ಅಡ್ವಾನ್ಸ್ ಟಿಕೆಟ್ ಬುಕಿಂಗ್ ಲೆಕ್ಕದ ಪ್ರಕಾರ ಟಿಕೆಟ್ ಬುಕಿಂಗ್ ಶುರುವಾದಾಗ..
ಮೊದಲ ದಿನ 8.62 ಸಾವಿರ ಟಿಕೆಟ್ ಬುಕ್ ಆಗಿದ್ದವು. 2ನೇ ದಿನ 13.6 ಸಾವಿರ ಟಿಕೆಟ್ ಬುಕ್ ಆಗಿದ್ದವು. ಆದರೆ.. ರಿಲೀಸ್ ದಿನ ಅಂದ್ರೆ ಮಾರ್ಚ್ 29ರಂದು 35 ಸಾವಿರ ಟಿಕೆಟ್ ಸೇಲ್ ಆದವು. ರಿಲೀಸ್ ಆದ ನಂತರ 2ನೇ ದಿನ 32 ಸಾವಿರ ಟಿಕೆಟ್, 3ನೇ ದಿನ 37.5 ಸಾವಿರ ಟಿಕೆಟ್ ಬುಕ್ ಆದವು. ನಾಲ್ಕನೇ ದಿನ ಅಂದ್ರೆ ಸೋಮವಾರ 12 ಸಾವಿರಕ್ಕೂ ಹೆಚ್ಚು ಟಿಕೆಟ್ ಬುಕ್ ಆದವು. ಇದು ಕೇವಲ ಬೆಂಗಳೂರು ಮಾರ್ಕೆಟ್ಟಿನ ಲೆಕ್ಕ.
ಚಿತ್ರದ ಪ್ರಚಾರದ ಭಾಗವಾಗಿ ಈಗಾಗಲೇ ಥಿಯೇಟರ್ ಯಾತ್ರೆ ಕೈಗೊಂಡಿರೋ ಯುವನನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಮಾಡುತ್ತಿದ್ಧಾರೆ. ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರಗಳಲ್ಲಿ ಅದ್ಭುತ ಸ್ವಾಗತ ಸಿಕ್ಕಿದೆ. ಈ ನಡುವೆ ಯವ ರಾಜ್ ಕುಮಾರ್ ಅವರಿಗೆ ಯುವ ಸಾಮ್ರಾಟ್ ಮೆಚ್ಚುಗೆ ಸಿಕ್ಕಿದೆ.
ಕನ್ನಡದಲ್ಲಿ ಯುವ ಎಂದರೆ ಯುವ ರಾಜ್ ಕುಮಾರ್. ತೆಲುಗಿನಲ್ಲಿ ಯುವ ಸಾಮ್ರಾಟ್ ಎಂದರೆ ಅಕ್ಕಿನೇನಿ ನಾಗಾರ್ಜುನ. ನಾಗಾರ್ಜುನ ಅವರಿಗೆ 64 ವರ್ಷ. ಆದರೂ.. ಅವರೇ ಯುವ ಸಾಮ್ರಾಟ್. ಏಕೆಂದರೆ ಅಭಿಮಾನಿಗಳ ಪ್ರಕಾರ ಅವರಿಗೂ ವಯಸ್ಸಾಗೋದೇ ಇಲ್ಲ. ಶಿವಣ್ಣ ಥರಾ.. ಅಂತಹ ನಾಗಾರ್ಜುನ ಯುವ ಚಿತ್ರವನ್ನು ಹಾಡಿ ಹೊಗಳಿದ್ದಾರೆ.
ಕರ್ನಾಟಕದಲ್ಲಿರುವ ಮಿತ್ರರಿಗೆ ಎಲ್ಲರಿಗೂ ನಮಸ್ಕಾರ, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಯುವ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಯುವ ಚಿತ್ರ ಹಿಟ್ ಕೂಡ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ಹೈದರಾಬಾದ್‌ನಲ್ಲಿಯೂ ಚಿತ್ರ ಹಿಟ್ ಆಗಿದೆ ಎಂದು ನಾಗಾರ್ಜುನ್ ಮಾತನಾಡಿದ್ದಾರೆ. ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.
ಡಾ.ರಾಜ್ ಅವರನ್ನು ಸ್ಮರಿಸಿಕೊಂಡಿರುವ ನಾಗಾರ್ಜುನ ತೆಲುಗಿನವರಿಗೂ ಡಾ.ರಾಜ್ ಎಂದರೆ ಅಭಿಮಾನ ಎಂದಿದ್ದಾರೆ. ಮೊದಲ ಚಿತ್ರದಲ್ಲೇ ಗೆಲುವು ಕಂಡ ಯುವ ಅವರಿಗೆ ಶುಭ ಹಾರೈಸಿದ್ದಾರೆ.
ಯುವ ಚಿತ್ರ ಮಾರ್ಚ್ 29ರಂದು ರಿಲೀಸ್ ಆಗಿ, ಯಶಸ್ವೀ ಪ್ರದರ್ಶನ ಕಾಣ್ತಿದೆ. ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರ ಯುವ. ಸಪ್ತಮಿಗೌಡ ನಾಯಕಿಯಾಗಿರುವ ಚಿತ್ರಕ್ಕೆ ಸಂತೋಷ್ ಆನಂದರಾಮ್ ಡೈರೆಕ್ಟರ್. ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್, ಕಿಶೋರ್ ನಟಿಸಿರುವ ಚಿತ್ರ ಫ್ಯಾಮಿಲಿ ಎಂಟರ್ʻಟೈನರ್ ಆಗಿದೆ.
ಯುವ ಚಿತ್ರದಲ್ಲಿ ಕಾಲೇಜ್, ಹೊಡೆದಾಟ, ಕುಟುಂಬ, ತಂದೆ-ಮಗನ ಪ್ರೀತಿ ಮತ್ತು ದ್ವೇಷದ ಕಥೆ, ಒಂದೊಳ್ಳೆ ಲವ್ ಸ್ಟೋರಿ ಎಲ್ಲವೂ ಇದೆ. ಹೊಂಬಾಳೆಯವರ ಚಿತ್ರಕ್ಕೆ ಮೊದಲ ದಿನದ ನಂತರ ಶೋಗಳ ಸಂಖ್ಯೆ ಹೆಚ್ಚಾಗಿದ್ದು ವಿಶೇಷ.
ಅಂದಹಾಗೆ ಯುವ ಚಿತ್ರದ ಈವರೆಗಿನ ಟೋಟಲ್ ಬಾಕ್ಸಾಫೀಸ್ ಕಲೆಕ್ಷನ್ 10ರಿಂದ 11 ಕೋಟಿ ಎನ್ನಲಾಗಿದೆ. ಇದು ಅತಿಶಯೋಕ್ತಿಯ ಅಂಕಿ ಸಂಖ್ಯೆ ಅಲ್ಲ. ಯುವ ಚಿತ್ರಕ್ಕೆ ಟಿಕೆಟ್ ದರವನ್ನೂ ಹೆಚ್ಚಿಸಿಲ್ಲ. ಥಿಯೇಟರುಗಳ ಸಂಖ್ಯೆ ಹೆಚ್ಚಿಸಲಾಗಿದೆ. ಪ್ರೇಕ್ಷಕರೂ ಕೂಡಾ ಡೀಸೆಂಟ್ ನಂಬರ್ ಲೆಕ್ಕದಲ್ಲಿ ಬರುತ್ತಿದ್ಧಾರೆ. ಇದೆಲ್ಲದರ ಪರಿಣಾಮ ಕಲೆಕ್ಷನ್ ಈಗಾಗಲೇ 11 ಕೋಟಿ ದಾಟಿದೆ ಎನ್ನಲಾಗಿದೆ. ಹೊಸ ನಟನೊಬ್ಬನ ಚಿತ್ರಕ್ಕೆ ಈ ಮಟ್ಟಿಗಿನ ಓಪನಿಂಗ್ ಸಿಕ್ಕಿರುವುದು ಅದ್ಧೂರಿಯೇ ಸರಿ.



