

ಬ್ಯಾಂಕ್ ಗೆ 20 ಕೋಟಿ ರೂ ವಂಚನೆ ಮಾಡಿರುವ ಪ್ರಕರಣದಲ್ಲಿ ಪವರ್ ಟಿವಿಗೆ ಸೇರಿರುವ ಸಮಗ್ರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಿಬಿಐನ ಬ್ಯಾಂಕಿಂಗ್ ಫ್ರಾಡ್ ಸೆಲ್ 20 ಕೋಟಿ ವಂಚನೆಯ ಪ್ರಕರಣದ ತನಿಖೆ ಆರಂಭಿಸಿದೆ. ರಾಕೇಶ್ ಶೆಟ್ಟಿ ಮಾಲೀಕತ್ವದ ಪವರ್ ಸ್ಮಾರ್ಟ್ ಮೀಡಿಯಾ ಪ್ರೈ ಲಿ, ಕಂಪನಿ ಕರ್ನಾಟಕ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕ್ ನಿಂದ 14 ಕೋಟಿ ಲೋನ್ ಪಡೆದಿತ್ತು. ಆದರೆ ಸತತ 5 ವರ್ಷಗಳಿಂದ ಇಎಂಐ ಅಥವಾ ಬಡ್ಡಿ ಕಟ್ಟಿರಲಿಲ್ಲ. ಹಲವು ಬಾರಿ ನೋಟಿಸ್ ಕೊಟ್ಟಿದ್ದರೂ ಉತ್ತರ ಕೊಟ್ಟಿರಲಿಲ್ಲ. ಈ 14 ಕೋಟಿ ಲೋನ್ ಗೆ ಭದ್ರತೆಯಾಗಿ ಯಶವಂತಪುರ ಗೋಕುಲಾ ಮುಖ್ಯ ರಸ್ತೆಯಲ್ಲಿ ಇರುವ ಪವರ್ ಟಿವಿ ಕಚೇರಿಯ ಕಟ್ಟಡವನ್ನು ಬ್ಯಾಂಕ್ ಗೆ ನೊಂದಾವಣೆ ಮಾಡಿಕೊಟ್ಟಿದ್ದರು.

4725 ಚದರ ಅಡಿ ಹೊಂದಿರುವ ಬಿಬಿಎಂಪಿಯ ಪಿಐಡಿ ನಂಬರ್ 3-15-7 ನ ಆಗಿನ ಮಾರುಕಟ್ಟೆ ಮೌಲ್ಯ ಕೇವಲ 7.05 ಕೋಟಿ ಮಾತ್ರ ಆಗಿತ್ತು. ಆದರೆ ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ರಾಕೇಶ್ ಶೆಟ್ಟಿ ತಮ್ಮ ಆಸ್ತಿ ಮೌಲ್ಯವನ್ನು 20 ಕೋಟಿ ಎಂದು ಬಿಂಬಿಸಿ ಅದಕ್ಕೆ ತಕ್ಕಂತೆ ಸುಳ್ಳು ಆಸ್ತಿ ಮೌಲ್ಯ ಮಾಪನ ಮಾಡಿಸಿ 14 ಕೋಟಿ ಸಾಲ ಪಡೆದಿದ್ದರು ಎನ್ನುವುದು ಆರೋಪ. ಸಾಲ ಪಡೆದ ನಂತರ ಸತತ ಮೂರು ವರ್ಷಗಳ ಕಾಲ ಇಎಂಐ ಕಟ್ಟಿರಲಿಲ್ಲ. ಈ ಹಿನ್ನಲೆಯಲ್ಲಿ ಅಫೆಕ್ಸ್ ಬ್ಯಾಂಕ್ ಹಲವು ನೋಟಿಸ್ ಗಳನ್ನು ನೀಡಿತ್ತು. ಅಂತಿಮವಾಗಿ ಕಳೆದ 2021 ರ ನವೆಂಬರ್ 25 ರಂದು 20 ಕೋಟಿ ರೂಗಳನ್ನು ಪಾವತಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಆದರೂ ಸಹ ರಾಕೇಶ್ ಶೆಟ್ಟಿ ಈ ಹಣ ಪಾವತಿಸಲು ವಿಫಲರಾಗಿದ್ದರು.
ಅಲ್ಲದೆ ರಿಸರ್ವ್ ಬ್ಯಾಂಕ್ ಕಾನೂನು ಪ್ರಕಾರ ಅಫೆಕ್ಸ್ ಬ್ಯಾಂಕ್ ಪವರ್ ಟಿವಿಯ ರಾಕೇಶ್ ಶೆಟ್ಟಿ ವಿರುದ್ದ ದೂರು ದಾಖಲಿಸಲು ಸೂಚಿಸಬೇಕು ಮತ್ತು ದೆಹಲಿ ಪೊಲೀಸ್ ಕಾಯ್ದೆ ಪ್ರಕಾರ ಸಿಬಿಐ ತನಿಖೆ ಆರಂಭಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದರು.
ಕೇಂದ್ರ ಸಹಕಾರ ಸಚಿವಾಲಯವು ಕೂಡಲೇ ಪವರ್ ಟಿವಿ ಕಚೇರಿಯನ್ನು ಮುಟ್ಟುಗೋಲು ತನಿಖೆಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಈ ತಿಂಗಳ 31 ರೊಳಗೆ ಪವರ್ ಟಿವಿ ಸ್ಥಗಿತಗೊಳ್ಳಲಿದ್ದು, ಸಮಗ್ರ ಆಸ್ತಿ ಅಫೆಕ್ಸ್ ಬ್ಯಾಂಕ್ ಪಾಲಾಗಲಿದೆ. ನೂರಕ್ಕೂ ಹೆಚ್ಚು ನೌಕರರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವುದರಿಂದ ಡಿಆರ್ ಟಿ ಕಾಯ್ದೆ ಅಡಿಯಲ್ಲಿ 15 ದಿನಗಳ ಅಂತಿಮ ಕಾಲಾವಕಾಶ ನೀಡಲಾಗಿದೆ.



