

ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ಕೈಗೊಂಡಿದೆ. 2-ಎ ವರ್ಗದಲ್ಲಿರೋ ಕುರುಬರ ಹಾಲುಮತ ಸಮುದಾಯ ಎಸ್‍ಟಿ ವರ್ಗಕ್ಕೆ ತಮ್ಮನ್ನು ಸೇರಿಸಿ ಎನ್ನುತ್ತಿದೆ.


ಪ್ರವರ್ಗ 3-ಎ ಯಲ್ಲಿರೋ ಒಕ್ಕಲಿಗರು ಮೀಸಲು ಪ್ರಮಾಣವನ್ನೇ ಶೇ.4ರಿಂದ ಶೇ.10ಕ್ಕೆ ಹೆಚ್ಚಿಸಿ ಎನ್ನುತ್ತಿದ್ದಾರೆ. ಈಡಿಗರು ಹಾಗೂ ಬಿಲ್ಲವರದ್ದು ಕೂಡಾ ಎಸ್‍ಟಿ ವರ್ಗಕ್ಕೆ ಸೇರಿಸಿ ಎಂಬ ಒತ್ತಾಯವಿದೆ. ಎಲ್ಲರನ್ನೂ ಏಕಕಾಲಕ್ಕೆ ಸಮಾಧಾನಗೊಳಿಸುವ ಸರ್ಕಸ್ ಸುಲಭವಲ್ಲ. ಈಗ ಈ ಹಾದಿಯಲ್ಲಿರುವ ಸರ್ಕಾರದ ಕಣ್ಣೀಗ ಬಿದ್ದಿರುವುದು ಮುಸ್ಲಿಮರ ಮೇಲೆ. ಕಾರಣಗಳೂ ಇವೆ.
ಮುಸ್ಲಿಮರಿಗೆ ಹಿಂದುಳಿದ ವರ್ಗಗಳಲ್ಲಿ ಅಡಿಯಲ್ಲಿ 2-ಬಿ ವರ್ಗದ ಅಡಿಯಲ್ಲಿ ಮೀಸಲಾತಿ ಇದೆ. ಶೇ.4ರಷ್ಟು ಮೀಸಲಾತಿ ಸೌಲಭ್ಯ ಇದೆ. ಧಾರ್ಮಿಕ ಅಲ್ಪಸಂಖ್ಯಾತರಲ್ಲೂ ಮೀಸಲಾತಿ ಇದೆ. ಒಂದು ವರ್ಗಕ್ಕೆ ಎರಡೆರಡು ಮೀಸಲಾತಿ ಏಕೆ ಎನ್ನುವ ಪ್ರಶ್ನೆ ಎತ್ತಿರೋದು ಶಾಸಕ ಅರವಿಂದ ಬೆಲ್ಲದ್ ಮತ್ತು ಬಸನಗೌಡ ಪಾಟೀಲ ಯತ್ನಾಳ್.
ಒಬಿಸಿ ಕೋಟಾದ ಅಡಿಯಲ್ಲಿ ಜಾತಿ ಆಧರಿತ ಮೀಸಲಾತಿ ಇದೆ. ಧರ್ಮ ಆಧರಿತ ಮೀಸಲಾತಿಗೆ ಅವಕಾಶ ಇಲ್ಲ. ಹಿಂದಿನ ಕಾಂಗ್ರೆಸ್ ಧರ್ಮವನ್ನೂ ಸೇರಿಸಿ ಮೀಸಲಾತಿ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಎರಡೂ ಕಡೆ ಸೌಲಭ್ಯ ಸಿಗುತ್ತಿವೆ. ಇದನ್ನು ವಾಪಸ್ ತೆಗೆದುಕೊಂಡು ಒಬಿಸಿ ವರ್ಗಗಳಿಗೆ ನೀಡಬೇಕು ಎನ್ನುವುದು ಅರವಿಂದ ಬೆಲ್ಲದ್ ವಾದ.
ಇದನ್ನು ಸಮರ್ಥನೆ ಮಾಡಿಕೊಡಿರುವುದು ಬಸನಗೌಡ ಪಾಟೀಲ ಯತ್ನಾಳ್. ಬೆಲ್ಲದ್ ಮಾತಿನಲ್ಲಿ ಸತ್ಯಾಂಶವಿದೆ. ಅವರ ಮೀಸಲಾತಿಯನ್ನು ತೆಗೆದು ಹಿಂದುಳಿದ ವರ್ಗದವರಿಗೆ ಕೊಡಬೇಕು ಎನ್ನುವುದು ಅವರ ವಾದ. ಮುಸ್ಲಿಮರು ನಮ್ಮ ಸಂಖ್ಯೆ ಹೆಚ್ಚಿದೆ. ಹೀಗಾಗಿ ಈಗಿರುವ ಶೇ.7ರಷ್ಟು (ಧಾರ್ಮಿಕ ಅಲ್ಪಸಂಖ್ಯಾತ) ಸಾಕಾಗುವುದಿಲ್ಲ. ಶೇ.15ರಷ್ಟು ಮೀಸಲಾತಿ ಬೇಕು ಎಂದು ಕೇಳುತ್ತಿರುವ ಹೊತ್ತಿನಲ್ಲೇ ಈ ವಿವಾದ ಭುಗಿಲೇಳುವ ಸೂಚನೆ ಕೊಟ್ಟಿದೆ. ಎಲೆಕ್ಷನ್ ಹೊತ್ತಿಗೆ ಈ ವಿವಾದವೇ ಚರ್ಚೆಯ ಮುನ್ನೆಲೆಗೆ ಬಂದರೂ ಆಶ್ಚರ್ಯವಿಲ್ಲ.
ಇದನ್ನು ಪ್ರಶ್ನಿಸುವವರಿಗೆ ಕೆಟಗರಿ 2ಎನಲ್ಲಿ ಬೌದ್ಧರು, ಕೆಟಗರಿ 3ಬಿಯಲ್ಲಿ ಕ್ರಿಶ್ಚಿಯನ್, ಜೈನರು, ದಿಗಂಬರರೂ ಇದ್ದಾರೆ ಎನ್ನುವುದು ಮರೆಯುವಂತಿಲ್ಲ. ಆದರೆ ಕೆಟಗರಿ 1ನಲ್ಲಿ ನದಾಫ್, ಲದಾಫ್, ಪಿಂಜಾರ, ಪಿಂಜಾರಿ, ದರವೇಶ್, ಚಪ್ಪರ್‍ಬಾಂದ್, ನಲಾಬಾಂಡ್, ಸಾಲಾಬಂದ್, ಶಿಖಾಲಿಘರಾ, ಶಿಖಾಲಿಗರ್, ಕಸಾಯಿ, ಅಥಾರಿ, ಕಸಬ್, ಪುಲ್‍ಮಾಲಿ, ತಿಕ್ಕಾನಗರ್, ಬಜಿಗಾರ, ಜೋಹರಿ ಹಾಗೂ ಮತಾಂತರವಾದ ಕ್ರಿಶ್ಚಿಯನ್ನರಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರವೇ ಮತಾಂತರವಾದವರಿಗೆ ಹಿಂದುಳಿದ ಹಾಗೂ ಎಸ್ಸಿ/ಎಸ್‍ಟಿ ಮೀಸಲಾತಿ ಕೊಡಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಅಧ್ಯಯನ ಕೈಗೆತ್ತಿಕೊಂಡಿದೆ. ಹೊಸದೊಂದು ವಿವಾದ ಭಾರಿ ಸ್ವರೂಪ ಪಡೆಯಬಹುದು.
ಬೆಲ್ಲದ್ ಅಪ್ಪ ಇದ್ದಾಗ ಮುಸ್ಲಿಮರಿಗೆ ಮೀಸಲಾತಿ ಸಿಕ್ಕಿದೆ. ಅದು ಕಾನೂನುಬದ್ಧ. ಅದಕ್ಕೆಲ್ಲ ಕಲ್ಲು ಹಾಕೋಕೆ ಹೋಗಬೇಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಮ್.ಇಬ್ರಾಹಿಂದ ಹೇಳಿದ್ದರೆ, ಅಂತಾದ್ದೊಂದು ವಿಚಾರವೇ ಸರ್ಕಾರದ ಮುಂದಿಲ್ಲ. ಅಲ್ಪಸಂಖ್ಯಾತರ ಮೀಸಲಾತಿ ಕಡಿತ ಮಾಡುವುದಿಲ್ಲ ಎಂದಿದ್ದಾರೆ ವಿಧಾನಪರಿಷತ್ ಸದಸ್ಯ ರವಿಕುಮಾರ್.



