ರಾಜ್ಯದಲ್ಲೀಗ ಎಲೆಕ್ಷನ್ನುಗಳ ಭರಾಟೆ. ಒಂದು ಕಡೆ ಲೋಕಸಭೆ ಚುನಾವಣೆ ಮುಕ್ತಾಯದ ಹಂತಕ್ಕೆ ಬರುತ್ತಿದೆ. ಇನ್ನೊಂದೆಡೆ ವಿಧಾನ ಪರಿಷತ್ ಚುನಾವಣೆಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆಯುತ್ತಿದೆ. ಈ ನಡುವೆಯೇ ವಿಧಾನಸಭೆಯಲ್ಲಿ ಶಾಸಕರಿಂದ ವಿಧಾನ ಪರಿಷತ್ʻಗೆ ಆಯ್ಕೆಯಾಗುವ ಚುನಾವಣೆಯೂ ನಡೆಯುತ್ತಿದೆ.
ಈ ಅಸೆಂಬ್ಲಿ ಎಂಎಲ್ʻಎಗಳಿಂದ ಕೌನ್ಸಿಲ್ ಎಂಎಲ್ʻಸಿಗಳಾಗುವವರು ಯಾರು ಎಂಬ ಪ್ರಶ್ನೆಯಲ್ಲಿಯೇ ಯತೀಂದ್ರ ಸಿದ್ದರಾಮಯ್ಯ ಹೆಸರು ಕೇಳಿ ಬಂದಿದೆ. ಸದ್ಯಕ್ಕೆ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕಿರುವ ಸ್ಥಾನಗಳಲ್ಲಿ 11 ಸ್ಥಾನಗಳು ಖಾಲಿ ಇವೆ. ರಾಜ್ಯ ವಿಧಾನಸಭೆಯಲ್ಲಿರುವ ಬಲಾಬಲದ ಪ್ರಕಾರ 7 ಕಾಂಗ್ರೆಸ್, 3 ಬಿಜೆಪಿ ಹಾಗೂ 1 ಜೆಡಿಎಸ್ ಪಾಲಾಗಲದೆ.
ಕಾಂಗ್ರೆಸ್ ಆಯ್ಕೆಯಲ್ಲಿ ಎನ್.ಎಸ್. ಬೋಸರಾಜು, ಹಾಲಿ ಸಚಿವರಾಗಿರುವವರು. ಆದರೆ, ವಿಧಾನಸಭೆಯಲ್ಲಿ ಗೆದ್ದಿರುವವರಲ್ಲ. ಸಚಿವರಾಗಿರೋದ್ರಿಂದ ಇವರು ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು ಕೆ.ಗೋವಿಂದರಾಜು, ಇವರು ಹಾಲಿ ಸದಸ್ಯರೂ ಹೌದು. ಮತ್ತೊಮ್ಮೆ ಆಯ್ಕೆಯಾಗುವುದೂ ಬಹುತೇಕ ಖಚಿತ. ಮೂರನೇ ಹೆಸರಿಗೆ ಯತೀಂದ್ರ ಸಿದ್ದರಾಮಯ್ಯ ಹೆಸರು ಕೇಳಿ ಬರುತ್ತಿದೆ.
ನಾನು ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೆ. ಹೈಕಮಾಂಡ್ ಕೋಲಾರ ಬೇಡ ವರುಣದಿಂದ ಸ್ಪರ್ಧೆ ಮಾಡಿ ಅಂತ ಹೇಳಿದ್ರು. ಆಗ ಯತೀಂದ್ರ ಸಿಟ್ಟಿಂಗ್ ಎಂಎಲ್ಎ ಆಗಿದ್ದರು. ಹೈಕಮಾಂಡ್ ಯತೀಂದ್ರಗೆ ಸೀಟು ಬಿಟ್ಟುಕೊಡಿ ಮುಂದೆ ನಿಮ್ಮನ್ನ ಎಂಎಲ್ ಸಿ ಮಾಡ್ತೇವೆ ಅಂತ ಹೇಳಿದ್ದರು. ಈಗ ಅವರು ಏನು ಮಾಡ್ತಾರೆ ಅಂತ ಗೊತ್ತಿಲ್ಲ ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಆ ಮೂಲಕ ಯತೀಂದ್ರ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವುದಕ್ಕೆ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ಧಾರೆ. ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿರುವವರಿಗೆ ಒಳ್ಳೆಯ ಸ್ಥಾನ ನೀಡಬೇಕು ಅನ್ನೋ ಮೂಲಕ ಗೆಳೆಯ ಸಚಿವ ಮಹದೇವಪ್ಪ ಕೂಡಾ ಯತೀಂದ್ರ ಪರ ಬ್ಯಾಟು ಬೀಸಿದ್ದಾರೆ.
ಇಷ್ಟಕ್ಕೂ ಯತೀಂದ್ರ ಅವರನ್ನು ಎಂಎಲ್ʻಸಿ ಮಾಡುವುದಕ್ಕೆ ಬೇಡ ಅನ್ನೋರಾದ್ರೂ ಯಾರು.. ಎಂಬ ಪ್ರಶ್ನೆಗೆ ಉತ್ತರ ನೋ ಎಂದೇ ಹೇಳಬೇಕು. ಏಕೆಂದರೆ.. ಬೇಡ ಎಂದು ಹೇಳಬಲ್ಲ (ವಾಸ್ತವದಲ್ಲಿ ಹೇಳುವುದಿಲ್ಲ. ಆ ಮಾತು ಬೇರೆ) ಖರ್ಗೆ, ಡಿಕೆ ಶಿವಕುಮಾರ್ ಅವರಿಗೆ ಯತೀಂದ್ರ ಅವರನ್ನು ಮೇಲ್ಮನೆಗೆ ಕಳಿಸೋದ್ರಲ್ಲಿ ಯಾವ ತಪ್ಪೂ ಕಾಣಿಸ್ತಿಲ್ಲ. ಜೊತೆಗೆ ಮೈಸೂರು ಭಾಗದಲ್ಲಿ ಯತೀಂದ್ರ ಅವರು ಪಕ್ಷವನ್ನು ಸಂಘಟನೆ ಮಾಡುತ್ತಿರುವ ರೀತಿಯ ಬಗ್ಗೆ ಡಿಕೆಶಿ ಅವರಿಗೂ ಸಂತಸ ಇದೆ.
ಅಲ್ಲದೆ ಹೈಕಮಾಂಡ್ ಲೆಕ್ಕಕ್ಕೆ ಬಂದರೆ.. ಅಲ್ಲಿರುವ ರಾಹುಲ್ ಗಾಂಧಿ, ಸುರ್ಜೇವಾಲಾ ಅವರಿಗೂ ತಪ್ಪೇನೂ ಕಾಣಿಸ್ತಾ ಇಲ್ಲ. ಯತೀಂದ್ರ 2019ರಲ್ಲಿ ದಿಢೀರ್ ಎಂದು ರಾಜಕೀಯಕ್ಕೆ ಬಂದವರಾದರೂ.. ಬಹುಬೇಗನೆ ರಾಜಕೀಯದಲ್ಲಿ ಪಳಗಿದರು. ಸ್ವತಃ ಸಿದ್ದರಾಮಯ್ಯನವರೇ ತಮ್ಮ ಕ್ಷೇತ್ರದ ಉಸ್ತುವಾರಿಯನ್ನು ಮಗನಿಗೆ ಬಿಟ್ಟಿದ್ದೇನೆ ಎಂದು ಹಲವು ಬಾರಿ ಹೇಳಿದ್ದೂ ಆಗಿದೆ. ಎಂಎಲ್ʻಸಿ ಆದರೆ.. ಅಧಿಕೃತವಾಗಿ ಶಾಸಕರಾಗುತ್ತಾರಷ್ಟೇ.



