ಇಸ್ರೇಲ್, ಚೀನಾದಂತಹ ಕೆಲವು ದೇಶಗಳು ಪಕ್ಷಿಗಳನ್ನು ಕೂಡಾ ಸೈನ್ಯದ ಒಂದು ಭಾಗವನ್ನಾಗಿ ಮಾಡಿಕೊಂಡಿವೆ. ಒಂದು ಕಾಲದಲ್ಲಿ ಆನೆ, ಕುದುರೆ, ಒಂಟೆಗಳನ್ನಷ್ಟೇ ಅಲ್ಲ, ಹದ್ದು, ಗಿಡುಗಗಳನ್ನೂ ಸೈನಿಕರಂತೆಯೇ ಬಳಸಲಾಗುತ್ತಿತ್ತು. ಪಾರಿವಾಳಗಳಂತಹ ಪಕ್ಷಿಗಳನ್ನು ಸಂದೇಶ ವಾಹಕಗಳಂತೆ ಪೋಸ್ಟ್ ಮ್ಯಾನ್ ಆಗಿ ಬಳಸುವುದೂ ಹೊಸದಲ್ಲ. ಕೊರಿಯಾದಂತಹ ದೇಶಗಳಲ್ಲಿ ಇಲಿಗಳನ್ನು ಬಾಂಬ್ ಡಿಟೆಕ್ಟರ್ ಆಗಿ ಬಳಸುವ ತರಬೇತಿ ನೀಡಲಾಗುತ್ತದೆ.

ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನವು ಡ್ರೋನ್ಗಳ ಮೂಲಕ ಭಾರತಕ್ಕೆ ಮಾದಕ ವಸ್ತು, ಶಸ್ತ್ರಾಸ್ತ್ರ, ಸ್ಫೋಟಕ ಪದಾರ್ಥ, ನಕಲಿ ನೋಟು ಮೊದಲಾದವುಗಳನ್ನು ರವಾನಿಸುವ ತಂತ್ರ ಅನುಸರಿಸುತ್ತಿದೆ. ಯಾವಾಗ ಉಗ್ರರು, ಸ್ಮಗ್ಲರ್‍ಗಳು ಸಲೀಸಾಗಿ ಗಡಿ ದಾಟುವುದು ಕಷ್ಟವಾಯಿತೋ.. ಆಗ ಪಾಕ್ ಕಂಡುಕೊಂಡ ಮಾರ್ಗ ಡ್ರೋಣ್. ಇವುಗಳ ಮೇಲೆ ನಿಗಾ ಇಡಲು ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆಯಾದರೂ, ಗಿಡುಗ ಮತ್ತು ರಣಹದ್ದುಗಳನ್ನೇ ಬಳಸುವುದಕ್ಕೆ ವಿಶೇಷ ಕಾರಣವೂ ಇದೆ.

ರಣಹದ್ದುಗಳ ಕಣ್ಣು ಅತ್ಯಂತ ಸೂಕ್ಷ್ಮ. ಹಲವು ಕಿ.ಮೀ ದೂರದಲ್ಲಿನ ವಸ್ತುಗಳನ್ನೂ ಅತ್ಯಂತ ನಿಖರವಾಗಿ ಗುರುತಿಸಬಲ್ಲ ಸಾಮರ್ಥ್ಯ ರಣಹದ್ದುಗಳಿಗೆ ಇದೆ. ಬಲಿಷ್ಠವಾದ ರಣಹದ್ದು ಕೋಳಿ, ಪಕ್ಷಿಗಳನ್ನಷ್ಟೇ ಅಲ್ಲ, ಕುರಿಮರಿಗಳನ್ನು ಕೂಡಾ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿವೆ. ರಣಹದ್ದು ಮತ್ತು ಗಿಡುಗಗಳ ಕೊಕ್ಕುಗಳೂ ಕೂಡಾ ಬಲಿಷ್ಠ. ರೆಕ್ಕೆಯನ್ನೊಮ್ಮೆ ಬಲವಾಗಿ ಬೀಸಿದರೆ ಬಿರುಗಾಳಿಯೊಂದು ರಪ್ಪನೆ ಪಾಸ್ ಆದ ಅನುಭವವಾಗುತ್ತದೆ. ಅಷ್ಟು ವೇಗ. ರೆಕ್ಕೆಗಳೂ ಅಗಲ. ಹಾರುತ್ತಾ ಹಾರುತ್ತಾ ಹಾರುತ್ತಾ… ಮೋಡಗಳ ಮೇಲೆ ಮೇಲೆ ಹಾರುವ ಶಕ್ತಿ ರಣಹದ್ದು ಮತ್ತು ಗಿಡುಗಳಿಗೆ ಇದೆ. ಇಂತಹ ಶಕ್ತಿ ಸಾಮಥ್ರ್ಯಗಳೇ ಡ್ರೋನ್ ಮೇಲೆ ನಿಗಾ ಇಡಲು ಹೆಚ್ಚು ನೆರವಾಗಲಿದೆ ಎಂಬುದು ಸೇನೆಯ ಲೆಕ್ಕಾಚಾರ. ಹೀಗಾಗಿಯೇ ಶತ್ರು ದೇಶದ ಡ್ರೋನ್ಗಳಿಗೆ ಕಡಿವಾಣ ಹಾಕಲು ಸೇನೆ ಹದ್ದುಗಳಿಗೆ ತರಬೇತಿ ನೀಡುತ್ತಿದೆ.
ಉತ್ತರಾಖಂಡದ ಔಲಿಯಲ್ಲಿ ನಡೆಯುತ್ತಿರುವ ಭಾರತ- ಅಮೆರಿಕ ಜಂಟಿ ಸೇನಾ ತರಬೇತಿ ಆದ ಯುದ್ಧ ಅಭ್ಯಾಸದಲ್ಲಿ ಶತ್ರು ಡ್ರೋನ್ಗಳನ್ನು ಹದ್ದುಗಳು ಹೇಗೆ ಹೊಡೆದುರುಳಿಸುತ್ತವೆ ಎಂಬುದನ್ನು ಪ್ರದರ್ಶಿಸಲಾಗಿದೆ. ಪ್ರಸ್ತುತ ನಾಯಿಗಳು ಹಾಗೂ ಹದ್ದುಗಳಿಗೆ ಸೇನಾ ಕಾರ್ಯಾಚರಣೆಗಳಿಗಾಗಿ ತರಬೇತಿ ಕೊಡಲಾಗುತ್ತಿದೆ. ಇದರಿಂದ ವಿಶೇಷವಾಗಿ ಪಂಜಾಬ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಹಾರಿ ಬರುವ ಡ್ರೋನ್ಗಳ ಹಾವಳಿಯನ್ನು ತಗ್ಗಿಸಲು ಸೇನೆಗೆ ನೆರವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಮೂಲಕ ಗಡಿಯಾಚೆಯಿಂದ ಡ್ರೋನ್ಗಳನ್ನು ಹಾರಿಸಿ ದೇಶದಲ್ಲಿ ಡ್ರಗ್ಸ್ ಹಾಗೂ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿರುವ ಸಮಸ್ಯೆಗೆ ಭಾರತೀಯ ಸೇನೆಯು ವಿಶಿಷ್ಟ ಪರಿಹಾರವನ್ನು ಕಂಡುಕೊಂಡಿದೆ. ಭಾರತೀಯ ಸೇನೆಯು ಶತ್ರುಗಳ ಡ್ರೋನ್ಗಳನ್ನು ಹೊಡೆದುರುಳಿಸಲು ಹದ್ದುಗಳಿಗೆ ತರಬೇತಿ ನೀಡಲು ಆರಂಭಿಸಿದೆ. ಇಂತಹ ಕಾರ್ಯಕ್ಕೆ ಹಕ್ಕಿಗಳನ್ನು ಬಳಸುತ್ತಿರುವುದು ಇದೇ ಮೊದಲ ಬಾರಿ ಎಂದು ಹಿರಿಯ ಸೇನಾಧಿಕಾರಿಗಳೊಬ್ಬರು ತಿಳಿಸಿದ್ದಾರೆ.



