ಇತ್ತೀಚೆಗೆ ಬೆಂಗಳೂರಿನಲ್ಲಿ ಡೆಮಾಲಿಷನ್ ಜೋರಾಗಿ ಸದ್ದು ಮಾಡುತ್ತಿದೆ. ಬಡವರಾದರೂ.. ಶ್ರೀಮಂತರಾದರೂ ಒಂದೇ ಎನ್ನುತ್ತಿರುವ ಬಿಬಿಎಂಪಿ ಅದನ್ನು ಪಾಲಿಸುತ್ತಿಲ್ಲ ಎನ್ನುವುದು ಆರೋಪ. ಅದು ಆರೋಪವಷ್ಟೇ ಅಲ್ಲ, ವಾಸ್ತವವೂ ಹೌದು ಎನ್ನುವುದು ಬಡವರ ಕೂಗು. ಏಕೆಂದರೆ ಬಿಬಿಎಂಪಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಯಾವ ಶ್ರೀಮಂತನೂ ಕಣ್ಣೀರು ಹಾಕಿಲ್ಲ. ಧಮಕಿ ಹಾಕಿದ್ದಾನೆ. ಕಣ್ಣೀರು ಹಾಕಿರುವುದು.. ಅಸಹಾಯಕತೆಯಿಂದ ಕಿರುಚಾಡಿರುವುದು.. ಬಡವರು ಮಾತ್ರ. ಮೊನ್ನೆ ಬುಧವಾರ ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಬಂದವರ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸಿ ನಿಲ್ಲಿಸಿದವರ ಕಥೆ ಇದು.

ಹಾಗೆ ಪೆಟ್ರೋಲ್ ಸುರಿದುಕೊಂಡು ಲೈಟರ್ ಇಟ್ಟುಕೊಂಡು ತಕ್ಷಣಕ್ಕೆ ಬಚಾವ್ ಆಗಿರುವ ಈ ದಂಪತಿ ಕೆ.ಆರ್.ಪುರಂನ ಎಸ್.ಆರ್.ಲೇಔಟ್‍ನವರು. ಸುನಿಲ್ ಸಿಂಗ್ ಮತ್ತು ಸೋನಾ ಸಿಂಗ್ ದಂಪತಿ. ಪೆಟ್ರೋಲ್ ಸುರಿದುಕೊಂಡಿದ್ದಕ್ಕಾಗಿ ಈಗ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಅವರು ಹೋರಾಡಿದ್ದು ತಮ್ಮ ಮನೆಗಾಗಿ. ಬಿಬಿಎಂಪಿಯವರು ಇವರ ಮನೆಯನ್ನು ಕೆಡವಿ ಹಾಕುತ್ತೇನೆ ಎಂದು ಬಂದಿದ್ದಕ್ಕಾಗಿ. ವಿಚಿತ್ರವೆಂದರೆ ಇವರದ್ದು ಒತ್ತುವರಿಯೂ ಅಲ್ಲ. ಎ ಖಾತಾ ನಿವೇಶನದಲ್ಲಿ ಕಟ್ಟಿಕೊಂಡಿರುವ ಮನೆ.
ರಾಜಾಕಾಲುವೆ ಮೇಲಿದ್ದರೆ, ಒತ್ತುವರಿಯಾಗಿದ್ದರೆ ಏಕೆ.. ರೆವಿನ್ಯೂ ಲ್ಯಾಂಡ್ ಆಗಿದ್ದರೂ ಎ ಖಾತಾ ಸಿಗುವುದಿಲ್ಲ. ಅಂತಹ ಎ ಖಾತಾ ಸೈಟ್‍ನಲ್ಲಿ 15 ವರ್ಷಗಳ ಹಿಂದೆ ಕಟ್ಟಿಕೊಂಡಿರುವ ಮನೆ ಇವರದ್ದು. ಈ ಮನೆ ಕಟ್ಟೋಕೆ 40 ಲಕ್ಷ ಸಾಲ ಮಾಡಿದ್ದೇವೆ. ಇನ್ನೂ 15 ಲಕ್ಷ ಕಟ್ಟಬೇಕಿದೆ. ಒಂದೇ ಒಂದು ವರ್ಷ ಕೂಡಾ ಟ್ಯಾಕ್ಸ್ ಕಟ್ಟೋದು ಪೆಂಡಿಂಗ್ ನಿಲ್ಲಿಸಿಲ್ಲ. ಈಗ ಬಂದು ನಿಮ್ಮ ಮನೆ ಅಕ್ರಮ, ಕೆಡವುತ್ತೇವೆ ಎಂದರೆ ಹೇಗೆ ಎನ್ನುವುದು ಈ ದಂಪತಿಯ ಪ್ರಶ್ನೆ.
ಯಾವುದೇ ನೋಟಿಸ್ ಕೊಟ್ಟಿಲ್ಲ. ಏಕಾಏಕಿ ಬುಧವಾರ ಬೆಳಗ್ಗೆ ಮನೆ ಮುಂದೆ ಜೆಸಿಬಿ ನಿಲ್ಲಿಸಿ ನೀವು ಒತ್ತುವರಿ ಮಾಡಿದ್ದೀರಿ ಎಂದು ಮೊಬೈಲ್‍ನಲ್ಲಿ ಡಾಕ್ಯುಮೆಂಟ್ ತೋರಿಸಿದರೆ ಏನು ಮಾಡಬೇಕು ಎನ್ನುತ್ತಾರೆ ಸುನಿಲ್ ಸಿಂಗ್ ಮತ್ತು ಸೋನಾ ಸಿಂಗ್. ಅವರದ್ದಷ್ಟೇ ಅಲ್ಲ, ಅವರದ್ದೇ ರಸ್ತೆಯಲ್ಲಿರುವ ಎಲ್ಲ ಮನೆಗಳನ್ನೂ ಕೆಡವುತ್ತಾರಂತೆ. ಎಲ್ಲರದ್ದೂ ಎ ಖಾತಾ. ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇಲ್ಲಿ ಕಾಲುವೆ ಮೇಲೆ ಮನೆ ಕಟ್ಟಿದ್ದಾರೆ. ದಾಖಲೆಗಳ ಪ್ರಕಾರ ಇವರು ಒತ್ತುವರಿ ಮಾಡಿದ್ದಾರೆ ಎನ್ನುತ್ತಾರೆ.

ಒತ್ತುವರಿಯಾಗಿದ್ದರೆ ಎ ಖಾತಾ ಕೊಡುವ ಪ್ರಶ್ನೆಯೇ ಬರುತ್ತಿರಲಿಲ್ಲ ಅಲ್ಲವೇ ಎಂದರೆ ಉತ್ತರ ಸಿಕ್ಕಲ್ಲ. ಸದ್ಯಕ್ಕೇನೋ ಇವರ ಮನೆ ಡೆಮಾಲಿಷನ್‍ಗೆ ಬಿಬಿಎಂಪಿ ಬ್ರೇಕ್ ಹಾಕಿದೆ.
ಇವರು ಮಾಡಿದ ತಪ್ಪೇನು? ಸರ್ಕಾರ ಕೊಟ್ಟ ದಾಖಲೆಗಳನ್ನು ನಂಬಿದ್ದು. ಅಷ್ಟೆ. ಏಕೆಂದರೆ ಅದೇ ಸರ್ಕಾರದ ಅಧಿಕಾರಿಗಳು ನಾವು ತಪ್ಪು ದಾಖಲೆ ಕೊಟ್ಟಿದ್ದೇವೆ ಎಂದೂ ಹೇಳುತ್ತಿಲ್ಲ. ಕೇವಲ ನೀವು ತಪ್ಪು ಮಾಡಿದ್ದೀರಿ, ನಿಮ್ಮ ಮನೆ ಕೆಡವಿ ಹಾಕುತ್ತೇವೆ ಎನ್ನುತ್ತಿದ್ದಾರೆ. ಸರ್ಕಾರವನ್ನು, ಸರ್ಕಾರಿ ದಾಖಲೆಗಳನ್ನು ನಂಬಿದ್ದಕ್ಕೆ ಈಗ ಮನೆ ಕಳೆದುಕೊಳ್ಳೋ ಪರಿಸ್ಥಿತಿಯಲ್ಲಿದ್ದಾರೆ ಈ ದಂಪತಿ.



