ದೇಶದಲ್ಲಿ ಆರ್ಥಿಕತೆ ಅದೋಗತಿಯಲ್ಲಿರುವ ಪ್ರವಾಹ ಪರಿಸ್ಥಿತಿಯಲ್ಲಿ ಸಂತ್ರಸ್ತರಿಗೆ ಊಟ ಕೊಡುವುದಕ್ಕೂ ಪರದಾಡುತ್ತಿರುವ, ದೇಶಕ್ಕೆ ದೇಶವೇ ನೆರವಿಗಾಗಿ ಅಂಗಲಾಚುತ್ತಿರುವ, ಕತ್ತೆ, ಎಮ್ಮೆಗಳನ್ನು ಮಾರಿ ಬದುಕುತ್ತಿರುವ ಪಾಕಿಸ್ತಾನಕ್ಕೆ 99ನೇ ಸ್ಥಾನ. ಬಾಂಗ್ಲಾದೇಶದಂತಾ ಬಾಂಗ್ಲಾದೇಶ ಕೂಡಾ 84ನೇ ಸ್ಥಾನ. ಭಾರತದ ನೆರವಿಲ್ಲದೆ ಹೋಗಿದ್ದರೆ ಬದುಕು ನರಕವಾಗುತ್ತಿತ್ತು ಎನ್ನುತ್ತಿರುವ ನೇಪಾಳಕ್ಕೆ 81ನೇ ಸ್ಥಾನ. ದೇಶಕ್ಕೆ ದೇಶವೇ ಭಿಕಾರಿಯಾಗಿ, ದಿವಾಳಿಯಾಗಿರುವ, ಔಷಧಕ್ಕೂ ಬೇಡುವ ಪರಿಸ್ಥಿತಿಯಿರುವ ಶ್ರೀಲಂಕಾಕ್ಕೆ 64ನೇ ಸ್ಥಾನ. ಈ ಎಲ್ಲ ದೇಶಗಳ ಆರ್ಥಿಕತೆಗೂ, ಸಂಕಷ್ಟಗಳಿಗೂ ನೆರೆಹೊರೆಯ ರಾಷ್ಟ್ರ ಎಂಬಂತೆ ಸ್ಪಂದಿಸಿರುವ, ಅಷ್ಟೂ ದೇಶಗಳಿಗೆ ನೆರವು ನೀಡಿರುವ ಭಾರತಕ್ಕೆ 107ನೇ ಸ್ಥಾನ.
ಹೌದು, 2022 ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ 121 ದೇಶಗಳ ಪೈಕಿ ಭಾರತ 107 ನೇ ಸ್ಥಾನದಲ್ಲಿದೆ. ಇದೇ ಲಿಸ್ಟಿನಲ್ಲಿ ಪಾಕ್, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮೇಲಿನ ಸ್ಥಾನದಲ್ಲಿವೆ. ಕಳೆದ ಬಾರಿ 101ನೇ ಸ್ಥಾನ ಕೊಟ್ಟಿದ್ದರು. ಅದಕ್ಕೂ ಮುನ್ನ 94ನೇ ಸ್ಥಾನ ಕೊಟ್ಟಿದ್ದರು. ಈ ಬಾರಿ 107ನೇ ಸ್ಥಾನ ಕೊಟ್ಟಿದ್ದಾರೆ. ಆ ಲೆಕ್ಕದಲ್ಲಿ ನೋಡಿದರೆ ಇದು ಅದ್ಧೂರಿ ಸಾಧನೆ. ಆದರೆ.. ಗೊಂದಲವಾಗುತ್ತಿರುವುದು ಭಾರತಕ್ಕಿಂತ ಭಾರತದ ನೆರವಿಲ್ಲದೆ ಬದುಕಲಾರವು ಎಂಬ ರಾಷ್ಟ್ರಗಳ ಸ್ಥಾನವೇ ಹೆಚ್ಚು ಇರೋಕೆ ಹೇಗೆ ಸಾಧ್ಯ? ಅದೇ ಗೊಂದಲ ಮೂಡಿಸುತ್ತಿರುವುದು.

ಭಾರತದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ.19.3 ರಷ್ಟಿದ್ದು, ಇದು ಜಗತ್ತಿನಲ್ಲೇ ಅತಿ ಹೆಚ್ಚಿನ ಅಪೌಷ್ಟಿಕತೆಯ ಪ್ರಮಾಣವಂತೆ. ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಹೆಚ್ಐ) ನಲ್ಲಿ ಭಾರತಕ್ಕೆ ಶೇ.29.1 ಸ್ಕೋರ್ ನೀಡಲಾಗಿದ್ದು, ಇದು ಅತ್ಯಂತ ಗಂಭೀರವಾದ ಮಟ್ಟ ಎಂದು ಗುರುತಿಸಲಾಗಿದೆ.
ಅರ್ಥವಾಗದ ಸಂಗತಿಯೆಂದರೆ ಶ್ರೀಲಂಕಾದಲ್ಲಿ ಆಹಾರ, ಪೆಟ್ರೋಲ್, ವಿದೇಶಿವಿನಿಮಯ, ಆಸ್ಪತ್ರೆಗಳಲ್ಲಿ ಔಷಧ ಸಿಗುತ್ತಿಲ್ಲ. ಗ್ಯಾಸ್ ಸಿಲಿಂಡರ್ ಶ್ರೀಲಂಕನ್ ರೂಪಾಯಿಗಳಲ್ಲಿಯೇ 4500 ರೂ. ಆದರೂ ಭಾರತಕ್ಕಿಂತ ಹಸಿವಿನ ಸೂಚ್ಯಂಕದಲ್ಲಿ ಮೇಲಿದೆ. ಅದೂ ಶ್ರೀಲಂಕಾ ನಂ.64. ಭಾರತದ ನಂಬರ್ 107. ಪರಿಸ್ಥಿತಿ ಹೀಗಿರುವಾಗ ಅದ್ಯಾವ ಲೆಕ್ಕದಲ್ಲಿ ಇಂತಹ ಸೂಚ್ಯಂಕ ಪ್ರಕಟಿಸಿ ಘೋಷಿಸಿಬಿಡ್ತಾರೆ. ಕಾಮನ್ ಸೆನ್ಸ್ ಕೊರತೆ ಇದ್ದವರೆಲ್ಲ ಪಂಡಿತರಾದರೆ ಹೀಗಾಗುತ್ತಾ? ಇಷ್ಟಕ್ಕೂ ಇವರು ಯಾವ ಲೆಕ್ಕದಲ್ಲಿ ಇವುಗಳನ್ನು ಡಿಸೈಡ್ ಮಾಡ್ತಾರೆ. ಯಾವ ಅಳತೆಗೋಲಿನಲ್ಲಿ, ಯಾವ ಮಾನದಂಡ ಆಧರಿಸಿ ತೀರ್ಮಾನ ಮಾಡ್ತಾರೆ.


ಹಾಗಾದರೆ ಇಂತಹ ಎಡವಟ್ಟು ಮುಠ್ಠಾಳ ನಿರ್ಧಾರಗಳು ಸಮೀಕ್ಷೆಗಳು ಹೊರಬೀಳೋದ್ಯಾಕೆ.. ಎಂದರೆ.. ಆ ಸಮೀಕ್ಷೆ ಮಾಡಿದವರು ಇಡೀ ದೇಶವನ್ನ ಒಂದೇ ರೀತಿ ಪರಿಗಣಿಸ್ತಾರೆ. ನಮ್ಮ ದೇಶ ಎಷ್ಟು ವೈವಿಧ್ಯವಾಗಿದೆ ಎಂದರೆ ಒಂದು ರಾಜ್ಯದಂತೆ ಇನ್ನೊಂದು ರಾಜ್ಯ ಇಲ್ಲ. ಕರ್ನಾಟಕದ ಲೆಕ್ಕಾಚಾರ ತಮಿಳುನಾಡಿಗೆ ಅನ್ವಯವಾಗಲ್ಲ. ಆಂಧ್ರದ ಲೆಕ್ಕ ಮಹಾರಾಷ್ಟ್ರಕ್ಕೆ ಹೊಂದಿಕೆಯಾಗಲ್ಲ. ಉತ್ತರ ಭಾರತದಲ್ಲೆ ಉತ್ತರ ಪ್ರದೇಶದ ಲೆಕ್ಕಾಚಾರ ಬೇರೆ. ಗುಜರಾತ್ ಬೇರೆ. ಪ.ಬಂಗಾಳ ಬೇರೆ. ಈಶಾನ್ಯ ರಾಜ್ಯಗಳ ಸ್ಥಿತಿ ಸಂಪೂರ್ಣ ವಿಭಿನ್ನ. ಇದರ ಸೆನ್ಸ್ ಇಲ್ಲದೆ ಮಾಡುವ ಲೆಕ್ಕ, ಕಂಪ್ಯೂಟರ್ ಮುಂದೆ ಕುಳಿತುಕೊಂಡು ಹಾಕುವ ಲೆಕ್ಕಾಚಾರಗಳಲ್ಲಿ ಈ ರೀತಿಯ ಎಡವಟ್ಟುಗಳಾಗೋದು ಸಾಮಾನ್ಯ. ಇನ್ನು ದೇಶದಲ್ಲಿ ಲಭ್ಯವಿರುವ ಆಹಾರದ ಪ್ರಮಾಣ ಹಾಗೂ ಜನಸಂಖ್ಯೆ ಲೆಕ್ಕ. ಯಾವ ದೇಶದಲ್ಲಿ ಆಹಾರವಿಲ್ಲದೆ ಪರದಾಡುವ ಸ್ಥಿತಿಯಿತ್ತೋ.. ತಿಂಗಳುಗಟ್ಟಲೆ ಭಾರತದ ನೆರವಿನಿಂದ ಉಸಿರಾಡುವಂತಾಯಿತೋ.. ಆಹಾರ, ಪೆಟ್ರೋಲ್, ಔಷಧ ಆಮದು ಮಾಡಿಕೊಳ್ಳೋಕೂ ವಿದೇಶಿ ವಿನಿಮಯಕ್ಕೆ ಹಣವಿಲ್ಲದೆ ಪರದಾಡಿತೋ.. ಆ ದೇಶದಲ್ಲಿ ಆಹಾರಕ್ಕೆ ಕೊರತೆಯಿಲ್ಲ ಎಂದು ರಿಪೋರ್ಟ್ ಹೇಳುತ್ತಿದೆ. ಅಲ್ಲಿಗೆ ಇದು ಲ್ಯಾಪ್ಟಾಪ್ ಮುಂದೆ ಕುಳಿತು ಜಗತ್ತನ್ನೇ ತಿಳಿದುಕೊಂಡವರಂತೆ ಆಡುವ ಆರ್ಥಿಕ ತಜ್ಞರ ಲೆಕ್ಕ. ಓದಿ..ನೋಡಿ..ನವರಂಧ್ರಗಳಿಂದಲೂ ನಕ್ಕು ಸುಮ್ಮನಾಗಬೇಕಷ್ಟೆ. ಸೀರಿಯಸ್ಸಾಗಿ ತಗೊಳ್ಳಬೇಕಿಲ್ಲ.



