ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಹೋರಾಟ ಮುಂದುವರೆಯುತ್ತಲೇ ಇದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು, ಇದೀಗ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದ್ದಾರೆ. ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಯತ್ನಾಳ್ ಬಣದ ಮುಖಂಡರು ವಕ್ಫ್ ವಿಚಾರದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಅಮಿತ್ ಶಾ ಕೂಡಾ ಈ ಬಗ್ಗೆ ಸಂತಸ ವ್ಯಕ್ತಪಡಿಸಿದರಂತೆ. ಆದರೆ, ಆನಂತ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದೂರು ಕೊಟ್ಟರಂತೆ. ಕುತೂಹಲದ ಸಂಗತಿ ಎಂದರೆ ಯತ್ನಾಳ್ ಅವರು ಈ ಭೇಟಿಯಲ್ಲಿ ಇರಲಿಲ್ಲ. ಯತ್ನಾಳ್ ಪರವಾಗಿ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ದೂರು ನೀಡಿದ್ದಾರಂತೆ.
ವಿಜಯೇಂದ್ರ ಅವರು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತಿಲ್ಲ. ಆ ಕುರಿತು ಪ್ರಯತ್ನವನ್ನೂ ಮಾಡುತ್ತಿಲ್ಲ. ತಮ್ಮ ಆಪ್ತರನ್ನು, ಬೆಂಬಲಿಗರನ್ನು ಮಾತ್ರ ಜೊತೆಯಲ್ಲಿಟ್ಟುಕೊಂಡಿದ್ದಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುವುದಿಲ್ಲ. ಇದು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಜತೆಗೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪುತ್ತಿಲ್ಲ. ಕೇವಲ ಮಾಧ್ಯಮಗಳ ಹೇಳಿಕೆ, ಪ್ರಸಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದು ಯತ್ನಾಳ ಬಣದ ಮುಖಂಡರು ಅಮಿತ್ ಶಾ ಎದುರು ದೂರಿನ ಸುರಿಮಳೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಯತ್ನಾಳ್ ಬಣದ ನಾಯಕರಿಗೆ ಹಾಗೂ ಹೈಕಮಾಂಡ್ ನಾಯಕರಿಗೂ ಗೊತ್ತಿರುವಂತೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿದ್ದಾರೆಯೇ ಹೊರತು, ಅಧಿಕಾರ ಈಗಲೂ ಬಿಎಲ್ ಸಂತೋಷ್ ಅವರ ಕೈಯ್ಯಲ್ಲೇ ಇದೆ. ಇದನ್ನು ಅವರು ಹೇಳುವುದಿಲ್ಲ. ಇವರು ಒಪ್ಪಿಕೊಳ್ಳೋದಿಲ್ಲ. ಕೇವಲ ಆರ್ಥಿಕ ಸಂಪನ್ಮೂಲ ನಿರ್ವಹಣೆಗಾಗಿ ಮಾತ್ರವೇ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಉಳಿದಂತೆ ವಿಜಯೇಂದ್ರ ಅವರಿಗೆ ಬಿಎಲ್ ಸಂತೋಷ್ ಬಣದಿಂದಲೇ ಸೂಚನೆ, ಆದೇಶಗಳು ಬರುತ್ತವೆ ಎನ್ನುವುದು ಬಿಜೆಪಿಯ ಒಳಗುಟ್ಟು. ಆದರೆ ಅಮಿತ್ ಶಾ ಅವರಿಗೆ ವಿಜಯೇಂದ್ರ ಅವರ ಬಗ್ಗೆ, ಕೆಲಸದ ಬಗ್ಗೆ ತೃಪ್ತಿ ಇದೆ ಎನ್ನಲಾಗಿದೆ.
ಈ ನಡುವೆ ವಿಜಯೇಂದ್ರ ತಮ್ಮ ಪಾಡಿಗೆ ತಾವು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಸಿದ್ಧ ಮಾಡುತ್ತಿದ್ದಾರೆ. ಪರಾಜಿತ ಅಭ್ಯರ್ಥಿಗಳ ಜೊತೆ ಜನವರಿ 10ರಂದು ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಹಾಗೂ ಮತಗಳ ಲೆಕ್ಕವನ್ನೂ ಇಟ್ಟುಕೊಂಡು ತಂತ್ರಗಾರಿಕೆಯನ್ನೂ ರೂಪಿಸುತ್ತಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಿದಾಗ ಮಾಧ್ಯಮಗಳಿಗೆ ಹೇಳಿಕೆ ಕೊಡುವುದರಿಂದ ಪ್ರಚಾರ ಸಿಗುತ್ತದೆ. ನಾಯಕರಿಗೆ ಒಂದಿಷ್ಟು ಡ್ಯಾಮೇಜ್ ಕೂಡಾ ಆಗುತ್ತದೆ. ಕೊಡುವ ದೂರನ್ನು ಕೊಟ್ಟಿದ್ದೇವೆ. ಉಳಿದಂತೆ ಪಕ್ಷವನ್ನು ತಯಾರು ಮಾಡುತ್ತೇವೆ ಎಂಬ ಉತ್ತರ ಸಿಕ್ಕಿದೆ.



