ಯುವ ರಾಜ್ ಕುಮಾರ್ ಈ ಬಾರಿ ಕ್ಲಿಯರ್ ವಿನ್ನರ್. ಎಕ್ಕ ಸಿನಿಮಾವನ್ನು ಜನ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಹಳ್ಳಿ ಹುಡುಗ ರೌಡಿಸಂ ಭೂಗತ ಲೋಕಕ್ಕೆ ಎಂಟ್ರಿ ನೀಡುವ ಕಥೆ ಇರುವ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಚಿತ್ರದ ಕಥೆಯಲ್ಲಿ ಹೊಸತನವೇನೂ ಇಲ್ಲ. ಆದರೆ.. ಕಥೆಯನ್ನು ಹೇಳಿರುವ ರೀತಿ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಹಾಗೆ ನೋಡಿದರೆ ಆಕಸ್ಮಿಕವಾಗಿ ರೌಡಿಯಾಗುವ ಕಥೆಗಳಲ್ಲಿ ಶಿವಣ್ಣ, ಸುದೀಪ್, ದರ್ಶನ್, ಪುನೀತ್, ದುನಿಯಾ ವಿಜಯ್, ಉಪೇಂದ್ರ, ಶ್ರೀಮುರಳಿ.. ಸೇರಿದಂತೆ ಕನ್ನಡದಲ್ಲಿ ಹೀರೋ ಆಗಿರುವವರೆಲ್ಲರೂ ಆಕ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಹುತೇಕ ರೌಡಿಸಂ ಚಿತ್ರಗಳು ನೆನಪಾಗುವಂತಿವೆ. ಜೋಗಿಯ ನೆನಪಂತೂ ಪದೇ ಪದೇ ಕಾಡುತ್ತದೆ.
ಹಳ್ಳಿಯಲ್ಲಿ ಖುಷಿಯಾಗಿರುವ ಮುತ್ತು, ತಾಯಿ ರತ್ನಳ ಜೊತೆ ಖುಷಿ ಖುಷಿಯಾಗಿರುತ್ತಾನೆ. ಗೆಳೆಯನೊಬ್ಬನ ಸಾಲ ಪತ್ರಕ್ಕೆ ಏನು.. ಎತ್ತ ಎಂದು ನೋಡದೆ ಸೈನ್ ಮಾಡುತ್ತಾನೆ. ಅದು ಖಾಲಿ ಪೇಪರ್. ಅವನು ಸಾಲ ಕಟ್ಟದೆ, ಕಷ್ಟಕ್ಕೆ ಸಿಲುಕುವ ಮುತ್ತು ಬೆಂಗಳೂರಿಗೆ ಬದುಕಲು ಬರುತ್ತಾನೆ. ಅಲ್ಲಿ ಕ್ಯಾಬ್ ಡ್ರೈವರ್ ಆಗ್ತಾನೆ. ಸಂಜನಾ ಮೇಲೆ ಲವ್ ಆಗುತ್ತದೆ. ಈ ಮಧ್ಯೆಯೇ ಒಂದು ಕಿರಿಕ್ಕಿನಿಂದ ಶುರುವಾದ ಹೊಡೆದಾಟ, ರೌಡಿಸಂ ಲೋಕಕ್ಕೆ ಎಂಟ್ರಿ ಕೊಡಿಸುತ್ತದೆ. ಅಂದಹಾಗೆ ಚಿತ್ರಕ್ಕೆ ಬ್ಯಾಂಗಲ್ ಬಂಗಾರಿ ಹಾಡಿನಿಂದ ಸಿಕ್ಕ ಪ್ರಮೋಷನ್, ಭರ್ಜರಿ ಓಪನಿಂಗ್ ಸಿಗುವಂತೆ ಮಾಡಿದೆ ಎಂದರೂ ತಪ್ಪಲ್ಲ.
ಚರಣ್ ರಾಜ್ ಸಂಗೀತ.. ಸಿನಿಮಾ ಮುಗಿಸಿ ಹೊರಬಂದರೂ.. ಪ್ರೇಕ್ಷಕರ ಕಿವಿಯಲ್ಲಿ ಗುಂಯ್‌ಗುಡುತ್ತದೆ. ವಾರಾಣಸಿಯ ಗಲ್ಲಿಗಳು, ಬೆಂಗಳೂರಿನ ಗಲ್ಲಿಗಳು, ಹಳ್ಳಿ, ರಕ್ತ.. ಎಲ್ಲವನ್ನೂ ಸತ್ಯ ಹೆಗಡೆ ಕ್ಯಾಮೆರಾ ಅದ್ಬುತವಾಗಿ ಸೆರೆ ಹಿಡಿದಿದೆ. ರೌಡಿಸಂ ಚಿತ್ರಗಳಿಗೆ ಫ್ಯಾಮಿಲಿ ಆಡಿಯನ್ಸ್ ಬರೋದಿಲ್ಲ ಎಂಬ ಇತ್ತೀಚಿನ ನಂಬಿಕೆಯನ್ನು ಎಕ್ಕ ಸುಳ್ಳು ಮಾಡಿದೆ.
ಸಿನಿಮಾ ಮೊದಲ ದಿನದ ಎಕ್ಕ ಕಲೆಕ್ಷನ್ ಸುಮಾರು 2 ಕೋಟಿ ಇದೆ ಎಂಬ ವರದಿಗಳಿವೆ. ಸುಮಾರು ಒಂದೂವರೆ ಲಕ್ಷ ಟಿಕೆಟ್ಸ್ ಸೇಲ್ ಆಗಿವೆ. ಬಿಡುಗಡೆಯಾಗಿದ್ದ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 300+ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಶೋ ಕಂಡಿವೆ. ಕಳೆದ ಆರು ತಿಂಗಳಿಂದ ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆದ ಹೊರತಾಗಿಯೂ ಯಾವ ಚಿತ್ರವೂ ಹೆಚ್ಚು ಗಳಿಕೆ ಮಾಡಿರಲಿಲ್ಲ. ದೊಡ್ಡ ಓಪನಿಂಗ್ ಕೂಡಾ ಸಿಕ್ಕಿರಲಿಲ್ಲ. ಅದು ಈಗ ಎಕ್ಕ ಚಿತ್ರದಿಂದ ಬ್ರೇಕ್ ಆಗಿದೆ.
‘ಜನ ಎಂಜಾಯ್ ಮಾಡುತ್ತಿದ್ದಾರೆ. ಇದರ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು. ನಿರ್ಮಾಪಕರನ್ನೂ ನೆನಪಿಸಿಕೊಳ್ಳಬೇಕು. ನಮ್ಮ ಅಮ್ಮನಿಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ’ ಎಂದಿದ್ದಾರೆ ಯುವ ರಾಜ್ ಕುಮಾರ್.
ದುಡಿಯಬೇಕು ಎಂದು ಬಂದವನು ರೌಡಿಯಾಗಿದ್ದು ಹೇಗೆ..ಕೇವಲ ನೆಮ್ಮದಿಯ ನಿದ್ರೆ ಬೇಕು ಎಂದವನು ನಿದ್ರೆ ಕಳೆದುಕೊಂಡು ಬದುಕುವಂತಾಗಿದ್ದು ಹೇಗೆ.. ಮುಗ್ಧ ಹುಡುಗ ಮೃಗವಾಗಿದ್ದು ಹೇಗೆ.. ಇಂತಹದ್ದನ್ನೆಲ್ಲ ನಿರ್ದೇಶಕ ರೋಹಿತ್ ಪದಕಿ ಚೆನ್ನಾಗಿಯೇ ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಸಂಜನಾ ಮತ್ತು ಸಂಪದಾ ಇಬ್ಬರಿಗೂ ಸ್ಕ್ರೀನ್ ಸ್ಪೇಸ್ ಕಡಿಮೆ. ತಾಯಿಯ ಪಾತ್ರಧಾರಿ ಶೃತಿಗೂ ಅಷ್ಟೇ. ಆದರೆ.. ಚಿಕ್ಕ ಚಿಕ್ಕ ಸಮಯದಲ್ಲಿಯೇ ಸಿನಿಮಾವನ್ನು ಆವರಿಸಿಕೊಳ್ತಾರೆ. ಅತುಲ್ ಕುಲಕರ್ಣಿಯ ಕೂಲ್ ಆಕ್ಟಿಂಗ್, ಸಾಧುಕೋಕಿಲರ ಕಾಮಿಡಿ ಕಚಗುಳಿ ಇಡುವಂತಿದೆ. ಟೋಟಲ್ಲಿ ಇಲ್ಲಿ ಯುವ ಗೆದ್ದಿದ್ದಾರೆ. ಯುವ ಚಿತ್ರದಲ್ಲಿ ಸೀರಿಯಸ್ ಆಗಿದ್ದ ಯುವ, ಇಲ್ಲಿ ನಗುತ್ತಾರೆ. ನಗಿಸುತ್ತಾರೆ. ಅಳಿಸುತ್ತಾರೆ. ಪ್ರೀತಿಸುತ್ತಾರೆ.. ಮತ್ತು ಹೊಡೆದಾಡುತ್ತಾರೆ. ಯುವರಾಜ್ ಕುಮಾರ್, ಇಲ್ಲಿ ಒಂದು ಕಂಪ್ಲೀಟ್ ಪ್ಯಾಕೇಜ್ ಆಗಿದ್ದಾರೆ.



