ರಾಜ್ಯ ಬಿಜೆಪಿಯ ಬಣ ಬಡಿದಾಟದ ಮೆಗಾ ಸೀರಿಯಲ್ ಕೊನೆಯಾಗುತ್ತಿಲ್ಲ. ಹೈಕಮಾಂಡ್ ಕೂಡಾ ಅವರೂ ಇರಲಿ.. ಇವರೂ ಇರಲಿ.. ಹೊಡೆದಾಡಿಕೊಳ್ಳಲಿ.. ಪಾರ್ಟಿ ಮಾತ್ರ ಚೆನ್ನಾಗಿರಲಿ ಎಂಬಂತೆ ವರ್ತಿಸುತ್ತಿದ್ದಾರೆ. ಕಾರ್ಯಕರ್ತರಿಗಂತೂ ಫುಲ್ ಗೊಂದಲ. ಯಾರ ಪರ ಇರಬೇಕು.. ಅನ್ನೋ ಕನ್‌ಫ್ಯೂಷನ್ನಿನಲ್ಲೇ ಪಕ್ಷದಲ್ಲಿ ಇರಬೇಕೋ ಬೇಡವೋ ಎಂಬ ಮಾತನ್ನಾಡುತ್ತಿದ್ದಾರೆ. ಏಕೆಂದರೆ ಹೈಕಮಾಂಡ್ ಕೂಡಾ ತಾನು ಯಾರ ಪರ ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ. ಹೀಗಿರುವಾಗಲೇ ಅಮಿತ್ ಶಾ ಬೆಂಗಳೂರಿಗೆ ಬರ್ತಿದ್ದಾರೆ. ಅತ್ತ ಲಿಂಗಾಯತ ನಾಯಕರನ್ನು, ಸ್ವಾಮಿಗಳನ್ನು ಒಗ್ಗೂಡಿಸುವ ತಂತ್ರಗಾರಿಕೆ ತೀವ್ರಗೊಳ್ಳುತ್ತಿದೆ.
ಬೆಂಗಳೂರಿಗೆ ಅಮಿತ್ ಶಾ :
‘‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’’ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಉದ್ಘಾಟನೆ ಮಾಡಲಿರುವ ಆಸ್ಪತ್ರೆ. ಪೆಜಾವರ ಶ್ರೀಗಳ ಜ್ಞಾಪಕಾರ್ಥವಾಗಿ ವಿಶ್ವೇಶ್ವರತೀರ್ಥರ ಹೆಸರನ್ನು ಇಡಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಜಯೇಂದ್ರ ವಿರುದ್ಧ ತೊಡೆತಟ್ಟಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ. ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಆದರೆ ಈ ವೇಳೆ ರಾಜ್ಯ ಬಿಜೆಪಿಯ ಗೊಂದಲಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ರಾಜ್ಯ ಬಿಜೆಪಿ ನಾಯಕರದ್ದು.
ಆದರೆ ಮೂಲಗಳ ಪ್ರಕಾರ ಯಾರ ಜೊತೆಯಲ್ಲಿಯೂ ಅಮಿತ್ ಶಾ ಅವರ ಸಭೆ ನಿಗದಿಯಾಗಿಲ್ಲ. ಶ್ರೀರಾಮುಲು ಅವರು ಮಾತ್ರ ಅಮಿತ್ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಲು ಹರಸಾಹಸ ಪಡುತ್ತಿದ್ದಾರೆ ಎಂಬ ಮಾಹಿತಿಗಳಿವೆ. ಉಳಿದಂತೆ ವಿಜಯೇಂದ್ರ ಬಣದವರನ್ನಾಗಲೀ, ಯತ್ನಾಳ್ ಟೀಂನವರನ್ನಾಗಲೀ ಅಮಿತ್ ಶಾ ಭೇಟಿ ಮಾಡ್ತಿಲ್ಲ. ಆದರೆ, ಇತ್ತ ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಪಾಲಿಟಿಕ್ಸ್ ಜೋರಾಗಿ ನಡೀತಿದೆ.
ಮೇ 15ಕ್ಕೆ ಮುನ್ನ ವಿಜಯೇಂದ್ರ ಬಣ ಪ್ಲಾನ್ : ಮಾರ್ಚ್ 22ಕ್ಕೇ ಯತ್ನಾಳ್ ಬಣ ಪ್ಲಾನ್..!
ವಿಜಯೇಂದ್ರ ಬಣದಲ್ಲಿರುವ ರೇಣುಕಾಚಾರ್ಯ ಮೇ 15ರ ಒಳಗಾಗಿ ಏನಾದರೂ ಮಾಡಿ ವೀರಶೈವ ಲಿಂಗಾಯತ ಸ್ವಾಮೀಜಿಗಳ ಸಮಾವೇಶ ಮಾಡಬೇಕು ಎಂದು ಪ್ಲಾನ್ ಮಾಡ್ತಿದ್ದಾರೆ. ಅದಕ್ಕೆ ಕೌಂಟರ್ ಆಗಿ ಯತ್ನಾಳ್ ಟೀಂ, ಈ ತಿಂಗಳಲ್ಲೇ ಮಾಡಿ ಕೇಸ್ ಕ್ಲೋಸ್ ಮಾಡೋಣ ಎಂದು ಪ್ಲಾನ್ ಮಾಡ್ತಿದೆ. ಯತ್ನಾಳ್ ಬಣ ಮಾರ್ಚ್ 22ಕ್ಕೆ ಲಿಂಗಾಯತರ ರ್ಯಾಲಿ ಮಾಡುವುದಕ್ಕೆ ಸಿದ್ಧವಾಗಿದ್ದು, ಅಮಿತ್ ಶಾ ಬಂದು ಹೋದ ನಂತರ ಸಭೆ ನಡೆಸಲು ಮುಂದಾಗಿದೆ.
ರೇಣುಕಾಚಾರ್ಯ ಅವರಿಗಿಂತ ಮೊದಲು ದಾವಣಗೆರೆಯಲ್ಲೋ ಅಥವಾ ಕೂಡಲ ಸಂಗಮದಲ್ಲೋ ಸಮಾವೇಶ ನಡೆಸುವುದಕ್ಕೆ ಯತ್ನಾಳ್ ಬಣ ಆಲೋಚನೆ ಮಾಡ್ತಿದೆ. ರೇಣುಕಾಚಾರ್ಯ ವಿಜಯಪುರ ಜಿಲ್ಲೆಯಲ್ಲಿ (ವಿಜಯಪುರ, ಯತ್ನಾಳ್ ಅವರ ಕರ್ಮಭೂಮಿ) ಸಮಾವೇಶ ನಡೆಸುವ ಯೋಜನೆ ರೂಪಿಸಿದ್ದರೆ, ಯತ್ನಾಳ್ ಬಣದವರು ಪ್ಲಾನ್ ಮಾಡಿರುವುದು ದಾವಣಗೆರೆಯಲ್ಲಿ. ದಾವಣಗೆರೆ, ರೇಣುಕಾಚಾರ್ಯ ಅವರ ಜಿಲ್ಲೆ. ಅಲ್ಲದೆ ದಾವಣಗೆರೆಯಲ್ಲಿಯೇ 2018ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದು. ದಾವಣಗೆರೆಯ ಪಕ್ಕದಲ್ಲಿರುವ ಹಾವೇರಿಯಲ್ಲೇ ಕೆಜೆಪಿ ಜನ್ಮ ತಾಳಿದ್ದು. ಇನ್ನು ಕೂಡಲ ಸಂಗಮದಲ್ಲಾದರೆ, ಅದು ಬಸವಣ್ಣನವರ ಕ್ಷೇತ್ರ. ಹೀಗಾಗಿ ಅಲ್ಲಿ ರ್ಯಾಲಿ ಮಾಡುವ ಯೋಜನೆ ಯತ್ನಾಳ್ ಬಣಕ್ಕಿದೆ.
ಯಾರು ಮೊದಲು ಸಮಾವೇಶ ಮಾಡ್ತಾರ.. ಅವರೇ ಗೆಲ್ತಾರೆ ಅನ್ನೋದು ಯತ್ನಾಳ್ ಬಣದ ನಂಬಿಕೆಯಾದರೆ, ಯಾರು ಹೆಚ್ಚು ಸ್ವಾಮೀಜಿಗಳನ್ನು ಸಂಘಟನೆ ಮಾಡ್ತಾರೋ.. ಅವರೇ ಪವರ್ ಫುಲ್ ಅನ್ನೋದು ವಿಜಯೇಂದ್ರ ಬಣದ ನಂಬಿಕೆ.



