್ದವರು ಒಬ್ಬರೇ. ಓವೈಸಿ ಪಾರ್ಟಿ 14 ಕ್ಷೇತ್ರಗಳಲ್ಲಿ ಕ್ಯಾಂಡಿಡೇಟ್ ಹಾಕಿತ್ತು. ಯಾವ ಅಭ್ಯರ್ಥಿಯೂ ಶೇ 0.3ಕ್ಕಿಂತ ಹೆಚ್ಚು ವೋಟ್ ಪಡೆಯಲಿಲ್ಲ.

ಸತತ 7 : ಬಿಜೆಪಿ ಗುಜರಾತಿನಲ್ಲಿ ಸತತ 7ನೇ ಬಾರಿಗೆ ಗೆದ್ದಿದೆ. ಇದು ದಾಖಲೆಯೇ. ಆದರೆ ನಂ.1 ಸ್ಥಾನವೇನೂ ಅಲ್ಲ. ಏಕೆಂದರೆ ಪ.ಬಂಗಾಳದಲ್ಲಿ ಸಿಪಿಎಂ 33.9 ವರ್ಷ ಸತತವಾಗಿ ಅಧಿಕಾರದಲ್ಲಿತ್ತು. ಜ್ಯೋತಿಬಸು 23.4 ವರ್ಷ ಅಧಿಕಾರದಲ್ಲಿದ್ದು. ಈಗ ಬಿಜೆಪಿ 7ನೇ ಬಾರಿಗೆ ಗೆದ್ದಿದ್ದರೂ, ಸಿಪಿಎಂ ದಾಖಲೆ ಮುರಿಯಬೇಕು ಎಂದರೆ 8ನೇ ಬಾರಿಯೂ ಗೆಲ್ಲಬೇಕು.
ನಂಬರುಗಳ ಆಟ ಜೋರಾಗಿದೆ. ಒಂದೊಂದು ನಂಬರ್ ಕೂಡಾ ಒಂದೊಂದು ಕಥೆ ಹೇಳುತ್ತವೆ.



