ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳಿರುವಾಗ ಎಂದಿನಂತೆ ಕಡೆಯವರಾಗಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದೆ, ಮೊದಲೇ ಅಭ್ಯರ್ಥಿಗಳ ಹೆಸರು ಘೋಷಿಸಿರುವುದು ಜೆಡಿಎಸ್. ಮೊದಲೇ ಘೋಷಿಸಿದ್ದಂತೆಯೇ ಪಂಚರತ್ನ ಯಾತ್ರೆ ಮುಕ್ತಾಯದ ಹಂತಕ್ಕೆ ಬರುತ್ತಿರುವಂತೆಯೇ ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಒಬ್ಬಿಬ್ಬರಲ್ಲ.. ಬರೋಬ್ಬರಿ 93 ಟಿಕೆಟ್ ಘೋಷಿಸಿದ್ದಾರೆ ಕುಮಾರಸ್ವಾಮಿ. ಕೆಲವರ ಹೆಸರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕುಮಾರಸ್ವಾಮಿ ಆಯಾ ಯಾತ್ರೆಯ ಕ್ಷೇತ್ರಗಳಲ್ಲಿ ಅನೌನ್ಸ್ ಮಾಡಿದ್ದರು. ಈಗ ಅಧಿಕೃತವಾಗಿ ಪಕ್ಷದ ಕಚೇರಿಯಿಂದ ಘೋಷಣೆ ಹೊರಬಿದ್ದಿದೆ.

ಮೊದಲ ಪಟ್ಟಿಯಲ್ಲೇ ಹೆಚ್.ಡಿ.ಕುಮಾರಸ್ವಾಮಿ ಚೆನ್ನಪಟ್ಟಣಕ್ಕೆ, ಮಗ ನಿಖಿಲ್ ರಾಮನಗರಕ್ಕೆ ಟಿಕೆಟ್ ಘೋಷಣೆಯಾಗಿದೆ.
ಇನ್ನು ಜಿ.ಟಿ.ದೇವೇಗೌಡ ಅವರಿಗೆ ಚಾಮುಂಡೇಶ್ವರಿಯಿಂದ ಹಾಗೂ ಅವರ ಮಗ ಹರೀಶ್ ಗೌಡ ಅವರಿಗೆ ಹುಣಸೂರಿನಿಂದ ಟಿಕೆಟ್ ಘೋಷಿಸಿದ್ದಾರೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಪುತ್ರ ಸಿ.ಎಂ.ಫಯಾಜ್ ಅವರಿಗೆ ಹುಮ್ನಾಬಾದ್ ಟಿಕೆಟ್ ನೀಡಲಾಗಿದ್ದು, ಅಪ್ಪಾಜಿ ಗೌಡ ಅವರ ಪತ್ನಿ ಶಾರದಾ ಅವರಿಗೆ ಭದ್ರಾವತಿ ಟಿಕೆಟ್ ನೀಡಲಾಗಿದೆ.
ಅಂದಹಾಗೆ ಹಾಸನದ ಯಾವುದೇ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿಲ್ಲ. ವಿಶೇಷವೆಂದರೆ ಹಾಸನದಲ್ಲಿರೋದು 7 ವಿಧಾನಸಭಾ ಕ್ಷೇತ್ರಗಳು. ಹಾಸನ, ಹೊಳೆನರಸೀಪುರ, ಅರಸೀಕೆರೆ, ಅರಕಲಗೂಡು, ಶ್ರವಣ ಬೆಳಗೊಳ, ಸಕಲೇಶಪುರ ಹಾಗೂ ಬೇಳೂರು. ಇಷ್ಟೂ ಕ್ಷೇತ್ರಗಳಲ್ಲಿ ಹಾಸನದಲ್ಲಿ ಬಿಜೆಪಿ ಶಾಸಕರಾಗಿರುವ ಪ್ರೀತಂ ಗೌಡ ಅವರನ್ನು ಬಿಟ್ಟರೆ ಉಳಿದ ಅಷ್ಟೂ ಕ್ಷೇತ್ರಗಳಲ್ಲಿರೋದು ಜೆಡಿಎಸ್ ಶಾಸಕರೇ. ಶಿವಲಿಂಗೇಗೌಡ ಅವರು ಕಾಂಗ್ರೆಸ್‍ಗೆ ಹೋಗುತ್ತಾರೋ.. ಜೆಡಿಎಸ್‍ನಲ್ಲೇ ಇರುತ್ತಾರೋ.. ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಇತ್ತೀಚೆಗೆ ಶಿವಲಿಂಗೇಗೌಡ ಅವರು ಜೆಡಿಎಸ್ ಜೊತೆ ಕಾಣಿಸಿಕೊಳ್ಳುತ್ತಿದ್ದರಾದರೂ, ವರಿಷ್ಠರು ಅಧಿವೇಶನ ಮುಗಿಯುವವರೆಗೆ ಕಾಯುವ ಹಂತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಬೆಳಗಾವಿ ಅಧಿವೇಶನದ ನಂತರ ಕ್ಲಿಯರ್ ಪಿಕ್ಚರ್ ಸಿಗಲಿದೆ ಹಾಗೂ ಬಜೆಟ್ ಅಧಿವೇಶನದ ನಂತರ ಎಲ್ಲರೂ.. ಎಲ್ಲವನ್ನೂ ಸ್ಪಷ್ಟಪಡಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಎಲ್ಲರೂ ಕಾಯುತ್ತಿರುವುದು ವಿಶೇಷ.

ಆದರೆ, ಹಾಸನಕ್ಕೆ ಟಿಕೆಟ್ ಘೋಷಣೆ ವಿಳಂಬಕ್ಕೆ ಕಾರಣಕ್ಕೆ ಭವಾನಿ ರೇವಣ್ಣ ಎನ್ನಲಾಗಿದೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ. ಆದರೆ ಮಾಜಿ ಶಾಸಕ ಪ್ರಕಾಶ್ ಅವರ ಪುತ್ರ ಸ್ವರೂಪ್ ಮೇಲೆ ಕುಮಾರಸ್ವಾಮಿ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕುಮಾರಸ್ವಾಮಿ ಭಾಗವಹಿಸಿದ್ದ ಸಭೆಯಲ್ಲಿ ಸ್ವರೂಪ್ ಬೆಂಬಲಿಗರು ಟಿಕೆಟ್ ಘೋಷಿಸುವಂತೆ ಕುಮಾರಸ್ವಾಮಿಗೆ ಒತ್ತಾಯಿಸಿದ ಘಟನೆಯೂ ನಡೆದಿತ್ತು.
ಆದರೆ, ಟಿಕೆಟ್ ಘೋಷಣೆ ವಿಳಂಬಕ್ಕೆ ಭವಾನಿ ರೇವಣ್ಣ ಅವರಿಗೆ ಕೊಡಬೇಕೋ ಬೇಡವೋ ಎಂಬ ವಿಷಯವೇ ಕಾರಣ ಎನ್ನಲಾಗಿದೆ. ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಲಿ ಶಾಸಕಿ. ಈಗ ಅನಿತಾ ಅವರು ತಮ್ಮ ಕ್ಷೇತ್ರವನ್ನು ಪುತ್ರ ನಿಖಿಲ್‍ಗೆ ಬಿಟ್ಟುಕೊಟ್ಟಿದ್ದಾರೆ.

ಅತ್ತ ಹೆಚ್.ಡಿ.ರೇವಣ್ಣ ವಿಧಾನಸಭೆ ಸದಸ್ಯರಾದರೆ, ಇನ್ನೊಬ್ಬ ಮಗ ಸೂರಜ್ ರೇವಣ್ಣ ವಿಧಾನಪರಿಷತ್ ಸದಸ್ಯ. ಮತ್ತೊಬ್ಬ ಮಗ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಸಂಸದ. ಭವಾನಿ ರೇವಣ್ಣ ಜಿಲ್ಲಾ ಪಂಚಾಯ್ತಿ ಅಖಾಡದಿಂದ ರಾಜ್ಯ ಮಟ್ಟದ ರಾಜಕೀಯಕ್ಕೆ ಬರಲು ಕಾಯುತ್ತಿದ್ದಾರೆ. ಆದರೆ.. ಆದರೆ.. ಆದರೆ.. ಈ ಆದರೆ.. ಎಂಬ ಅಲ್ಪವಿರಾಮದಲ್ಲೇ ನೂರಾರು ಉತ್ತರಗಳಿವೆ.



