ಚುನಾವಣೆ ಹತ್ತಿರವಾಗುತ್ತಿದೆ. ಇನ್ನೈದು ತಿಂಗಳು. ಅಷ್ಟೆ. ಎಲೆಕ್ಷನ್ ಜ್ವರ ಭರ್ಜರಿಯಾಗಿದೆ. ಆಡಳಿತಾರೂಢ ಬಿಜೆಪಿಯಲ್ಲಿ ಒಳಗೊಳಗೇ ಸಿದ್ಧತೆ ನಡೆಯುತ್ತಿದ್ದರೂ ಗುಜರಾತ್ ರಿಸಲ್ಟ್ ಬಂದ ಮೇಲೆ ಮೋದಿ-ಅಮಿತ್ ಶಾ ಹೇಳಿದಂತೆ ಕೇಳುವುದಕ್ಕೆ ಬದ್ಧರಾಗಿದ್ದಾರೆ. ರಾಜ್ಯದ ವಿವಧೆಡೆ ಸಂಕಲ್ಪ ಸಮಾವೇಶ ಮಾಡುತ್ತಿದೆ. ಜೆಡಿಎಸ್ ಆಗಲೇ ಪಂಚರತ್ನ ಯಾತ್ರೆ ಹೊರಟಿದೆ. ಕುವiರಸ್ವಾಮಿಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಕಾಂಗ್ರೆಸ್ ಸಿದ್ದರಾಮೋತ್ಸವ, ಪಾದಯಾತ್ರೆ, ಭಾರತ್ ಜೋಡೋ ನಂತರ ಭರ್ಜರಿ ಕಮ್ ಬ್ಯಾಕ್ ಮಾಡುವ ಸೂಚನೆಯಿದೆ. ಸದ್ಯದ ಮಟ್ಟಿಗೆ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎನ್ನುವುದು ಸ್ಪಷ್ಟ. ಏನೇ ಬೂಸ್ಟ್ ಸಿಗುತ್ತಿದ್ದರೂ ಪಕ್ಷದ ನೆಮ್ಮದಿ ಹಾಳು ಮಾಡುತ್ತಿರುವುದು ಪಕ್ಷಕ್ಕಿರುವ ಹಿಂದೂ ವಿರೋಧಿ ಎನ್ನುವ ಇಮೇಜ್ ಮತ್ತು ಸಿದ್ದು-ಡಿಕೆ ಟೀಮಿನ ನಡುವೆ ನಡೆಯುವ ಮುಸುಕಿನ ಗುದ್ದಾಟ. ಹೀಗಾಗಿಯೇ ದೆಹಲಿಯಿಂದಲೇ ಬಂದಿರುವ ಸುನಿಲ್ ಕನಗೋಲು ತಂಡ ಸಮೀಕ್ಷೆ ನಡೆಸಿ ಇಡೀ ಕಾಂಗ್ರೆಸ್ ನಾಯಕರಿಗೆ ಒಂದಷ್ಟು ಮಾಡಬೇಕಾದ ಕೆಲಸ ಹಾಗೂ ಮಾಡಬಾರದ ಕೆಲಸಗಳ ಲಿಸ್ಟನ್ನೇ ಕೊಟ್ಟಿದೆ. ಒಟ್ಟು 12 ಅಂಶಗಳಿರುವ ಸೂತ್ರವನ್ನು ಪಾಲಿಸಿದರೆ ಅಧಿಕಾರ ಖಚಿತ ಎನ್ನುವುದು ಕುನ್ನಗೋಲು ತಂಡದ ವರದಿ. ಹೈಕಮಾಂಡ್ ಕಳಿಸಿರುವ ತಂಡದಿಂದ ಬಂದಿರುವ ವರದಿ ಇದು ಎಂಬ ಕಾರಣಕ್ಕೆ ಇದು ಹೈಕಮಾಂಡ್ ಸೂತ್ರ ಎಂದೂ ಹೇಳಬಹುದು.

ಹೈಕಮಾಂಡ್ ಪಾಠಗಳು
ಕಾಂಗ್ರೆಸ್ ನಾಯಕರು ಮಾಡಬಾರದು ಎಂಬ ಅಂಶಗಳು ಹಾಗೂ ಅವುಗಳ ಕಾರಣ, ಸೂತ್ರ, ಎಚ್ಚರಿಕೆಗಳು ಈ ರೀತಿ ಇವೆ.
ಹಿಂದೂ ವಿರೋಧಿ ಎಂಬ ಹಣೆಪಟ್ಟಿಯಿಂದ ಹೊರಬನ್ನಿ. 2018ರಲ್ಲಿ ಪಕ್ಷದ ಸೋಲಿಗೆ ಕಾಂಗ್ರೆಸ್ ತಾನೇತಾನಾಗಿ ಹಿಂದೂವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿತು. ಅದು ರಿಪೀಟ್ ಆಗುವುದು ಬೇಡ.
ಕಾಂಗ್ರೆಸ್‍ಗೆ ಸಿಕ್ಕ ಹಿಂದೂ ವಿರೋಧಿ ಎಂಬ ಹಣೆಪಟ್ಟಿಯೇ ಬಿಜೆಪಿಯ ಸೀಟುಗಳು ಹೆಚ್ಚಲು ಕಾರಣವಾಯಿತು. ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಸೀಟು ಕಳೆದುಕೊಳ್ಳೋಕೆ ಇದೇ ದೊಡ್ಡ ಕಾರಣ.
ಈಗಲೂ ಕೂಡಾ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಪರ ವಹಿಸುತ್ತಾರೆ ಎಂಬ ಇಮೇಜ್ ಇದೆ. ಹಿಂದೂ ವಿರೋಧಿ ಎಂಬುದರ ಜೊತೆಯಲ್ಲಿಯೇ ಕೇವಲ ಮುಸ್ಲಿಮರ ಪರ ಎಂಬ ಇಮೇಜ್ ಇದ್ದರೆ ಪಕ್ಷಕ್ಕೆ ಡ್ಯಾಮೇಜ್ ಜಾಸ್ತಿ. ಲಾಭವಿಲ್ಲ.
ಬಿಜೆಪಿಯವರು ಇದನ್ನೇ ಇಟ್ಟುಕೊಂಡು ಕಾಂಗ್ರೆಸ್, ಸಿದ್ದರಾಮಯ್ಯ ಸೇರಿದಂತ ಕೆಲವು ನಾಯಕರನ್ನು ಕೆಣಕುತ್ತಾರೆ. ಪ್ರಚೋದನಾಕಾರಿ ಹೇಳಿಕೆ ಕೊಡುತ್ತಾರೆ. ಅವರು ತೋಡುವ ಖೆಡ್ಡಾಗೆ ನೀವು ಬೀಳಬೇಡಿ.

ಹಾಗಾದರೆ ಏನು ಮಾಡಬೇಕು ಎಂಬ ಪ್ರಶ್ನೆಗೂ ಸುನಿಲ್ ಕುನ್ನಗೋಲು ಉತ್ತರ ಕೊಟ್ಟಿದ್ದಾರೆ. ಅ ಸೂತ್ರಗಳ ಪ್ರಕಾರ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ, ಅಟ್ಯಾಕ್ ಮಾಡಬೇಕು. ಅಪ್ಪಿತಪ್ಪಿಯೂ ಜಾತಿ ಮತ್ತು ಧರ್ಮದ ವಿಚಾರಗಳ ಬಗ್ಗೆ ಮಾತನಾಡಬಾರದು. ಮೃದು ಹಿಂದುತ್ವ ಧೋರಣೆ ಅನುಸರಿಸಬೇಕು. ಸಾಫ್ಟ್ ಹಿಂದುತ್ವವನ್ನು ಅಳವಡಿಸಿಕೊಳ್ಳಬೇಕು. ಯಾವುದೇ ವ್ಯಕ್ತಿಯನ್ನು, ನಾಯಕರನ್ನು ಪರ್ಸನಲ್ ಆಗಿ ಅಟ್ಯಾಕ್ ಮಾಡಬೇಡಿ. ಭಾಷೆ ಹಿಡಿತದಲ್ಲಿರಲಿ. ಮೋದಿಯನ್ನಂತೂ ಪರ್ಸನಲ್ ಆಗಿ ಅಟ್ಯಾಕ್ ಮಾಡಬೇಡಿ. ಮೋದಿಯನ್ನು ವೈಯಕ್ತಿಕವಾಗಿ ನಿಂದಿಸುತ್ತಾ ಹೋದಷ್ಟೂ ಕಾಂಗ್ರಸ್ಸಿಗೆ ಲಾಸ್ ಹಾಗೂ ಬಿಜೆಪಿಗೆ ಲಾಭ. ಮೋದಿಯ ಪರ್ಸನಲ್ ಇಮೇಜ್‍ಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದೆ.
40%$ ಕಮಿಷನ್ ವಿಚಾರವನ್ನು ಹೆಚ್ಚು ಹೆಚ್ಚು ಮಾತನಾಡಬೇಕು. ಯಾವುದೇ ಜಾತಿ ಅಥವಾ ಧರ್ಮದ ಬಗ್ಗೆ ಅತಿಯಾದ ಓಲೈಕೆ ಮಾಡಬಾರದು. ಹಾಗೆಂದು ಕಡೆಗಣಿಸಲೂಬಾರದು. ಆಯಾ ಜಾತಿ, ಧರ್ಮದ ನಾಯಕರ ಮೂಲಕ ಸಭೆ, ಸಮಾರಂಭಗಳ ಮೂಲಕ ಅವರನ್ನು ಒಗ್ಗೂಡಿಸಿ ಕಾಂಗ್ರೆಸ್ ಪರ ನಿಲ್ಲುವಂತೆ ಮಾಡಬೇಕು. ಅವರಿಗೆ ಬಿಜೆಪಿಯಿಂದ ಸಂವಿಧಾನ ಹೇಗೆ ಅಪಾಯದಲ್ಲಿದೆ ಎಂದು ಮನವರಿಕೆ ಮಾಡಿಕೊಡಬೇಕು. ಪ್ರತಿ ಜಾತಿಯ ವೋಟ್ ಬ್ಯಾಂಕ್‍ನ್ನು ಗಟ್ಟಿಗೊಳಿಸಬೇಕು. ಇದು ಹೈಕಮಾಂಡ್ ಕೊಟ್ಟಿರುವ ರಿಪೋರ್ಟ್.

ಅಂದಹಾಗೆ ಸತೀಶ್ ಜಾರಕಿಹೊಳಿಯವರ ಹಿಂದೂ ಎಂದರೆ ಅಶ್ಲೀಲ, ಕೊಳಕು ಎಂಬರ್ಥವಿದೆ ಎಂಬ ಹೇಳಿಕೆ ಪಕ್ಷಕ್ಕೆ ತುಂಬಾ ಡ್ಯಾಮೇಜ್ ಮಾಡಿದೆ ಎಂದು ಕೂಡಾ ಹೇಳಲಾಗಿದೆಯಂತೆ. ಮೂಲಗಳ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂತಹ ವಿಷಯಗಳನ್ನು ಮ್ಯಾನೇಜ್ ಮಾಡುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸಿದ್ದರಾಮಯ್ಯ ಈ ವಿಚಾರದಲ್ಲಿ ಎಡವುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳ ವಿಷಯದಲ್ಲಿ ಪ್ರಚೋದನೆಗೊಳಗಾಗುತ್ತಿದ್ದಾರೆ ಎಂಬ ಅಂಶವನ್ನೂ ಹೇಳಲಾಗಿದೆಯಂತೆ.
ಈ ಮಧ್ಯೆ ಮೋದಿಯನ್ನು 100 ತಲೆಯ ರಾವಣನಿಗೆ ಹೋಲಿಸಿದ್ದ ಖರ್ಗೆ ಹೇಳಿಕೆ, ಗುಜರಾತಿನಲ್ಲಿ ಪಕ್ಷಕ್ಕೆ ಡ್ಯಾಮೇಜ್ ಮಾಡಬಹುದು ಎಂಬ ಆತಂಕ ಹೈಕಮಾಂಡ್‍ನಿಂದ ಬಂದಿದೆ. ಈ ಹಿಂದೆ ಮೋದಿಯನ್ನು ಸೋನಿಯಾ ಸಾವಿನ ವ್ಯಾಪಾರಿ ಎಂದಿದ್ದರು. ರಾಹುಲ್ ಗಾಂಧಿ ರಕ್ತದ ದಲ್ಲಾಳಿ ಎಂದು ಜರೆದಿದ್ದರು. ಮಣಿಶಂಕರ್ ಅಯ್ಯರ್ ಟೀ ಮಾರುವವನು ದೇಶ ಆಳೋಕಾಗಲ್ಲ ಎಂದಿದ್ದರು. ನೀಚ ನಡವಳಿಕೆಯ ಪ್ರಧಾನಿ ಎಂದು ಮತ್ತೊಮ್ಮೆ ಟೀಕಿಸಿದ್ದರು. ಇವೆಲ್ಲವೂ ಮೋದಿಗೆ ಹಾಗೂ ಬಿಜೆಪಿಗೆ ವರದಾನವಾಗಿತ್ತು.

ಹಾಗೆ ನೋಡಿದರೆ ಸಿದ್ದರಾಮಯ್ಯ ಅವರನ್ನು ಕುರಿ ಕಾಯೋನ್ ಕೈಗೆ ರಾಜ್ಯದ ಬಜೆಟ್ ವ್ಯವಹಾರ ನೋಡಿಕೊಳ್ಳೋಕಾಗುತ್ತಾ ಎಂದಿದ್ದರಂತೆ. ಸ್ವತಃ ಸಿದ್ದರಾಮಯ್ಯನವರೇ ಹೇಳಿಕೊಂಡಿದ್ದರು. ಹಾಗೆ ಹೇಳಿದ್ದವರು ಯಾರು ಎನ್ನುವುದು ಗೊತ್ತಿಲ್ಲ. ಆದರೆ ಆ ಹೇಳಿಕೆಯೂ ಕೂಡಾ ಸಿದ್ದರಾಮಯ್ಯ ಕುರುಬರ ನಾಯಕರಾಗಿ ಬೆಳೆಯಲು ಸಹಾಯ ಮಾಡಿತು ಎನ್ನುವುದನ್ನು ಮರೆಯುವ ಹಾಗಿಲ್ಲ. ಈ ಎಲ್ಲ ಎಚ್ಚರಿಕೆ ಪಾಠಗಳನ್ನೂ ಕಾಂಗ್ರೆಸ್ ಅಳವಡಿಸಿಕೊಂಡು ಮುಂದುವರೆಯುತ್ತೋ.. ಇಲ್ಲವೋ.. ಕಾದು ನೋಡಬೇಕು. ಸದ್ಯದ ಮಟ್ಟಿಗೆ ಅಖಾಡ ಸಿದ್ಧವಾಗಿದೆಯೇ ಹೊರತು, ಜಟ್ಟಿಗಳಿಗಿನ್ನೂ ಕಣಕ್ಕೆ ಇಳಿದಿಲ್ಲ.



