ಕಾಲಚಕ್ರ ತಿರುಗುತ್ತದೆ. ತಿರುಗುತ್ತಿದೆ. ಅದು ಆರಂಭವಾಗಿದ್ದು ಕ್ರಿ.ಶ. 1600ರಲ್ಲಿ. ಈಸ್ಟ್ ಇಂಡಿಯಾ ಕಂಪೆನಿಯವರು ಭಾರತಕ್ಕೆ ಮಾರ್ಗವನ್ನು ಶೋಧಿಸಿಕೊಂಡರು. (ಭಾರತವನ್ನು ಕಂಡು ಹಿಡಿದರು ಎಂದು ಓದಿಕೊಳ್ಳಲೇಬೇಡಿ) ಕೊಲಂಬಸ್ ಎನ್ನುವವನು ಸೋತ ಮಾರ್ಗದಲ್ಲಿ ವಾಸ್ಕೋಡಿಗಾಮ ಎಂಬುವವನು ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ. ಮೊಗಲರ ಆಳ್ವಿಕೆಯಲ್ಲಿ ನರಕ ದರ್ಶನ ಮಾಡಿದ್ದ ಭಾರತಕ್ಕೆ ಬ್ರಿಟಿಷರು ವಕ್ಕರಿಸಿದ್ದು ಹಾಗೆ. ಅದಾದ ನಂತರ ಮೊದಲು ವ್ಯಾಪಾರದ ಆಸೆ ತೋರಿಸಿದರು. ರಾಜ ರಾಜರ ನಡುವೆ ಇದ್ದ ವೈಮನಸ್ಯ, ಶತ್ರುತ್ವವನ್ನು ಬಡಿದೆಬ್ಬಿಸಿದರು. ಅಷ್ಟೂ ವರ್ಷಗಳ ಕಾಲ ಜಗತ್ತಿಗೆ ಒಂದು ರೀತಿಯಲ್ಲಿ ಸಾರ್ವಭೌಮನಂತಿದ್ದ ಭಾರತ ಮೊಗಲರ ನಂತರ ಅವರ ದಾಳಿಯಿಂದ ತಪ್ಪಿಸಿಕೊಳ್ಳುವುದೇ ಕಾಯಕವಾಗಿ ಸಂಶೋಧನೆಗಳೂ ಹಳ್ಳ ಹಿಡಿದಿದ್ದವು. ಇವೆಲ್ಲವುಗಳ ಲಾಭವೆತ್ತಿದ ಬ್ರಿಟಿಷರು ಹಂತ ಹಂತವಾಗಿ ಭಾರತವನ್ನು ಆಕ್ರಮಿಸತೊಡಗಿದರು.
1857ರ ಭಾರತೀಯರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಅಧಿಕೃತವಾಗಿಯೇ ಭಾರತವನ್ನು ವಸಾಹತು ಮಾಡಿಕೊಂಡರು. ಬ್ರಿಟಿಷರ ಆಳ್ವಿಕೆ ಭಾರತದಲ್ಲಿ ಆರಂಭವಾಗಿದ್ದು ಹಾಗೆ. ಅದಾದ ನಂತರ ಸಾವಿರಾರು ಹೋರಾಟಗಾರರ ಬಲಿದಾನದ ಫಲ ಭಾರತಕ್ಕೆ ಸಿಕ್ಕಿತು. ಸ್ವಾತಂತ್ರ್ಯವನ್ನೇನೋ ಕೊಟ್ಟರು. ಆದರೆ ಭಾರತವನ್ನು ಪೀಸ್ ಪೀಸ್ ಮಾಡಿಬಿಟ್ಟರು. ಭಾರತದ ಎರಡು ಕಡೆ ಪಾಕಿಸ್ತಾನ ಎಂಬ ಕ್ಷುದ್ರ ರಾಷ್ಟ್ರವೊಂದಕ್ಕೆ ಜನ್ಮ ಕೊಟ್ಟೇ ಭಾರತ ಬಿಟ್ಟಿದ್ದು. ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚಿನ ಜನ ಭಾರತ ವಿಭಜನೆಯಲ್ಲಿ ಸತ್ತರು ಎಂದರೆ ಅತಿಶಯೋಕ್ತಿಯಲ್ಲ.
ಈಗ ಸ್ವತಂತ್ರ ಭಾರತ ದೇಶದ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಅದು ಹಿಂದಿಕ್ಕಿದ್ದು ಅದೇ ಬ್ರಿಟಿಷರನ್ನು. ಭಾರತ ಸೇರಿದಂತೆ ಹಲವು ದೇಶಗಳನ್ನು ದೋಚಿ ಕಟ್ಟಿಕೊಂಡಿದ್ದ ಶ್ರೀಮಂತ ಸಾಮ್ರಾಜ್ಯ ಪತನದ ಹಾದಿಯಲ್ಲಿದೆ. ಈಗ ಭಾರತವೇ ರಕ್ಷಕ. ಇದನ್ನೇ ಕಾಲಚಕ್ರ ಎನ್ನುವುದು. ಬ್ರಿಟನ್‍ಗೆ ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿಯಾಗಲಿದ್ದಾರೆ.
ಈ ರಿಷಿ ಸುನಕ್ ಇನ್ಫೋಸಿಸ್ ನಾರಾಯಣ ಮೂರ್ತಿ-ಸುಧಾ ಮೂರ್ತಿ ಪುತ್ರಿ ಅಕ್ಷತಾ ಅವರ ಪತಿ. ಕಳೆದ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಪ್ರಧಾನಿ ಪಟ್ಟ ಕಳೆದುಕೊಂಡಿದ್ದ ರಿಷಿ, ಇದೀಗ ಪ್ರಧಾನಿಯಾಗಲಿದ್ದಾರೆ. ನಿರ್ಗಮಿತ ಪ್ರಧಾನಿ ಲಿಜ್ ಟ್ರಸ್ ಅವರಿಗೆ ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದ ತೆರಿಗೆ ನೀತಿಗಳು ಹಾಗೂ ಆರ್ಥಿಕ ಸುಧಾಕರಣಾ ಕ್ರಮಗಳು ತಿರುಗುಬಾಣವಾದ ಕಾರಣ, ಪ್ರತಿಪಕ್ಷ ಲೇಬರ್ ಪಾರ್ಟಿಯಷ್ಟೇ ಅಲ್ಲ, ಅವರದ್ದೇ ಕನ್ಸರ್ವೇಟಿವ್ ಪಕ್ಷದ ಸಂಸದರೂ ಕೂಡಾ ಪ್ರಧಾನಿ ವಿರುದ್ಧ ಕೆಂಗಣ್ಣು ಬೀರಿದ್ದರು. ಲಿಜ್ ಟ್ರಸ್ ಪ್ರಧಾನಿಯಾಗಿ 45 ದಿನಗಳಲ್ಲೇ ರಾಜೀನಾಮೆ ಕೊಟ್ಟಿದ್ದರು.
ಲಿಜ್ ಟ್ರಸ್ ಸ್ಥಾನಕ್ಕೆ ನೂತನ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭವಾದಾಗ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ರಿಷಿ ಸುನಕ್ಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿದ್ದರು. ನೀವೇ ಪ್ರಧಾನಿ ಆಗಬೇಕು ಎಂದು ಬೋರಿಸ್ ಜಾನ್ಸನ್ ಬೆಂಬಲಿಗರು ಒತ್ತಡ ಹೇರಿದ್ದರು. ಆದರೆ, ತಾವು ಮತ್ತೆ ಪ್ರಧಾನಿಯಾಗಲು ಇದು ಸೂಕ್ತ ಸಮಯವಲ್ಲ ಎಂದು ಬೋರಿಸ್ ಜಾನ್ಸನ್ ಹಿಂದೆ ಸರಿದರು. ಇನ್ನು ರಿಷಿ ಸುನಕ್ ಅವರಿಗೆ ಇದ್ದ ಮತ್ತೊಬ್ಬ ಪ್ರಬಲ ಪ್ರತಿಸ್ಪರ್ಧಿ ಪೆನ್ನಿ ಮೊರ್ಡೌನಟ್ ಕೂಡಾ ಕೊನೆಯ ಕ್ಷಣದಲ್ಲಿ ಹಿಂದೆ ಸರಿದರು. ಹೀಗಾಗಿ ರಿಷಿ ಸುನಕ್ ಹೊರತುಪಡಿಸಿದರೆ ಬೇರೆ ಯಾರೂ ಸ್ಪರ್ಧಿಗಳೇ ಇರಲಿಲ್ಲ. ಹೀಗಾಗಿ, ಬ್ರಿಟನ್ ಪ್ರಧಾನಿ ಹುದ್ದೆಗೆ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದಿಂದ ರಿಷಿ ಸುನಕ್ ಒಬ್ಬರೇ ಅಭ್ಯರ್ಥಿಯಾಗಿ ಉಳಿದಿದ್ದು ಗೆಲುವು ನಿಶ್ಚಿತವಾಗಿದೆ. ಪ್ರತಿಸ್ಪರ್ಧಿಗಳಾಗಿದ್ದ ಪೆನ್ನಿ ಮೊರ್ಡೌನಟ್ ಹಾಗೂ ಬೋರಿಸ್ ಜಾನ್ಸನ್ ಕೂಡಾ ರಿಷಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ರಿಷಿಗೆ ಅವರ ಶ್ರೀಮಂತಿಕೆಯೇ ಅಡ್ಡಿಯಾಗಿತ್ತು. ರಿಷಿ ಓದಿದ ಶ್ರೀಮಂತ ಸ್ಕೂಲಾಗಿರುವ ವಿಂಚೆಸ್ಟರ್ ಸ್ಕೂಲಿನಲ್ಲಿ ಸ್ಕಾಲರ್‍ಶಿಪ್ ತೆಗೆದುಕೊಳ್ಳದೆ ಓದಿದ್ದರು. ಅದನ್ನು ಹೆಮ್ಮೆಯಿಂದಲೇ ಹೇಳಿಕೊಂಡಿದ್ದರು. ಬಹುದೊಡ್ಡ ಬಂಗಲೆ, ಲಕ್ಷುರಿ ಕಾರು, ಪತ್ರಕರ್ತರಿಗೆ ದುಬಾರಿ ಕಪ್ & ಸಾಸರ್‍ನಲ್ಲಿ ಚಹಾ ಕೊಟ್ಟಿದ್ದು, ಇನ್ಫೋಸಿಸ್ ನಾರಾಯಣ ಮೂರ್ತಿಯ ಮಗಳ ಸಂಪತ್ತು.. ಎಲ್ಲವೂ ಅಡ್ಡಿಯಾಗಿದ್ದವು. ಬ್ರಿಟನ್‍ನ ರಾಜಕೀಯ ತಜ್ಞ ಮ್ಯಾಟ್ ಗುಡ್‍ವಿನ್ ಶ್ರೀಮಂತಿಕೆಯೇ ರಿಷಿ ಸುನಕ್‍ಗೆ ಪ್ರಧಾನಿಯಾಗಲು ಅಡ್ಡಿಯಾಗಬಹುದು ಎಂದಿದ್ದರು. ರಿಷಿ ಸುನಕ್ ತಂದೆ ಪಂಜಾಬ್‍ನವರು. ಎಲ್ಲಕ್ಕಿಂತ ಹೆಚ್ಚಾಗಿ ರಿಷಿ ಸುನಕ್ ಬ್ರಿಟನ್ ಪ್ರಜೆಯಾಗಿದ್ದರೂ ಅಲ್ಲಿಯೇ ಹುಟ್ಟಿ ಬೆಳೆದಿದ್ದರೂ ಆತನನ್ನು ಪ್ರಧಾನಿ ಎಂದು ಒಪ್ಪಿಕೊಳ್ಳಲು ಕನ್ಸರ್ವೇಟಿವ್ ಪಕ್ಷದ ಸದಸ್ಯರೇ ಸಿದ್ಧರಿರಲಿಲ್ಲ. ಈ ಬಾರಿ ಅವೆಲ್ಲವನ್ನೂ ಮೀರಿ ರಿಷಿ ಸುನಕ್ ಪ್ರಧಾನಿಯಾಗುತ್ತಿದ್ದಾರೆ.



