ಸುಳ್ಳು ಸುದ್ದಿ ಹರಡುವುದು ಅಪರಾಧ. ಅದರಲ್ಲಿಯೂ ಸಮಾಜದ ಸ್ವಾಸ್ಥ್ಯ ನೆಮ್ಮದಿ ಕೆಡಿಸಿ, ದಂಗೆಗೆ ಪ್ರೇರೇಪಿಸುವ ಸುದ್ದಿಗಳನ್ನು ಹರಡುವುದು ಕ್ರೈಂ. ಆದರೆ ಅಂತಾದ್ದೊಂದು ಆರೋಪ ಹೊತ್ತವನನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದರೆ ಹೇಗಿರುತ್ತೆ..? ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾರತದ ಇಬ್ಬರು ಪತ್ರಕರ್ತರು ಶಿಫಾರಸುಗೊಂಡಿದ್ದಾರೆ. ಒಬ್ಬರು ಪ್ರತೀಕ್ ಸಿನ್ಹಾ.ಮತ್ತೊಬ್ಬ ಮಹಮ್ಮದ್ ಝಬೈರ್.
ಫ್ಯಾಕ್ಟ್ ಚೆಕ್ ವೆಬ್ಸೈಟ್ ಆಲ್ಟ್ ನ್ಯೂಸ್ ಅನ್ನೋ ಸಂಸ್ಥೆಗೆ ಇಬ್ಬರೂ ಸಹ ಸಂಸ್ಥಾಪಕರು. ಇವರನ್ನು ನಾರ್ವೆಯ ರಾಜಕೀಯ ಪರಿಣಿತರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಇದೇ ಶುಕ್ರವಾರ ನಾರ್ವೆಯ ಸ್ಥಳೀಯ ಕಾಲಮಾನ 11 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ) ನೊಬೆಲ್ ಶಾಂತಿ ಪುರಸ್ಕಾರ ಪ್ರಕಟವಾಗಲಿದೆ.
ಅಲ್ಟ್ ನ್ಯೂಸ್ ಆರಂಭದಿಂದಲೂ ಫ್ಯಾಕ್ಟ್ ಚೆಕ್ ಹೆಸರಲ್ಲಿ ವದಂತಿಗಳು ಹಾಗೂ ಸುಳ್ಳು ಸುದ್ದಿಗಳ ಸತ್ಯಾಸತ್ಯತೆ ಹೊರಗೆಡವಿದ್ದಾರೆ. ಅದರ ಜೊತೆಯಲ್ಲೇ ಸ್ವತಃ ತಾವೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪವನ್ನೂ ಹೊತ್ತಿದ್ದಾರೆ. ಇವರಲ್ಲಿ ಝುಬೈರ್ ಜೈಲಿಗೂ ಹೋಗಿ ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿದ್ದಾರೆ.



